ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಯಲಾದ ರಹಸ್ಯ

ವಿನೋದ
Last Updated 14 ಜೂನ್ 2014, 19:30 IST
ಅಕ್ಷರ ಗಾತ್ರ

ಅರೆಮರುಳ ಊರಿನಿಂದ ಮಠಕ್ಕೆ ವಾಪಸು ಬಂದಾಗ ಮಠದ ಮುಂದೆ ಜನವೋ ಜನ. ಅರೆಮರುಳನಿಗೆ ಅಚ್ಚರಿ. ಜಾತ್ರೆ ಇಲ್ಲ. ಹಾಗಾದರೆ ಇಷ್ಟೊಂದು ಜನರೇಕೆ? ಹತ್ತಿರ ಬಂದು ವಿಚಾರಿಸಿದಾಗ ಗೊತ್ತಾಯಿತು. ಮಠದ ಒಂದು ಕೋಣೆಯಲ್ಲಿದ್ದ ಏಳೆಂಟು ದೊಡ್ಡ ಗಾತ್ರದ ಹಂಡೆಗಳು, ಇನ್ನಿತರ ಪಾತ್ರೆಗಳು, ಒಂದು ದೊಡ್ಡ ಗಾತ್ರದ ಟಿ.ವಿ ಕಳವಾಗಿತ್ತು. ಹಾಕಿದ ಬೀಗ ಹಾಗೆಯೇ ಇದೆ. ಕಿಟಕಿಯ ಸರಳುಗಳನ್ನು ಅರ್ಧ ಇಂಚಿನಷ್ಟು ಬಗ್ಗಿಸಿ ಇವನ್ನೆಲ್ಲ ಕದಿಯಲಾಗಿದೆ. ಕಿಟಕಿಯ ಬಳಿ ಒಂದು ಹೂವಿನ ಕುಂಡ ಒಡೆದು ಬಿದ್ದಿದೆ. ಇನ್ನೊಂದು ನಿಂತು ಕೊಂಡಿದೆ.

ಕಳ್ಳರು ಅದನ್ನು ಹತ್ತಿ ಕಿಟಕಿಯ ಸರಳುಗಳನ್ನು ಬಗ್ಗಿಸಿ ಕೆಲವು ಇಂಚುಗಳಷ್ಟು ಅಗಲ ಮಾಡಿದ ಜಾಗದಿಂದ ಒಳಗೆ ಹೋಗಿ ದೊಡ್ಡ ಗಾತ್ರದ ಹಂಡೆ, ಪಾತ್ರೆ, ಟಿ.ವಿ ಕಳವು  ಮಾಡಿ  ಮತ್ತೆ ಸರಳು ಅಗಲ ಮಾಡಿದ ಸ್ವಲ್ಪ ಜಾಗದಿಂದ ಹೊರಕ್ಕೆ ಹಂಡೆ,ಟಿ.ವಿ ಸಹಿತ ಹೇಗೆ ಬಂದರು ಎನ್ನುವುದು ಎಲ್ಲರ ತಲೆ ತಿಂದಂತೆ ಅರೆಮರುಳನಿಗೂ ತಲೆ ತಿನ್ನತೊಡಗಿತು. ಇದನ್ನು ಅಷ್ಟು ಸುಲಭವಾಗಿ ತಳ್ಳಿ ಹಾಕುವ ಕೇಸಲ್ಲ ಎಂದು ಅಲ್ಲಿಯೇ ಎಲ್ಲ ಹಿರಿಯ ಪೊಲೀಸ್  ಅಧಿಕಾರಿಗಳು ಠಿಕಾಣಿ ಹೂಡಿ ಚಿಂತಿಸಲಾರಂಭಿಸಿದರು. ಆದರೆ ಮೂರು ದಿನಗಳಾದರೂ ಸಂದೇಹ ಪರಿಹಾರ ಆಗಲಿಲ್ಲ.  ಅರೆಮರುಳ ಫೇಸ್‌ಬುಕ್, ಬ್ಲಾಗ್‌ನಲ್ಲಿ ಈ ವಿಷಯ ಹಾಕಿ ‘ದಯವಿಟ್ಟು ಈ ಅಚ್ಚರಿ ಹೇಗೆ ನಡೆಯಿತು ಎನ್ನುವುದನ್ನು ತಿಳಿಸಿ’ ಎಂದು ಮೊರೆ ಇಟ್ಟ.

ಒಂದು ದಿನ ಎಸ್ಸೆಸ್ಸೆಲ್ಸಿಯನ್ನು ಮೂರನೇ ಪ್ರಯತ್ನದಲ್ಲಿ ಪಾಸು ಮಾಡಿದ   ಹುಡುಗನೊಬ್ಬ ಅರೆಮರುಳನ ಬ್ರಹ್ಮಾಂಡದಷ್ಟು ದೊಡ್ಡ ಸಮಸ್ಯೆಯನ್ನು ಸಲೀಸಾಗಿ ಪರಿಹರಿಸಿದ.  ಫೋನ್ ಮಾಡಿ ಅರೆಮರುಳನಿಗೆ ವಿವರಿಸಿದಾಗ, ಹೌದು ಯಾಕಿರಬಾರದು ಎಂದೆಣಿಸಿ ತನ್ನಂತಹ (ದೇಡ) ಶಾಣ್ಯ ಮನುಷ್ಯನಿಗೆ ಯಾಕೆ ಹೊಳೆಯಲಿಲ್ಲ ಎಂದು ಪೇಚಾಡಿಕೊಂಡ. ಆ ಹುಡುಗ ವಿವರಿಸಿದ್ದು ಹೀಗೆ: ಕಳ್ಳ ಮಠದ ಕಿಟಕಿಯ ಕಬ್ಬಿಣದ ಸರಳುಗಳನ್ನು ಅಗಲಿಸಿ ಒಳಗೆ ಹೋಗಲು ಯತ್ನಿಸಿ ವಿಫಲನಾದಾಗ ಮುಖ್ಯದ್ವಾರದ ಡೋರ್ ಲಾಕನ್ನು ತನ್ನ ಬಳಿ ಇದ್ದ ನಕಲಿ ಕೀ ಬಳಸಿ ತೆರೆದು ಒಳಗೆ ಹೋಗಿ ಹಂಡೆ, ಪಾತ್ರೆ ಹೊರಗೆ ತಂದು ಮತ್ತೆ ಬೀಗ ಹಾಕಿ ಯಾಕೆ ಹೋಗಿರಬಾರದು?

ಈ ದಿವ್ಯ ಸಾಧ್ಯತೆಯ ವಿಷಯ ಗೊತ್ತಾದ್ದೇ ತಡ ಮಠಕ್ಕೆ ಹೋಗಿ ಹೇಳಿಯೇ ಬಿಟ್ಟ. ಅಲ್ಲಿದ್ದ ಪೊಲೀಸರು ಅರೆಮರುಳನನ್ನೇ ಸಂದೇಹದಿಂದ ದುರುಗುಟ್ಟಿ ನೋಡಿದಾಗ ಗಾಂಪೇಶ್ವರ ಸ್ವಾಮಿಗಳು ‘ಇಲ್ಲ... ನಮ್ಮ ಮಠದ ಹುಡುಗ. ಮಾತ್ರವಲ್ಲ, ಪತ್ರಕರ್ತ’ ಎಂದು ಹೇಳಿ ‘ಅವನು ಪೂರ್ವಾಶ್ರಮದಲ್ಲಿ  ಕಳ್ಳನಾಗಿರಲಿಲ್ಲ’ ಎಂದು ಸಂದೇಹ ನಿವಾರಿಸಿದ ಬಳಿಕ ಪೊಲೀಸರು ಮಠದಿಂದ ಹೊರ ನಡೆದರು. ಕೆಲವು ದಿನಗಳ ಬಳಿಕ ಸುಳಿವು ಸಿಕ್ಕಿ ಹಳೆಯ ಕಳ್ಳನನ್ನು ಹಿಡಿದೇ ಬಿಟ್ಟರು. ಅರೆಮರುಳನ ‘ಬುದ್ಧಿವಂತಿಕೆ’ಗೆ ಸ್ವಾಮಿಗಳು ಶ್ಲಾಘಿಸಿದರು.
* * *
ಅರೆಮರುಳ ಪತ್ರಕರ್ತನಾಗುವ ಮೊದಲು ಸಣ್ಣಪುಟ್ಟ ವೃತ್ತಿಯಲ್ಲಿದ್ದು ದಶಾವತಾರ ತೋರಿ ಅನಂತರ ಗಾಂಪೇಶ್ವರ ಸ್ವಾಮಿಗಳ ಮಠ  ಸೇರಿದವನು.

ಚಿತ್ರರಂಗದಲ್ಲಿ ಅಲ್ಪಕಾಲ ಇದ್ದು ತನ್ನಿಂದ ಸಾಧ್ಯವಾದಷ್ಟು ಕನ್ನಡ ಚಿತ್ರರಂಗ ಮತ್ತು ಕನ್ನಡಮ್ಮನ ಸೇವೆಯನ್ನು ಜಂಟಿಯಾಗಿ ಮಾಡಿದವನು. ನಿರ್ಮಾಪಕನೊಬ್ಬನ ಬಳಿ ಇದ್ದಾಗ ಅಭೂತಪೂರ್ವ ಅನುಭವ ಪಡೆದವನು. ಅಂತಹ ಅನುಭವಗಳಲ್ಲಿ ಇದೂ ಒಂದು.                   
* * *
ಚಿತ್ರವೊಂದರಲ್ಲಿ ಅರೆಮರುಳನಿಗೆ ಸಣ್ಣಪಾತ್ರ ಸಿಕ್ಕಿದಾಗ ಆತನಿಗೆ ಸ್ವರ್ಗಕ್ಕೆ ಮೂರೇ ಗೇಣು. ಆ ಚಿತ್ರದ ಮೊದಲ ದೃಶ್ಯದ ಚಿತ್ರೀಕರಣ ಗೋವಾದಲ್ಲಿ. ಅಂದು ಗೋವಾಕ್ಕೆ ಹೋಗಬೇಕಾಗಿತ್ತು. ಆತ ಇದೇ ಮೊದಲ ಬಾರಿಗೆ ಚಿತ್ರೀಕರಣದಲ್ಲಿ ಭಾಗವಹಿಸುವವನಾದ ಕಾರಣ ಸಹಜವಾಗಿ ಉದ್ವಿಗ್ನನಾಗಿದ್ದ. ಅಲ್ಲದೆ ಆತನ ಸುತ್ತಮುತ್ತ ಪ್ರಖ್ಯಾತ ತಾರೆಯರು, ನಿರ್ದೇಶಕರು, ಛಾಯಾಚಿತ್ರಗ್ರಾಹಕರು, ತಂತ್ರಜ್ಞರು ಇದ್ದರು.

ಇವರೆಲ್ಲರ ಜತೆ ತಾನೂ ಚಿತ್ರೀಕರಣದಲ್ಲಿ ಭಾಗವಹಿಸುವುದು ಆತನಿಗೆ ರೋಮಾಂಚನ ಉಂಟು ಮಾಡಿತ್ತು. ಆದರೆ ಹೊರಡುವ ಹೊತ್ತು ಆಗಿದ್ದರೂ ನಿರ್ಮಾಪಕರು ನಾಪತ್ತೆ. ಏಕಾಏಕಿ ನಿರ್ಮಾಪಕರು ಎಂಟ್ರಿ ಕೊಟ್ಟಾಗ ತಂಡಕ್ಕೆ ಸಮಾಧಾನ. ಅರೆಮರುಳ ಸೂಕ್ಷ್ಮವಾಗಿ ಗಮನಿಸುತ್ತಲೇ ಇದ್ದ. ಬಸ್ಸಿನ ಚಾಲಕ ಒಮ್ಮೆ ನಿರ್ಮಾಪಕನಿಗೆ ಮುಖ ತೋರಿಸಿ ಬಸ್ಸಲ್ಲಿ ಹೋಗಿ ಕೂತ. ತಕ್ಷಣ ಒಂದು ಸೂಟ್‌ಕೇಸ್ ಬಂದು  ನಿರ್ಮಾಪಕನ ಮುಂದೆ ಕೂತಿತು. ಎಲ್ಲರ ಮುಖದಲ್ಲಿ ಸ್ವಲ್ಪ ಸಮಾಧಾನ; ಸ್ವಲ್ಪ ಆತಂಕ. ಸೂಟ್‌ಕೇಸ್ ಬಿಚ್ಚಿದ ನಿರ್ಮಾಪಕ ಕಂತೆ, ಕಂತೆ ನೋಟುಗಳನ್ನು ಎತ್ತಿ ಎಣಿಸಲಾರಂಭಿಸಿದ. ಹಾಗೆಯೇ ಒಂದೊಂದೇ ಕಂತೆ ಎತ್ತಿ ನಟ, ನಟಿಯರಿಗೆ,  ಅನಂತರ ನಿರ್ದೇಶಕ... ಈ ರೀತಿ ಹಂಚಿದಾಗ ಒಂದು ಅಚ್ಚರಿಯ ಘಟನೆ ನಡೆಯಿತು. ಏಕಾಏಕಿ ಎಲ್ಲರೂ ನೋಟು ಎಣಿಕೆಯ ಯಂತ್ರ ತೆಗೆದು ಎಣಿಸಲಾರಂಭಿಸಿದರು. ಯಂತ್ರ ತಾರದ ಕೆಲವರು ಬೇರೆಯವರ ನೋಟು ಲೆಕ್ಕ ಮುಗಿದ ತಕ್ಷಣ ಮಿಂಚಿನ ವೇಗದಲ್ಲಿ ಇಸ್ಕೊಂಡು ಲೆಕ್ಕ ಹಾಕಲಾರಂಭಿಸಿದರು. ಆಗ ಗಾಬರಿಯಾಗುವ ಸರದಿ ಅರೆಮರುಳನದ್ದು. ಹಂಚಿದ ಹಣದಲ್ಲಿ ಸಾವಿರ ರೂಪಾಯಿಯ ನೋಟುಗಳು ಇಲ್ಲವೇ ಇಲ್ಲ. ಐನೂರು ಮತ್ತು ನೂರರ ನೋಟುಗಳೇ ಎಲ್ಲರ ಕೈಯಲ್ಲಿ. ಒಬ್ಬೊಬ್ಬರೇ ‘ಒಂದು ಸಾವಿರ ಕಮ್ಮಿ ಇದೆ ಸಾರ್, ಎರಡು ಸಾವಿರ ರೂಪಾಯಿ ಕಮ್ಮಿ ಇದೆ ಸಾರ್...’ ಎಂದು ಹೇಳಿದಾಗ ನಿರ್ಮಾಪಕನ ಮುಖದ ಬಣ್ಣಬದಲಾಯಿತು. ಅರೆಮರುಳ ಏನೂ ಅರ್ಥವಾಗದೆ ಕಂಗಾಲಾದ.

‘ನೀವೂ ನೋಟು ಎಣಿಕೆ ಮಾಡಿ’ ಎಂದು ಪಕ್ಕದಲ್ಲಿ ಕೂತ ವ್ಯಕ್ತಿ ಹೇಳಿದಾಗ ಇನ್ನೂ ಗಾಬರಿಯಾದ. ‘ಏನು ಇದೆಲ್ಲ’ ಎಂದು ಕಂಗಾಲಾಗಿ ಪ್ರಶ್ನಿಸಿದ.

‘ಅದೆಲ್ಲ ಆಮೇಲೆ ಹೇಳುತ್ತೇನೆ’ ಎಂದ ಪಕ್ಕದಲ್ಲಿ ಕೂತ ವ್ಯಕ್ತಿ.
  ಅರೆಮರುಳನಿಗೆ ಮೊದಲೇ ಎಷ್ಟು ಹಣ ಕೊಡಬೇಕು ಎಂದು ಹೇಳದೇ ಇದ್ದ ಕಾರಣ, ಆತ ಶಾಸ್ತ್ರಕ್ಕೆ ಎಣಿಕೆ ಯಂತ್ರಕ್ಕೆ ನೋಟು ತುರುಕಿಸಿದ್ದೂ ಆಯಿತು; ಜೇಬಿಗೆ ಹಣ ಇಳಿಸಿದ್ದೂ ಆಯಿತು.

ಬಸ್ಸಲ್ಲಿ ಕೂತಾಗ ಪಕ್ಕದಲ್ಲಿದ್ದ ವ್ಯಕ್ತಿ ನಿರ್ಮಾಪಕನ ಹಿನ್ನೆಲೆ ವಿವರಿಸಲಾರಂಭಿಸಿದ.
‘ನಮ್ಮ ನಿರ್ಮಾಪಕರು ತುಂಬಾ ಜಾಣರು. ಇನ್ನೇನು ವಿಮಾನ ಹೊರಡಬೇಕು ಅಥವಾ ಬಸ್ಸು ಹೊರಡಬೇಕು ಅನ್ನುವಾಗ ಏಕಾಏಕಿ ದುಡ್ಡು ಹಂಚುತ್ತಾರೆ. ನಾವೆಲ್ಲ ಮೊದಲು ಹಣ ಕೈಯಲ್ಲಿ ಬಂದ ತಕ್ಷಣ ಅವರ ಮುಂದೆಯೇ ಹಣ ಎಣಿಸುವುದು ಯಾಕೆ ಅಂತ ಸುಮ್ಮನೆ ಜೇಬಿಗೆ ಇಳಿಸಿದರೆ ಒಂದೋ, ಎರಡೋ ಸಾವಿರ ರೂಪಾಯಿಗೆ ಕತ್ತರಿ ಬಿದ್ದಿರುತ್ತಿತ್ತು. ಇದು ಒಬ್ಬರ, ಇಬ್ಬರ ಅನುಭವವಲ್ಲ.

ಮುಂಬೈಯಿಂದ ಹಾಡುವವರು ಬಂದರೆ ನಮ್ಮಲ್ಲಿನ ಸಂಗೀತ ನಿರ್ದೇಶಕರ ಹತ್ತಿರ ದುಡ್ಡು ಕೊಡುತ್ತಿದ್ದರು. ಅವರು ಆ ಹಾಡುಗಾರನಿಗೆ ಕೊಟ್ಟರೆ ಆ ಹಾಡುಗಾರ ಅವರ ಎದುರೇ ಎಣಿಸಲು ತೊಡಗಿದರೆ ಕೇಳಿದ ದುಡ್ಡಿಗಿಂತ ಐದಾರು ಸಾವಿರ ಕಮ್ಮಿಯೇ ಇರುತ್ತಿತ್ತು. ಆಗ ಸಂಗೀತ ನಿರ್ದೇಶಕ ಕಂಗಾಲಾಗುತ್ತಿದ್ದ. ಇದೆಲ್ಲ ದೊಡ್ಡ ರಾದ್ಧಾಂತಕ್ಕೆ ಕಾರಣವಾಗುತ್ತಿತ್ತು. ಸಂಗೀತ ನಿರ್ದೇಶಕನೇ ಒಮ್ಮೆ ಜೇಬಿನಿಂದ ಹಣ ಹಾಕಿ ಕೊಡಬೇಕಾಯಿತು. ಕೊನೆಗೆ ನಾವೆಲ್ಲ ಒಂದು ತೀರ್ಮಾನಕ್ಕೆ ಬಂದು ಪ್ರತಿಯೊಬ್ಬರು ದುಡ್ಡು ಎಣಿಕೆ ಯಂತ್ರ ಖರೀದಿ ಮಾಡಿದೆವು. ಲೈಟ್‌ಬಾಯ್ ಗೆ ನಾವೇ ನಮ್ಮ ಎಣಿಕೆ ಯಂತ್ರ ಕೊಡುತ್ತೇವೆ’ ಎಂದು ವಿವರಿಸಿದ. ಲೈಟ್‌ಬಾಯ್‌ನನ್ನೂ ಬಿಡದ ನಿರ್ಮಾಪಕನ ಕಥೆ ಕೇಳಿ ಅರೆಮರುಳನಿಗೆ ಸುಸ್ತಾಯಿತು. ಇದಾದ ನಂತರ ಅರೆಮರುಳ ಪತ್ರಿಕೋದ್ಯಮಕ್ಕೆ ಪಾದ ಊರಿದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT