ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೂಕ ಕಳೆದುಕೊಳ್ಳುವ ಹೊಸ ರೂಲು

Last Updated 1 ಜುಲೈ 2015, 19:30 IST
ಅಕ್ಷರ ಗಾತ್ರ

ಈಗೀಗ ಜನರಿಗೆ ತಮ್ಮ ಆರೋಗ್ಯದ ಬಗೆಗಿನ ಕಾಳಜಿ ಹೆಚ್ಚಾಗುತ್ತಿದೆ. ಅದರಲ್ಲೂ ತೂಕ ಕಡಿಮೆ ಮಾಡಿಕೊಳ್ಳುವ ವಿಚಾರಕ್ಕೆ ಮೊದಲ ಆದ್ಯತೆ ನೀಡುವುದರ ಜೊತೆಗೆ ಸಾಕು ಸಾಕೆನಿಸುವಷ್ಟು  ಕಸರತ್ತು ಮಾಡುತ್ತಾರೆ. ಆದರೆ ಕೇವಲ ತೂಕ ಕಡಿಮೆ ಮಾಡಿಕೊಂಡರೆ ಸಾಲದು, ಅದನ್ನು ನಿರಂತರವಾಗಿ ಜತನ ಮಾಡುವುದೂ ಅಷ್ಟೇ ಮುಖ್ಯ.

ತೂಕವನ್ನು ಬೇಕಾದಷ್ಟು ಕಡಿಮೆ ಮಾಡಿಕೊಂಡು, ಅದೇ ತೂಕವನ್ನು ಮುಂದುವರೆಸಬೇಕಾದರೆ ಪ್ರತಿನಿತ್ಯ ನಿಮ್ಮ ದೇಹದ ತೂಕಕ್ಕೆ  ತಕ್ಕಂತೆ ವರ್ಕ್‌ಔಟ್‌ ಮಾಡುವುದರಿಂದ ತೂಕ ನಿರ್ವಹಿಸಿಕೊಳ್ಳುವ ನಿಮ್ಮ ಗುರಿಯನ್ನು ತಲುಪಬಹುದು ಎಂದು ಹೊಸ ಸಂಶೋಧನೆಯಿಂದ ತಿಳಿದು ಬಂದಿದೆ.

ಕಾರ್ನೆಲ್‌ ವಿಶ್ವವಿದ್ಯಾಲಯದಲ್ಲಿ ನಡೆದ ಈ ಸಂಶೋಧನೆಯ ಮುಖ್ಯ ಉದ್ದೇಶವೆಂದರೆ ಸಂಶೋಧನೆಗಾಗಿ ಆರಿಸಿಕೊಂಡವರ ತೂಕವನ್ನು ಒಂದು ವರ್ಷದಲ್ಲಿ ಶೇಕಡ 10ರಷ್ಟು ಕಡಿಮೆ ಮಾಡುವುದು. ಈ ಸಂಶೋಧನೆಗಾಗಿ 162 ಜನರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಸಂಶೋಧನೆಯ ವೇಳೆ ಅವರೆಲ್ಲರಿಗೂ ತೂಕ ಇಳಿಸಿಕೊಳ್ಳಲು ಪ್ರತಿ ನಿತ್ಯ ತಾವು ಅನುಸರಿಸುತ್ತಿದ್ದ ವಿಧಾನಗಳನ್ನು ಪಾಲಿಸುವಂತೆ ಹೇಳಲಾಗಿತ್ತು.

ಸಂಶೋಧನೆಗೆ ಆಯ್ಕೆ ಮಾಡಿಕೊಂಡವರ ಪೈಕಿ 88 ಜನರಿಗೆ ಪ್ರತಿನಿತ್ಯ ಬೆಳಿಗ್ಗೆ ವ್ಯಾಯಾಮದ ನಂತರ ಒಂದು ಚಾರ್ಟ್‌ನಲ್ಲಿ ತಮ್ಮ ತೂಕದ ಬಗ್ಗೆ ದಾಖಲಿಸುವಂತೆ ಸೂಚಿಸಲಾಗಿತ್ತು. ಉಳಿದ 74 ಜನರಿಗೆ ಸ್ಕೇಲ್‌ನ ನಿಯಮ ಅನ್ವಯಿಸಿರಲಿಲ್ಲ. ಅದರಂತೆ 74 ಜನರಿಗೆ ಹೋಲಿಸಿಕೊಂಡರೆ ಸ್ಕೇಲ್‌ಶೀಟ್‌ ಪ್ರಕಾರ ವ್ಯಾಯಾಮ ಮಾಡಿದವರಲ್ಲಿ ಅವರು ಆರಂಭದಲ್ಲಿ ಹೊಂದಿದ್ದ ತೂಕದಲ್ಲಿ ಶೇಕಡ 3ರಷ್ಟನ್ನು ಕಳೆದುಕೊಳ್ಳುವುದು ಸಾಧ್ಯವಾಗಿತ್ತು.

ಸಾಮಾನ್ಯವಾಗಿ ಒಮ್ಮೆ ತೂಕ ಕಡಿಮೆ ಮಾಡಿಕೊಂಡ ನಂತರ ಬಹಳ ದಿನಗಳವರೆಗೆ ಅದೇ ತೂಕವನ್ನು ಹೊಂದುವುದು, ನಿರ್ವಹಿಸುವುದು ಸ್ವಲ್ಪ ಕಷ್ಟ. ಆದರೆ, ಈ ಸಂಶೋಧನೆಗೆ ಒಳಗಾಗಿದ್ದವರು ಒಂದು ವರ್ಷದ ನಂತರ ಕೂಡ ವ್ಯಾಯಾಮವನ್ನು ಕ್ರಮಬದ್ಧವಾಗಿ ನಿರ್ವಹಿಸುವ ಮೂಲಕ ತೂಕವನ್ನು ಹೆಚ್ಚಿಸಿಕೊಳ್ಳದೆ ಅದೇ ತೂಕವನ್ನು ಹೊಂದಿದ್ದಾರೆ ಎಂಬುದು ತಿಳಿದಿದೆ. ಇದು ಬಹಳ ಕಷ್ಟಕರವಾದದ್ದು ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ತೂಕ ಕಡಿಮೆ ಮಾಡಿಕೊಳ್ಳಲು ಸಾವಿರಾರು ವಿಧಾನಗಳಿವೆ ಎಂದು ಸಂಶೋಧಕ ಹಾಗೂ ಕಾರ್ನೆಲ್‌ ವಿಶ್ವವಿದ್ಯಾಲಯದಲ್ಲಿ ಪೌಷ್ಟಿಕತೆ ಹಾಗೂ ಮನಃಶಾಸ್ತ್ರ ವಿಭಾಗದ ಪ್ರೊಫೆಸರ್‌ ಡೇವಿಡ್‌ ಲೆವೆಸ್ಕಿ ಹೇಳುತ್ತಾರೆ. ಮೂಲತಃ ತೂಕ ಕಡಿಮೆ ಮಾಡಿಕೊಳ್ಳುವುದು ಸಮಸ್ಯೆಯೇ ಆಗಿರುವುದಿಲ್ಲ. ಬೇಗನೆ ತೂಕ ಕಳೆದುಕೊಳ್ಳಬಹುದು. ಆದರೆ ಕಡಿಮೆ ಮಾಡಿಕೊಂಡ ತೂಕದ ಪ್ರಮಾಣವನ್ನು ಮುಂದುವರೆಸುವುದಿದೆಯಲ್ಲ, ಅದು ಸವಾಲು ಎನ್ನುತ್ತಾರೆ ಇವರು.

ತೂಕ ಕಡಿಮೆ ಮಾಡಿಕೊಳ್ಳುವ ಸಮಯದಲ್ಲಿ ನಾವು ಸೇವಿಸುವ ಆಹಾರದ ಪೌಷ್ಟಿಕಾಂಶ, ಪ್ರಮಾಣ ಸಹ ಅಷ್ಟೇ ಮುಖ್ಯವಾಗಿರುತ್ತದೆ. ಅದೂ ಅಲ್ಲದೆ ದಿನನಿತ್ಯ ತೂಕವನ್ನು ಅಳತೆ ಮಾಡಿಕೊಳ್ಳುವುದು  ತೂಕ ಹೆಚ್ಚುವುದನ್ನು ತಡೆಯುವ ಅತಿ ಪರಿಣಾಮಕಾರಿ ಮಾರ್ಗ ಎಂದು ಟಿಪ್ಸ್ ಕೂಡ ನೀಡಿದ್ದಾರೆ. ಈ ರೀತಿ ಮಾಡುವುದರಿಂದ ಅವರನ್ನು ಹೆಚ್ಚೆಚ್ಚು ತಿನ್ನಲು ಪ್ರೇರಣೆ ಸಿಗುವುದಿಲ್ಲವಂತೆ.

ತೂಕ ಕಡಿಮೆ ಮಾಡಿಕೊಂಡ ನಂತರ ಹಿಂದಿನ ಆಹಾರ ಶೈಲಿಗೆ ಹೊಂದಿಕೊಂಡರೆ ಮತ್ತೆ ತೂಕ ಹೆಚ್ಚಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಹಾಗಾಗಿ ನಿಗದಿತ ಪ್ರಮಾಣದ ತೂಕ ಕಡಿಮೆ ಮಾಡಿಕೊಂಡ ನಂತರ ಅದೇ ತೂಕವನ್ನು ಹೊಂದಬೇಕಾದರೆ ವರ್ಕ್‌ಔಟ್‌ ಮಾಡುವಾಗ ಅನುಸರಿದ ನಿಯಮಗಳನ್ನೇ ಯಥಾವತ್ತಾಗಿ ಅನುಸರಿಸಬೇಕು.

ಸಂಶೋಧಕರ ಪ್ರಕಾರ ಒಂದು ವರ್ಷದಲ್ಲಿ 29ರಷ್ಟು ಜನರು ಶೇಕಡ 5ರಷ್ಟು ತೂಕ ಕಳೆದುಕೊಂಡಿದ್ದಾರೆ. ಆದರೆ ಅದನ್ನು ಮುಂದುವರಿಸಿದವರದ್ದು ಕಡಿಮೆ ಸಂಖ್ಯೆ. ಸಂಶೋಧನೆಗೆ ಒಳಗಾಗಿದ್ದವರಿಗೆ ತೂಕ ಹೆಚ್ಚಿಸಿಕೊಳ್ಳದಂತೆ ನಿರಂತರವಾಗಿ ಸಲಹೆಗಳನ್ನು ನೀಡಲಾಗಿದ್ದರಿಂದಲೇ ಅದರ ನಿರ್ವಹಣೆ ಸುಲಭವಾಯಿತು ಎನ್ನುತ್ತಾರೆ ಲೆವಸ್ಕಿ.

ನಾವು ಸೇವಿಸುವ ಆಹಾರದ ಬಗ್ಗೆ ಕಾಳಜಿ ವಹಿಸುವಂತೆ ಮಾಡುವುದರ ಜೊತೆಗೆ ತೂಕ ಕಡಿಮೆ ಮಾಡಿಕೊಳ್ಳುವ ಅಭ್ಯಾಸವನ್ನು  ಮುಂದುವರೆಸಿ ಉತ್ತಮ ಆರೋಗ್ಯ ಹೊಂದುವಂತೆ ಮಾಡುವುದು ಈ ಸಂಶೋಧನೆಯ ಮುಖ್ಯ ಉದ್ದೇಶ. ನಿನ್ನೆ ನಾವು ಮಾಡಿದ ಕೆಲಸ,  ನಾಳಿನ ಹೊಸ ಆಲೋಚನೆಗಳ ಜೊತೆಗೆ ತಳುಕು ಹಾಕಿಕೊಂಡಿರುತ್ತದೆ. ಹಾಗೆಯೇ ದೇಹದ ತೂಕ ಕೂಡ. ಅದಕ್ಕಾಗಿ ನಮ್ಮ ಆಲೋಚನೆಗಳು ಕೂಡ ಸದಾ ಕ್ರೀಯಾಶೀಲವಾಗಿರಬೇಕು, ಆಗ ಮಾತ್ರ ನಾವು ಮಾಡುವ ಪ್ರತಿಯೊಂದು ಕೆಲಸದ ಗುರಿ ತಲುಪಲು ಸಾಧ್ಯ ಎಂದೂ ಹೇಳುತ್ತಾರೆ.

ಸ್ಥೂಲಕಾಯ ಹಲವು ರೀತಿಯ ಅನಾರೋಗ್ಯಗಳಿಗೂ ಕಾರಣವಾಗಿರುವುದರಿಂದ ಎತ್ತರಕ್ಕೆ ತಕ್ಕಂತೆ ತೂಕ ಹೊಂದುವುದು ಅನಿವಾರ್ಯವಾಗಿದ್ದು, ಹೊಸ ಸಂಶೋಧನೆಗಳ ಫಲಿತವಾಗಿ ದೊರೆಯುವ ಸಲಹೆ, ಸೂಚನೆಗಳನ್ನು ಪಾಲಿಸುವುದಕ್ಕೆ ಜನ ಮುಗಿ ಬೀಳುತ್ತಿದ್ದಾರೆ ಎಂಬ ಮಾತೂ ಸುಳ್ಳಲ್ಲ. ಈ ವರದಿ ಪ್ರಕಟವಾಗಿದ್ದು ‘ಜರ್ನಲ್ ಆಫ್ ಒಬೆಸಿಟಿ’ಯಲ್ಲಿ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT