ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂತ್ರಮಾರ್ಗಿಯ ಭಿನ್ನ ಪಯಣ

Last Updated 17 ಜೂನ್ 2015, 19:30 IST
ಅಕ್ಷರ ಗಾತ್ರ

ಒಮ್ಮೆ ಈ ಹುಡುಗ ರೈಲಿನಲ್ಲಿ ಹೋಗುವಾಗ ಮೊಬೈಲ್‌ ಬ್ಯಾಟರಿ ನಿತ್ರಾಣಗೊಂಡು ನಿರ್ಜೀವ ಸ್ಥಿತಿ ತಲುಪುವ ಹಂತದಲ್ಲಿತ್ತು. ಚಾರ್ಜರ್ ತರುವುದನ್ನೂ ಮರೆತಿದ್ದರು. ಸಹ ಪ್ರಯಾಣಿಕರದ್ದೂ ಇದೇ ಸ್ಥಿತಿ. ಇದು ತಮ್ಮೊಬ್ಬರದೇ ಸಮಸ್ಯೆಯಲ್ಲ ಎಂಬುದು ಅರಿವಾದದ್ದೆ ಅವರು ಇದಕ್ಕೊಂದು ಪರಿಹಾರ ಹುಡುಕುವ ಕುರಿತು ಯೋಚಿಸತೊಡಗಿದರು. ತಕ್ಷಣವೇ ಸ್ವಿಚ್‌ ಬೋರ್ಡ್‌ಗೆ  ಇನ್‌ಬಿಲ್ಟ್‌ ಆಗಿ ಫೋನ್‌ ಚಾರ್ಜರ್‌ ಅಳವಡಿಸುವ ಆಲೋಚನೆ ಮಾಡಿ ಜೇಬಿನಲ್ಲಿದ್ದ ಪುಸ್ತಕದಲ್ಲಿ ನಕ್ಷೆ ಹಾಕಿಕೊಂಡರು.
***
ಇನ್ನೊಮ್ಮೆ ಅವರು ಬೈಕ್‌ನಲ್ಲಿ ಹೋಗುತ್ತಿದ್ದಾಗ, ರಾಗಿಯನ್ನು ಹುಲ್ಲಿನಿಂದ ಬೇರ್ಪಡಿಸಲು ರಸ್ತೆ ಮೇಲೆ ಅದನ್ನು ಹಾಸಿದ್ದರು. ರಸ್ತೆಯೇ ಕಣವಾಗಿ ಮಾರ್ಪಾಡಾಗಿತ್ತು. ಇದನ್ನು ಕಂಡಿದ್ದೇ  ಒಂದಷ್ಟು ಹೊತ್ತು ಸುಮ್ಮನೆ ನಿಂತು ಮತ್ತದೇ ಚಿಕ್ಕ ಪುಸ್ತಕ ತೆಗೆದು ಚಕಚಕನೆ ಏನನ್ನೋ ಬರೆದುಕೊಂಡರು. ಹೀಗೆ ಜನರ ಸಾಮಾನ್ಯ ಸಮಸ್ಯೆಗಳನ್ನು ಕಂಡಾಕ್ಷಣ ಅದನ್ನು ಪರಿಹರಿಸಲೆಂದು ಹಾತೊರೆದು ಜೇಬಲ್ಲಿರುವ ಚಿಕ್ಕ ಪುಸ್ತಕದಲ್ಲಿ ಪಟಪಟನೆ ಗೀಚುವ ಹುಡುಗನ ಹೆಸರು ಪ್ರಶಾಂತ್. ಅವರ ಪಟ್ಟಿಯಲ್ಲಿ ಇಂತಹ ಅನೇಕ ಟಿಪ್ಪಣಿಗಳು ಸಿಗುತ್ತವೆ. ಟಿಪ್ಪಣಿಗಳನ್ನು ಸಿದ್ಧಪಡಿಸಿಕೊಂಡು ಅದನ್ನು ಉಪಕರಣಗಳನ್ನಾಗಿ ಮಾರ್ಪಡಿಸುತ್ತಾರೆ. ಸದಾ ಜೇಬಲ್ಲಿ ಪೆನ್ನು, ಪುಸ್ತಕ ಇಟ್ಟುಕೊಂಡೇ ಓಡಾಡುವ ಅವರು ಕುತೂಹಲದ ಬೆನ್ನುಹತ್ತಿದ ಹೊಸ ಪಥದ ಶೋಧಕನಂತೇ ಕಾಣುತ್ತಾರೆ.

ಅಂದ ಹಾಗೆ ಪ್ರಶಾಂತ್ ಮೈಸೂರಿನವರು. ಎಂ.ಟೆಕ್ ಪದವೀಧರ. ಎಂಜಿನಿಯರ್‌ ಆಗಿದ್ದಾರೆ. ಜನರ ಸಮಸ್ಯೆಗಳಿಗೆ ಸ್ಪಂದಿಸಿದರೆ ತಂತ್ರಜ್ಞಾನ ಸಾರ್ಥಕ ಎಂಬ ಉದ್ದೇಶವನ್ನಿಟ್ಟುಕೊಂಡು ತಮ್ಮ ಆಲೋಚನೆಗಳನ್ನು ಕಾರ್ಯರೂಪಕ್ಕೆ ತರುವ ಕುಲುಮೆಯಂತೆ ಮನೆಯಲ್ಲಿಯೇ ಪುಟ್ಟದಾಗಿ ‘ಎಂಜಿನಿಯರಿಂಗ್ ಗ್ಯಾರೇಜ್‌’ ರೂಪಿಸಿದ್ದಾರೆ.

ಈ ‘ಗ್ಯಾರೇಜ್’ ಹುಟ್ಟಿನ ಹಿಂದೆ ಸ್ವಂತ ಜೀವನದಲ್ಲಿ ಕಂಡುಂಡ ಅಸಂಖ್ಯಾತ ಸಮಸ್ಯೆಗಳ ಪರಿಹಾರದ ದಾರಿ ಹುಡುಕ ಹೊರಟ ಪ್ರಶಾಂತ್‌ ಅವರ ಅನುಭವ ಲೋಕವೇ ಇದೆ. ಜೊತೆಗೆ ಸಾಮಾನ್ಯ ಜನರಿಗೆ ಕೈಗೆಟುವಂತೆ ಹಲವು ಉಪಕರಣಗಳನ್ನು ಮಾಡುವ ಸಾಮಾಜಿಕ ಕಾಳಜಿಯೂ ಇದರಲ್ಲಿ ಬೆರೆತಿದೆ.

‘ಅಮೆರಿಕದಂಥ ಮುಂದುವರಿದ ದೇಶಗಳಲ್ಲಿ ಎಲ್ಲವೂ ಇಪ್ಪತ್ತು ವರ್ಷಗಳ ಹಿಂದೆಯೇ ಆಟೊಮೆಟಿಕ್ ಆಗಿವೆ. ಆದರೆ ನಾವಿನ್ನೂ ಹಿಂದೆ ಉಳಿದಿದ್ದೇವೆ. ಅದಕ್ಕೆ ಇಲ್ಲಿನ ಪರಿಸ್ಥಿತಿಯೂ ಕಾರಣವಿರಬಹುದು’ ಎನ್ನುವ ಪ್ರಶಾಂತ್, ಈ ಮಿತಿಯನ್ನು ಮೀರುವ ಉದ್ದೇಶದಿಂದಲೇ ಸಾಮಾನ್ಯ ಜನರಿಗೆ ಉಪಯೋಗವಾಗುವಂಥ ತಂತ್ರಜ್ಞಾನದ ಶೋಧನೆಯಲ್ಲಿ  ತೊಡಗಿರುತ್ತಾರೆ.

ಕಾಲೇಜಿನಲ್ಲೇ ಸಾಫ್ಟ್‌ವೇರ್ ಅಭಿವೃದ್ಧಿ ಮಾಡಿದ್ದು...
ಪ್ರಶಾಂತ್, ಬಿ.ಇ ಆರನೇ ಸೆಮಿಸ್ಟರ್‌ನಲ್ಲಿಯೇ ‘ಎಂಜಿನಿಯರಿಂಗ್ ಡ್ರಾಯಿಂಗ್ ಅಪ್ಲಿಕೇಶನ್’ ಅಭಿವೃದ್ಧಿಪಡಿಸಿದ್ದವರು. ಸಿ ಗ್ರಾಫಿಕ್ಸ್‌ ಬಳಸಿಕೊಂಡು ಅಭಿವೃದ್ಧಿಪಡಿಸಿದ್ದ ಇದರಲ್ಲಿ ಪ್ರೋಗ್ರಾಮ್‌ಗೆ ಪ್ರಶ್ನೆಗಳನ್ನು ತುಂಬಿದರೆ, ಉತ್ತರಗಳನ್ನು ಪಾಯಿಂಟ್, ಲೈನ್ ಮತ್ತು ಪ್ಲೇನ್‌ಗಳಲ್ಲಿ ನೀಡುತ್ತಿತ್ತು. ಅವರ ಈ ಅಪ್ಲಿಕೇಶನ್‌ಗೆ ಕಾಲೇಜಿನಲ್ಲೂ ಶಹಬ್ಬಾಸ್‌ಗಿರಿ ಸಿಕ್ಕಿತ್ತು.

ಬಿ.ಇ  ಏಳನೇ ಸೆಮಿಸ್ಟರ್‌ನಲ್ಲಿ   ಪ್ರಶಾಂತ್‌ ಅವರಿಗೆ ‘ಕ್ಯಾಂಪಸ್‌ ಸಂದರ್ಶನ’ ಇತ್ತು. ಆದರೆ ಅದರಲ್ಲಿ ಅವರು ಆಯ್ಕೆಯಾಗಲಿಲ್ಲ. ಆ ನಂತರ ಯಾವುದೇ ಕ್ಯಾಂಪಸ್‌ ಸಂದರ್ಶನಕ್ಕೂ ಹೋಗಲಿಲ್ಲ. ಆದರೆ ಕ್ಯಾಂಪಸ್‌ ಸಂದರ್ಶನದ ಕೆಲವು ಮಿತಿಗಳನ್ನು ಗಮನಿಸಿದ ಪ್ರಶಾಂತ್, ‘ಕ್ಯಾಂಪಸ್‌ ಸೆಲೆಕ್ಷನ್‌್’ ಸುಲಭಗೊಳಿಸುವ ‘ಕ್ಯಾಮ್‌ಕ್ರ್ಯೂಟ್’ ಎಂಬ ಸಾಫ್ಟ್‌ವೇರ್ ಅಭಿವೃದ್ಧಿಪಡಿಸಿದರು.

ಕಂಪೆನಿಗೂ, ಕಾಲೇಜಿಗೂ ವಿದ್ಯಾರ್ಥಿಗಳಿಗೂ ಅನುಕೂಲವಾಗುವಂತೆ, ಯಾವ ವಿದ್ಯಾರ್ಥಿಗೆ ಯಾವ ಅರ್ಹತೆ ಇದೆ ಎಂಬುದನ್ನು ಸುಲಭವಾಗಿ ಗ್ರಹಿಸಿ ಆಯ್ಕೆ ಮಾಡುವಂಥ ಸಾಫ್ಟ್‌ವೇರ್ ಅದು.  ಇದಲ್ಲದೆ ಎರಡನೇ ಪಿಯುಸಿ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಸಿಇಟಿ ಅಪ್ಲಿಕೇಶನ್ ಕೂಡ ತಯಾರು ಮಾಡಿದ್ದರು. ಇವರ ಈ ಪ್ರಾಜೆಕ್ಟ್‌ಗಳಿಗೆ ಉಪನ್ಯಾಸಕರೂ ಸಾಥ್ ನೀಡಿದರು. ಇದೇ ಸಮಯದಲ್ಲೇ ವಾಲ್‌ ಬಿಲ್ಡಿಂಗ್ ಆಟೊಮೇಷನ್, ವಾಹನದಿಂದ ವಿದ್ಯುತ್ ಉತ್ಪಾದಿಸುವ ಯಂತ್ರಗಳ ಮಾದರಿಯನ್ನೂ ರೂಪಿಸಿದ್ದರು.

ಸಾಫ್ಟ್‌ವೇರ್‌ ಅಭಿವೃದ್ಧಿ ಮಾಡುವಷ್ಟು ಪರಿಣತಿ ಗಳಿಸಿಕೊಂಡರೂ ಪಠ್ಯಕ್ಕೂ ಪ್ರಶಾಂತ್‌ಗೂ ಯಾಕೋ ಆಗಿಬರಲಿಲ್ಲ.  ಅತ್ಯುತ್ತಮ ಅಂಕ ಪಡೆಯುತ್ತಿದ್ದ  ಪ್ರಶಾಂತ್‌ ಒಮ್ಮಿಂದೊಮ್ಮೆಲೇ ಪಾಠಗಳಲ್ಲಿ ಆಸಕ್ತಿ ಕಳೆದುಕೊಂಡರು. ಎಂಟನೇ ಸೆಮಿಸ್ಟರ್ ಬರುವ ಹೊತ್ತಿಗೆ ಪ್ರಶಾಂತ್ ಕಾಲೇಜಿಗೇ ಹೋಗುವುದನ್ನು ಬಿಟ್ಟರು. ಪರಿಣಾಮ ಎಂಟನೇ ಸೆಮಿಸ್ಟರ್‌ನಲ್ಲಿ ಫೇಲಾಗಿದ್ದು. ಕಾಲೇಜಿಗೆ ಗುಡ್‌ಬೈ ಹೇಳಿದ್ದಾಯಿತು. ಮಗ ಚೆನ್ನಾಗಿ ಓದುತ್ತಾನೆ ಎಂದು ನೆಮ್ಮದಿಯಿಂದಿದ್ದ ಮನೆಯವರಿಗೂ ನಿರಾಶೆ ತುಂಬಿಕೊಂಡಿತು.

ಡ್ರಾಪ್‌ಔಟ್ ಆದ ಮೇಲೆ...
ಓದು ಬಿಟ್ಟಿದ್ದರೂ ಆಲೋಚನೆಗಳು ಬದಲಾಗಿರಲಿಲ್ಲ. ಡ್ರಾಪ್‌ಔಟ್‌ ಆದರೇನು? ದೊಡ್ಡ ದೊಡ್ಡ ವ್ಯಕ್ತಿಗಳೂ ಡ್ರಾಪ್‌ಔಟ್ ಆದವರೇ ತಾನೇ ಎಂಬ ವಿಶ್ವಾಸ ಮತ್ತು ಹೊಸತನ್ನು ಭಿನ್ನ ದಾರಿಯ ಮೂಲಕ ಸಾಧಿಸುವ ಹಂಬಲ ಅವರನ್ನು ಕೈಹಿಡಿದು ನಡೆಸಿತು.

ಕಾಲೇಜು ಬಿಟ್ಟರೂ ಎಂಜಿನಿಯರಿಂಗ್‌ಗೆ ಸಂಬಂಧಿಸಿದ ಕಾರ್ಯಾಗಾರಗಳಿಗೆ ಹೋಗುತ್ತಿದ್ದರು. ಅಲ್ಲಿ ಇವರಿಗೆ ಪರಿಚಯವಾದದ್ದು ಅಜೀಂ ಎಂಬ ವ್ಯಕ್ತಿ. ಅವರ ವರ್ಕ್‌ಶಾಪ್‌ನಲ್ಲಿ ಮೆಕ್ಯಾನಿಕಲ್‌ ಸಾಮಗ್ರಿಗಳನ್ನು ಕಂಡ ಅವರಿಗೆ ತಮ್ಮದೇ ಪುಟ್ಟ ಗ್ಯಾರೇಜ್ ಕಟ್ಟಿಕೊಳ್ಳುವ ಆಸೆ ಚಿಗುರೊಡೆದಿತ್ತು.

ಆದರೆ ಹಣದ ಕೊರತೆ ಎಲ್ಲಕ್ಕೂ ತಡೆ ಹಾಕಿತ್ತು. ಜೊತೆಗೆ ಮನೆಯಲ್ಲಿ ಕೆಲಸಕ್ಕೆ ಸೇರಬೇಕೆಂಬ ಒತ್ತಡ. ಓದು ಬಿಟ್ಟಿದ್ದಾಗಿತ್ತು, ಕೈಲಿ ಕೆಲಸ ಇರಲಿಲ್ಲ, ಸಿಕ್ಕರೂ ಅದು ತಮ್ಮ ಆಲೋಚನೆಗಳೊಂದಿಗೆ ಹೊಂದುತ್ತಿರಲಿಲ್ಲ. ಇದೇ ಗೊಂದಲಗಳೊಂದಿಗೆ ಒಂದು ವರ್ಷ ಕಳೆದಿದ್ದು ಗೊತ್ತೇ ಆಗಲಿಲ್ಲ. ಆದರೂ ಸಮಯ ಸಿಕ್ಕಾಗಲೆಲ್ಲಾ ಏನಾದರೂ ಉಪಕರಣವನ್ನು ಮಾಡುತ್ತಿದ್ದರು. ಯಾವುದೇ ಕೆಲಸದ ಗೊಡವೆ ಬೇಡವೆಂದು 2009ರಲ್ಲಿ  ತಮ್ಮದೇ ಸಂಸ್ಥೆ ಹೆಸರನ್ನೂ ನೋಂದಾಯಿಸಿದರು.

ಆದರೆ ಅಂದುಕೊಂಡಂತೆ ಯಾವುದೂ ನಡೆಯಲಿಲ್ಲ. ‘ಮಗನಿಗೆ ಭದ್ರವಾದ ಕೆಲಸ ಸಿಕ್ಕರೆ ಸಾಕು’ ಎಂಬ ಸಹಜ ಹಂಬಲ ಪ್ರಶಾಂತ್ ಪೋಷಕರಿಗೂ ಇತ್ತು. ಮನೆಯವರ ಒತ್ತಾಯಕ್ಕೆ ಕೆಲಸ ಹುಡುಕುವುದು ಅನಿವಾರ್ಯವಾಯಿತು. ಬೆಂಗಳೂರಿನಲ್ಲಿ ‘ಟೆಂಪರೇಚರ್ ಕಂಟ್ರೋಲ್‌’ನಲ್ಲಿ ಒಂದು ವರ್ಷ ಕೆಲಸ ಮಾಡಿದರು. ಆದರೆ ಅದೂ ಒಗ್ಗಲಿಲ್ಲ.   ಆಗ ಮನಸ್ಸು ಮತ್ತೆ ಓದುವ ಕಡೆಗೆ ತುಡಿಯಿತು.

ಮತ್ತೆ ಕಾಲೇಜು ಮೆಟ್ಟಿಲು ಹತ್ತಿದ್ದು
ಅಲ್ಲಿ ಇಲ್ಲಿ ಕೆಲಸ ಮಾಡಿ, ಕೆಲಸ ಬಿಟ್ಟು, ಇದೇ ಒತ್ತಡಗಳ ನಡುವಿದ್ದ ಪ್ರಶಾಂತ್‌ಗೆ ಮತ್ತೆ ಬಿ.ಇ. ಪೂರ್ಣಗೊಳಿಸಿಕೊಳ್ಳಬೇಕೆಂಬ ಆಸೆ ಹುಟ್ಟಿಕೊಂಡಿತ್ತು. ಕಾಲೇಜಿನ ಸಹವಾಸ ತೊರೆದು ಬರೋಬ್ಬರಿ ಮೂರೂವರೆ ವರ್ಷ ಕಳೆದಿತ್ತು. ಕೊನೆಯ ಅವಕಾಶವಾಗಿ ಎರಡು ತಿಂಗಳು ಮಾತ್ರ ಬಾಕಿ ಉಳಿದಿತ್ತು. ಆದರೆ ಹಿಡಿದ ಪಟ್ಟು ಬಿಡಲಿಲ್ಲ. ಎಂಟನೇ ಸೆಮಿಸ್ಟರ್‌ ಪುಸ್ತಕಗಳನ್ನು ಮತ್ತೆ ಸಂಗ್ರಹಿಸಿ  ಹಟ ಹಿಡಿದು ಓದಲು ಆರಂಭಿಸಿದ್ದರು.

‘ಕೆಲಸ ಸಿಗುವುದು ಕಷ್ಟವಾದ್ದರಿಂದ ಇನ್ನೊಂದು ಡಿಗ್ರಿ ಅನಿವಾರ್ಯವಾಗಿತ್ತು. ಎಂ.ಟೆಕ್‌ ಮಾಡಿ ಉಪನ್ಯಾಸಕನಾಗು ಎಂದು ಹಲವರು ಸಲಹೆ ನೀಡಿದರು.  ಇದೇ ಕಾರಣಕ್ಕೆ ಓದು ಬಿಟ್ಟು ಮೂರು ವರ್ಷಗಳ ನಂತರ ಮತ್ತೆ ಓದಲು ಆರಂಭಿಸಿದೆ. ಪರೀಕ್ಷೆ ಬರೆದು ಪಾಸ್‌ ಆದೆ’ ಎಂದು ಖುಷಿಯಿಂದ ಹೇಳಿಕೊಂಡರು.

ಬಿ.ಇ. ಸಂಪೂರ್ಣ ಆಗುತ್ತಿದ್ದಂತೆ ಇನ್ನೂ ಓದಬೇಕೆಂದು ಎಲ್ಲರೂ ಪ್ರೋತ್ಸಾಹಿಸಿದರು. ಇದೇ ಪ್ರೋತ್ಸಾಹ ಅವರನ್ನು ಎಂ.ಟೆಕ್ ಮಾಡಲು ಪ್ರೇರಣೆ ನೀಡಿತು. ‘ಆಟೊಮೇಷನ್ ಅಂಡ್ ರೋಬೊಟಿಕ್’ ವಿಷಯ ಆರಿಸಿಕೊಂಡು ಎಂ.ಟೆಕ್‌ ಅನ್ನೂ ಮುಗಿಸಿದ ಖುಷಿ ಪ್ರಶಾಂತ್‌ದ್ದಾಗಿತ್ತು.

ಕೆಲಸದ ಹಾದಿಯಲ್ಲಿ...
ಎಂಜಿನಿಯರಿಂಗ್ ಕಾರ್ಯಾಗಾರಗಳ ಸಲುವಾಗಿ ಐಐಟಿ ಮದ್ರಾಸ್‌ಗೆ ಹೋಗಿದ್ದರು ಪ್ರಶಾಂತ್. ಅಷ್ಟೂ ವರ್ಷಗಳನ್ನು ಬಾವಿಯೊಳಗಿನ ಕಪ್ಪೆಯಂತೆ ಕಳೆದಿದ್ದ ಪ್ರಶಾಂತ್‌ಗೆ ಅಲ್ಲಿಯೇ ಹೊಸ ಸಾಧ್ಯತೆಗಳು ಹೊಳೆದದ್ದು.

ಅಷ್ಟೊತ್ತಿಗೆ ‘ಈ ಡಿಸ್ಕವರಿ’ ಸಂಸ್ಥೆಯಲ್ಲಿ ಸರ್ವೀಸ್ ಎಂಜಿನಿಯರಿಂಗ್ ಆಗಿ ಕೆಲಸವನ್ನೂ ಗಿಟ್ಟಿಸಿಕೊಂಡಿದ್ದರು. ಆದರೆ ಸ್ವಲ್ಪ ಸಮಯದ ನಂತರ ಮಾರ್ಕೆಟಿಂಗ್‌ ವಿಭಾಗಕ್ಕೆ ವರ್ಗವಾದಾಗ ಅಲ್ಲೂ ಕೆಲಸ ಬಿಡುವ ಪರಿಸ್ಥಿತಿ ಎದುರಾಯಿತು. ಮುಂಬೈನಲ್ಲಿ ಟ್ರೀಲ್ಯಾಬ್ಸ್‌ನಲ್ಲಿ ಕೆಲಸಕ್ಕೆ ಅರ್ಜಿ ಸಲ್ಲಿಸಿದರು. ಅಲ್ಲಿಂದಲೂ ಪ್ರತಿಕ್ರಿಯೆ ಸಿಗಲಿಲ್ಲ. ಮತ್ತೆ ಕೆಲಸ ಇಲ್ಲದೆ ಕೂರುವ ಪರಿಸ್ಥಿತಿ.

ಬೇರೆ ಕೆಲಸಕ್ಕೆ ಅಲೆಯುವ ಬದಲು ತಮ್ಮದೇ ಕನಸುಗಳಿಗೆ ಜೀವ ತುಂಬುವ ಕೆಲಸವೇ ಒಳಿತು ಎಂಬ ಆಲೋಚನೆ ಗಟ್ಟಿಯಾಯಿತು. ಈ ಹಿಂದಿನ ಕೆಲಸದಲ್ಲಿನ ಸಂಬಳವನ್ನು ಒಟ್ಟುಗೂಡಿಸಿ ಅಗತ್ಯ ಸಲಕರಣೆಗಳನ್ನು ಶೇಖರಿಸುವ ಕೆಲಸ ನಡೆದಿತ್ತು. ಅವರ ಮನೆಯಲ್ಲಿ ಮೀಸಲಿಟ್ಟ ಗ್ಯಾರೇಜ್ ಸ್ಥಳ ಭರ್ತಿಯಾಗುತ್ತಾ ಇತ್ತು.

‘ಅಪ್ಲೈಡ್ ಸೈನ್ಸ್‌ ರಿಸರ್ಚ್ ಲ್ಯಾಬ್’ ಎಂದು ಹೆಸರು ನೋಂದಾಯಿಸಿ ತಮ್ಮ ಮನೆಯಲ್ಲಿನ ಲ್ಯಾಬ್ ಅನ್ನು  ಆರಂಭಿಸಿಯೇಬಿಟ್ಟರು. ಅಚಾನಕ್ಕಾಗಿ ಆ ರಾತ್ರಿಯೇ ಟ್ರೀಲ್ಯಾಬ್ಸ್‌ನಿಂದ ‘ನೀವು ಬರಬೇಕು’  ಎಂಬ ಕರೆಯೂ ಬಂತು.

ಇನ್‌ಹೇಲರ್ ಮಾಡಿದ್ದು
ಎರಡು ವಾರಗಳ ಅವಧಿ ಮುಂಬೈಗೆ ಹೋದ ಪ್ರಶಾಂತ್ ಅವರಿಗೆ  ‘ಇನ್‌ಹೇಲರ್’ ಅಭಿವೃದ್ಧಿಗೊಳಿಸುವ ಸವಾಲು ಎದುರಿಗಿತ್ತು. ‘1950ರಲ್ಲಿ ಮೊದಲ ಇನ್‌ಹೇಲರ್‌ ಪರಿಚಯಗೊಂಡಿದ್ದು. ಆದರೆ ಅದು ಒತ್ತಲು ಕಷ್ಟವಾಗಿತ್ತು. ಇದನ್ನು ಸುಲಭ ಮಾಡುವ ಸವಾಲನ್ನು ಎದುರಿಗಿಟ್ಟರು. 18 ಗಂಟೆಗಳ ಕಾಲ ಮಧ್ಯರಾತ್ರಿ 3ರವರೆಗೂ ಕೆಲಸ ಮಾಡಿದೆ. 4 ದಿನದಲ್ಲಿ ಪರಿಹಾರ ಸಿಕ್ಕಿತ್ತು. ಈ ಮೊದಲು 4 ಕೆ.ಜಿ. ಒತ್ತಡ ಬೇಡುತ್ತಿದ್ದ ಇನ್‌ಹೇಲರ್‌ ಅನ್ನು 330 ಗ್ರಾಂಗೆ  ಇಳಿಸಿದ್ದೆ. ಅದನ್ನು ಈಗ ಅವರು ಅಭಿವೃದ್ಧಿ ಮಾಡುತ್ತಿದ್ದಾರೆ’ ಎಂದು ತಮ್ಮ ಅನುಭವಗಳನ್ನು ಹಂಚಿಕೊಂಡರು.

ಎಂಜಿನಿಯರಿಂಗ್ ಗ್ಯಾರೇಜ್ ಆರಂಭಿಸಿದ್ದು
ಟ್ರೀಲ್ಯಾಬ್ಸ್‌ನಲ್ಲಿ ಕೆಲಸ ಸಿಕ್ಕರೂ ಅನಿವಾರ್ಯ ಕಾರಣಗಳಿಂದ ಕೆಲಸ ಮಾಡಲಾಗಲಿಲ್ಲ. ಮತ್ತೆ ಗ್ಯಾರೇಜ್ ಹಾದಿ ತುಳಿದರು. ಮೊದಲಿನಿಂದಲೂ ಎತ್ತಿಟ್ಟುಕೊಂಡಿದ್ದ ನಕ್ಷೆಗಳು ಒಂದೊಂದಾಗಿ ಹೊರಬಂದವು. ಕಡಿಮೆ ವೇತನ  ಪಡೆಯುವ ಸಾಮಾನ್ಯ ಮಂದಿಗೆ ಸರಳ ಸಾಧನ ಕಂಡುಹಿಡಿಯಬೇಕೆಂಬ ಯೋಚನೆಗಳು ಮತ್ತೆ ಗರಿಗೆದರಿದವು.

ಕಾಲೇಜು ದಿನಗಳಲ್ಲಿಯೇ  ಓವರ್‌ಹೆಡ್‌ ಟ್ಯಾಂಕ್‌ನಿಂದ ವಿದ್ಯುತ್ ತಯಾರಿಸುವ ಯಂತ್ರದ ಮಾದರಿಯನ್ನು ರೂಪಿಸಿದ್ದರು. ಬೀದಿಗಳಲ್ಲಿನ ಟ್ಯಾಂಕ್‌ಗೆ ಪಂಪ್‌ ಸಂಪರ್ಕ ನೀಡಿ, ಆ ನೀರಿನ ರಭಸದಿಂದ ವಿದ್ಯುತ್ ಉತ್ಪಾದಿಸುವ ಯಂತ್ರ ಅದಾಗಿತ್ತು. ಕರೆಂಟು ಹೋದಾಗ ಈ ವಿದ್ಯುತ್ ಅನ್ನು ಬೀದಿ ದೀಪಗಳಿಗೆ ಬಳಸಿಕೊಳ್ಳುವ ದಾರಿಯಾಗಿತ್ತು.

ಇದೇ ಹಾದಿಯಲ್ಲಿ ‘ಲಾಗ್‌ ಲಿಫ್ಟರ್’ ಅನ್ನು ವಿನ್ಯಾಸಗೊಳಿಸುವ ಕೆಲಸಕ್ಕೆ ಕೈ ಹಾಕಿದರು. ಯಾವುದೇ ಇಂಧನ, ವಿದ್ಯುತ್ ಅವಶ್ಯಕತೆ ಇಲ್ಲದೆ 1500 ಕೆ.ಜಿ ಮರದ ದಿಮ್ಮಿಗಳನ್ನು ಎತ್ತಬಲ್ಲ ಸಾಧನ. ಇದನ್ನು ಇನ್ನಿತರ ಭಾರದ ವಸ್ತುಗಳನ್ನು ಎತ್ತುವಾಗ, ಇಳಿಸುವಾಗಲೂ ಬಳಸಬಹುದು. ಇದೇ ಮಾದರಿಯ ಟಿಂಬರ್ ಟಾಂಗ್ ಅನ್ನೂ ವಿನ್ಯಾಸಗೊಳಿಸಿದರು.  ಸುಲಭದಲ್ಲಿ ಇಟ್ಟಿಗೆಗಳನ್ನು ಎತ್ತಬಲ್ಲ ‘ಬ್ರಿಕ್ ಲಿಫ್ಟರ್‌’ ಮಾದರಿಯೂ ಸಿದ್ಧಗೊಂಡಿತು. ಒಂದೇ ಬಾರಿಗೆ ಹತ್ತು ಇಟ್ಟಿಗೆಗಳನ್ನು ಎತ್ತಬಲ್ಲ ಸಾಮರ್ಥ್ಯ ಹೊಂದಿರುವ ಇದರಲ್ಲಿ ಟೆಲಿಸ್ಕೋಪಿಕ್ ರಿಟ್ರಾಕ್ಟೆಬಲ್ ಬೀಮ್ ಇದ್ದು, ಇಟ್ಟಿಗೆಯ ಸಂಖ್ಯೆಯನ್ನು ಹೊಂದಿಸಿಕೊಳ್ಳಬಹುದು.

ಹಳ್ಳಿಗಳಲ್ಲಿ ರೈತರು ಕೆರೆ ಬಳಿ ಮೋಟಾರು  ಅಳವಡಿಸಿಕೊಂಡು ಹೊಲಕ್ಕೆ ನೀರು ಪಂಪ್ ಮಾಡಿಕೊಳ್ಳುತ್ತಾರೆ. ಮೋಟಾರಿಗೆ 4 ಸಾವಿರ ರೂಪಾಯಿ, ಜೊತೆಗೆ ಡೀಸೆಲ್‌ಗೆ ಗಂಟೆಗೆ ₹ 80 ನಂತೆ ಖರ್ಚಾಗುತ್ತಿದ್ದುದನ್ನು ತಿಳಿದ ಪ್ರಶಾಂತ್,  ಪೆಡಲ್ ಪಂಪ್ ಸಿದ್ಧಪಡಿಸುವ ಆಲೋಚನೆ ಮಾಡಿದರು. ನೀರಿನ ರಭಸದಿಂದ ಶಕ್ತಿ ಉತ್ಪತ್ತಿಯಾಗಿ ನೀರೆತ್ತುವ ಸಾಧನವನ್ನು ಕಂಡುಕೊಂಡರು. ಇವುಗಳು ಪರೀಕ್ಷೆಯಲ್ಲಿ ಪಾಸಾದವು.

ಸ್ಪೀಚ್ ಅಂಡ್‌ ಹಿಯರಿಂಗ್ ಅಪ್ಲಿಕೇಷನ್
ಉಪಕರಣಗಳೊಂದಿಗೆ ಅಪ್ಲಿಕೇಷನ್‌ಗಳಲ್ಲೂ ಹೆಚ್ಚಿನ ಆಸಕ್ತಿ ಹೊಂದಿರುವ ಪ್ರಶಾಂತ್, ‘ಸ್ಪೀಚ್ ಅಂಡ್ ಹಿಯರಿಂಗ್‌’ ಸಾಧನಗಳ ಸುಲಭ ಲಭ್ಯತೆಗೆ ಅಪ್ಲಿಕೇಶನ್ ಒಂದನ್ನು ಅಭಿವೃದ್ಧಿಪಡಿಸಿದರು.

‘ಈಗ ಸಾವಿರಾರು ಹಿಯರಿಂಗ್ ಏಡ್‌ಗಳು ಲಭ್ಯವಿವೆ. ವೈದ್ಯರು ಅವರಿಗೆ ನೆನಪಿರುವಷ್ಟು ಆಯ್ಕೆ ಮಾಡುತ್ತಾರೆ. ಚಿಕ್ಕ ಕಂಪೆನಿಗಳಿಗೆ ಪ್ರೊಮೋಟ್ ಮಾಡಲು ಸಾಧ್ಯವಿಲ್ಲ.  ಜಾಸ್ತಿ ದುಡ್ಡು ಕೊಡಲು ಕೆಲವರಿಗೆ ಸಾಮರ್ಥ್ಯ ಇರುವುದಿಲ್ಲ. ಅದಕ್ಕೆಂದು ಈ ಅಪ್ಲಿಕೇಶನ್ ತಯಾರು ಮಾಡಿದ್ದು.  ವೈದ್ಯರು ರೋಗಿಯ ತೊಂದರೆ ಹಾಗೂ ಆರ್ಥಿಕ ಸಾಮರ್ಥ್ಯಕ್ಕೆ ತಕ್ಕಂತೆ  ಆಯ್ಕೆ ಮಾಡಬಹುದು. 1000 ಹಿಯರಿಂಗ್ ಏಡ್ ಲೋಡ್ ಮಾಡಬಹುದು’ ಎಂದು  ವಿವರಿಸಿದರು.

ಸದ್ಯಕ್ಕೆ ಇನ್ನೂ 33 ಉತ್ಪನ್ನಗಳು ಇವರ ವಿನ್ಯಾಸದ ಪಟ್ಟಿಯಲ್ಲಿವೆ. ರೈಲ್ವೆ ಸ್ಟೇಷನ್‌ನಲ್ಲಿ ಆಟೊ ಓಪನ್ ಟ್ಯಾಬ್, ಜಾಬ್‌ ಸರ್ಚ್ ಸೊಲ್ಯೂಷನ್, ಸೆಮಿ ಆಟೊಮೆಟಿಕ್ ಶುಗರ್‌ಕೇನ್ ಕಟ್ಟಿಂಗ್ ಮಷಿನ್... ಹೀಗೆ ಹಲವು ಉಪಕರಣಗಳನ್ನು ಕಡಿಮೆ ಬೆಲೆಗೆ ಮಾಡುವ ಯೋಜನೆ ಇವರದ್ದು. ಜೊತೆಗೆ ತಮ್ಮಂತೆ ಯೋಚಿಸುವ ವಿದ್ಯಾರ್ಥಿಗಳಿಗೂ ಅವಕಾಶ ನೀಡುವ ಹಂಬಲ ಇವರದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT