ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಂದುವಿನಿಂದ ಅನಂತಕ್ಕೆ...

Last Updated 6 ಮಾರ್ಚ್ 2013, 19:59 IST
ಅಕ್ಷರ ಗಾತ್ರ

ಈಕೆ ಟೀವಿ ಚಾನೆಲ್‌ನಲ್ಲಿ ಗಂಟಲು ಹರಿದುಕೊಳ್ಳುವುದಿಲ್ಲ. ರಾಜಕೀಯ ಪಕ್ಷದ ಕಾರ್ಯಕರ್ತೆಯೂ ಅಲ್ಲ. ಭರವಸೆಗಳ ಮಹಾಪೂರ ಹರಿಸುವುದಿಲ್ಲ. ಈಕೆ ಇನ್ನೂ ವಿದ್ಯಾರ್ಥಿನಿ. ಆದರೆ ಈಕೆಯ ಪ್ರಯತ್ನದ ಫಲವಾಗಿ ಮುಸುರೆ ತಿಕ್ಕುತ್ತಿದ್ದ ಸಿದ್ಧಾರ್ಥನಗರದ ಚಂದನ ಎನ್ನುವ ಹುಡುಗಿಯ ಕಲಿಯುವ ಹಕ್ಕು ಸಾಕಾರಗೊಂಡಿದೆ. ಏಕಲವ್ಯ ನಗರದ ಕಿರಣ್‌ಳ ಮೊಗದಲ್ಲೂ ಮಲ್ಲಿಗೆಯ ನಗು.

ಮೈಸೂರಿನಿಂದ ಅಮೆರಿಕ, ವಿಶ್ವಸಂಸ್ಥೆ ಹಾಗೂ ಆಫ್ಘಾನಿಸ್ತಾನ ರಾಜಧಾನಿ ಕಾಬೂಲ್ ತನಕವೂ ತಮ್ಮ ಕಾರ್ಯಕ್ಷೇತ್ರವನ್ನು ವಿಸ್ತರಿಸಿಕೊಂಡಿರುವ ಮೈಸೂರಿನ ಈ ವಿದ್ಯಾರ್ಥಿನಿಯ ಹೆಸರು ಬಿಂದು. ಪೂರ್ಣ ಹೆಸರು ಬಿಂದು ಎನ್. ದೊಡ್ಡಹಟ್ಟಿ. ಅಪ್ಪ ಮೈಸೂರಿನಲ್ಲಿ ನಳಂದಾ ಎಂಬ ಶಾಲೆ ನಡೆಸುತ್ತಿದ್ದಾರೆ. ತಾಯಿ ಬಿಂದುವಿನ ಕೆಲಸಕ್ಕೆ ಸಾಥ್. ಜತೆಗೆ ಗೃಹಿಣಿ. ಮೂಲ ಊರು ಹಾಸನ. ಮೈಸೂರಿಗೆ ಬಂದು ನಾಲ್ಕೈದು ದಶಕ ಕಳೆದಿದ್ದರಿಂದ ಬಿಂದುವಿನ ಕುಟುಂಬ ಮೈಸೂರಿನೊಂದಿಗೆ ಬೆಸೆದುಕೊಂಡಿದೆ.

ಬಿಂದು ಒಂಬತ್ತನೇ ತರಗತಿಯಲ್ಲಿ ಓದುತ್ತಿದ್ದಾಗ `ಸುಧಾ' ಪತ್ರಿಕೆಯಲ್ಲಿ ಲೇಖನವೊಂದು ಬಂದಿತ್ತು. ಮನೆಯಲ್ಲಿದ್ದ ಆರೂ ಹೆಣ್ಣು ಮಕ್ಕಳನ್ನು ಮನೆಗೆಲಸಕ್ಕೆ ಕಳುಹಿಸುತ್ತಿದ್ದ ಘಟನೆಯೊಂದನ್ನು ಆ ಲೇಖನ ಪ್ರಸ್ತಾಪಿಸಿತ್ತು. ಇದರ ಜೊತೆಯಲ್ಲೇ ದಾವಣಗೆರೆಯಲ್ಲಿ ನಡೆದ ಬಾಲ್ಯ ವಿವಾಹದ ಕುರಿತ ಬರಹವಿತ್ತು.

ಬಿಂದು ಮಕ್ಕಳ ಹಕ್ಕುಗಳ ಬಗ್ಗೆ ಚಿಂತಿಸತೊಡಗಿದ್ದೂ ಆಗಲೇ. ಅಲ್ಲಿಂದ ಆರಂಭವಾದ ಮಾನವ ಹಕ್ಕು ರಕ್ಷಣೆಯ ಓಟ ಈಗ ತನ್ನದೇ ಸಂಸ್ಥೆ ಆರಂಭಿಸುವ ಹಂತಕ್ಕೆ ಬಂದಿದೆ. ಜೆಎಸ್‌ಎಸ್ ಕಾನೂನು ಕಾಲೇಜಿನಲ್ಲಿ ಮೂರನೇ ಸೆಮಿಸ್ಟರ್‌ನಲ್ಲಿ ಕಲಿಯುತ್ತಿರುವ ಬಿಂದು ಕಾನೂನು ವಿಷಯವನ್ನು ಆರಿಸಿಕೊಂಡಿದ್ದೂ ತಮ್ಮ ಹೋರಾಟಕ್ಕಿದ್ದ ಬದ್ಧತೆಯಿಂದ.

ಭಾರತದ ಸಂವಿಧಾನ ತನ್ನ ನಾಗರಿಕರಿಗೆ ನೀಡಿರುವ ಹಕ್ಕುಗಳ ಪಟ್ಟಿ ದೊಡ್ಡದು. ಆದರೆ ಇದನ್ನು ಖಾತರಿಪಡಿಸಿಕೊಳ್ಳಲು ಎಲ್ಲರಿಗೂ ಸಾಧ್ಯವಾಗಿದೆಯೇ? ಬಿಂದು ಅವರ ಮುಂದಿರುವ ಪ್ರಶ್ನೆಯೂ ಇದುವೆ. ಇದಕ್ಕೆ ಉತ್ತರ ಕಂಡುಕೊಳ್ಳುವ ಪ್ರಯತ್ನದಲ್ಲಿ ಅವರು ಹೋರಾಟದ ಹಾದಿಯೊಂದರತ್ತ ಆಕರ್ಷಿತರಾದರು. ಯಶಸ್ಸಿಗೆ ಹತ್ತಿರದ ದಾರಿಗಳಿಲ್ಲ ಎಂದು ಅರಿತಿರುವ ಬಿಂದು, ಮತ್ತವರ ತಂಡ, ತಾವೇ ಮುಂದಾಗಿ ಜನರಿಗೆ ಹಕ್ಕು ಕುರಿತಾದ ಮಾಹಿತಿ, ಯಾವ ಹಕ್ಕು ಯಾರಿಂದ ವಂಚನೆಯಾಗಿದೆ ಎಂಬ ವಿವರ, ದಮನವಾಗದಂತೆ ಹೇಗೆ ನೋಡಿಕೊಳ್ಳಬೇಕು ಎಂಬುದರ ಕುರಿತಾಗಿ ವಿಶೇಷವಾಗಿ ಗ್ರಾಮೀಣ ಪ್ರದೇಶ ಹಾಗೂ ಮೈಸೂರಿನಲ್ಲಿರುವ 16 ಕೊಳೆಗೇರಿಗಳಲ್ಲಿ ಕೆಲಸ ಮಾಡುತ್ತಿದೆ. ಇದಕ್ಕಾಗಿಯೇ 2011ರ ಆಗಸ್ಟ್ ತಿಂಗಳಲ್ಲಿ `ಸ್ಪಿರಿಟಸ್ ಇಂಟರ್‌ನ್ಯಾಷನಲ್' ಎಂಬ ಸಂಸ್ಥೆ ಆರಂಭಿಸಿದರು.

ಈ ಸಂಸ್ಥೆ ರೂಪುಗೊಂಡ ನಂತರ ಮಾನವ ಹಕ್ಕುಗಳ ಕುರಿತಾಗಿ ಅರಿವು ಮೂಡಿಸಲು ವಿದ್ಯಾರ್ಥಿ ತಂಡ ರಚನೆ ಮಾಡಿದ ಬಿಂದು, ಕಾಲೇಜು ಸಮಯ ಬಿಟ್ಟರೆ ಉಳಿದೆಲ್ಲ ಸಮಯವನ್ನು ಕೊಳೆಗೇರಿಗಳು, ಗ್ರಾಮೀಣ ಪ್ರದೇಶ ಹಾಗೂ ಶ್ರೀಮಂತರ ಮನೆಯಲ್ಲಿ ಶೋಷಣೆಗೆ ಒಳಗಾಗದ ಹೆಣ್ಣು ಮಕ್ಕಳ ಪುನರ್ವಸತಿಯಲ್ಲಿ ತೊಡಗಿಸಿಕೊಂಡಿದ್ದಾರೆ.

ಬಿಂದು ಏಕಾಏಕಿ ಮಾನವ ಹಕ್ಕುಗಳ ರಕ್ಷಣೆಯ ಕೆಲಸ ಮಾಡಲು ಆರಂಭಿಸಲಿಲ್ಲ. ಪಿಯುಸಿ ಕಲಿಯುತ್ತಿರುವಾಗಲೇ ಮೈಸೂರಿನ ಒಡನಾಡಿ ಸಂಸ್ಥೆಗೆ ಸ್ವಯಂಸೇವಕಿಯಾಗಿ ಸೇರಿಕೊಂಡರು. ಅಲ್ಲಿ ಮಾನವ ಹಕ್ಕು, ರಕ್ಷಣೆ, ಕಾಯ್ದೆ, ರಾಜ್ಯ, ದೇಶ ಹಾಗೂ ಅಂತರರಾಷ್ಟ್ರೀಯ ವಿಚಾರ, ಕಾನೂನಿಗೆ ಸಂಬಂಧಿಸಿದಂತೆ 2 ವರ್ಷ ಅಭ್ಯಾಸ ಮಾಡಿದರು. ಕೆಲಸ ಮಾಡುತ್ತಿರುವಾಗಲೇ ಪಿಯುಸಿ ಮುಗಿಯಿತು. ನಂತರ ಕಾನೂನು ಪದವಿ ಆಯ್ಕೆ ಮಾಡಿಕೊಂಡರು.

ಮೈಸೂರು ಮಾತ್ರವಲ್ಲದೇ, ಬೆಂಗಳೂರಿನ ಕೋರಮಂಗಲದಲ್ಲಿರುವ ಪ್ರಮುಖ ಕೊಳೆಗೇರಿಗಳಲ್ಲಿಯೂ ಇವರ ಸ್ವಯಂ ಸೇವಾಸಂಸ್ಥೆಯ 12 ಜನರ ತಂಡ ಕೆಲಸ ಮಾಡಿದೆ. ಈಗಲೂ ಮಾಡುತ್ತಿದೆ. ಬರೀ ಅರಿವು ಮೂಡಿಸುವ ಕೆಲಸ ಮಾಡುತ್ತಿಲ್ಲ ಈ ತಂಡ. ಪುನರ್ವಸತಿ ಕುರಿತಾಗಿಯೂ ಯೋಜನೆ ರೂಪಿಸುವಲ್ಲಿ ಸಫಲವಾಗಿದೆ.

ಮೂರು ವರ್ಷಗಳಿಂದ ಕೊಳೆಗೇರಿಗಳಲ್ಲಿ ಹಕ್ಕುಗಳ ಅರಿವು ಮೂಡಿಸುತ್ತಿರುವ ಬಿಂದು ಅವರ `ಸ್ಪಿರಿಟಸ್ ಇಂಟರ್‌ನ್ಯಾಷನಲ್ ಸಂಸ್ಥೆಯ' ತಂಡ ಒಂದೇ ಒಂದು ರೂಪಾಯಿಯನ್ನು ಯಾರಿಂದಲೂ ಪಡೆದಿಲ್ಲ. ತಂಡದಲ್ಲಿರುವ 12 ಜನರ ಪೋಷಕರೇ ಇವರ ಆದಾಯದ ಮೂಲ. ಅದರಲ್ಲಿಯೇ ಯೋಜನೆ, ಪುನರ್ವಸತಿ ಎಲ್ಲವೂ. ಅಷ್ಟೇ ಅಲ್ಲ. ನ್ಯೂಯಾರ್ಕ್‌ನಲ್ಲಿನ ವಿಶ್ವಸಂಸ್ಥೆ ಕಚೇರಿಯಲ್ಲಿ ಭಾಷಣ, ಕಾಬೂಲ್ ಪ್ರವಾಸ ಹಾಗೂ ಗುಜರಾತ್ ಪ್ರವಾಸದ ಎಲ್ಲ ವೆಚ್ಚಕ್ಕೂ ಯಾರ ಬಳಿಯೂ ಕೈಚಾಚಿಲ್ಲ.

ವಿಶ್ವಸಂಸ್ಥೆಯಲ್ಲಿ...
`ವಿಶ್ವಸಂಸ್ಥೆಯಲ್ಲಿ `ವಿಶ್ವ ಮಾನವ ಹಕ್ಕುಗಳ ಅಧಿವೇಶನ' ಆರಂಭವಾಗುವ ಸೂಚನೆ ಸಿಕ್ಕಾಗ ಬಿಂದು ಭಾರತದ ರಾಯಭಾರಿ ಕಚೇರಿ ಮೂಲಕ ವಿಶ್ವಸಂಸ್ಥೆಗೆ ಅರ್ಜಿ ಸಲ್ಲಿಸಿದರು. ದೇಶದ 28 ರಾಜ್ಯಗಳಿಂದ ಅರ್ಜಿ ಸಲ್ಲಿಕೆಯಾಗಿತ್ತು. ಆದರೆ, ಆಯ್ಕೆಯಾಗಿದ್ದು ಮಾತ್ರ ಬಿಂದು. ವಿಶ್ವದ 350 ಯುವಜನರ ತಂಡ ವಿಶ್ವಸಂಸ್ಥೆಯಲ್ಲಿ ಮಾನವ ಹಕ್ಕುಗಳ ಕುರಿತು ನಾನಾ ವಿಷಯಗಳ ಬಗ್ಗೆ ಪ್ರಬಂಧ ಮಂಡಿಸಿತು.

ಚೀನಾದ ಗಣಿ ಹಾಗೂ ಕಾರ್ಖಾನೆಗಳಿರುವ ಪ್ರದೇಶದಿಂದ ಬಂದಿದ್ದ ಸಿಯಾನ್‌ಚಿಲಿ ಅವರ ಜತೆಗೆ ಪ್ರಬಂಧ ಮಂಡಿಸಿದ ಬಿಂದು, 10 ದಿನಗಳ ಕಾಲ ಭಾರತದ ಮಾನವ ಹಕ್ಕು ಹಾಗೂ ಪುನರ್ವಸತಿ ಕುರಿತು ವಿಶ್ವದ ಗಮನ ಸೆಳೆದರು. ಬಳ್ಳಾರಿಯ ಗಣಿಗಾರಿಕೆ, ಅಲ್ಲಿನ ಮಾನವ ಹಕ್ಕುಗಳ ದಮನ, ಮೈಸೂರು, ಬೆಂಗಳೂರಿನ ಕೊಳೆಗೇರಿಗಳಲ್ಲಿ ಮಾನವ ಹಕ್ಕು ಹಾಗೂ ಮಕ್ಕಳ ಹಕ್ಕುಗಳ ದಮನ ಹಾಗೂ ಬುಡಕಟ್ಟು ಸಮುದಾಯ ಹಕ್ಕುಗಳ ದಮನಕ್ಕೆ ಕನ್ನಡಿ ಹಿಡಿದರು.

2012ರ ಜೂನ್ ತಿಂಗಳಲ್ಲಿ ವಿಶ್ವಸಂಸ್ಥೆಯ ವಿವಿಧ ಆಯಾಮ ಅಧ್ಯಯನ ಮಾಡಿದ ಅವರಿಗೆ ಬಾಂಗ್ಲಾದೇಶದ ಗ್ರಾಮೀಣ ಕಿರುಸಾಲ ಯೋಜನೆಯ ವಿಸ್ತೃತ ಚರ್ಚೆಯಲ್ಲಿ ಪಾಲ್ಗೊಳ್ಳುವ ಅವಕಾಶ ಪಡೆದರು. ಮಾನವ ಹಕ್ಕು ದಮನ ನಾಶಕ್ಕೆ ಅಸ್ತ್ರವಾಗಬಲ್ಲ ಸಾಲ ಯೋಜನೆಯನ್ನು ವಿಶ್ವಸಂಸ್ಥೆಯೇ ಮುಂದಿನ ದಿನಗಳಲ್ಲಿ ಎಲ್ಲ ದೇಶಗಳಲ್ಲಿಯೂ ಪ್ರಚುರಪಡಿಸುವ ಕುರಿತಾದ ಚರ್ಚೆಯಲ್ಲಿ ಪಾಲ್ಗೊಂಡಿದ್ದು ವಿಶೇಷ. ಈಗ ಮೈಸೂರಿನ ಕೊಳೆಗೇರಿ ಹಾಗೂ  ಗ್ರಾಮೀಣ ಪ್ರದೇಶದಲ್ಲಿ ಕಿರುಸಾಲ ಯೋಜನೆ ರೂಪಿಸಲು ಈಗ ಪ್ರಯತ್ನಿಸುತ್ತಿದ್ದಾರೆ.

ಕಾಬೂಲ್ ಪ್ರವಾಸ
ಆಫ್ಘಾನಿಸ್ತಾನ ಹಾಗೂ ಅಮೆರಿಕ ನಡುವೆ ಯುದ್ಧ ನಡೆದ ನಂತರ ಮಾನವ ಹಕ್ಕುಗಳ ದಮನದ ಕುರಿತಾದ ಚರ್ಚೆಗಳು ವ್ಯಾಪಕವಾಗಿದ್ದವು. ವಿಶ್ವಸಂಸ್ಥೆಗೆ ಅಧಿವೇಶನದಲ್ಲಿ ಭಾಗವಹಿಸಿದಾಗಲೂ ಅಮೆರಿಕದಿಂದ ಬಂದಿದ್ದ ಜೋಸೆಫ್ ಮ್ಯಾಥ್ಯು ಕಾಬೂಲ್‌ನಲ್ಲಿ ಹಕ್ಕುಗಳ ದಮನದ ಕುರಿತು ವಿವರಿಸಿದ್ದರು. ಅದಕ್ಕಿಂತ ಮುಖ್ಯವಾಗಿ `ಬಿಬಿಸಿ' ಚಾನೆಲ್ ಕಾಬೂಲ್‌ನ ಮಾನವ ಹಕ್ಕು ದಮನದ ಕುರಿತು ವಿಸ್ತೃತ ವರದಿ ಮಾಡಿತ್ತು. ಇದರ ಜಾಡು ಹಿಡಿದ ಬಿಂದು ಕಾಬೂಲ್‌ಗೆ ಭೇಟಿ ನೀಡಲು ನಿರ್ಧರಿಸಿದರು. ತಾಲಿಬಾನ್ ಹಿಡಿತದಿಂದ ಮುಕ್ತಿ ಕಂಡಿರುವ ಆಫ್ಘಾನಿಸ್ತಾನ ರಾಜಧಾನಿ ಕಾಬೂಲ್‌ಗೆ ಭಾರತದ ದೇಶದ ಜಿಲ್ಲೆಯೊಂದರ ಕಾನೂನು ವಿದ್ಯಾರ್ಥಿ ಭೇಟಿ ನೀಡುವುದು, ಅದಕ್ಕೆ ಅವಕಾಶ ಸಿಗುವುದು ಸುಲಭದ ಮಾತೇನು ಆಗಿರಲಿಲ್ಲ. ಆದರೂ ಕಾಬೂಲ್‌ಗೆ ಭೇಟಿ ನೀಡಬೇಕು ಎಂಬ ಬಿಂದು ಆಸೆ ದೊಡ್ಡದಾಗುತ್ತಲೇ ಇತ್ತು.

ಈ ಭೇಟಿಗಾಗಿ 6 ತಿಂಗಳ ನಿರಂತರ ಪ್ರಯತ್ನದ ನಂತರ ಭಾರತದ ರಾಯಭಾರಿ ಕಚೇರಿ 2012 ಆಗಸ್ಟ್ ತಿಂಗಳಲ್ಲಿ ಅವಕಾಶ ನೀಡಿತು. ಆ ವೇಳೆಗಾಗಲೇ ಆಫ್ಘಾನಿಸ್ತಾನದ ಸಂಸತ್ ಸದಸ್ಯ ಹಬೀಬ್ ಆಸೀಫ್ ಅವರು ಬಿಂದು ಕಾರ್ಯವೈಖರಿ ಮೆಚ್ಚಿ ಆಹ್ವಾನ ನೀಡಿದರು. ಆಸಿಫ್ ಅಫ್ಘಾನಿಸ್ತಾನ ಸಂಸತ್‌ನಲ್ಲಿರುವ ಮಾನವ ಹಕ್ಕುಗಳ ಸಮಿತಿಗೆ ಅಧ್ಯಕ್ಷರು.

2012ರ ಆಗಸ್ಟ್ ತಿಂಗಳಲ್ಲಿ ಕಾಬೂಲ್‌ಗೆ ಕಾಲಿಟ್ಟ ಬಿಂದು ಅವರಿಗೆ ಸಂಸತ್ ಸದಸ್ಯರ ಮನೆಯ ಬಳಿ ಇರುವ ಅವರದೇ ವಸತಿಗೃಹದಲ್ಲಿ ಉಳಿಯಲು ಅವಕಾಶ. ಒಂದು ದಿನ ಸುಧಾರಿಸಿಕೊಂಡರು. 13 ದಿನಗಳ ಕಾಲ ಕಾಬೂಲ್‌ನಲ್ಲಿ ಬೆಚ್ಚಿಬೀಳಿಸುವ ಘಟನೆ ನೋಡಿದರು. ಭಾರತದ ಬಗ್ಗೆ ಕಾಬೂಲ್ ಜನತೆಗೆ ಇರುವ ಗೌರವಕ್ಕೆ ಅಚ್ಚರಿಗೊಂಡರು.

ಎರಡನೇ ದಿನ `ಶೇರ್ ಎ ನಹು ಸ್ಟ್ರೀಟ್'ಗೆ ಭೇಟಿ ನೀಡಿದರು. ಅದು ಬಾಂಬ್‌ಗಳಿಂದ ಬಹುತೇಕ ಛಿದ್ರವಾದ ಪ್ರದೇಶ. ದೊಡ್ಡ ದೊಡ್ಡ ಕಟ್ಟಡಗಳಿದ್ದರೂ ಬಹುತೇಕ ಕಟ್ಟಡಗಳು ಮುರಿದುಬಿದ್ದಿವೆ. ರಸ್ತೆ ಇದೆ ಅನ್ನುವಂತಿಲ್ಲದ ಪ್ರದೇಶ. ಅಲ್ಲಲ್ಲಿ ಗಂಡಸರು ಕಾಣಸಿಗುತ್ತಾರೆ ಎಂಬುದನ್ನು ಬಿಟ್ಟರೆ ಹೆಂಗಸರ ಸುಳಿವೇ ಇಲ್ಲ. ಆ ಪ್ರದೇಶದ ಇನ್ನೊಂದು ಬದಿಗೆ ಇರುವ ಪ್ರದೇಶದಲ್ಲಿ ಹಾಡ ಹಗಲೇ ಬಾಂಬ್ ಬೀಳುವುದು ಸಾಮಾನ್ಯ. ಹಿಂದಿನ ದಿನವೇ ನಹು ಬೀದಿಯಲ್ಲಿ ಬಾಂಬ್ ಸದ್ದು ಮಾಡಿತ್ತು. ಆದರೂ, ಧೈರ್ಯ ಮಾಡಿ ಜನರನ್ನು ಮಾತನಾಡಿಸಲು ಯತ್ನಿಸಿದರು. ಯಾರೂ ಇವರತ್ತ ನೋಡಲಿಲ್ಲ. ಪ್ರದೇಶದ ಮಾಹಿತಿ ಕೇಳಿದರೂ ತುಟಿಪಿಟಕ್ ಅನ್ನಲಿಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯ ದಮನದ ಸುಳಿವು ಅವರಿಗೆ ಸಿಕ್ಕಿತ್ತು.

ಬೆಳಿಗ್ಗೆ 10 ಗಂಟೆಗೆ  ಶಾಲಾ-ಕಾಲೇಜಿಗೆ ಮಕ್ಕಳು ಗೂಡ್ಸ್ ಆಟೊದಲ್ಲಿ ಹೋಗಿ ಬಂದರೆ ಮುಗೀತು. ಮತ್ತೆ ಯಾವ ಹೆಣ್ಣು ಮಕ್ಕಳೂ ಸಹ ಮನೆಯಿಂದ ಹೊರಬರುವಂತಿಲ್ಲ. `ಬೇರೆ ಮಕ್ಕಳ ಸ್ಥಿತಿ ಬಿಡಿ, ಸಂಸತ್ ಸದಸ್ಯ ಆಸೀಫ್ ಅವರ ಇಬ್ಬರು ಹೆಣ್ಣು ಮಕ್ಕಳು ನನಗೆ ಐದು ಗಂಟೆಗೆ ವಸತಿ ಗೃಹದಿಂದ ಹೊರ ಹೋಗಲು ಬಿಡದಿರುವ ಸ್ಥಿತಿಯೂ ಒಂದೆರಡು ದಿನ ನಿರ್ಮಾಣವಾಯಿತು' ಎಂದು ಮುಗುಳ್ನಕ್ಕರು.

ಕಾಬೂಲ್‌ನಲ್ಲಿ ಇತರರ ಸ್ಥಿತಿಯೂ ಭಿನ್ನವಾಗಿಲ್ಲ. ಕಾಬೂಲ್ ವಿಶ್ವವಿದ್ಯಾಲಯದ ಗ್ರಂಥಾಲಯದಲ್ಲಿ ಮಹಿಳೆಯರಿಗೆ ಮೀಸಲಾದ ಕುರ್ಚಿ, ಟೇಬಲ್ ಹಾಗೂ ರೀಡಿಂಗ್ ರೂಂ ಇದೆ. ಒಳಗೂ ಬುರ್ಖಾ. ಹೊರಗೂ ಬುರ್ಖಾ. ಕೇಂದ್ರ ಗ್ರಂಥಾಲಯದಲ್ಲೂ ಅದೇ ಸ್ಥಿತಿ. ಶಫಿ ಲ್ಯಾಂಡ್‌ಮಾರ್ಕ್ ಶಾಪಿಂಗ್ ಮಾಲ್‌ನಲ್ಲಿಯೂ ಮಹಿಳೆಯರು ಹಾಗೂ ಪುರುಷರು ಒಟ್ಟಿಗೇ ಶಾಪಿಂಗ್ ಮಾಡುವಂತಿಲ್ಲ. ಪತಿ-ಪತ್ನಿಯರಿಗೂ ಕೆಲವೊಂದು ನಿಬಂಧನೆಗಳಿವೆ.

ಯಾವ ಹೊಟೇಲ್‌ನಲ್ಲಿಯೂ ಮಹಿಳೆಯರ ಹಾಜರಾತಿ ಇಲ್ಲ. ಅಲ್ಲಿ ಊಟ, ತಿಂಡಿಗೆ ಮಹಿಳೆಯರು ಮನೆಯನ್ನೇ ಆಶ್ರಯಿಸಬೇಕಾದ ಸ್ಥಿತಿ ಇದೆ. ಸ್ವಾತಂತ್ರ್ಯದಿಂದ, ಸಂತೋಷದಿಂದ ಬದುಕುವ ಹಕ್ಕು ದಮನವಾಗಿದ್ದು ಬಿಂದು ಕಣ್ಣಿಗೆ ರಾಚಿದೆ. `ಅಲ್ಲಿನ ಜನರು ಭಾರತ ಹಾಗೂ ಭಾರತೀಯರ ಬಗ್ಗೆ ಸಂತೋಷ ವ್ಯಕ್ತಪಡಿಸಿದರು. ಕಾಬೂಲ್‌ನ ಬೀದಿಗಳ ಜನತೆಗೆ ಪ್ರಧಾನಿ ಮನಮೋಹನ್ ಸಿಂಗ್, ಸೋನಿಯಾಗಾಂಧಿ, ಅಡ್ವಾಣಿಯೂ ಗೊತ್ತು. ರಾಹುಲ್‌ಗಾಂಧಿ ಗೊತ್ತಾ ಎಂದರೆ ಮುಗುಮ್ಮಾಗುತ್ತಾರೆ' ಎಂದರು ಬಿಂದು.

ಬಿಂದು ಈಗ ಮತ್ತಷ್ಟು ಗಟ್ಟಿಯಾಗಿದ್ದಾರೆ. ಕಾಬೂಲ್, ವಿಶ್ವಸಂಸ್ಥೆ ಭೇಟಿ ನಂತರ ಮಾನವ ಹಕ್ಕುಗಳ ದಮನದ ವಿರುದ್ಧದ ಹೋರಾಟಕ್ಕೆ ನ್ಯಾಯಾಂಗ, ಶಾಸಕಾಂಗದ ಜಂಟಿ ಯೋಜನೆ ರೂಪಿಸುವಲ್ಲಿ ತಯಾರಾಗಿದ್ದಾರೆ. ಅರಿವು ಮೂಡಿಸುವ ಜತೆಗೆ ಪುನರ್ವಸತಿ ಯೋಜನೆ ಹಮ್ಮಿಕೊಳ್ಳಲೂ ದೇಶದ ಹತ್ತಕ್ಕೂ ಹೆಚ್ಚು ಎನ್‌ಜಿಒ, ಗಣ್ಯರು ಹಾಗೂ ಕಂಪೆನಿ ಎಡತಾಕುತ್ತಿದ್ದಾರೆ. ಕೊಳೆಗೇರಿ ಮಕ್ಕಳನ್ನು ಶಾಲೆಗೆ ಸೇರಿಸುವುದು, ಬಾಲಕಾರ್ಮಿಕರಿಗೆ ಪುನರ್ವಸತಿ, ಅನಾಥರಿಗೆ ಬಟ್ಟೆ, ಕಾನೂನು ಅರಿವು, ಹೋರಾಟ ಮನೋಭಾವ, ಹಕ್ಕು ರಕ್ಷಣೆ ಸಂಬಂಧ ಬಿಡುವಿನ ವೇಳೆಯಲ್ಲಿ ಸರ್ಕಾರಿ ಇಲಾಖೆಗಳಿಗೆ ಎಡತಾಕುವುದು ನಿರಂತರವಾಗಿದೆ.
 


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT