ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯವಹಾರ ಮತ್ತು ಕುಟುಂಬ ನಿರ್ವಹಣೆ

Last Updated 9 ಮೇ 2015, 19:30 IST
ಅಕ್ಷರ ಗಾತ್ರ

ಅಮೆರಿಕದ ಜನತೆ ನಿಜಕ್ಕೂ ಒಂದು ರೀತಿಯಲ್ಲಿ ಮುಜುಗರಕ್ಕೆ ಒಳಗಾಗಿದ್ದಾರೆ. ಕಳೆದ 35 ವರ್ಷಗಳಿಗೂ ಹೆಚ್ಚು ಸಮಯದಿಂದ ರಾಷ್ಟ್ರೀಯ ಚುನಾವಣಾ ಟಿಕೆಟ್‌ನಲ್ಲಿ ಬುಷ್ ಅಥವಾ ಕ್ಲಿಂಟನ್ ಇಲ್ಲದ ಕೇವಲ ಎರಡು ಚುನಾವಣೆಗಳಷ್ಟೇ ನಡೆದಿವೆ. ಮುಂದಿನ ವರ್ಷ ಈ ಎರಡೂ ಹೆಸರುಗಳು ಮತಪತ್ರದ ಮೇಲ್ಭಾಗದಲ್ಲೇ ಕಾಣಿಸಿಕೊಳ್ಳಲಿವೆ. ಇದೊಂದು ಕೆಟ್ಟ ವಿಚಾರ ಎಂದು ಮತದಾರರ ಒಂದು ವರ್ಗ ಹೇಳುತ್ತದೆ. ಹೀಗೆ ಹೇಳುವವರ ಅನುಪಾತದ ಪ್ರಮಾಣ 8:1 ಇದೆ.

ಈ ವಿದ್ಯಮಾನದಿಂದ ಕಂಗೆಟ್ಟ ಕೆಲವರು, ಬದುಕು ಹೇಗೆಲ್ಲ ಇರುತ್ತದೆ ಎಂಬ ಬಗ್ಗೆ ತಪ್ಪು ಕಲ್ಪನೆ ಹೊಂದಿದ್ದಾರೆ. ಸಮಾಜ ವ್ಯಕ್ತಿಗಳಿಂದ ನಿರ್ಮಾಣವಾಗಿದೆ ಎಂಬ ಕಾಲ್ಪನಿಕ ಭಾವನೆಯನ್ನು ಹಲವಾರು ಮಂದಿ ಒಪ್ಪಿಕೊಳ್ಳುತ್ತಾರೆ. ಈ ದೃಷ್ಟಿಕೋನದಂತೆ, ನ್ಯಾಯೋಚಿತ ಸ್ಪರ್ಧೆ ಇರುವುದು ಕುಟುಂಬ ವ್ಯವಸ್ಥೆಯಿಂದ ಹೊರತಾದ ವ್ಯಕ್ತಿಗಳ ನಡುವೆ ಮಾತ್ರ. ಆದರೆ ಯಾವುದೇ ಸಮಾಜ ಈ ರೀತಿಯಲ್ಲಿ ಇಲ್ಲ. ವ್ಯಕ್ತಿಗಳು ತಾವಾಗಿಯೇ ಸುಸಜ್ಜಿತವಾಗಿ ಮೇಲಕ್ಕೆದ್ದು ಬರುವು ದಿಲ್ಲ. ಅವರು ತಮ್ಮ ಕುಟುಂಬದಿಂದ ಮತ್ತು ಗುಂಪಿನಿಂದಲೇ ಮೇಲೆದ್ದು ಬಂದವರು. ಕುಟುಂಬ ಮತ್ತು ಗುಂಪು ಎಂಬುದು ಅತ್ಯಗತ್ಯ ಸಾಮಾಜಿಕ ಘಟಕ. ಇಂತಹ ಒಗ್ಗೂಡಿದ ವ್ಯವಸ್ಥೆಗಳೇ ಸಾರ್ವಜನಿಕ ಜೀವನವನ್ನು ರೂಪಿಸಿರುತ್ತವೆ.

ಕೆಲವು ಸಮೀಕ್ಷೆಗಳ ಪ್ರಕಾರ, ಜಗತ್ತಿನಲ್ಲಿರುವಶೇ 90ರಷ್ಟು ವ್ಯವಹಾರಗಳನ್ನು ಕುಟುಂಬಗಳು ನಿರ್ವಹಿಸುತ್ತಿವೆ. ಅಮೆರಿಕದ ಕುಟುಂಬ ನಿರ್ವಹಣೆಯ ವ್ಯವಹಾರಗಳು ಕುಟುಂಬೇತರ ವ್ಯವಸ್ಥೆಯಿಂದ ನಡೆಯುವ ವಹಿವಾಟುಗಳಿಗಿಂತ ಉತ್ತಮವಾಗಿ ನಡೆಯುತ್ತಿವೆ, ಅದರಲ್ಲೂ ಸಂಸ್ಥಾಪಕರು ಜೀವಂತವಾಗಿ ಇರುವಾಗಲಂತೂ ಈ ಯಶಸ್ಸಿನ ಪ್ರಮಾಣ ಅಧಿಕ ಎಂದು ಈ ನಿಟ್ಟಿನಲ್ಲಿ ನಡೆದ ಸಂಶೋಧನೆಗಳು ಹೇಳುತ್ತವೆ.

ರಾಜಕೀಯ ಸಹ ಸದಾ ಒಂದು ರಾಜವಂಶೀಯ ವ್ಯವಸ್ಥೆ. ಹಿಲರಿ ಕ್ಲಿಂಟನ್ ಅವರು ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದದ್ದೇ ಆದರೆ, 45 ಅಧ್ಯಕ್ಷರ ಪೈಕಿ 10 ಅಧ್ಯಕ್ಷರ ಕೌಟುಂಬಿಕ ಹಿನ್ನೆಲೆ ಹೊಂದಿದ ಮಂದಿಯೇ ಶ್ವೇತಭವನ ಪ್ರವೇಶಿಸಿದಂತೆ ಆಗುತ್ತದೆ. ‘ದಿ ಟೈಮ್ಸ್‌’ನಲ್ಲಿರುವ ನನ್ನ ಸಹೋದ್ಯೋಗಿಗಳ ಪ್ರಕಾರ, ಒಟ್ಟಾರೆ ವ್ಯವಸ್ಥೆಯಲ್ಲಿ ಅಮೆರಿಕದ ಒಬ್ಬ ಸಾಮಾನ್ಯ ಪುರುಷನಿಗಿಂತ ಸೆನೆಟರ್ ಒಬ್ಬರ ಪುತ್ರ ಸೆನೆಟರ್ ಆಗುವ ಸಾಧ್ಯತೆ 8,500 ಪಟ್ಟು ಅಧಿಕ ಇರುತ್ತದಂತೆ!

ಅಮೆರಿಕದ ರಾಜ್ಯಗಳ ಮಟ್ಟದಲ್ಲೂ ಇದು ಸತ್ಯ ಎಂದೇ ಕಾಣಿಸುತ್ತದೆ. ನ್ಯೂಯಾರ್ಕ್‌ನಲ್ಲಿ ಕ್ಯುಮೋಸ್‌ಗಳಿದ್ದರೆ, ಕ್ಯಾಲಿಫೋರ್ನಿಯಾದಲ್ಲಿ ಬ್ರೌನ್‌ಗಳಿದ್ದಾರೆ. ನಿರಂತರವಾದ ಅನುಭೋಗ ಸ್ವಾಮ್ಯತೆಯನ್ನು ಪಡೆದಿರುವವರಲ್ಲಿ ಯಾರು ತಮಗೆ ಹೆಚ್ಚು ಹತ್ತಿರದವರು ಎಂದು ಗುರುತಿಸಿ ಅವರಿಗೆ ಮತ ಹಾಕುವುದಷ್ಟೇ ಮತದಾರರ ಕೆಲಸ ಎಂಬ ತಮಾಷೆಯೂ ಪ್ರಚಲಿತದಲ್ಲಿದೆ.

ಜಗತ್ತಿನೆಲ್ಲೆಡೆಗೆ ಒಮ್ಮೆ ದೃಷ್ಟಿ ಹಾಯಿಸಿದರೂ, ಒಂದು ರೀತಿಯ ರಾಜತ್ವದ ಛಾಯೆಯುಳ್ಳ ಧೋರಣೆಗಳೇ ಹೆಚ್ಚು ಕಾಣಿಸುತ್ತವೆ ಹೊರತು, ಅದು ಇಳಿಕೆಯಾಗುವ ಲಕ್ಷಣ  ಕಾಣಿಸುವುದಿಲ್ಲ. ಫಿಲಿಪ್ಪೀನ್ಸ್‌ನಲ್ಲಿ ಅಕ್ವಿನೋಗಳು ಇರ ಬಹುದು, ಭಾರತದಲ್ಲಿ ನೆಹರು–ಗಾಂಧಿಗಳು ಇರಬಹುದು, ಫ್ರಾನ್ಸ್‌ನಲ್ಲಿ ಲೆ ಪೆನ್‌ಗಳು ಇರಬಹುದು. ಇಂದು ಮಹಿಳೆಯರು ಹೆಚ್ಚು ಸಬಲರಾಗಿದ್ದಾರೆ. ಪ್ರಭಾವಿ ಕುಲದವರು ತಮ್ಮ ಪ್ರತಿಭಾ ಸಂಪನ್ನತೆಯನ್ನು ದ್ವಿಗುಣ ಗೊಳಿಸಿಕೊಂಡಿದ್ದಾರೆ. ಹೀಗಾಗಿ ಕೌಟುಂಬಿಕ ಪ್ರಭಾವವೂ ಹೆಚ್ಚಿದೆ. ರಾಜವಂಶಸ್ಥ ಕುಟುಂಬಗಳ ಸದಸ್ಯರು ಇಂತಹ ಸಾಧನೆ ಮಾಡುವುದಾದರೂ ಹೇಗೆ? ಕೆಲವೊಂದು ಕಾರಣಗಳು ಸಹಜ ಮತ್ತು ಕೆಲವು ಕಾರಣಗಳು ಅನ್ಯಾಯ ಎಂಬಂತೆ  ಕಾಣಬಹುದು. ಬ್ರ್ಯಾಂಡ್ ಹೆಸರು ಮತ್ತು ದೇಣಿಗೆ ಹಣ ಸಂಗ್ರಹಿಸುವ ಜಾಲಗಳನ್ನು ಇಲ್ಲಿ ಮುಖ್ಯವಾಗಿ ಗುರುತಿಸಬೇಕು. ಜೆಬ್ ಬುಷ್ ಮತ್ತು ಹಿಲರಿ ಕ್ಲಿಂಟನ್ ಅವರಿಗೆ ಅವರ ಕೌಟುಂಬಿಕ ಸದಸ್ಯರ ಹೆಸರಿನಿಂದಲೇ ಲಾಭ ದೊರೆಯುತ್ತದೆ. ಅವರ ದೇಣಿಗೆದಾರರ ಜಾಲ ಈಗಾಗಲೇ ಅಸ್ತಿತ್ವದಲ್ಲಿದೆ. ಆದರೆ ಇಂತಹ ಅವಕಾಶಗಳು ಅವರನ್ನು ಉತ್ತಮ ಅಧ್ಯಕ್ಷರನ್ನಾಗಿ ಮಾಡಬೇಕೆಂದೇನೂ ಇಲ್ಲ.
ಆದರೆ ಇನ್ನೊಂದು ದೃಷ್ಟಿಯಿಂದ ನೋಡಿದಾಗ, ಪ್ರತಿ ಕ್ಷೇತ್ರದಲ್ಲೂ ಕೆಲವು ಕುಟುಂಬಗಳು ಮಹಾನ್‌ ಸಾಧನೆಗೆ ಫಲವತ್ತಾದ ನೆಲದಂತೆ ಕೆಲಸ ಮಾಡಿರುವುದು ಗೊತ್ತಾಗು ತ್ತದೆ. ಸಂಗೀತದಲ್ಲಿ ಬಾಚ್‌ ಕುಟುಂಬ, ಬೇಸ್‌ಬಾಲ್‌ನಲ್ಲಿ ಗ್ರಿಫೀಸ್‌ ಮತ್ತು ಮೊಲಿನಾಸ್‌ ಕುಟುಂಬ, ಕಾದಂಬರಿ ರಚನೆಯಲ್ಲಿ ಬ್ರಾಂಟೆಸ್‌ ಮತ್ತು ಅಮಿಸೆಸ್‌ ಕುಟುಂಬ, ರಾಜಕೀಯದಲ್ಲಿ ಕೆನಡಿ, ರೂಸ್‌ವೆಲ್ಟ್‌, ಕ್ಲಿಂಟನ್‌, ಬುಷ್‌ ಕುಟುಂಬಗಳನ್ನು ವಿಶೇಷವಾಗಿ ಇಲ್ಲಿ ಉಲ್ಲೇಖಿಸಬೇಕು. ಈ ಕುಟುಂಬಗಳು ಇತರರಿಗೆ ಒಂದು ರೀತಿಯ ಅನ್ಯಾಯವನ್ನು ಮಾಡಿವೆ (ಯಾಕೆಂದರೆ ಅವರ ವಿರುದ್ಧ ಸ್ಪರ್ಧಿಸುವುದು ಕಷ್ಟ), ಆದರೂ ಸಮಗ್ರ ದೃಷ್ಟಿಕೋನದಿಂದ ನೋಡಿದರೆ ಅವರು ಸಮಾಜವನ್ನು ಹೆಚ್ಚು ಶ್ರೀಮಂತಗೊಳಿಸಿದ್ದಾರೆ.

ಅಧಿಕಾರ ಕೇಂದ್ರಸ್ಥಾನ ಹೊಂದಿದ ಕುಟುಂಬಗಳು ತಮ್ಮ ಸಾಧನೆಗಳನ್ನು ಹಲವಾರು ಬಗೆಯಲ್ಲಿ ಪೋಷಿಸುತ್ತವೆ. ಮೊದಲಾಗಿ ಅಲ್ಲೊಂದು ಗುರುತಿಸಿಕೊಳ್ಳುವಿಕೆಯ ಚೌಕಟ್ಟು ರಚನೆಯಾಗಿರುತ್ತದೆ. ನೀವು ಸಂಗೀತಗಾರರ ಕುಟುಂಬದಲ್ಲಿ ಹುಟ್ಟಿ ಬೆಳೆದವರಾಗಿದ್ದರೆ, ಎಳೆಯ ಪ್ರಾಯದಲ್ಲೇ ಸಂಗೀತಗಾರನಾಗುವ ನಿಟ್ಟಿನಲ್ಲಿ ನಿಮ್ಮನ್ನು ಹೆಚ್ಚು ತೊಡಗಿಸಿಕೊಳ್ಳುತ್ತೀರಿ. ಸಣ್ಣ ಪ್ರಾಯದಲ್ಲೇ 10 ಸಾವಿರ ಗಂಟೆಗಳನ್ನು ಅಭ್ಯಾಸಕ್ಕಾಗಿ ವಿನಿಯೋಗಿಸುತ್ತೀರಿ. ಇದು ಬಹಳ ದೊಡ್ಡ ಕೊಡುಗೆಯಾಗಿಬಿಡುತ್ತದೆ.

ಎರಡನೆಯದಾಗಿ, ಪ್ರಾಯೋಗಿಕ ಜ್ಞಾನದ ದೊಡ್ಡ ಭಂಡಾರವೇ ಇರುತ್ತದೆ. ತರಗತಿಗಳಲ್ಲಿ ಪುಸ್ತಕ ಓದಿ ತಿಳಿಯುವುದಕ್ಕಿಂತ ಅದೆಷ್ಟೋ ಹೆಚ್ಚು ಜ್ಞಾನವನ್ನು ತಮ್ಮ ಕುಟುಂಬದವರನ್ನು ನೋಡಿ ತಿಳಿದುಕೊಳ್ಳಬಹುದು. ನೀವು ನ್ಯಾನ್ಸಿ ಕಸ್ಸೆಬಾಂ ಎಂದಿಟ್ಟುಕೊಳ್ಳೋಣ. ನಿಮ್ಮ ತಂದೆ ಆಲ್ಫ್‌ ಲಂಡನ್‌ ಅವರ ಸುತ್ತಲೇ ಆಡಿ, ಬೆಳೆದಿರುತ್ತೀರಿ. ಆಲ್ಫ್‌ ಲಂಡನ್‌ ಸಭೆ ಮಾಡುವ ಬಗೆ, ಕೊಠಡಿಯಲ್ಲಿ ಕುಳಿತು ಕೆಲಸ ಮಾಡುವ ಪರಿ, ವಿಜಯ ಅಥವಾ ಸೋಲಿಗೆ ಪ್ರತಿಕ್ರಿಯಿಸುವ ಬಗೆಗಳನ್ನೆಲ್ಲ ಆಗಾಗ ಹತ್ತಿರದಿಂದ ನೋಡುತ್ತಲೇ ರಾಜ ಕೀಯ ತಂತ್ರಗಾರಿಕೆಯೆಲ್ಲ ನಿಮ್ಮ ರಕ್ತಗತವಾಗಿಬಿಟ್ಟಿರುತ್ತದೆ.

ಮೂರನೆಯದಾಗಿ, ಕೌಶಲದ ಮಟ್ಟ. ಒಂದು ವೃತ್ತಿಯನ್ನು ರೂಪಿಸಿಕೊಳ್ಳುವುದಕ್ಕೆ ಮೂರು ತಲೆಮಾರು ಗಳಷ್ಟು ಸಮಯ ಹಿಡಿಯುತ್ತದೆ ಎಂದು ತತ್ವಜ್ಞಾನಿ ಮೈಕೆಲ್‌ ಒಕೆಶಾಟ್‌ ಒಮ್ಮೆ ಹೇಳಿದ್ದರು. ಅಂದರೆ ಒಂದು ವೃತ್ತಿಯಲ್ಲಿ ಪ್ರಾವೀಣ್ಯ ಗಳಿಸಿಕೊಳ್ಳಲು ಅಪಾರ ಸಮಯ ಬೇಕಾಗುತ್ತದೆ. ಉದಾಹರಣೆಗೆ ಶಿಕ್ಷಕ ವೃತ್ತಿ. ಒಬ್ಬ ಶಿಕ್ಷಕನ ಕುಟುಂಬದ ಮೊಮ್ಮಕ್ಕಳೋ, ಮರಿ ಮಕ್ಕಳೋ ಆ ಕ್ಷೇತ್ರದಲ್ಲಿ ಅತ್ಯುತ್ತಮ ಶಿಕ್ಷಕರಾಗಿ ಹೊರಹೊಮ್ಮುತ್ತಾರೆ, ಕಾರಣ ಅವರ ವೃತ್ತಿ ಜೀವನವನ್ನು ರೂಪಿಸುವಲ್ಲಿ ಅವರ ತಾತ, ಮುತ್ತಾತಂದಿರು ಪ್ರಭಾವ ಬೀರಿರುತ್ತಾರೆ.

ನಾಲ್ಕನೆಯದಾಗಿ ಎದೆಗಾರಿಕೆ. ನೀವು ಅಮೆರಿಕದ ಅಧ್ಯಕ್ಷರಾಗಬೇಕು ಎಂದು ಭಾವಿಸುವುದು ತೀರಾ ಅತಿರೇಕವಾಗಿ ಕಾಣಿಸುತ್ತದೆ. ಆದರೆ ನೀವು ಕೆನಡಿ ಅಥವಾ ಬುಷ್‌ ಅವರ ಕುಟುಂಬಗಳಲ್ಲಿ ಬೆಳೆದಿದ್ದೇ ಆದರೆ ಅದು ಅಂತಹ ವಿಶೇಷ ದುರಾಲೋಚನೆಯಾಗಿ ಕಾಣಿಸುವುದಿಲ್ಲ.

ಐದನೆಯದಾಗಿ ಸಮಯದ ಪರಿಧಿ. ಕೌಟುಂಬಿಕ ವ್ಯವಹಾರವು ಕೌಟುಂಬಿಕೇತರ ವ್ಯವಹಾರಕ್ಕಿಂತ ಉತ್ತಮ ವಾಗಿ ಕೆಲಸ ಮಾಡುವುದಕ್ಕೆ ಹಲವಾರು ಕಾರಣಗಳು ಇರುತ್ತವೆ. ಹಿರಿಯ ನಾಗರಿಕರು ಇಂತಹ ಕೌಟುಂಬಿಕ ವ್ಯವಹಾರಗಳ ಜತೆಗೆ ನಂಬಿಕೆ, ವಿಶ್ವಾಸದಂತಹ ಭಾವವನ್ನು ಹೊಂದಿರುತ್ತಾರೆ. ಮೇಲಾಗಿ ಕುಟುಂಬಗಳು ದೀರ್ಘ ಸಮಯದಿಂದ ವ್ಯವಹಾರ ನಡೆಸುತ್ತಾ ಇರುತ್ತವೆ. ಇನ್ನೂ ಹುಟ್ಟದೇ ಇರುವ ಅವರ ಕುಟುಂಬದ ತಲೆಮಾರಿಗೂ ಈ ಕುಟುಂಬದ ವ್ಯವಹಾರದ ಪ್ರಭಾವ, ಯಶೋಗಾಥೆ ಮುಂದುವರಿಯುತ್ತದೆ.

ಇಂದು (ಮೇ 10) ತಾಯಂದಿರ ದಿನ. ತಾಯಂದಿರು ತಮ್ಮ ಮಕ್ಕಳನ್ನು ಶಕ್ತಿಶಾಲಿ ವಿಧಾನದಲ್ಲಿ ರೂಪಿಸಿದ ಬಗೆಯನ್ನು ಕಂಡು ನಾವೆಲ್ಲ ಸಂಭ್ರಮಿಸುವ ಸಂದರ್ಭ ಇದು. ಎಲ್ಲ ಕುಟುಂಬಗಳೂ ಒಂದೇ ಸಮನಾಗಿ ಇರುವುದಿಲ್ಲ. ಕೆಲವು ಕುಟುಂಬಗಳಲ್ಲಿ ತಾಯಂದಿರು, ಇನ್ನು ಕೆಲವು ಕುಟುಂಬಗಳಲ್ಲಿ ಅಪ್ಪಂದಿರು, ಗಂಡಂದಿರು, ಹೆಂಡತಿಯರು ತಮ್ಮ ವಂಶದ ಕುಡಿಗಳನ್ನು ಅತ್ಯಂತ ಶಕ್ತಿಶಾಲಿಯಾಗಿ ಮತ್ತು ನಿರ್ದಿಷ್ಟ ಗುರಿಯೆಡೆಗೆ ಸಾಗುವ ರೀತಿಯಲ್ಲಿ ರೂಪಿಸಿರುತ್ತಾರೆ.

ಪರಂಪರೆಯನ್ನು ಒಪ್ಪಿಕೊಳ್ಳುವಂತಹ ನ್ಯಾಯಸಮ್ಮತ ವಲ್ಲದ ಅವಕಾಶವನ್ನು ನಾವು ವಿರೋಧಿಸಬೇಕು, ಆದರೆ ಕೌಟುಂಬಿಕ ಪ್ರಭಾವ ಹೊಂದಿಲ್ಲದೇ ಇರುವ ಸಮಾಜದಲ್ಲಿ ಬದುಕಬೇಕು ಎಂದು ನಾವು ಬಯಸಲಾರೆವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT