ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂರಕ್ಷಕ ಸಂಹಾರಕನಾದರೆ...

Last Updated 9 ಆಗಸ್ಟ್ 2015, 19:30 IST
ಅಕ್ಷರ ಗಾತ್ರ

ಹ್ಯಾಕರ್‌ಗಳು ಸಾಮಾಜಿಕ ಜಾಲತಾಣ ಮತ್ತು ಸಂಸ್ಥೆಗಳ ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡಿ ಕಳ್ಳಮಾರ್ಗದ ಮೂಲಕ  ಮಾಹಿತಿ  ಪಡೆಯುತ್ತಿದ್ದರು. ಆದರೀಗ ಇವರ ಕಣ್ಣು ಬಿದ್ದಿರುವುದು ಸ್ವಯಂಚಾಲಿತ ಮತ್ತು ಕಂಪ್ಯೂಟರ್ ನಿಯಂತ್ರಿತ ಶಸ್ತ್ರಾಸ್ತ್ರಗಳ ಮೇಲೆ.

ಹೆಡ್ಡಿಂಗ್ ನೋಡಿ ಅರೆಕ್ಷಣ ನೀವು ಗಾಬರಿಯಾಗಿರಬಹುದು ಅಲ್ಲವೇ? ಹೌದು, ಇದೀಗ ಮನುಕುಲವೇ ಬೆಚ್ಚಿ ಬೀಳುವ ಸುದ್ದಿಯೊಂದು ಹೊರಬಿದ್ದಿದೆ. ಅದೆಂದರೆ ನಮ್ಮ ರಕ್ಷಣೆಗೆ ಮಾಡಿಕೊಂಡಿರುವ ಬಂದೂಕುಗಳೇ ನಮ್ಮ ಪ್ರಾಣವನ್ನು ತೆಗೆಯಬಲ್ಲುದು ಎಂದು. ಹೇಗೆ ಅಂತೀರಾ? ಸ್ವಲ್ಪ ಈ ಸುದ್ದಿ ಓದಿ..

ಕಂಪ್ಯೂಟರ್ ಪರಿಣತ ಹ್ಯಾಕರ್‌ಗಳ ಕೈವಾಡ ಇಂದು ಎಲ್ಲರಿಗೂ ತಲೆನೋವಾಗಿರುವುದು ಹಳೆಯ ಸಂಗತಿ. ಸ್ಮಾರ್ಟ್‌ಫೋನ್, ಕಂಪ್ಯೂಟರ್, ಲ್ಯಾಪ್‌ಟಾಪ್, ಟ್ಯಾಬ್ಲೆಟ್ ಹೀಗೆ ಯವುದರಲ್ಲಿ ಸಾಫ್ಟ್‌ವೇರ್ ಮತ್ತು ಅಂತರ್ಜಾಲ ಸಂಪರ್ಕ ಸಾಧ್ಯವೋ, ಅವೆಲ್ಲವನ್ನೂ ಈ ಹ್ಯಾಕರ್‌ಗಳು ಸುಲಭವಾಗಿ ಹೇಗೋ ಹ್ಯಾಕ್ ಮಾಡುತ್ತಾರೆ. ಪ್ರತಿ ಸ್ಮಾರ್ಟ್‌ಫೋನ್ ಇಲ್ಲವೇ ಕಂಪ್ಯೂಟರ್ ಆಧಾರಿತ ಯಂತ್ರದಲ್ಲಿ ಇರುವ ಡೇಟಾವನ್ನು ಸುಲಭವಾಗಿ ತಮ್ಮ ಸುಪರ್ದಿಗೆ ತೆಗೆದುಕೊಳ್ಳುವ ಈ ಹ್ಯಾಕರ್ಸ್, ಬಳಿಕ ತಮಗೆ ಬೇಕಾದ ಮಾಹಿತಿಯನ್ನು ಕದಿಯುತ್ತಾರೆ.

ಈಗಾಗಲೇ ಸಾಮಾಜಿಕ ಜಾಲತಾಣ ಮತ್ತು ಸಂಸ್ಥೆಗಳ ವೆಬ್‌ಸೈಟ್‌ಗಳನ್ನೂ ಹ್ಯಾಕ್ ಮಾಡಿ ಅಮೂಲ್ಯ ಮಾಹಿತಿಯನ್ನು ಕಳ್ಳಮಾರ್ಗದ ಮೂಲಕ ಪಡೆದಿರುವ ಇವರು ಜಗತ್ತನ್ನು ಬೆಚ್ಚಿ ಬೀಳಿಸಿದ್ದಾರೆ. ಹೀಗೆ ಕಂಪ್ಯೂಟರ್ ಲೋಕದಲ್ಲೆಲ್ಲಾ ಜಾಲಾಡಿದ ಬಳಿಕ ಇವರ ಕಣ್ಣು ಬಿದ್ದಿರುವುದು ಸ್ವಯಂಚಾಲಿತ ಮತ್ತು ಕಂಪ್ಯೂಟರ್ ನಿಯಂತ್ರಿತ ಶಸ್ತ್ರಾಸ್ತ್ರಗಳ ಮೇಲೆ. ಅತ್ಯಾಧುನಿಕ ಮಾದರಿಯ ಯುದ್ಧೋಪಕರಣಗಳು ಮತ್ತು ಶಸ್ತ್ರಗಳು ಕಂಪ್ಯೂಟರ್ ಸಾಫ್ಟ್‌ವೇರ್ ಆಧಾರಿತ ನಿರ್ದೇಶನ ವ್ಯವಸ್ಥೆ ಹೊಂದಿವೆ. ಅದರಲ್ಲಿ ಅಳವಡಿಸಿರುವ ಸಾಫ್ಟ್‌ವೇರ್‌ನ ಆದೇಶದಂತೆ ಶಸ್ತ್ರಗಳು ಕಾರ್ಯನಿರ್ವಹಿಸುತ್ತವೆ. ಇದರಲ್ಲಿ ಸಾಫ್ಟ್‌ವೇರ್ ನಿಯಂತ್ರಣವು ವ್ಯಕ್ತಿಯೊಬ್ಬನ ಕೈಗೆ ಸಿಕ್ಕರೆ ಬಳಿಕ ಆತ ಏನು ನಿರ್ದೇಶನ ಕೊಡುತ್ತಾನೊ, ಹಾಗೆಯೇ ಅವು ಆತನ ಆಜ್ಞೆ ಪಾಲಿಸುತ್ತವೆ.

ಹೀಗಾಗಿ ಈಗ ಹ್ಯಾಕರ್‌ಗಳು ಸುಲಭವಾಗಿ ವಿಧ್ವಂಸಕ ಕೃತ್ಯ ನಡೆಸಲು ಈ ಮಾದರಿಯ ಶಸ್ತ್ರಾಸ್ತ್ರಗಳತ್ತ ಕಣ್ಣು ನೆಟ್ಟಿದ್ದಾರೆ. ಇದರಿಂದಾಗಿ ಕುಳಿತಲ್ಲಿಂದಲೇ ಈ ಮಾದರಿಯ ರೈಫಲ್, ಮೆಶಿನ್ ಗನ್‌ಗಳನ್ನು ನಿಯಂತ್ರಿಸಬಹುದು. ಒಮ್ಮೆ ಅದರಲ್ಲಿನ ಸಾಫ್ಟ್‌ವೇರ್ ವ್ಯವಸ್ಥೆಯನ್ನು ಹ್ಯಾಕ್ ಮಾಡಿದರೆ ಆಯಿತು. ಇವು ಉಪಗ್ರಹ ಸಂವಹನ ಮತ್ತು ವೈ-ಫೈ ತರಂಗಗಳ ಮೂಲಕ ಕಾರ್ಯ ನಿರ್ವಹಿಸುತ್ತವೆ. ಈ ತರಂಗಗಳನ್ನೇ ಗುರಿಯಾಗಿ ಸಿಕೊಂಡು ಹ್ಯಾಕರ್‌ಗಳು ದಾಳಿ ನಡೆಸುತ್ತಾರೆ. ಬಳಿಕ ಗನ್‌ನ ಗುರಿಯನ್ನು ಏನಿದ್ದರೂ ಇವರಿಗೆ ಬೇಕಾದಂತೆ ಬದಲಾಯಿಸಲು, ತಿರುಗಿಸಲು ಸಾಧ್ಯವಿದೆ. ಈ ಹ್ಯಾಕಿಂಗ್ ಸಾಧ್ಯತೆಗಳು ಹ್ಯಾಕರ್‌ಗಳ ಮತ್ತು ಭಯೋತ್ಪಾದಕರ ಪಾಲಿಗೆ ವರದಂತೆ ಕಂಡುಬಂದಿದೆ. ಆದ್ದರಿಂದ ಇಲ್ಲಿ ಯೋಚಿಸ ಬೇಕಾದ ವಿಷಯವೆಂದರೆ ಭವಿಷ್ಯದಲ್ಲಿ ಈ ತಂತ್ರಜ್ಞಾನ ಆಧಾರಿತ ಉಪಕರಣ ಗಳೇನಾದರೂ ಹ್ಯಾಕರ್‌ಗಳ ದಾಳಿಗೆ ತುತ್ತಾದರೆ, ಅದರಿಂದ ಮನುಕುಲಕ್ಕೆ ತೀರಾ ನಷ್ಟವಾಗಲಿದೆ.

ತಮ್ಮ ಕ್ರೌರ್ಯವನ್ನು ಜಗತ್ತಿಗೆ ತೋರಿಸಲು ಯಾವುದಕ್ಕೂ ಹೇಸದ ಉಗ್ರರು ಮುಂದೆ ಆಧುನಿಕ ಮಾದರಿಯ ದಾಳಿಗಳನ್ನೇ ಹೆಚ್ಚಾಗಿ ನೆಚ್ಚಿಕೊಳ್ಳುವ ಸಾಧ್ಯತೆಗಳಿವೆ. ಆದ್ದರಿಂದ ಕಂಪ್ಯೂಟರ್ ಬಳಸುವಾಗ ನಾವು ಎಷ್ಟು ಎಚ್ಚರಿಕೆ ವಹಿಸುತ್ತೇವೋ, ಅದಕ್ಕಿಂತ ಹತ್ತು ಪಟ್ಟಿನ ಎಚ್ಚರಿಕೆ ಮತ್ತು ಸುರಕ್ಷತೆಯನ್ನು ಶಸ್ತ್ರಾಸ್ತ್ರಗಳ ವಿಷಯದಲ್ಲಿ ತೋರಿಸಬೇಕಾಗುತ್ತದೆ. ಇದೇ ರೀತಿ ಮುಂದುವರೆದರೆ ಮುಂದೆ ಉಪಗ್ರಹಗಳನ್ನೂ ಉಗ್ರರು ಹ್ಯಾಕ್ ಮಾಡುವ ಸಾಧ್ಯತೆ ಇಲ್ಲದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT