ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಯೋತ್ಪಾದನೆ: ಅವಮಾನದ ವಿರಾಟ್‌ ರೂಪ

Last Updated 7 ಫೆಬ್ರುವರಿ 2015, 19:30 IST
ಅಕ್ಷರ ಗಾತ್ರ

ದಿನಪತ್ರಿಕೆಗಳ ಆನ್‌ಲೈನ್‌ ಆವೃತ್ತಿಯಲ್ಲಿ ಪ್ರಕಟಗೊಂಡ ಅಂಕಣಗಳಿಗೆ ಓದುಗರು ನೀಡುವ ಪ್ರತಿಕ್ರಿಯೆಗಳನ್ನು ಗಮನಿಸಿ. ಸಾಮಾನ್ಯವಾಗಿ ಅವು ಕಟು ವಿಮರ್ಶೆಗಳಿಂದ ಕೂಡಿರುತ್ತವೆ. ಅವುಗಳಲ್ಲಿ ನಿಂದನಾತ್ಮಕವಾದ, ಲೇಖಕನನ್ನು ಅವಮಾನಿಸುವ ಅಂಶಗಳೂ ಇರುತ್ತವೆ. ಇಂತಹ ಪ್ರತಿಕ್ರಿಯೆಗಳನ್ನು ಎದುರಿಸುವುದಕ್ಕೆ ನಾನು ಕಂಡುಕೊಂಡಿರುವ ದಾರಿ ಯಾವುದು ಗೊತ್ತೇ? ‘ನಿಮ್ಮ ಶತ್ರುಗಳನ್ನು ಪ್ರೀತಿಸಿ’ ಎಂಬ ಗಾದೆ ಮಾತು ಪಾಲಿಸುವುದು!

ನನ್ನ ಪ್ರತಿಭೆ, ನಡವಳಿಕೆ ಮತ್ತು ವೃತ್ತಿ ಕೌಶಲವನ್ನು ಮೌಲ್ಯಮಾಪನ ಮಾಡುವ ಈ ಪ್ರತಿಕ್ರಿಯೆಗಳು ಮಾನಸಿಕವಾಗಿ ಸಾಕಷ್ಟು ಹಾನಿ ಮಾಡುವುದೇನೋ ನಿಜ. ಆದರೆ ನನ್ನ ಸ್ನೇಹಿತರು ಉಡುಗೊರೆಗಳ ರೂಪದಲ್ಲಿ ಈ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ ಎಂಬ ವಾಸ್ತವವಲ್ಲದ ದೃಷ್ಟಿಕೋನದಲ್ಲಿ ಅವುಗಳನ್ನು ನೋಡಿದರೆ ಅವಮಾನ, ದೂಷಣೆಗಳಿಂದಲೂ ಏನನ್ನಾದರೂ ಕಲಿಯಲು ಅವಕಾಶ ಇರುತ್ತದೆ.

ಈ ಸಮಸ್ಯೆಯನ್ನು ಪತ್ರಿಕೆಗಳ ಅಂಕಣಕಾರರು ಮಾತ್ರ ಎದುರಿಸುತ್ತಿಲ್ಲ. ಅಂತರ್ಜಾಲದಲ್ಲಿ ತೊಡಗಿಕೊಂಡಿರುವ ಪ್ರತಿಯೊಬ್ಬರೂ ಸಾಮಾನ್ಯವಾಗಿ ಇನ್ನೊಬ್ಬರಿಂದ ಅವಮಾನ, ನಿಂದನೆ, ದ್ವೇಷ, ಕ್ರೌರ್ಯ ಮತ್ತು ಮೂದಲಿಕೆಗೆ ಒಳಗಾಗುತ್ತಿದ್ದಾರೆ. ಆನ್‌ಲೈನ್‌ ಮೂಲಕ ನಡೆಯುವ ಈ ಹಲ್ಲೆಗಳು ಇನ್ನೊಬ್ಬರ ಮೇಲೆ ಪ್ರಾಬಲ್ಯ ಸಾಧಿಸುವ ಯತ್ನಗಳು. ಗುರಿಯಾಗಿಸಿಕೊಂಡಿರುವ ವ್ಯಕ್ತಿಯ ಮೇಲೆ ತನ್ನ ಪ್ರಾಬಲ್ಯ ಸಾಧಿಸುವುದಕ್ಕಾಗಿ ನಿಂದಕರು ಅಂತರ್ಜಾಲದಲ್ಲಿ ಅವಮಾನ ಮಾಡುವಂತಹ ಲೇಖನಗಳನ್ನೋ ಅಥವಾ ಪ್ರತಿಕ್ರಿಯೆಗಳನ್ನೋ ಬರೆಯುತ್ತಾರೆ.

ಇದಕ್ಕೆ ಸಹಜವಾಗಿ ಪ್ರತಿಕ್ರಿಯೆ ನೀಡುವುದರ ಮೂಲಕ ಸ್ಥಾನಮಾನದ ಪ್ರಾಬಲ್ಯಕ್ಕಾಗಿ ನಡೆಯುವ ಹೋರಾಟದ ಅಖಾಡಕ್ಕೆ ನೀವು ಇಳಿಯುತ್ತೀರಿ. ಅಲ್ಲಿ ಸ್ಥಾನಮಾನದ ಮೇಲಾಟಗಳಿಗಾಗಿ ಅಹಂಗಳ ಸಂಘರ್ಷವಾಗುತ್ತದೆ. ಆತ ತನ್ನನ್ನು ಸಮರ್ಥಿಸಿಕೊಂಡರೆ, ನೀವು ನಿಮ್ಮನ್ನು ಸಮರ್ಥಿಸಿಕೊಳ್ಳುವುದರಲ್ಲಿ ಹಿಂದೆ ಬೀಳುವುದಿಲ್ಲ. ಆಗ ನಿಮ್ಮ ಸ್ಥಾನಮಾನವು ಚರ್ಚೆಯ ಕೇಂದ್ರ ಬಿಂದುವಾಗಿ ಮಾರ್ಪಡುತ್ತದೆ. ‘ಮುಯ್ಯಿಗೆ ಮುಯ್ಯಿ’ ತೀರಿಸಲು ಹೊರಟು ಕೊನೆಗೆ ನಿಮ್ಮ ಅಹಂಗೆ ಭಾರಿ ಪೆಟ್ಟು ಬೀಳುತ್ತದೆ. ಇದು ಅಪಾಯಕಾರಿಯಾದದ್ದು. ಮಾನಸಿಕವಾಗಿ ಸಾಕಷ್ಟು ಕುಗ್ಗಿಹೋಗುತ್ತೀರಿ.

ನಿಜ ಹೇಳಬೇಕೆಂದರೆ, ಈ ಅಹಂಗಳ ಸಂಘರ್ಷದಿಂದ ದೂರ ಇರುವುದು ಯಾವತ್ತಿಗೂ ಅತ್ಯಂತ ಒಳ್ಳೆಯದು. ದ್ವೇಷ ಕಾರುವುದು ಅತ್ಯಂತ ಕೆಟ್ಟ ಮನಸ್ಥಿತಿ. ಸಂಘರ್ಷಕ್ಕೆ ಹೋಗದೆ ಸುಮ್ಮನೆ ಕೂರುವ ವ್ಯಕ್ತಿ ಜಗತ್ತನ್ನು ಸ್ಪಷ್ಟವಾಗಿ ಕಾಣಬಲ್ಲ. ವಿಷಯವನ್ನು ಸರಿಯಾಗಿ ಅರ್ಥೈಸಬಲ್ಲ ಮತ್ತು ಪರಿಸ್ಥಿತಿಯನ್ನು ಅವಲೋಕಿಸಿ ಹಿಡಿತಕ್ಕೆ ತೆಗೆದುಕೊಳ್ಳಬಲ್ಲ. ಅಂತಹ ವ್ಯಕ್ತಿಗಳು ಎಲ್ಲರ ಮೆಚ್ಚುಗೆಗೂ ಪಾತ್ರರಾಗುತ್ತಾರೆ ಎಂಬುದರಲ್ಲಿ ಎರಡು ಮಾತಿಲ್ಲ.

ಇತ್ತೀಚಿನ ದಿನಗಳಲ್ಲಿ ಇಸ್ಲಾಮಿಕ್‌ ಸ್ಟೇಟ್‌ ಆಫ್ ಇರಾಕ್‌ ಅಂಡ್‌ ಸಿರಿಯಾ (ಐಎಸ್‌) ಉಗ್ರ ಸಂಘಟನೆಯಿಂದ ಬರುತ್ತಿರುವ ಭಯೋತ್ಪಾದನಾ ಬೆದರಿಕೆಗಳು, ಅಂತರ್ಜಾಲದಲ್ಲಿ ನಡೆಯುವ ಸಂಘರ್ಷಗಳಿಗಿಂತ ಸಂಪೂರ್ಣ ಭಿನ್ನವಾಗಿರುವಂತಹವು. ಆದರೆ, ಶಿರಚ್ಛೇದ ಮಾಡುವುದು, ಮನುಷ್ಯರನ್ನು ಸಜೀವವಾಗಿ ದಹಿಸುವ ಪೈಶಾಚಿಕ ಕೃತ್ಯಗಳು ಜನರಲ್ಲಿ ಆಂತರಿಕವಾಗಿ ಪ್ರತಿಕ್ರಿಯೆಗಳನ್ನು ಹುಟ್ಟುಹಾಕುವ ನಿಟ್ಟಿನಲ್ಲಿ ಮಾಡುವ ಅವಮಾನಗಳೇ ಆಗಿರುತ್ತವೆ. ಇವು ಮತ್ತೊಂದು ರೀತಿಯಲ್ಲಿ ಪ್ರಾಬಲ್ಯ ಸಾಧಿಸುವ ವಿಧಾನ. ತಮ್ಮ ಶಕ್ತಿ ಹಾಗೂ ಸ್ಥಾನಮಾನವನ್ನು ಜಗತ್ತು ಪರಿಗಣಿಸಬೇಕು ಎಂಬ ಕಾರಣಕ್ಕೆ ಕೆಲವು ಕ್ಷುದ್ರ ವ್ಯಕ್ತಿಗಳು ಮಾಡುವ ಪೈಶಾಚಿಕ ಕೃತ್ಯಗಳಿವು.

ಸಹೋದ್ಯೋಗಿಗಳಿಂದ ಶಹಬ್ಬಾಸ್‌ಗಿರಿ ಸಿಗುತ್ತದೆ, ಜಗತ್ತಿನ ಗಮನ ಇತ್ತ ಹರಿಯುತ್ತದೆ, ಇತರರು ಭಯದಿಂದ ಗೌರವ ನೀಡುತ್ತಾರೆ ಎಂಬ ಉದ್ದೇಶಕ್ಕಾಗಿ ಇಸ್ಲಾಮಿಕ್‌ ಸ್ಟೇಟ್‌ ಉಗ್ರರು ಒತ್ತೆಯಾಳುಗಳನ್ನು ಜೀವಂತವಾಗಿ ಸುಡುತ್ತಿದ್ದಾರೆ. ಭಯೋತ್ಪಾದನೆ ಒಂದು ರೀತಿಯಲ್ಲಿ ಯುದ್ಧ ಎಂದು ನಾವು ಆಗಾಗ ಹೇಳುತ್ತೇವೆ. ಆದರೆ ಅದು ತಪ್ಪು. ಭಯೋತ್ಪಾದನೆಯು ಮೂದಲಿಕೆಯ ಅಥವಾ ಅವಮಾನದ ವಿರಾಟ್‌ ರೂಪ. ನಾವೆಲ್ಲ ದುರ್ಬಲರು, ಭೀತಿಗೆ ಒಳಗಾಗಿರುವವರು ಎಂಬ ಭಾವನೆಯನ್ನು ನಮ್ಮಲ್ಲಿ ಮೂಡಿಸುವ ಯತ್ನವಾಗಿ ಐಎಸ್‌ ಉಗ್ರರು ಒತ್ತೆಯಾಳುಗಳನ್ನು ಹತ್ಯೆ ಮಾಡುವ ವಿಡಿಯೊಗಳನ್ನು ಬಿಡುಗಡೆ ಮಾಡುತ್ತಿದ್ದಾರೆ.

ಉರಿಯುವ ಬೆಂಕಿಗೆ ತುಪ್ಪ ಸುರಿಯುವುದು ಅಥವಾ ‘ಮುಯ್ಯಿಗೆ ಮುಯ್ಯಿ’ ಎಂಬ ಸಿದ್ಧಾಂತದ ಅಡಿಯಲ್ಲಿ ಈ ಉಗ್ರರಿಗೆ ಪ್ರತಿಕ್ರಿಯಿಸುವುದು ಯಾವತ್ತಿಗೂ ಒಳ್ಳೆಯದಲ್ಲ. ‘ಅವರು ಒಬ್ಬರನ್ನು ಹತ್ಯೆ ಮಾಡಿದರೆ, ನಾವು ಇಬ್ಬರನ್ನು ಮಾಡುತ್ತೇವೆ’ ಎಂದು ಜೋರ್ಡನ್‌ ಇಬ್ಬರು ಉಗ್ರರನ್ನು ಗಲ್ಲಿಗೇರಿಸಿದೆ. ‘ಅವರು ಎದೆಯುಬ್ಬಿಸಿದರೆ, ನಾವೂ ಎದೆಯುಬ್ಬಿಸುತ್ತೇವೆ. ಅವರು ಕೊಂದರೆ, ನಾವೂ ಕೊಲ್ಲುತ್ತೇವೆ’ ಎನ್ನುವ ವಾದ ಕೊನೆ ಮುಟ್ಟುವುದಿಲ್ಲ.

ಈ ರೀತಿಯ ತಂತ್ರಗಾರಿಕೆ ಐಎಸ್‌ ಉಗ್ರರಿಗೆ ನೇಮಕಾತಿಯ ಮಾರ್ಗವಾಗಿದೆ. ‘ಸೇಡಿಗೆ ಸೇಡು’ ಪ್ರವೃತ್ತಿಯನ್ನು ನಾವು ಕೂಡ ಅನುಸರಿಸಿರುವುದರಿಂದ ಉಗ್ರರು ನಡೆಸುವ ಸಿದ್ಧಾಂತ ರಹಿತ ಸ್ಥಾನಮಾನ ಸಂಘರ್ಷದ ಅಖಾಡಕ್ಕೆ ನಮ್ಮನ್ನೂ ದೂಡುವಂತೆ ಮಾಡಿದೆ.

ಅವರು ಮಾಡುವ ಅನಾಗರಿಕ ಕ್ರಿಯೆಗೆ ನಾವು ಪ್ರತಿಕ್ರಿಯೆ ನೀಡಬೇಕಿಲ್ಲ. ಇದರಿಂದ ದೂರ ಉಳಿಯುವುದು ಮತ್ತು ನಮ್ಮ ಪ್ರವೃತ್ತಿಗಳಿಗೆ ಕಡಿವಾಣ ಹಾಕುವುದು ಅತ್ಯಂತ ಉತ್ತಮವಾದ ಮಾರ್ಗ. ನಾವು ನಮ್ಮ ಆದ್ಯತೆಗಳ ಬಗ್ಗೆ ಗಮನಹರಿಸಬೇಕು. ಇಸ್ಲಾಮಿಕ್‌ ಸ್ಟೇಟ್‌ನಲ್ಲಿ ಸ್ವಾತಂತ್ರ್ಯ, ಪ್ರಜಾಪ್ರಭುತ್ವ ವ್ಯವಸ್ಥೆ ಸ್ಥಾಪನೆಯಾಗಬೇಕಾದ ಅವಶ್ಯಕತೆ ಇದೆ. ಜಗತ್ತಿನ ರಾಷ್ಟ್ರಗಳು ಆ ನಿಟ್ಟಿನಲ್ಲಿ ಯೋಚಿಸಬೇಕು.

ಆದರೆ, ಉಗ್ರರನ್ನು ಸೋಲಿಸುವುದಕ್ಕಾಗಿ ಇಸ್ಲಾಮಿಕ್‌ ಸ್ಟೇಟ್‌ ಸಂಘಟನೆಯ ವಿರುದ್ಧ ಮಧ್ಯಪ್ರಾಚ್ಯದಲ್ಲಿ ಈಗ ನಡೆಯುತ್ತಿರುವ ಯುದ್ಧವು ನಮ್ಮ ಆದ್ಯತೆಗಳ ಸಾಕಾರಕ್ಕೆ ಅಡ್ಡಿಯಾಗಿದೆ. ನೈತಿಕ ದಾರಿಯನ್ನು ತೊರೆಯದೆ ಜಗತ್ತಿನ ರಾಷ್ಟ್ರಗಳು ತಮ್ಮ ಸಾಮರ್ಥ್ಯದಿಂದ ಇಸ್ಲಾಮಿಕ್‌ ಸ್ಟೇಟ್‌ ಅನ್ನು ನಾಶಪಡಿಸಬೇಕು. ಪ್ರಜಾಪ್ರಭುತ್ವದ ಸಿದ್ಧಾಂತದಲ್ಲಿ ಹೆಚ್ಚಿನ ಜನ ನಂಬಿಕೆ ಕಳೆದುಕೊಂಡಿದ್ದಾರೆ. ಆದರೆ ಆ ಸಿದ್ಧಾಂತವಿಲ್ಲದೇ ಹೋರಾಟ ನಡೆಸಿದರೆ, ಅನಾಗರಿಕವಾದ ಈ ಸಂಘರ್ಷದಲ್ಲಿ ನಾವು ಇನ್ನೊಂದು ಸೇನಾಪಡೆಯಂತೆ ಆಗುತ್ತೇವೆ ಅಷ್ಟೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT