ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಸ್ಯೆಗಳ ಕರಗಿಸುವ ಕರ್ಪೂರ

ಟಿಪ್ಸ್‌ ಕಾರ್ನರ್
Last Updated 13 ಜುಲೈ 2015, 19:44 IST
ಅಕ್ಷರ ಗಾತ್ರ

ಕರ್ಪೂರವಿಲ್ಲದ ದೇವರ ಪೂಜೆ ಅಪೂರ್ಣ. ಆದರೆ ಇದೇ ಕರ್ಪೂರ ಆರೋಗ್ಯದ ದೃಷ್ಟಿಯಿಂದ ಬಲು ಉಪಕಾರಿ. ಅದರಲ್ಲೂ ಪಚ್ಚಕರ್ಪೂರಕ್ಕೆ ಆಯುರ್ವೇದದಲ್ಲಿ ಪ್ರಥಮ ಪ್ರಾಶಸ್ತ್ಯ. ದಿನನಿತ್ಯದ ಹಲವಾರು ಸಮಸ್ಯೆಗಳಿಗೆ ರಾಮಬಾಣದಂತೆ ಕಾರ್ಯನಿರ್ವಹಿಸುತ್ತದೆ ಕರ್ಪೂರ. ಇದರ ಉಪಯೋಗದ ಬಗ್ಗೆ ಇಲ್ಲಿವೆ ಕೆಲವು ಮಾಹಿತಿ.

*ಹಂದಿಜ್ವರ ಇತ್ತೀಚೆಗೆ ಭಾರಿ ಸುದ್ದಿ ಮಾಡಿತ್ತು, ಹಲವು ಜೀವಗಳನ್ನೂ ಇದು ಬಲಿ ಪಡೆದಿದೆ. ಈ ರೋಗಕ್ಕೆ ಆರಂಭದಲ್ಲಿ ಪಚ್ಚಕರ್ಪೂರ ನಿರೋಧಕವಾಗಿ ಕಾರ್ಯನಿರ್ವಹಿಸಬಲ್ಲುದು ಎಂಬುದು ಸಾಬೀತಾಗಿದೆ. ಒಂದು ಚಿಕ್ಕ ಪಚ್ಚ ಕರ್ಪೂರವನ್ನು ನೀರಿನಲ್ಲಿ ಕರಗಿಸಿ ಕುಡಿಯಬೇಕು. ತಿಂಗಳಿಗೆ ಒಂದು ಲೋಟಕ್ಕೆ ಇದನ್ನು ಸೀಮಿತಗೊಳಿಸಬೇಕು. ಮಕ್ಕಳಿಗೆ ನೀಡುವುದಾದರೆ ಬೇಯಿಸಿದ ಆಲೂಗಡ್ಡೆಯಲ್ಲಿ ಕರ್ಪೂರವನ್ನು ಪುಡಿಮಾಡಿ ಸ್ವಲ್ಪವೇ ನೀಡಬೇಕು.

*ಪಚ್ಚ ಕರ್ಪೂರ ಮತ್ತು ಏಲಕ್ಕಿಯನ್ನು ಕುಟ್ಟಿ ಪುಡಿ ಮಾಡಿ, ಕರವಸ್ತ್ರದಲ್ಲಿಟ್ಟು ಎರಡರಿಂದ ಮೂರು ಗಂಟೆಗೊಮ್ಮೆ ಅದರ ಪರಿಮಳ ತೆಗೆದುಕೊಳ್ಳುತ್ತಿದ್ದರೆ ಹಂದಿ ಜ್ವರದ ವೈರಾಣುಗಳು ನಾಶವಾಗುತ್ತವೆ.

*ವಿವಿಧ ರೀತಿಯ ತುರಿಕೆ ಹಾಗೂ ಚರ್ಮದ ಮೇಲೆ ಆಗುವ ಚಿಕ್ಕಚಿಕ್ಕ ಗುಳ್ಳೆಗಳನ್ನು ವಾಸಿ ಮಾಡುವಲ್ಲಿ ಕರ್ಪೂರ ಪ್ರಮುಖ ಪಾತ್ರ ವಹಿಸುತ್ತದೆ. ಕರ್ಪೂರದ ಪೇಸ್ಟ್ ತಯಾರಿಸಿ ಅದನ್ನು ತುರಿಕೆ ಇರುವ ಕಡೆ ಹಚ್ಚಿದರೆ ಕೂಡಲೇ ಗುಣ ಕಾಣಬಹುದು.

*ಪಾದಗಳು ಬಿರುಕು ಬಿಟ್ಟಿದ್ದರೆ ಪ್ರತಿದಿನ ಕರ್ಪೂರ ಹಾಕಿ ಉಗುರು ಬೆಚ್ಚಗಿನ ನೀರಿನಲ್ಲಿ 5 ನಿಮಿಷ ಪಾದಗಳನ್ನು ನೆನೆಸಿ, ನಂತರ ಸ್ಕ್ರಬ್ ಮಾಡಿ ಚಮತ್ಕಾರ ನೋಡಿ.

*ಊಟ ಮತ್ತು ತಿಂಡಿ ಸೇವಿಸಿದ ಬಳಿಕ ದಿನಕ್ಕೆ‌1ರಿಂದ 3 ಬಾರಿ ವೀಳ್ಯದೆಲೆ, ಸುಣ್ಣ, ಅಡಿಕೆ, ಏಲಕ್ಕಿ, ಲವಂಗದ ಜೊತೆ ಒಂದೆರಡು ಚಿಟಿಕೆ ಪಚ್ಚ ಕರ್ಪೂರ ಬೆರೆಸಿ ತಾಂಬೂಲ ರೂಪದಲ್ಲಿ ಸೇವಿಸಿದರೆ ಬಾಯಿಯ ದುರ್ವಾಸನೆ ಶೀಘ್ರ ದೂರವಾಗುತ್ತದೆ.

*ಗುಲಾಬಿ ಹೂವಿನ ದಳಗಳ ಪೇಸ್ಟ್‌ ತಯಾರಿಸಿ ಅದರ ಜೊತೆ ಕಲ್ಲುಸಕ್ಕರೆ ಹಾಗೂ ಪಚ್ಚಕರ್ಪೂರ ಬೆರೆಸಿದ ಮಾತ್ರೆ ತಯಾರಿಸಿ, ಆಗಾಗ ಬಾಯಿಯಲ್ಲಿ ಹಾಕಿಕೊಂಡು ಚಪ್ಪರಿಸುತ್ತಿದ್ದರೂ ಬಾಯಿಯ ದುರ್ಗಂಧ ಹೋಗುತ್ತದೆ. ಇದು ಕೆಮ್ಮಿಗೂ ಒಳ್ಳೆಯ ಔಷಧ.

*ಕರ್ಪೂರವನ್ನು ಶುದ್ಧ ಕೊಬ್ಬರಿ ಎಣ್ಣೆ, ಮೊಸರು ಅಥವಾ ಮೊಟ್ಟೆಯೊಂದಿಗೆ ಬೆರೆಸಿ ಕೂದಲಿಗೆ ಹಚ್ಚಿಕೊಳ್ಳುತ್ತಾ ಬಂದರೆ ಕೂದಲಿಗೆ ಪೋಷಣೆ ಸಿಗುತ್ತದೆ. ಕರ್ಪೂರ ಮತ್ತು ಎಣ್ಣೆ ಮಿಕ್ಸ್ ಮಾಡಿ ತಲೆ ಬುಡಕ್ಕೆ ಮಸಾಜ್ ಮಾಡಿದರೆ ಕೂದಲು ಉದುರುವ ಸಮಸ್ಯೆ ಕಡಿಮೆಯಾಗುವುದು. 

*ವೀಳ್ಯದೆಲೆಯನ್ನು ಕಾವಲಿಯ ಮೇಲೆ ಬೆಚ್ಚಗೆ ಮಾಡಿ, ಅದಕ್ಕೆ ಕರ್ಪೂರ ಬೆರೆಸಿದ ಕೊಬ್ಬರಿ ಎಣ್ಣೆಯನ್ನು ಲೇಪಿಸಿ, ಹಣೆಗೆ ಶಾಖ ನೀಡಿದರೆ ತಲೆನೋವು ಪರಿಹಾರವಾಗುತ್ತದೆ.

*ಏನಾದರೂ ಗಾಯಗಳಾಗಿದ್ದು ಅದು ಏನು ಮಾಡಿದರೂ ಒಣಗುತ್ತಿಲ್ಲ ಎಂದಾದರೆ ಸ್ವಲ್ಪವೇ ಸ್ವಲ್ಪ ಕರ್ಪೂರವನ್ನು ನೀರಿನಲ್ಲಿ ಕರಗಿಸಿ ಗಾಯವನ್ನು ಸ್ವಚ್ಛ ಮಾಡುತ್ತಾ ಬನ್ನಿ.

*ಸ್ವಲ್ಪ ಕರ್ಪೂರವನ್ನು ನೀರಿನಲ್ಲಿ ಕಲಸಿ ಸುಟ್ಟ ಚರ್ಮಗಳಿಂದ ಆಗಿರುವ ಕಲೆಗಳ ಮೇಲೆ ಹಚ್ಚುತ್ತಾ ಬಂದರೆ ಬೇಗ ಗುಣವಾಗುತ್ತದೆ.

*ಕಾಲರಾ ರೋಗದ ಬಂದಾಗ ಉಂಟಾಗುವ ಮೀನಖಂಡಗಳ ನೋವನ್ನು ತಕ್ಕಮಟ್ಟಿಗೆ ಕಡಿಮೆ ಮಾಡಲು ವೀಳ್ಯದೆಲೆಯ ರಸದಲ್ಲಿ ಕರ್ಪೂರ ಬೆರೆಸಿ ಕಾಲುಗಳಿಗೆ ಮಾಲೀಶು ಮಾಡಬೇಕು.

*ಕರ್ಪೂರದ ಎಣ್ಣೆಯನ್ನು ಮೊಡವೆ ಇರುವ ಕಡೆ ಹಚ್ಚಿದರೆ ಮೊಡವೆ ಒಣಗುವುದು. ಇದು ಮೊಡವೆ ಏಳುವುದನ್ನೂ ತಡೆಗಟ್ಟುತ್ತದೆ.

*ವೀಳ್ಯದೆಲೆಯಲ್ಲಿ ಗೋಡಂಬಿ, ಲವಂಗ, ಪಚ್ಚ ಕರ್ಪೂರ ಬೆರೆಸಿ ಜಗಿದು ಸೇವಿಸಿದರೆ ಹಲ್ಲುನೋವು, ಬಾವು ಪರಿಹಾರವಾಗುತ್ತದೆ.

*ಅಲರ್ಜಿಯಿಂದ ಉಂಟಾಗುವ ಕೆಲವು ವಿಧವಾದ ಆಯಾಸಗಳಿಗೂ ಕರ್ಪೂರ ಉತ್ತಮ ಔಷಧ. ಕರ್ಪೂರ ತೈಲ, ಸೈಂಧವ ಲವಣ ಬೆರೆಸಿದ ಎಳ್ಳೆಣ್ಣೆಯನ್ನು ಎದೆಯ ಮೇಲೆ, ಬೆನ್ನಿನ ಮೇಲೆ ಮಸಾಜ್‌ ಮಾಡಿ ನಂತರ ಬಿಸಿ ನೀರಿನ ಶಾಖ ಕೊಡುವುದರಿಂದ ಆಯಾಸ ದೂರವಾಗುತ್ತದೆ.                                                  
*
ಸೊಳ್ಳೆಗೆ ಆಗದ ಕರ್ಪೂರ
ಮನೆ- ಕಚೇರಿಯ ಬಾಗಿಲು ತೆರೆದಿದ್ದರೆ ಸಂಜೆಯಾಗುತ್ತಿದ್ದಂತೆ ಸೊಳ್ಳೆಗಳ ಹಾವಳಿ. ಇದನ್ನು ಓಡಿಸಲು ರಾಸಾಯನಿಕ ಔಷಧಗಳ ಮೊರೆ ಹೋಗುವ ಬದಲು ಕರ್ಪೂರದ ಪ್ರಯೋಗ ಮಾಡಿನೋಡಿ. ಒಂದು ಅಗಲ ಬಾಯಿಯ ಚಿಕ್ಕ ಪಾತ್ರೆಯಲ್ಲಿ ಸ್ವಲ್ಪ ನೀರು ಹಾಕಿ ಅದರಲ್ಲಿ ಎರಡು ಮಾತ್ರೆ ಕರ್ಪೂರ ಹಾಕಿ. ಇದರ ಸುವಾಸನೆ ಸೊಳ್ಳೆಗೆ ಆಗದು.

ಆದ್ದರಿಂದ ಅದು ಹತ್ತಿರ ಸುಳಿಯುವುದಿಲ್ಲ. ತುಸು ಬಿಸಿ ನೀರಿನಲ್ಲಿ ಹಾಕಿದರೆ ಬೇಗನೇ ಪರಿಣಾಮ ಕಾಣಬಹುದು. ಸೊಳ್ಳೆ ನಿವಾರಕಕ್ಕೆ ಬಳಸುವ ರಿಪಲೆಂಟ್‌ನಲ್ಲಿಯೇ 2-3 ಕರ್ಪೂರವಿಟ್ಟು ಸ್ವಿಚ್ ಹಾಕಿದರೂ ಅರ್ಧ ಗಂಟೆಯಲ್ಲಿಯೇ ಸುವಾಸನೆ ಎಲ್ಲೆಡೆ ಬೀರಿ ಸೊಳ್ಳೆ ಓಡಿಹೋಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT