ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಥಾಯ್ಲೆಂಡ್: ಈಗ ಆತಂಕ ತುಂಬಿದ ಮನೆ

ನೆ  ರೆ ರಾಷ್ಟ್ರಗಳ ನಿರಾಶ್ರಿತರಿಗೆ ಆಸರೆ ನೀಡುತ್ತ ಬಂದ ಆಗ್ನೇಯ ಏಷ್ಯಾದ ದೇಶ ಥಾಯ್ಲೆಂಡ್. ಆದರೆ ಈಗ ಈ ಉದಾರ­ವಾದಿ ದೇಶದ ಪರಿಸ್ಥಿತಿ ಸಂಪೂರ್ಣ ತದ್ವಿರುದ್ಧವಾಗಿದೆ. ಅಲ್ಲಿನ ಆಂತರಿಕ ದಂಗೆ, ಗಲಭೆ, ಸೇನಾಡಳಿತದಿಂದಾಗಿ ಆ ದೇಶ­ದವರೇ ಬೇರೆ ಕಡೆ ನೆಲೆಯನ್ನು ಅರಸು­ವಂತಾಗಿದೆ. ಒಟ್ಟಿನಲ್ಲಿ ದೇಶ ಆತಂಕ ತುಂಬಿದ ಮನೆಯಾಗಿದೆ.

‘ಸೇನೆಗೆ ಹೆದರಿ ಕೆಲ ವಾರ­ಗಳಿಂದ ಅನೇಕ ರಾಜಕಾರಣಿ­ಗಳು, ಬುದ್ಧಿಜೀವಿ­ಗಳು, ಪ್ರಾಧ್ಯಾಪಕರು ಥಾಯ್ಲೆಂಡ್ ತೊರೆದಿದ್ದಾರೆ. ಅವರು ಸದ್ಯ ವಾಪಸಾಗುವ ಸಾಧ್ಯತೆ­ಗಳೂ ಕಡಿಮೆಯೇ’ ಎಂದು ದೇಶ ತೊರೆದವರ ಸಮುದಾಯದ ಮುಖಂಡ ಜಾಕ್ರಪೋಬ್ ಪೆಂಕೈರ್‌ ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಈಗ ನೆರೆ ರಾಷ್ಟ್ರಗಳನ್ನು ಇಕ್ಕಟ್ಟಿಗೆ ಸಿಲುಕಿಸದ ರೀತಿಯಲ್ಲಿ ಅವರ ನೆರವು ಪಡೆದು, ಥಾಯ್‌ ಸೇನೆಯ ಪಿತೂರಿ­ಯನ್ನು ಹತ್ತಿಕ್ಕುವ ಯೋಜನೆ­ಯೊಂದನ್ನು ರೂಪಿಸುವ ಆಶಯ ಪೆಂಕೈರ್‌ ಅವರದು. ಅವರು ಕಾಂಬೋಡಿಯಾ­ದಲ್ಲಿದ್ದುಕೊಂಡು, ದೇಶಭ್ರಷ್ಟರನ್ನು ಒಗ್ಗೂಡಿಸು­ವಲ್ಲಿ ನಿರತರಾಗಿದ್ದಾರೆ.

ಕಾಂಬೋಡಿಯಾದ ‘ಖೆಮೇರ್‌ ರೂಜ್’ (ಕಾಂಪೊಚಿಯಾ ಕಮ್ಯುನಿಸ್ಟ್ ಪಕ್ಷದ ಬೆಂಬಲಿಗರು) ನರಮೇಧದಿಂದ ಬೇಸತ್ತವರು ಹಾಗೂ ಮ್ಯಾನ್ಮಾರ್‌­ನಲ್ಲಿನ ಬರ್ಮಾ ಸೇನಾ ದಾಳಿ­ಯಿಂದ ಕಂಗೆಟ್ಟ ಗುಡ್ಡಗಾಡು ಜನ ಕಳೆದ ನಾಲ್ಕು ದಶಕಗಳಲ್ಲಿ ಸಾಕಷ್ಟು ಸಂಖ್ಯೆ­ಯಲ್ಲಿ ಥಾಯ್ಲೆಂಡ್‌ಗೆ ವಲಸೆ ಬಂದಿದ್ದಾರೆ.  

ಈ ರೀತಿ ಬಂದ ವಲಸಿಗರ ಸಂಖ್ಯೆ­ಯನ್ನು ನಿಖರವಾಗಿ ಹೇಳುವುದು ಕಷ್ಟ. ಏಕೆಂದರೆ ತಾವು ಥಾಯ್ ಸೇನೆಯ ಕೆಂಗಣ್ಣಿಗೆ ಗುರಿಯಾಗು­ವ ಭಯ ಅವರಲ್ಲಿದೆ. ಹೀಗಾಗಿ ತಮ್ಮ ನೆಲೆಯನ್ನು ಬಹಿರಂಗ­ಪಡಿಸಲು ಅವರು ಹಿಂಜರಿ­ಯುತ್ತಾರೆ.­ ಅಲ್ಲದೇ ಥಾಯ್ಲೆಂಡ್ ಕೂಡ ಒಂದರ ಹಿಂದೆ ಒಂದರಂತೆ ನಿರಂತರ ದಂಗೆಗೆ ತುತ್ತಾಗು­ತ್ತಲೇ ಇದೆ.

ಸದ್ಯ ದಂಗೆ ಹತೋಟಿಗೆ ಬಂದಿದ್ದು,  ಆಡಳಿತವನ್ನು ಕೈಗೆ ತೆಗೆದು­ಕೊಂಡ ಸೇನೆ, ಇಲ್ಲಿನ ಪ್ರವಾಸಿ ತಾಣಗಳಲ್ಲಿ ನಿಷೇಧಾಜ್ಞೆ ಹೇರಿದೆ. ಬೇರೆ ಪ್ರದೇಶ­ಗಳಲ್ಲಿ ರಾತ್ರಿ ವೇಳೆ ಮಾತ್ರ ನಿಷೇಧಾಜ್ಞೆ ಜಾರಿಯಲ್ಲಿದೆ. ಪದಚ್ಯುತ ಪ್ರಧಾನಿ ಯಿಂಗ್ಲಕ್ ಶಿನವಾತ್ರ ಸೇರಿದಂತೆ ಸೇನೆಯ ವಶದಲ್ಲಿದ್ದ ಹಲವರನ್ನು ಬಿಡುಗಡೆಗೊಳಿಸಲಾಗಿದೆ. ಆದರೆ ಅಭಿವ್ಯಕ್ತಿ ಸ್ವಾತಂತ್ರ್ಯ ಸಂಪೂರ್ಣ ನೆಲಕಚ್ಚಿದೆ.

ಮಾಧ್ಯಮದ ಮೇಲೆ ಸೇನೆ ಹಿಡಿತ ಸಾಧಿಸಿದ್ದು, ಅವುಗಳ ಬಾಯಿಗೆ ಬೀಗ ಹಾಕಿದೆ. ಬಂಧನದಲ್ಲಿದ್ದ ಪತ್ರಕರ್ತ­ರನ್ನು, ‘ಬಾಯಿ ಮುಚ್ಚಿಕೊಂಡಿರ­ಬೇಕು’ ಎಂಬ ಷರತ್ತಿನ ಮೇಲೆ ಬಿಡುಗಡೆ ಮಾಡಿದೆ. ಅಲ್ಲದೇ, ಐದಕ್ಕಿಂತ ಹೆಚ್ಚು ಜನ ಒಂದೆಡೆ ಸೇರು­ವುದನ್ನೂ ನಿಷೇಧಿಸಿದೆ.

ಇದೇ ವೇಳೆ ನಾಗರಿಕರಲ್ಲಿ ಮನೆ­ಮಾಡಿರುವ ಭಯವನ್ನು ದೂರ­ಮಾಡಲು ರಾಜಧಾನಿ ಬ್ಯಾಂಕಾಕ್‌ನಲ್ಲಿ ಸೇನೆಯು ಮನರಂಜನಾ ಕಾರ್ಯಕ್ರಮ­ಗಳನ್ನು ಆಯೋಜಿಸುತ್ತಿದೆ. ಇಲ್ಲಿ ಮಹಿಳೆ­ಯರು ಅರೆ­ಬರೆ ಬಟ್ಟೆ ತೊಟ್ಟು ಹಾಡು ನೃತ್ಯ ಪ್ರದರ್ಶಿಸುತ್ತಾರೆ. ವಿಚಿತ್ರ­ವೆಂದರೆ ಇಂತಹ ಕಾರ್ಯಕ್ರಮಗಳಿಗೆ ಜನ ಸೇರುವುದಕ್ಕೆ ಮಾತ್ರ ನಿಷೇಧದಿಂದ ವಿನಾಯಿತಿ ನೀಡ­ಲಾಗಿದೆ.

ರಾಜಕೀಯದ ಬಗ್ಗೆ ಬಹಿರಂಗವಾಗಿ­ಮಾತನಾಡುವವರನ್ನು ಬಂಧಿಸಿ ಸೇನೆ ವಿಚಾರಣೆಗೊಳಪಡಿಸುತ್ತಿದೆ. ಬಂಧನಕ್ಕೊಳಗಾದವರ ಹೆಸರನ್ನು ಪ್ರತಿ ಸಂಜೆ ಮಾಧ್ಯಮದಲ್ಲಿ ಪ್ರಕಟಿಸುತ್ತಿದ್ದಾರೆ. ಇದುವರೆಗೆ ಸುಮಾರು 350ಕ್ಕೂ ಹೆಚ್ಚು ಜನರನ್ನು ಬಂಧಿಸ­ಲಾಗಿದೆ. ‘ಇನ್ನು ಮುಂದೆ ರಾಜಕೀಯ ಚಟುವಟಿಕೆ­ಗಳಲ್ಲಿ ಭಾಗ­ವಹಿಸುವುದಿಲ್ಲ’ ಎಂದು ಮುಚ್ಚಳಿಕೆ ಬರೆಸಿಕೊಂಡು ಅವರನ್ನು ಬಿಡುಗಡೆ­ಗೊಳಿಸುತ್ತಿದ್ದಾರೆ.

ಸರ್ಕಾರವನ್ನು ವಜಾ ಮಾಡಿ ಸೇನೆ ಅಧಿಕಾರವನ್ನು ವಹಿಸಿಕೊಂಡ ದಿನ (ಮೇ 22), ಸಂಸದ ಚಿನಾವತ್‌ ಹಬೂನ್‌ಪತ್‌ ಅವರು ತನ್ನ ಬೆಂಬಲಿಗ­ರನ್ನು ಉದ್ದೇಶಿಸಿ, ‘ಸೋದರ ಸೋದರಿ­ಯರೇ, ನಾನು ಪಲಾಯನ ಮಾಡು­ತ್ತಿಲ್ಲ. ಅಲ್ಲದೇ ನನ್ನ ಜತೆ ಮಾಜಿ ಒಳಾಡಳಿ ಸಚಿವ ಚರುಪೊಂಗ್ ರೌಂಗ್‌ಸುವಾನ್ ಕೂಡ ಇದ್ದಾರೆ’ ಎಂದು ಫೇಸ್‌ಬುಕ್‌­ನಲ್ಲಿ ಬರೆದುಕೊಂಡಿ­ದ್ದರು. ತಮಾಷೆ­ಯೆಂದರೆ, ತಾವು ಸದ್ಯ ಇರುವ ಸ್ಥಳದ ಪತ್ತೆ ನೀಡುವ ಫೇಸ್‌ಬುಕ್‌ನ ಆಯ್ಕೆ­ಯನ್ನು ನಿಷ್ಕ್ರಿಯ­ಗೊಳಿಸಲು ಮರೆತಿದ್ದ ಅವರು, ಈ ಸಂದೇಶ ಬರೆಯುವ ವೇಳೆ ಕಾಂಬೋಡಿಯಾ­­ದಲ್ಲಿದ್ದರು!

ಸೇನೆಯಿಂದ ಬೆದರಿಕೆ: ‘ಸೇನೆಯ ಷರತ್ತು­ಗಳಿಗೆ ವಿಧೇಯನಾಗಿ ನಡೆದುಕೊಳ್ಳ­ದಿದ್ದರೆ ಅಥವಾ ರಾಜಕೀಯ ಚಟುವಟಿಕೆ­ಗಳನ್ನು ಬೆಂಬಲಿಸಿದಲ್ಲಿ ನನ್ನ ವಿರುದ್ಧ ಕಾನೂನು ಕ್ರಮ ಜರುಗಿಸಲು ಹಾಗೂ ನನ್ನ ಆರ್ಥಿಕ ವಹಿವಾಟನ್ನು ಮುಟ್ಟು­ಗೋಲು ಹಾಕಿಕೊಳ್ಳಲು ನನ್ನ ಸಹಮತ ಇದೆ’ ಎಂಬ ಒಕ್ಕಣಿಕೆ ದಂಗೆ­ಕೋರರ ಫೇಸ್‌ಬುಕ್‌ನಲ್ಲಿ ಹರಿದಾಡುತ್ತಿದೆ. ಇದಕ್ಕೆ ವಿರುದ್ಧವಾಗಿ ನಡೆದುಕೊಳ್ಳುವ­ವರನ್ನು ಸೇನಾ ನ್ಯಾಯಾಲಯದಲ್ಲಿ ವಿಚಾರಣೆಗೊಳ­ಪಡಿಸುವ ಬೆದರಿಕೆ­ಯನ್ನೂ ಸೇನೆ ಒಡ್ಡಿದೆ. ಸೇನೆಯಿಂದ ವಿಚಾರಣೆಗೊಳ­ಪಟ್ಟವ­ರಲ್ಲಿ ಬಹುತೇಕರು ಮಾಜಿ ಪ್ರಧಾನಿ ತಕ್ಸಿನ್‌ ಶಿನವಾತ್ರ ಅವರ ಜತೆ ಗುರುತಿಸಿ­ಕೊಂಡವರೇ. ಸೇನಾ ಕ್ರಾಂತಿಯಿಂದ ಅಧಿಕಾರ ವಂಚಿತರಾದ ಜನಪ್ರಿಯ ನಾಯಕ ತಕ್ಸಿನ್‌. ಅವರ ಸರ್ಕಾರದಲ್ಲಿ ಮಂತ್ರಿಯಾಗಿದ್ದ ಜಾಕ್ರಪೋಬ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡ­ಲಾಗಿದೆ.

ತಕ್ಸಿನ್‌ ಅವರು ಅಧಿಕಾರ­ದಲ್ಲಿದ್ದಾಗ ಕೃಷಿಕರಿಗೆ ಸಹಾಯಧನ ನೀಡುವುದು ಮುಂತಾದ ಅನೇಕ ಜನಪ್ರಿಯ ಯೋಜನೆ­ಗಳನ್ನು ಜಾರಿಗೆ ತಂದಿದ್ದರು. ಈ ಕಾರಣಕ್ಕೆ ಅವರಿಗೆ ಗ್ರಾಮಾಂತರ ಪ್ರದೇಶದಲ್ಲಿ  ಭಾರಿ ಜನ ಬೆಂಬಲವೂ ಇದೆ. ಆದರೆ ಉಳ್ಳವರ ಪ್ರಕಾರ  ಈ ರೀತಿ ಸಹಾಯಧನ ಕೊಡುವುದು ವ್ಯರ್ಥ. ಹೀಗಾಗಿ ತಕ್ಸಿನ್ ಅವರ ಪ್ರಭಾವ­ ಕುಗ್ಗಿಸಲು ಸೇನಾಕ್ರಾಂತಿ ಸಹಕಾರಿ ಎಂಬುದು ಬ್ಯಾಂಕಾಕ್‌ ನಗರದ ಮಧ್ಯಮ ವರ್ಗದವರ ಅಭಿಪ್ರಾಯ ಕೂಡ ಹೌದು. ಈ ಹಿನ್ನೆಲೆಯಲ್ಲಿ ದಂಗೆಗೆ ಅವರ ಬೆಂಬಲವಿದೆ.

ರಾಜಕೀಯದಲ್ಲಿ ಗುರುತಿಸಿ­ಕೊಂಡಿ­ರದ ಸಂಶೋಧಕರು, ವಿಶ್ಲೇಷಕರೂ ದೇಶ ತೊರೆದಿದ್ದಾರೆ. ‘ತಕ್ಸಿನ್ ಅವರ ಬೆಂಬಲಿಗರ ವಿರುದ್ಧ ನ್ಯಾಯಾಲಯ ನೀಡಿದ ತೀರ್ಪು ರಾಜಕೀಯ ಪ್ರೇರಿತ. ಥಾಯ್ಲೆಂಡ್‌ನಲ್ಲಿ ನಾನು ಸುರಕ್ಷಿತ­ವಾಗಿರು­ತ್ತೇನೆ ಎಂಬ ಭರವಸೆ ಇಲ್ಲ’ ಎಂದು ಲಂಡನ್‌ನಲ್ಲಿ ಆಶ್ರಯ ಪಡೆದ ವಕೀಲ ವೆರಾಪಟ್ ಪರಿಯಾವಂಗ್ ಅವರು ಹೇಳಿಕೊಂಡಿ­ದ್ದಾರೆ.

ಬಿಕ್ಕಟ್ಟಿಗೆ ಚುನಾವಣೆಯೇ ಪರಿಹಾರ ಎಂಬುದು ವೆರಾಪಟ್ ಹಾಗೂ ಇನ್ನಿತರ ಬುದ್ಧಿಜೀವಿಗಳ ಅಭಿಪ್ರಾಯ. ಆದರೆ ವರ್ಷಾರಂಭದಲ್ಲೇ ನಡೆಸಲು ಉದ್ದೇಶಿಸಿದ್ದ ಚುನಾವಣೆಗೆ ಯಿಂಗ್ಲಕ್‌ ಶಿನವಾತ್ರ ಸರ್ಕಾರದ ವಿರೋಧಿಗಳು ತಡೆ­ಯೊಡ್ಡಿದ್ದರು. ಈ ಚುನಾವಣೆಯಲ್ಲಿ ಯಿಂಗ್ಲಕ್‌ ಅವರು ಪ್ರಧಾನಿಯಾಗಿ ಮರು ಆಯ್ಕೆಯಾಗುವ ಭರವಸೆ­ಯಲ್ಲಿದ್ದರು.

ತನನ್ ತನರತನಪಿಸಿತ್ ಎಂಬ ಹೆಸರಿನಲ್ಲಿ ವೆರಾಪಟ್ ಅವರ ಫೇಸ್‌ಬುಕ್‌­ ಪುಟದಲ್ಲಿ, ‘ನಿಮ್ಮಂತಹ ವ್ಯಕ್ತಿ ಪರದೇಶದಲ್ಲಿ ಸಾಯುವುದೇ ಒಳಿತು. ಮತ್ತೆ ದೇಶಕ್ಕೆ ಬರದಿರಿ’ ಎಂದು ಬರೆಯಲಾಗಿದೆ.

‘ವಿದೇಶಗಳಲ್ಲಿರುವ ನನ್ನ ಸ್ನೇಹಿತರು ಥಾಯ್ಲೆಂಡ್‌ಗೆ ಮರಳಲು ಅಂಜಿದ್ದಾರೆ. ಹಲವರು ದೇಶ ತೊರೆ­ದಿದ್ದಾರೆ. ಇನ್ನು ಥಾಯ್ಲೆಂಡ್ ಅವರಿಗೆ ಸುರಕ್ಷಿತ­ವೆನಿಸುತ್ತಿಲ್ಲ’ ಎಂದು ಟೋಕಿಯೊ­ದಲ್ಲಿ­ರುವ ಪವಿನ್ ಚಚಾವಲ್‌ ಪೊಂಗ್‌ಪುನ್‌ ಎಂಬ ಥಾಯ್ಲೆಂಡ್ ವಿದ್ಯಾರ್ಥಿ ಫೇಸ್‌ಬುಕ್‌­ನಲ್ಲಿ ಬರೆದು­ಕೊಂಡಿದ್ದಾರೆ.

‘ವಿರೋಧಿಗಳನ್ನು ವಿಚಾರಣೆ­ಗೊಳಪಡಿಸುವ ಸೇನೆಯ ಕ್ರಮ, ಭಯದ ವಾತಾವರಣ ಸೃಷ್ಟಿಸುವ ಕುತಂತ್ರ’ ಎಂದು ಅವರು ಆರೋಪಿಸಿ­ದ್ದಾರೆ. ಇದಕ್ಕೆ ಪ್ರತಿಯಾಗಿ ವಿಚಾರಣೆಗೆ ಹಾಜರಾಗುವಂತೆ ಸೇನೆ ಅವರಿಗೆ ಸೂಚಿಸಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಚುನಾವಣೆಗೆ ಬೆಂಬಲಿಸುವ­ವರನ್ನು ಸೇನೆ ಗುರಿಯಾಗಿಸಿಕೊಂಡಿದೆ. ಇದು ಉಸಿರು­ಗಟ್ಟಿಸುವ ವಾತಾವರಣ ಸೃಷ್ಟಿಸಿದ್ದು ಜನಸಾಮಾನ್ಯರನ್ನು ಚಿಂತೆಗೀಡು­ಮಾಡಿದೆ. ‘ದೇಶದಲ್ಲಿನ ಬಿಕ್ಕಟ್ಟು ಮುಂದಿನ ಒಂದೆರಡು ಪೀಳಿಗೆ­ಯವರಿಗೂ ಸಮಸ್ಯೆಯಾಗಿಯೇ ಉಳಿಯುವಂತೆ ಕಾಣುತ್ತಿದೆ. ನನಗಂತೂ ಈ ದೇಶದಿಂದ ಸುರಕ್ಷಿತವಾಗಿ ಹೊರಗೆ ಹೋದರೆ ಸಾಕು ಎನ್ನು­ವಂತಾಗಿದೆ’ ಎಂಬುದು ದೇಶ ತೊರೆಯಲು ಸಿದ್ಧ­ವಾಗಿರುವ ಬ್ಯಾಂಕಾಕ್‌ ಮೂಲದ ಉದ್ಯಮಿಯೊಬ್ಬರ ಆತಂಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT