ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಹುಗಾರಿಕೆಯಲ್ಲಿ ಚೆಲ್ಲುಗಾರ್ತಿಯರು

Last Updated 5 ಅಕ್ಟೋಬರ್ 2013, 19:30 IST
ಅಕ್ಷರ ಗಾತ್ರ

ಭಾರತೀಯ ಮೂಲದ ಲೇಖಕಿ ಸುಷ್ಮಿತಾ ಬ್ಯಾನರ್ಜಿ ಅವರು ಆಫ್ಘಾನಿಸ್ತಾನದ ಪಕ್ತಿಕಾ ಪ್ರಾಂತ್ಯದಲ್ಲಿ ನಿಗೂಢವಾಗಿ ಹತ್ಯೆಗೆ ಒಳಗಾದ ಬಳಿಕ ಇದಕ್ಕೆ ಯಾರು ಕಾರಣ ಎನ್ನುವುದು ತಕ್ಷಣ ಬಹಿರಂಗವಾಗಲಿಲ್ಲ. ತಾಲಿಬಾ ನರ ಕುಕೃತ್ಯ ಇರಬೇಕು ಎಂಬ ದಟ್ಟ ವದಂತಿ ಇದ್ದರೂ ಸುಷ್ಮಿತಾ  ಅವರ ಆಪ್ತರು ‘ಇದು ಬಾಡಿಗೆ ಬಂಟರ ಕೆಲಸ’ ಎಂದೇ ಸಂದೇಹ ವ್ಯಕ್ತಪಡಿಸಿದ್ದರು. ತಾಲಿಬಾನರು ಅನಂತರ ಏಕಾಏಕಿ  ‘ಆಕೆ ಭಾರತ ಸರ್ಕಾರದ ಪರವಾಗಿ ಬೇಹುಗಾರಿಕೆ ನಡೆಸಿದ ಕಾರಣ  ಸಾಯಿಸಲಾಯಿತು’ ಎಂದು ಹೇಳಿದ್ದಾರೆ.

ಅವರ ವಕ್ತಾರ ಹಮ್ಜಾ ಎಂಬಾತ ‘ಸುಷ್ಮಿತಾ ಬೇಹುಗಾರರಾಗಿದ್ದರು. ಅವರನ್ನು ಮೂರು ಗಂಟೆಗಳ ಕಾಲ ಪ್ರಶ್ನಿಸಿದಾಗ ಅವರು ಇನ್ನು ಕೆಲವು ಬೇಹುಗಾರರ ಹೆಸರುಗಳನ್ನು   ಬಹಿರಂಗ­ಪಡಿಸಿ­ದ್ದಾರೆ. ಅನಂತರವೇ ಅವರನ್ನು ಸಾಯಿಸಲಾಯಿತು’ ಎಂದಿದ್ದಾನೆ. ಆಫ್ಘಾನಿಸ್ತಾನ ಸರ್ಕಾರ   ‘ಎಂಟು ಜನರನ್ನು ವಶಕ್ಕೆ ತೆಗೆದುಕೊಂಡಿದ್ದೇವೆ. ಅವರಲ್ಲಿ ಇಬ್ಬರು ಉಗ್ರರು’ ಎಂದು ಹೇಳಿದೆ.  ಸುಷ್ಮಿತಾ ಅವರ ಬಂಧುಗಳು ಮತ್ತು ಸ್ನೇಹಿತರು ಉಗ್ರರ ಕೃತ್ಯ ಎನ್ನುವುದನ್ನು  ಒಪ್ಪದೆ ಗಂಡ ಜಾನ್‌ಬಾಜ್‌­ಖಾನ್‌ನ ಪಿತೂರಿಗೆ ಅವರು ಬಲಿಯಾಗಿರಬೇಕು ಎಂದು ಸಂದೇಹ ವ್ಯಕ್ತಪಡಿಸಿದ್ದಾರೆ.

ಮಹಿಳೆಯರನ್ನು ಬೇಹುಗಾರಿಕೆಗೆ ಬಳಸುವುದು ಹೊಸದಲ್ಲ. ಆದರೆ ಒಬ್ಬ ಲೇಖಕಿಯ ಹತ್ಯೆ ನಡೆಸಿ ಅದಕ್ಕೆ ಬೇಹುಗಾರಿಕೆಯ ಲೇಪಕೊಟ್ಟರೆ ಸಾಕಷ್ಟು ಪ್ರಚಾರ ಸಿಗುತ್ತದೆ ಎನ್ನುವ ಕಾರಣಕ್ಕೆ ತಾಲಿಬಾನರು ಈ ರೀತಿ ಹೇಳಿರಲೂಬಹುದು ಅಥವಾ ರಾಜಕೀಯೇತರ ಕಾರಣಕ್ಕೆ ಹತ್ಯೆಯಾದ ಅವರ ಸಾವಿನ ಲಾಭ ಪಡೆಯಲು ಕಥೆ ಕಟ್ಟಿರಬೇಕು. ಈ ಎರಡೂ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ. ಜಾನ್‌ಬಾಜ್‌ಖಾನ್‌ ಅವರನ್ನು ಮದುವೆಯಾದ ಬಳಿಕ ಮುಸ್ಲಿಮ್ ಆಗಿ ಮತಾಂತರಗೊಂಡ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವಾಗ ಬುರ್ಖಾ ಹಾಕಿಕೊಳ್ಳದ ಕಾರಣ ಉಗ್ರರು  ಸಾಯಿಸುವುದಾಗಿ ಬೆದರಿಸಿದ್ದರು.

ಇತಿಹಾಸದಲ್ಲಿ ಹಲವಾರು ರಾಷ್ಟ್ರಗಳು ಮಹಿಳೆಯರನ್ನುಬೇಹುಗಾರಿಕೆಗೆ ಬಳಸಿದ ಉದಾಹರಣೆಗಳು ಇವೆ. ಹೇಳದೆ ಕೇಳದೆ ಬರುವ ಯೌವನ, ಜತೆಗೆ ಬೋನಸ್‌ಆಗಿ ಬರುವ ಸೌಂದರ್ಯ, ಒಂದಿಷ್ಟು ಬುದ್ಧಿವಂತಿಕೆ ಇದ್ದ ಸೊಗಸುಗಾರ್ತಿಯರು ಈ ಹಿಂದೆ ಬೇಹುಗಾರಿಕೆಯಲ್ಲಿ ತೊಡಗಿದ್ದು ಇದೆ. ಗ್ಲಾಮರ್‌ಗೆ ಮಹತ್ವ ನೀಡಿದವರು ಮತ್ತು ಕಿರಿಯ ವಯಸ್ಸಿನಲ್ಲಿಯೇ ದಾರಿ ತಪ್ಪಿದವರನ್ನು ಹಿಂದೆ ಬೇಹುಗಾರಿಕೆಗೆ ಬಳಸಿದ್ದೂ ಇದೆ.

60ರ ದಶಕದಲ್ಲಿ  ಕ್ರಿಸ್ಟಿನ್ ಕೀಲರ್ ಮತ್ತು ಜಾನ್ ಪ್ರೊಫುಮೊ ಅವರಿಗೆ ಸಂಬಂಧಿಸಿದ ಕುತೂಹಲಕಾರಿ ಪ್ರಕರಣ  ಬಹಳ ಸುದ್ದಿ ಮಾಡಿತ್ತು. ಚೆಂದುಳ್ಳಿ ಚೆಲುವೆ ಕೀಲರ್‌ತನ್ನ ಚಾರಿತ್ರ್ಯವನ್ನು ಒತ್ತೆ ಇಟ್ಟು ಹಲವರ ಸಂಬಂಧ ಬೆಳೆಸಿ ಕೊನೆಗೆ ಸಚಿವ ಪ್ರೊಫುಮೊ ಅವರ ಮಾನವನ್ನು ಹರಾಜಿಗಿಟ್ಟಿದ್ದಳು.

ಹೆರಾಲ್ಡ್ ಮ್ಯಾಕ್‌ಮಿಲನ್ (ಕನ್ಸರ್ವೆಟಿವ್ ಪಕ್ಷ) ಬ್ರಿಟನ್ನಿನ ಪ್ರಧಾನಿಯಾಗಿದ್ದಾಗ ಜಾನ್ ಪ್ರೊಫುಮೊ ಅವರನ್ನು ಯುದ್ಧ ಕಾಲದ ಸಚಿವರನ್ನಾಗಿ ನೇಮಿಸಿದ್ದರು. ಅವರ ಸಂಪರ್ಕಕ್ಕೆ ಕ್ರಿಸ್ಟಿನ್ ಬಂದ ಬಳಿಕ ಅವರ ರಾಜಕೀಯ ಬದುಕಿನ ಮೇಲೆ ಕರಾಳ ಛಾಯೆ ಆವರಿಸಲು ಆರಂಭಿಸಿತು.

ಕೀಲರ್ ಹಿನ್ನೆಲೆ
ಕೀಲರ್ ಬಕ್ಕಿಂಗ್‌ಹ್ಯಾಮ್‌ಷೆಯರ್‌ನ ಮನೆ ಬಿಟ್ಟು ಹೋದಾಗ ಅವಳ ವಯಸ್ಸು ಕೇವಲ 15. ಗ್ರೀಕ್ ಹೋಟೆಲ್‌ವೊಂದರಲ್ಲಿ ಪರಿಚಾರಕಿಯಾಗಿ ಕೆಲಸಕ್ಕೆ ಸೇರಿ ನಂತರ ಹೋಟೆಲ್‌ವೊಂದರಲ್ಲಿ ಕ್ಯಾಬರೆ ನರ್ತಕಿಯಾದಳು. 1961ರಲ್ಲಿ ಸ್ಟಿಫನ್ ವಾರ್ಡ್ ಎಂಬ ವೈದ್ಯರೊಬ್ಬರು ಕ್ರಿಸ್ಟಿನಾ ಕೀಲರ್‌ಳ ಪರಿಚಯವನ್ನು ಪ್ರೊಫುಮೊ ಅವರಿಗೆ ಮಾಡಿಕೊಟ್ಟರು.

ವಾರ್ಡ್‌ಗೆ ಲಾರ್ಡ್ ಆಸ್ಟರ್  ಎಂಬ ಮಿತ್ರರೊಬ್ಬರು ಇದ್ದರು. ಒಮ್ಮೆ ವಾರ್ಡ್‌ ರಷ್ಯಾದ ಇವಾನೊವ್ ಜತೆ ಗ್ರಾಮವೊಂದರಲ್ಲಿ ಆಸ್ಟರ್   ಆಯೋಜಿಸಿದ  ಪಾರ್ಟಿಗೆ ಹಾಜರಾಗಲು ತೆರಳಿದರು. ಕೀಲರ್ ಅಲ್ಲಿ ಈಜುಕೊಳ ನೋಡಿ ತಾನು ಈಜಬೇಕೆಂದಳು. ಗೆಳೆಯ ವಾರ್ಡ್ ‘ಬೆತ್ತಲೆಯಾಗಿ ಈಜು ನೋಡೋಣ' ಎಂದು ಸವಾಲು ಹಾಕಿದರು. ಆಕೆ ಸಮ್ಮತಿಸಿದಳು. ವಾರ್ಡ್ ಸುಮ್ಮನಾಗಲಿಲ್ಲ. ಕೀಟಲೆ ಮಾಡಬೇಕು ಎನಿಸಿತು. ಈಜುಡುಗೆ ಕದ್ದು ಮರೆಯಲ್ಲಿಟ್ಟರು. ಈಜಿ ದಡಕ್ಕೆ ಬಂದರೆ ಬಟ್ಟೆ ನಾಪತ್ತೆ! ಆಗ ಉದ್ಯಾನದಲ್ಲಿ ಹರಟೆ ಹೊಡೆಯುತ್ತ ಸಾಗಿದ ಆಸ್ಟರ್ ಮತ್ತು ಪ್ರೊಫುಮೊ ಈಜುಕೊಳದ ಬಳಿ ಬಂದಿದ್ದರು.

ಈಜುಕೊಳದಿಂದ ಕೀಲರ್ ನಗ್ನಳಾಗಿ ಮೇಲೆದ್ದು ಬರುತ್ತಿದ್ದ ದೃಶ್ಯ ನೋಡಿ  ಪ್ರೊಫುಮೊ ಮೋಹಕ್ಕೆ ಒಳಗಾದರು. ಆಗ ಆಕೆಯ ವಯಸ್ಸು 19. ಅವರ ವಯಸ್ಸು 48. ಅಲ್ಲಿಂದ ಅವರ ಮಧ್ಯೆ ಲೈಂಗಿಕ ಸಂಬಂಧ ಬೆಳೆಯಿತು. 1963ರಲ್ಲಿ ಇದು ಬಹಿರಂಗವಾಯಿತು. ಆಕೆ ಪ್ರೊಫುಮೊ ಮತ್ತು ರಷ್ಯಾದ ಗುಪ್ತಚರ ಅಧಿಕಾರಿ ಇವಾನೊವ್ ಅವರ ಜತೆ ಲೈಂಗಿಕ ಸಂಬಂಧ ಹೊಂದಿರುವುದನ್ನು ಬಹಿರಂಗಪಡಿಸಿದಳು. ಇದಕ್ಕೆ ಕಾರಣವಾದ ಘಟನಾವಳಿಗಳು ಮತ್ತು ಅವಳ ಪಿತೂರಿ ಕುತೂಹಲಕಾರಿಯಾದುದು. ಆಕೆ ವೆಸ್ಟ್ ಇಂಡೀಸ್‌ನ ಜಾಜ್ ಕಲಾವಿದ ಲಕ್ಕಿ ಕೊರ್ಡ್‌ನ್ ಜತೆ, ಅನಂತರ ಅದೇ ದೇಶದ ಜಾನಿ ಎಡ್ಜ್‌ಕೊಂಬೆಯ ಜತೆ  ಸಂಬಂಧ ಬೆಳೆಸಿದ್ದಳು.

1962ರಲ್ಲಿ ಆಕೆಯ ವಿಷಯದಲ್ಲಿ ಕ್ಲಬ್‌ವೊಂದರಲ್ಲಿ ಅವರಿಬ್ಬರ ಮಧ್ಯೆ ಮಾರಾಮಾರಿಯಾಗಿ ಜಾನಿ ಎಡ್ಜ್‌ಕೊಂಬೆ ತೀವ್ರ ಗಾಯಗೊಂಡರು. ಅನಂತರ ಎಡ್ಜ್‌ಕೊಂಬೆಯ ಜತೆ ಕೆಲದಿನಗಳ ಕಾಲ ಆಕೆ ಇದ್ದಳು. ಬಳಿಕ ಕಾರಣಾಂತರದಿಂದ ದೂರವಾದಳು. ವಾರ್ಡ್ ಅವರ ಜತೆ ವಾಸಿಸಲಾರಂಭಿಸಿದಳು. ಎಡ್ಜ್‌ಕೊಂಬೆ  ಆಕೆಯನ್ನು ಬಯಸಿ ಅಲ್ಲಿಗೆ ಬಂದಾಗ  ಆಕೆ ಅವರಿಗೆ ಒಳ­ಬರಲು ಬಿಡದೆ ದಢಾರನೆ ಬಾಗಿಲು ಹಾಕಿ­ಕೊಂಡಳು.  ಎಡ್ಜ್‌ಕೊಂಬೆ ಸಿಟ್ಟಿಗೇಳಲು ಇಷ್ಟೇ ಸಾಕಾ­ಯಿತು. ಎಡ್ಜ್‌ಕೊಂಬೆ ತಕ್ಷಣ ಬಂದೂಕಿನಿಂದ ಗುಂಡು ಹಾರಿಸಿಯೇ ಬಿಟ್ಟರು. ಬಾಗಿಲಿಗೆ ಬಿದ್ದ ಗುಂಡು ಎಡ್ಜ್‌ಕೊಂಬೆ ಸೆರೆಮನೆಯಲ್ಲಿ ಕೊಳೆಯಲು ಕಾರಣವಾಯಿತು.

ನುಂಗಲಾಗದ ತುತ್ತು: ವಾರ್ಡ್‌ ಅವರಿಗೆ ಅವಳ ಸಹವಾಸ ಸಾಕಾಯಿತು. ಆಕೆ ತನ್ನನ್ನು ತೊರೆಯವಂತೆ ಮಾಡಿದರು. ಇದು ಆಕೆಗೆ ನುಂಗಲಾಗದ ತುತ್ತಾಯಿತು.  ವಾರ್ಡ್ ವಿರುದ್ಧ ಸಮರ ಸಾರಲು ಆರಂಭಿಸಿದಳು. ಸಾಲಿಸಿಟರ್ ಮೈಕೆಲ್ ಅವರ ಬಳಿ ತಾನು ಮತ್ತು ವಾರ್ಡ್ ರಷ್ಯಾ ದೇಶದ ಬೇಹುಗಾರರೆಂದೂ ರಷ್ಯಾಕ್ಕೆ ಅಗತ್ಯವಿರುವ ಮಾಹಿತಿಯನ್ನು ಪ್ರೊಫುಮೊ ಅವರಿಂದ ಪಡೆಯುವಂತೆ ವಾರ್ಡ್ ತನಗೆ ತಿಳಿಸಿರುವುದಾಗಿ ಹೇಳಿದಳು. ಇದೇ ರೀತಿ ಅಂದಿನ ಹಿರಿಯ ರಾಜಕಾರಣಿಗಳ ಬಳಿ ಹೇಳುತ್ತಲೇ ಬಂದಳು. ಬಂಧನಕ್ಕೆ ಒಳಗಾದ ವಾರ್ಡ್ ತಮ್ಮನ್ನು ಅಮಾಯಕ ಎಂದು ಹೇಳಿಕೊಳ್ಳುತ್ತಲೇ ಬಂದು ಕೊನೆಗೆ ಆತ್ಮಹತ್ಯೆ ಮಾಡಿಕೊಂಡರು. ವಾರ್ಡ್ ಪ್ರೊಫುಮೋ ಅವರ ಬ್ರೀಫ್‌ಕೇಸಿನಿಂದ ಸರ್ಕಾರಕ್ಕೆ ಸಂಬಂಧಪಟ್ಟ ಅಧಿಕೃತ ಕಾಗದಪತ್ರಗಳನ್ನು ಒಮ್ಮೆ ಕಳವು ಮಾಡಿದ್ದರು.

ಪ್ರೊಫುಮೊ ಜತೆ ಆಕೆಯ ಸಂಬಂಧದ ಬಗ್ಗೆ ಹೌಸ್ ಆಫ್ ಕಾಮನ್ಸ್‌ನಲ್ಲಿ ಚರ್ಚೆ ನಡೆದಾಗ ಪ್ರೊಫುಮೊ ತಾನು ಆಕೆಯ ಜತೆ ಲೈಂಗಿಕ ಸಂಬಂಧ ಹೊಂದಿಲ್ಲ ಎಂದು ಹೇಳಿಕೆ ನೀಡಿದರು. ಆದರೆ ಇದನ್ನು ಒಪ್ಪಲು ಯಾರೂ ಸಿದ್ಧರಿರಲಿಲ್ಲ. ಅನಂತರ ಇದಕ್ಕೆ ವಿರುದ್ಧ ಹೇಳಿಕೆ ನೀಡಿ 1963ರ ಜೂನ್ 4ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಬ್ರಿಟನ್‌ನ ಜನತೆಯನ್ನು ತಪ್ಪು ದಾರಿಗೆ ಎಳೆದುದಕ್ಕೆ ಕ್ಷಮೆಯಾಚಿಸಿದರು.

  ಪ್ರೊಫುಮೊ ಅವರ ಸಂಪರ್ಕಕ್ಕೆ ಬರುವ ಮುನ್ನವೇ ಕೀಲರ್ ಬೇಹುಗಾರಿಕೆಯಲ್ಲಿ ತೊಡಗಿದ್ದಳು. ನ್ಯಾಯಾಲಯದಲ್ಲಿ ವಿಚಾರಣೆಯ ಸಂದರ್ಭದಲ್ಲಿ  ಪಾಶ್ಚಾತ್ಯ ರಾಷ್ಟ್ರಗಳ ಕ್ಷಿಪಣಿ ಸಾಗಣೆಯ ಮಾಹಿತಿ ನೀಡಿದ್ದು ನಿಜ ಎಂದು ತಪ್ಪೊಪ್ಪಿಕೊಂಡಳು. ಆಕೆಗೆ ಆರು ತಿಂಗಳ ಜೈಲು ಶಿಕ್ಷೆಯಾಯಿತು.

ಪ್ರೊಫುಮೊ ರಾಜೀನಾಮೆ ನೀಡಿದ 50 ವರ್ಷಗಳ ನಂತರ ಕೀಲರ್ ‘ನಾನು ಬೇಹುಗಾರಳಾಗಿ ಪಾಶ್ಚಾತ್ಯ ರಾಷ್ಟ್ರಗಳ ಕ್ಷಿಪಣಿ ಸಾಗಣೆಯ ಮಾಹಿತಿಯನ್ನು ವೈರಿ ರಾಷ್ಟ್ರ ರಷ್ಯಾಕ್ಕೆ ನೀಡಿದ್ದು ನಿಜ. ಸೆಕ್ಸ್ ಒಂದು ಆಟ, ಬೇಹುಗಾರಿಕೆ ನನಗೆ ಆಗ ವೃತ್ತಿಯಾಗಿತ್ತು’ ಎಂದಳು. ‘ವಾರ್ಡ್ ಸೂಚನೆಯಂತೆ ಲಂಡನ್‌ ನಲ್ಲಿರುವ ರಷ್ಯಾದ ರಾಜತಾಂತ್ರಿಕ ಕಚೇರಿಗೆ ಅವರು ಕೊಡುತ್ತಿದ್ದ ಲಕೋಟೆ (ಬೇಹುಗಾರಿಕೆಯ ಮಾಹಿತಿ)ಗಳನ್ನು ತಲುಪಿಸುತ್ತಿದ್ದೆ’ ಎಂದು ಪತ್ರಕರ್ತರಿಗೆ ತಿಳಿಸಿದಳು.

ಮಾತಾ ಹರಿ ಕಥನ
ಮಾತಾಹರಿ ಎಂಬ ಚೆಲುವೆ ನೆದರ್‌ಲೆಂಡ್ಸ್‌ನವಳು. ಹಲವು ದೇಶಗಳ ಸೇನಾಧಿಕಾರಿ, ರಾಜಕಾರಣಿ ಮತ್ತು ಪ್ರಭಾವಿ ರಾಜಕಾರಣಿಗಳ ಗೆಳೆತನ ಗಳಿಸುವುದರಲ್ಲಿ ಯಶಸ್ವಿಯಾದವಳು. ಆದರೆ ಬೇಹುಗಾರಿಕೆಯ ಆರೋಪದ ಮೇಲೆ ಗುಂಡೇಟು ತಿಂದು ಬದುಕಿನಲ್ಲಿ ಅಂತ್ಯ ಕಂಡಳು. ಅವಳ ಮೇಲೆ ಇದ್ದ ಆರೋಪ ಮೊದಲನೆಯ ಮಹಾಯುದ್ಧದ ಸಂದರ್ಭದಲ್ಲಿ ಜರ್ಮನಿಯ ಬೇಹುಗಾರ್ತಿಯಾಗಿ ಕೆಲಸ ಮಾಡಿದ್ದು. ಮೊದಲು ಸರ್ಕಸ್ ಕಂಪೆನಿ ಸೇರಿ ಕುದುರೆ ಸವಾರಿ ಮಾಡಿ ಪ್ರೇಕ್ಷಕರನ್ನು ರಂಜಿಸಿದ ಆಕೆ, ಕಲಾವಿದರಿಗಾಗಿ ರೂಪದರ್ಶಿಯಾಗಿ ದುಡಿದಳು. ಆದರೆ ಅವಳು ಪ್ರಭಾವಿ ವ್ಯಕ್ತಿಗಳ ಗಮನ ಸೆಳೆದದ್ದು ನೃತ್ಯಗಾರ್ತಿಯಾಗಿ.

ಅರೆನಗ್ನ ನೃತ್ಯಗಾರ್ತಿಯಾಗಿ ಸುದ್ದಿಯಲ್ಲಿದ್ದ ಆಕೆ ಕ್ರಮೇಣ ನೃತ್ಯರಂಗದಿಂದ ತೆರೆಯ ಮರೆಗೆ ಸರಿದಾಗ ಗೆಳೆಯರ ಸಂಖ್ಯೆಯೆನೂ ಕಡಿಮೆಯಾಗಲಿಲ್ಲ. ನೆದರ್‌ಲೆಂಡ್ಸ್ ಮಹಾಯುದ್ಧದಲ್ಲಿ ಯಾರ ಪರವೂ ಇರಲಿಲ್ಲ. ಆದುದರಿಂದ ಆಕೆಯ ವಿದೇಶ ಪ್ರಯಾಣವನ್ನು ಆರಂಭದಲ್ಲಿ ಯಾವ ರಾಷ್ಟ್ರವೂ ಗಂಭೀರವಾಗಿ ಪರಿಗಣಿಸಲಿಲ್ಲ. ಆದರೆ ಮೇಲಿಂದ ಮೇಲೆ ಆಕೆಯ ಫ್ರಾನ್ಸ್ ಭೇಟಿ ಮಾತ್ರ ಕ್ರಮೇಣ ಸೇನೆಯ ಗುಮಾನಿಗೆ ಕಾರಣವಾಯಿತು.

1917ರಲ್ಲಿ ಪ್ಯಾರಿಸ್‌ನ ಹೋಟೆಲ್‌ವೊಂದರಲ್ಲಿ ಬಂಧಿಸಿ ವಿಚಾರಣೆ ನಡೆಸಿದಾಗ ಬೇಹುಗಾರಿಕೆಯ ಆರೋಪವನ್ನು ಆಕೆ ಒಪ್ಪಲಿಲ್ಲ. ಆದರೆ ಆಕೆಯ ಮಾತನ್ನು ನಂಬಲು ಬ್ರಿಟನ್ ಮತ್ತು ಫ್ರಾನ್ಸ್‌ನ ಬೇಹುಗಾರರು ಸಿದ್ಧರಿರಲಿಲ್ಲ. 1917ರ ಅಕ್ಟೋಬರ್ 15ರಂದು  41ನೇ ವಯಸ್ಸಿನಲ್ಲಿ ಆಕೆಯನ್ನು ಗುಂಡಿನ ಸುರಿಮಳೆಗರೆದು ಸಾಯಿಸಲಾಯಿತು. 1970ರಲ್ಲಿ ಬಿಡುಗಡೆ ಮಾಡಿದ ಜರ್ಮನಿಯ ದಾಖಲೆಯ ಪ್ರಕಾರ ಆಕೆ ಬೇಹುಗಾರಿಕೆ ನಡೆಸಿದ್ದು ನಿಜ. ಇತಿಹಾಸದಲ್ಲಿ ಮಹಿಳೆಯರು ಬೇಹುಗಾರಿಕೆಯಲ್ಲಿ ಭಾಗಿಯಾದ ಇಂತಹ ಹಲವು ಪ್ರಕರಣಗಳು ದಾಖಲಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT