ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಡಿಯೊ ಕರೆ ಮಾತ್ರ...

Last Updated 9 ಜುಲೈ 2015, 19:30 IST
ಅಕ್ಷರ ಗಾತ್ರ

ಭಾವ ಜೀವಿ ಮಾನವನ ಕಲ್ಪನಾ ಮನೋವ್ಯಾಪಾರ ಅದ್ಭುತವಾದದ್ದು. ಸಂಪರ್ಕ ಸಾಧನದ ಕಲ್ಪನೆಯೇ ಇಲ್ಲದ ಕಾಲದಲ್ಲಿ ‘ಟೆಲಿಪತಿ’ ಎಂಬ ಭಾವವನ್ನು ಹುಟ್ಟುಹಾಕಿದ ಮನುಷ್ಯ ತಂತ್ರಜ್ಞಾನ ಯುಗದಲ್ಲಿ ಕೇಳಬೇಕೆ? ತನ್ನೆಲ್ಲಾ ಕಲ್ಪನೆಗೆ ರೆಕ್ಕೆ ಹಚ್ಚಿ ದೇಶ–ಕಾಲಕ್ಕೆ ಸವಾಲು ಹಾಕುತ್ತಿದ್ದಾನೆ.

ಬಯಸಿದ ಬಳಗ ಎಷ್ಟೇ ದೂರವಿದ್ದರೂ ಸಚಿತ್ರವಾಗಿ ಮಾತನಾಡುವ ಹಲವು ಅವಕಾಶಗಳು ಈ ಯುಗದ ಆವಿಷ್ಕಾರ. ಅದರ ಬಳಕೆಯನ್ನು ಸರಳೀಕರಣಗೊಳಿಸುವ ಮನುಷ್ಯನ ತುಡಿತ ದಿನದಿಂದ ದಿನಕ್ಕೆ ಯಶಸ್ಸಿನ ಶಿಖರ ಏರುತ್ತಿದೆ. ಅಂತಹ ಸಾಧ್ಯತೆಗಳಲ್ಲಿ ವಿಡಿಯೊ ಕರೆ ಕೂಡ ಒಂದು. ಇದರಿಂದ ದೇಶಾಂತರಿಯನ್ನೂ ನಮ್ಮ ಮನೆಯ ಹಜಾರದಲ್ಲಿ ಕೂರಿಸಿಕೊಂಡು ಮಾತನಾಡುವಷ್ಟು ಈ ವಿಡಿಯೊ ಕಾಲ್‌ ಸಲೀಸು.

ಶಿಕ್ಷಣ ಅಥವಾ ಉದ್ಯೋಗದ ಕಾರಣಗಳಿಗಾಗಿ ಪೋಷಕರು ಮಕ್ಕಳನ್ನು ಬಿಟ್ಟು ದೂರ ಇರುವುದು ಇಂದು ಸಾಮಾನ್ಯ. ಕಾರಣ ಅದೇನೇ ಇದ್ದರೂ ಮಕ್ಕಳ ಮೇಲಿನ ಪ್ರೀತಿ ಮತ್ತು ಅವರ ಭವಿಷ್ಯದ ದೃಷ್ಟಿಯಿಂದಲೇ ಎಲ್ಲೆಲ್ಲೋ ಬದುಕು ಅರಸಿ ಹೋಗಬೇಕಾದ ಕಾಲಘಟ್ಟ ಇದು.

ಈ ಸಂದರ್ಭದಲ್ಲಿ ಮಕ್ಕಳನ್ನು ಪೋಷಕರು ಮಿಸ್ ಮಾಡಿಕೊಳ್ಳುತ್ತಾರೆ ಎನ್ನುವುದೂ ಸತ್ಯ. ಅದಕ್ಕಾಗಿಯೇ ಫೋನ್ ಕೊಡಿಸಿ, ದಿನಾ ಮಾತನಾಡಿಕೊಂಡು ಇರಬಹುದಲ್ಲ ಎಂದು ನಾವು ಹೇಳಬಹುದು. ಆದರೆ ಫೋನ್ ಎಂದ ಮೇಲೆ ಬರೇ ಫೋನ್ ಕೊಡಿಸಿದರೆ ಸಾಕೆ? ಸ್ಮಾರ್ಟ್‌ಫೋನ್ ಇದ್ದರೆ ಚೆನ್ನ ಅಲ್ಲವೇ? ಎನ್ನುವ ಬಯಕೆ ಕೂಡ ಇದೆ. ಆದರೂ ಮಕ್ಕಳನ್ನು ಮುಖಾಮುಖಿ ನೋಡಿದಂತೆ ಆಗದು ಎನ್ನುವ ಕೊರಗು ಮಾತ್ರ ಈ ಫೋನ್‌ ದೂರ ಮಾಡಲಿಲ್ಲ. ಇಂತಹ ಕೊರಗು ನೀಗಿಸಲೆಂದೇ ಒಂದು ಹೊಸ ಮಾದರಿಯ ಫೋನ್ ಬಂದಿದೆ. ನೊಡಲು ಪುಟ್ಟ ರೇಡಿಯೊ ಸೆಟ್‌ನಂತೆ ಕಾಣಿಸುವ ಇದು ವಿಡಿಯೊ ಮತ್ತು ವಾಯ್ಸ್ ಕಾಲಿಂಗ್ ಫೋನ್. ಇದರಲ್ಲಿ ಆ್ಯಪಲ್‌ನ ಐಓಎಸ್ ಮತ್ತು ಗೂಗಲ್ ಆ್ಯಂಡ್ರಾಯ್ಡ್ ಸಾಫ್ಟ್‌ವೇರ್ ಬಳಸಬಹುದು.

ಇದರಲ್ಲಿ ನಾವು ಕರೆ ಮಾಡಬೇಕಾದ ಕೆಲವೇ ಸಂಪರ್ಕಗಳನ್ನು ಮಾತ್ರ ಬಳಸಬಹುದು. ಅದಕ್ಕಿಂತ ಹೆಚ್ಚಿನ ಸೌಲಭ್ಯ ಬಳಸುವಂತಿಲ್ಲ. ಅಂದರೆ ಕೇವಲ ನಿಗದಿತ ಆಯ್ಕೆಗಳಿಗಷ್ಟೇ ಸೀಮಿತ. ಕರೆ ಮಾಡುವುದು ತೀರಾ ಸುಲಭ. ಹೋಮ್‌ ಸ್ಕ್ರೀನ್‌ನಲ್ಲಿ ಕಾಣಿಸುವ ಸಂಪರ್ಕದ ಮೇಲೆ ಒತ್ತಿದರೆ ಸಾಕು, ಅವರಿಗೆ ನೇರವಾಗಿ ಕರೆ ಹೋಗುತ್ತದೆ. ಪ್ರತ್ಯೇಕವಾಗಿ ಸಂಪರ್ಕಗಳನ್ನು ಹುಡುಕಬೇಕಾಗಿಲ್ಲ, ಮತ್ತು ಅಂಕಿಗಳನ್ನು ಒತ್ತಬೇಕಾಗಿಲ್ಲ. ಇಲ್ಲಿ ಸಂಪರ್ಕ ಸಂಖ್ಯೆಯೊಡನೆ ಅವರ ಚಿತ್ರವೂ ಸೇರಿರುವುದರಿಂದ ಸುಲಭವಾಗಿ ಹುಡುಕಬಹುದು.
 
ಅಂತರ್ಜಾಲ ಮತ್ತು ವೈ-ಫೈ ಸಂಪರ್ಕದಲ್ಲಿ ಇದು ಕೆಲಸ ಮಾಡುತ್ತದೆ. ಮನೆಯಿಂದ ದೂರ ಇರುವ ಮಕ್ಕಳೊಂದಿಗೆ, ಕುಟುಂಬದವರೊಂದಿಗೆ ವಾಯ್ಸ್ ಮತ್ತು ವಿಡಿಯೊ ಕರೆ ಮಾಡಲು ಇದು ತುಂಬಾ ಅನುಕೂಲ. ಅಲ್ಲದೇ ಇದರಲ್ಲಿ ಯಾವುದೇ ಗೇಮ್ಸ್ ಆಡಲು ಸಾಧ್ಯವಿಲ್ಲ, ಮತ್ತು ಅಂತರ್ಜಾಲ ಸಂಪರ್ಕ, ಬ್ರೌಸಿಂಗ್ ಸೇರಿದಂತೆ ಯಾವ ಸವಲತ್ತೂ ಇಲ್ಲ. ಕೇವಲ ವಿಡಿಯೊ ಮತ್ತು ಧ್ವನಿ ಕರೆ ಮಾಡಲು ಮಾತ್ರ ಇದನ್ನು ಬಳಸಬಹುದು. ಫೋಟೊ ಕಳುಹಿಸುವ ಮತ್ತು ಸ್ವೀಕರಿಸುವ ವ್ಯವಸ್ಥೆ ಇದ್ದರೂ ಅದರಲ್ಲಿ ಮೊದಲೇ ಸೇರಿಸಿದ ಸಂಪರ್ಕಕ್ಕೆ ಮಾತ್ರ ಈ ಸೌಲಭ್ಯ. ಇತರ ಸಂಪರ್ಕಗಳಿಗೂ ಫೋಟೊ-ವಿಡಿಯೊ ಹಂಚಿಕೊಳ್ಳುವಂತಿಲ್ಲ. ಒಟ್ಟಿನಲ್ಲಿ ಮಕ್ಕಳ ಸ್ಮಾರ್ಟ್‌ಫೋನ್‌ನ ಹುಚ್ಚಿಗೆ ಬ್ರೇಕ್ ಹಾಕುವ ಈ ಫೋನ್, ಅನಗತ್ಯವಾಗಿ ಗೇಮ್ಸ್ ಆಡಲು ಮತ್ತು ಇಂಟರ್‌ನೆಟ್ ಜಾಲಾಡುವುದಕ್ಕೆ ಕಡಿವಾಣ ಹಾಕುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT