ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಂಸ್ಕೃತಿಕ ದಾಳಿಯ ಭೀತಿಯಲ್ಲಿ ಟಿಂಬಕ್ಟು

ಅಕ್ಷರ ಗಾತ್ರ

ಎಟು ಪ್ರಾಂತ್ರ್ಯಗಳನ್ನು ಒಳಗೊಂಡ ಪಶ್ಚಿಮ ಆಫ್ರಿಕಾದ ಪುಟ್ಟರಾಷ್ಟ್ರ `ಮಾಲಿ'ಯ ರಾಜಧಾನಿ ಟಿಂಬಕ್ಟು ಇತಿಹಾಸ ಪ್ರಸಿದ್ಧ ಸ್ಥಳ. ಹಿಂದೊಮ್ಮೆ ಆಫ್ರಿಕಾ ಖಂಡದಲ್ಲಿ ಮುಸ್ಲಿಂ ಧರ್ಮದ ಪ್ರಸರಣಕ್ಕೆ ಈ ನಗರ ಒಂದು ರೀತಿಯಲ್ಲಿ ಬೌದ್ಧಿಕ ಮತ್ತು ಸಾಂಸ್ಕೃತಿಕ ಮೇರುಭೂಮಿ ಎನಿಸಿತ್ತು. ಇಲ್ಲಿರುವ ಮಸೀದಿಗಳು ಇವತ್ತಿಗೂ ಸಾಂಘೈ ಚಕ್ರವರ್ತಿಗಳ ಸುವರ್ಣ ಯುಗದ ಪ್ರತೀಕವಾಗಿ ಕಂಗೊಳಿಸುತ್ತಿವೆ. ಕೇವಲ ಹೊರನೋಟಕ್ಕಷ್ಟೇ ಅಲ್ಲ ಒಳಗೂ ಅಂತಹುದೇ ಐಶ್ವರ್ಯ ಹೊಂದಿವೆ.

ಈ ಐಶ್ವರ್ಯ ಎಂದರೆ ಇಲ್ಲಿರುವ ಪ್ರಾಚೀನ ದಾಖಲೆಗಳು. ನಗರದ ಅನೇಕ ಮನೆಗಳು, ಮಸೀದಿ, ಗ್ರಂಥಾಲಯ ಹಾಗೂ ವಿವಿಧೆಡೆಗಳಲ್ಲಿ ಸರಿಸುಮಾರು 7 ಲಕ್ಷಕ್ಕೂ ಹೆಚ್ಚು ಹಸ್ತಪ್ರತಿಗಳು ಇರುವ ಅಂದಾಜಿದೆ. ಪುರಾತನ ಪ್ರಾಮುಖ್ಯತೆಯನ್ನು ಹಸ್ತಪ್ರತಿಗಳ ರೂಪದಲ್ಲಿ ಜೋಪಾನ ಮಾಡಿಟ್ಟುಕೊಂಡಿರುವುದು ಟಿಂಬಕ್ಟುವಿನ ಹೆಗ್ಗಳಿಕೆ. ಆದರೆ ಇತ್ತೀಚೆಗೆ ತಾವೊರೆಗ್ ರಾಷ್ಟ್ರೀಯ ಬಂಡುಕೋರರು ಇಲ್ಲಿನ ಹಸ್ತಪ್ರತಿ ಹಾಗೂ ಸ್ಮಾರಕಗಳ ಉಳಿವಿಗೆ ಗಂಡಾಂತರ ತಂದೊಡ್ಡಿದ್ದಾರೆ.

ಅಸಂಖ್ಯ ಮುಸ್ಲಿಂ ರಾಜರ ದರ್ಬಾರು, ಫ್ರೆಂಚರ ಆಡಳಿತ ಮತ್ತು ತೀರಾ ಇತ್ತೀಚಿನ ನಾಗರಿಕ ಸಮರಗಳಲ್ಲಿ ನಲುಗಿ ಹೋಗಿರುವ ಟಿಂಬಕ್ಟುವಿನಲ್ಲಿ ಈಗ ಮನುಷ್ಯ ಜೀವನದ ಎಲ್ಲ ಪ್ರೀತಿಗಳೂ ಸತ್ತೇ ಹೋಗಿವೆ ಎನಿಸುತ್ತಿದೆ. ಯಾರೊಬ್ಬರೂ ಸಂಗೀತವನ್ನೇ ಕೇಳಬಾರದು, ನರ್ತಿಸಬಾರದು ಎಂಬಂತಹ ಬಂಡುಕೋರರ ನಿಷೇಧಾಜ್ಞೆಗಳು ಜನಸಾಮಾನ್ಯರ ಬದುಕಿನ ಸವಿಯನ್ನೇ ಕಸಿದುಕೊಂಡಿವೆ. ಇಲ್ಲಿ ಬಾಳಿ ಬದುಕಿ ಹೋದ ಸೂಫಿಗಳ ಸಂದೇಶ ಮತ್ತು ಅವರ ಬಗೆಗಿನ ಎಲ್ಲ ದಾಖಲೆಗಳನ್ನು ನಾಶಪಡಿಸುವ ಹೇಯ ಕೃತ್ಯಕ್ಕೆ ಬಂಡುಕೋರರು ಬಂದೂಕು ಎದೆಗೇರಿಸಿ ನಿಂತ್ದ್ದಿದಾರೆ. ಟಿಂಬಕ್ಟು ನಗರದ ಮೇಲೆ ಬಿಟ್ಟೂ ಬಿಟ್ಟು ನಡೆಯುತ್ತಿರುವ ಸಾಂಸ್ಕೃತಿಕ ಭಯೋತ್ಪಾದನೆ ಜಾಗತಿಕ ಚಿಂತೆಯಾಗಿ ಪರಿಣಮಿಸಿದೆ.

ಟಿಂಬಕ್ಟು ಎಂಬ ಹಿಡಿಗಾತ್ರದ ನಗರ ನೈಗರ್ ನದಿಯ ದಡದಲ್ಲಿದೆ. 12ನೇ ಶತಮಾನದಿಂದಲೂ ಅದ್ಭುತ ಇತಿಹಾಸ ಹೊಂದಿರುವ ಈ ನಗರ ದಕ್ಷಿಣದ ತುದಿಯಲ್ಲಿರುವ ಸಹರಾ ಮರುಭೂಮಿಗೆ ಆತುಕೊಂಡಂತೆ ಇದೆ. ಇಲ್ಲಿನ ಜನಸಂಖ್ಯೆ ಅಬ್ಬಬ್ಬಾ ಎಂದರೆ 50 ಸಾವಿರದಷ್ಟಾದೀತು.

ಟಿಂಬಕ್ಟು ನಗರವನ್ನು ಸಂತರ ನಾಡು ಎಂದೇ ಕರೆಯಲಾಗುತ್ತದೆ. ಒಂದು ಕಾಲಕ್ಕೆ ಇಲ್ಲಿ 333 ಸಂತರಿದ್ದರೆಂಬ ಐತಿಹ್ಯವಿದೆ. ಈ ಸಂತರೆಲ್ಲಾ ಸೂಫಿ  ಪಂಥದ ಆರಾಧಕರಾಗಿದ್ದರು ಮತ್ತು ಸೂಫಿ ತತ್ವಗಳ ಬೋಧಕರಾಗಿದ್ದರು. ಈ ನೆಲದಲ್ಲಿ ಬಾಳಿ ಬದುಕಿದ್ದ ಸಂತರನ್ನು ಇಲ್ಲಿನ ಶಾಲೆಗಳಲ್ಲಿ ಈಗಲೂ ಪೂಜಿಸಲಾಗುತ್ತದೆ. ಇಂತಹ ಪೂಜ್ಯರ ಇರುವಿಕೆಯನ್ನು ಸಾರುವ ಸ್ಮಾರಕಗಳು, ಮಸೀದಿಗಳು ಈಗ ಬಂಡುಕೋರರ ಕೆಂಗಣ್ಣಿಗೆ ಗುರಿಯಾಗಿವೆ.

ಈಗೊಂದು ವಾರದ ಹಿಂದೆ ಇಂತಹುದೊಂದು ಸಾಂಸ್ಕೃತಿಕ ಭಯೋತ್ಪಾದನೆ ಟಿಂಬಕ್ಟುವಿನಲ್ಲಿ ಮತ್ತೆ ಕೇಕೆ ಹಾಕಿ ಜಗತ್ತಿನ ಗಮನ ಸೆಳೆದಿದೆ. ಇಲ್ಲಿನ ಅಹಮದ್ ಬಾಬಾ ಸಂಸ್ಥೆಯ ಅಧೀನದಲ್ಲಿರುವ ನಗರದ ಬಹುದೊಡ್ಡ ಪ್ರಮುಖ ಗ್ರಂಥಾಲಯದ ಮೇಲೆ ಬಂಡುಕೋರರು ದಾಳಿ ನಡೆಸಿ ಹೋಗಿದ್ದಾರೆ.

ಅಹಮದ್ ಬಾಬಾ ಸಂಸ್ಥೆಯಲ್ಲಿ ಶತಮಾನಗಳ ಹಿಂದಿನ ಟಿಂಬಕ್ಟುವಿನ ಇತಿಹಾಸದ ಹಸ್ತಪ್ರತಿಗಳನ್ನು ಸಂರಕ್ಷಿಸಿ ಇಡಲಾಗಿದೆ. ಈ ಸಂಸ್ಥೆಯನ್ನು ಕಟ್ಟಲು ದಕ್ಷಿಣ ಆಫ್ರಿಕಾ, ಫ್ರಾನ್ಸ್ ಹಾಗೂ ಫೋರ್ಡ್ ಫೌಂಡೇಶನ್‌ನವರು ಅಪಾರ ಶ್ರಮಪಟ್ಟಿದ್ದಾರೆ. ಇದಕ್ಕಾಗಿ ಲಕ್ಷಾಂತರ ರೂಪಾಯಿಗಳನ್ನು ವೆಚ್ಚ ಮಾಡಲಾಗಿದೆ. ಇದರ ಮೇಲೆ ತಾವೊರೆಗ್ ರಾಷ್ಟ್ರೀಯ ಬಂಡುಕೋರರು ಕಳೆದ ವರ್ಷ ಏಪ್ರಿಲ್‌ನ್ಲ್ಲಲೇ ಮೊದಲ ದಾಳಿ ನಡೆಸಿದ್ದರು. ಇಲ್ಲಿರುವ ಪ್ರಾಚೀನ ಹಸ್ತಪ್ರತಿ ಮತ್ತು ನಗರದ ವಿವಿಧೆಡೆಯ ಸ್ಮಾರಕಗಳನ್ನು ನಾಶಪಡಿಸಲು ಯತ್ನಿಸಿದ್ದರು. ಅನೇಕ ಸರ್ಕಾರಿ ಕಟ್ಟಡಗಳನ್ನು ಧ್ವಂಸಗೊಳಿಸಿದ್ದರು. ತಮಗೆ ಬೇಕೆಂದದ್ದನ್ನೆಲ್ಲಾ ಲೂಟಿ ಮಾಡಿ ಹೋಗಿದ್ದರು.`ನಮ್ಮ ಸಂಸ್ಥೆಯ ಮೇಲೆ ಅವರ ವಕ್ರದೃಷ್ಟಿ ನೆಟ್ಟುಬಿಟ್ಟಿದೆ. ಇಲ್ಲಿನ ಹಸ್ತಪತ್ರಿಗಳೆಲ್ಲಾ ಈಗ ಅಪಾಯದ ಸುಳಿಗೆ ಸಿಲುಕಿವೆ' ಎನ್ನುವ ವೇದನೆ ಅಹಮದ್ ಬಾಬಾ ಸಂಸ್ಥೆಯ ನಿರ್ದೇಶಕ ಅಬ್ದುಲಾಯೆ ಸಿಸೆ ಅವರದ್ದು.

`ಆವತ್ತು ದಾಳಿ ಮಾಡಿದ ಉಗ್ರರು ಗ್ರಂಥಾಲಯಕ್ಕೆ ಬೆಂಕಿ ಹಚ್ಚಿ ಹೋಗ್ದ್ದಿದರು. ಅದೃಷ್ಟವಶಾತ್ ಶೇಕಡ 5ರಷ್ಟು ಭಾಗ ಮಾತ್ರವೇ ಸುಟ್ಟು ಹೋಗಿತ್ತು. ಭಗವಂತ ದೊಡ್ಡವನು. ಎಲ್ಲ ದಾಖಲೆಗಳೂ ಸುರಕ್ಷಿತವಾಗಿವೆ. ಏನಾದರಾಗಲಿ ಸದ್ಯದಲ್ಲೇ ನಾವು ಸಂಸ್ಥೆಯಲ್ಲಿರುವ ದಾಖಲೆಗಳನ್ನು ಮೊಪ್ತಿ ನಗರಕ್ಕೆ ಕೊಂಡೊಯ್ದು ಅಲ್ಲಿಂದ ಬಮಾಕೊ ನಗರಕ್ಕೆ ಸಾಗಿಸಿಬಿಡುತ್ತೇವೆ' ಎಂದು ನಿಟ್ಟುಸಿರು ಬಿಡುತ್ತಾರೆ ಸಿಸೆ. `ದಾಳಿ ನಡೆಸಿ ಹೋದವರು ಮತ್ತೊಮ್ಮೆ ಬಂದಾಗ ನಾವು ಅವರಿಗೆ ಈ ಸಂಸ್ಥೆಯ ಮಹತ್ವವನ್ನು ತಿಳಿಸಿ ಹೇಳಿದ್ದೆವು. ಆದರೆ ಯಾವುದೇ ಪ್ರಯೋಜನವಾಗಿಲ್ಲ.

ಈ ದಾಳಿಗಳನ್ನು ಗಮನಿಸಿದ ಕೆಲವು ಮುಸ್ಲಿಂ ನಾಯಕರು ರಕ್ಷಣೆಯ ಭರವಸೆ ನೀಡಿದ್ದರು. ಆದರೆ ಸಂಸ್ಥೆಗೆ ಅಮೆರಿಕದಿಂದ ಹಣ ಬರುತ್ತಿದೆ ಎಂಬ ಕಾರಣಕ್ಕೆ ಅವರು ಯಾರೂ ಇತ್ತ ಕಾಳಜಿ ತೋರುತ್ತಿಲ್ಲ' ಎಂಬುದು ಸಿಸೆ ಅವರ ವ್ಯಥೆಯ ನುಡಿ.
ಈ ನಗರದಲ್ಲಿನ 14ನೇ ಶತಮಾನದಷ್ಟು ಪುರಾತನವಾದ ಮಸೀದಿಯ ನಿರ್ವಾಹಕ ಬೆನ್ ಎಸೆಯೌತಿ ಅವರಿಗೆ ನಗರದ ಒಡಲಲ್ಲಿನ ಸಂಪತ್ತಿನ ಬಗ್ಗೆ ಅಪಾರ ಅಭಿಮಾನ. `ಪ್ರಾಚೀನ ಕಾಲದ ಹಸ್ತಪ್ರತಿಗಳನ್ನು ನಕಲು ಮಾಡುವ ದೊಡ್ಡ ಕೌಶಲಯುಕ್ತ ಲೇಖಕರ ಸಮೂಹವೇ ಈ ನಗರದಲ್ಲಿದೆ. ಇಲ್ಲಿ ಜತನವಾಗಿ ಇಟ್ಟಿರುವ ಹಸ್ತಪತ್ರಿಗಳಲ್ಲಿ ಅನನ್ಯ ಜ್ಞಾನದ ಖಜಾನೆಯೇ ಅಡಗಿದೆ.

ಮುಸ್ಲಿಂ ತತ್ವಶಾಸ್ತ್ರ, ಕಾನೂನು, ವೈದ್ಯಕೀಯ, ಸಸ್ಯಶಾಸ್ತ್ರ ಮತ್ತು ಜ್ಯೋತಿಷ ಶಾಸ್ತ್ರಗಳಂತಹ ಅನೇಕ ಜ್ಞಾನ ದೀವಟಿಗೆಗಳು, ವಿಸ್ಮಯಗಳು ಈ ಹಸ್ತಪ್ರತಿಗಳಲ್ಲಿ ಕಣ್ಮುಚ್ಚಿ ಕುಳಿತಿವೆ. ಇದು ಶತಮಾನದ ಹಿಂದಿನ ಬೌದ್ಧಿಕ ಸಂಪತ್ತು. ಸೂರ್ಯನ ಅಡಿಯಲ್ಲಿ ಇರಬಹುದಾದ ಎಲ್ಲ ವಿಧದ ಜ್ಞಾನಕೋಶಗಳೂ ಈ ಹಸ್ತಪ್ರತಿಗಳಲ್ಲಿ ಅಡಕವಾಗಿವೆ'ಎಂದು ಅವರು ಬೀಗುತ್ತಾರೆ.

`ಟಿಂಬಕ್ಟು ನಗರದ ಶತಮಾನಗಳ ಈ ಪುರಾತನ ಸಂಪತ್ತಿಗೆ ಈಗ ನಿಜವಾಗಿಯೂ ದುರ್ದೆಸೆ ಆರಂಭವಾಗಿದೆ. ನಿರ್ದಯಿಗಳ ಕಾಕದೃಷ್ಟಿಯಿಂದ ಇವನ್ನು ರಕ್ಷಿಸುವುದೇ ನಮ್ಮ ಪಾಲಿನ ನಿತ್ಯದ ಕೆಲಸವಾಗಿದೆ. ಸಾಂಘೈ ಚಕ್ರವರ್ತಿಗಳು, ಅಲೆಮಾರಿ ಡಕಾಯಿತರು, ಮೊರಕ್ಕೊ ಮತ್ತು ಫ್ರಾನ್ಸ್ ರಾಜರ ಆಡಳಿತ ಕಾಲದ ಹಸ್ತಪತ್ರಿಗಳು, ಚರ್ಮದ ಹಾಳೆಗಳಲ್ಲಿ ದಾಖಲಿಸಲಾದ ಪ್ರತಿಗಳಿಗೆ ಎಂದಿಲ್ಲದ ಕಡುಕಷ್ಟ ಎದುರಾಗಿದೆ. ಇಷ್ಟೊಂದು ಸುದೀರ್ಘ ಅವಧಿಯವರೆಗೆ ಇವು ಇನ್ನೂ ಸಂರಕ್ಷಿಸಲ್ಪಟ್ಟಿವೆಯಲ್ಲಾ ಎಂಬುದೇ ಒಂದು ದೊಡ್ಡ ಪವಾಡ' ಎಂದು ಎಸೆಯೌತಿ ಉದ್ಗರಿಸುತ್ತಾರೆ.

ಟಿಂಬಕ್ಟುವಿನ ಬಹಳಷ್ಟು ಮುಸ್ಲಿಂ ಕುಟುಂಬಗಳಿಗೆ ಪುಸ್ತಕ ವ್ಯಾಪಾರ ಮತ್ತು ಹಸ್ತಪ್ರತಿ ಸಂರಕ್ಷಣೆ ಎಂಬುದೊಂದು ಪ್ರಧಾನ ಉದ್ಯೋಗವೇ ಆಗಿದೆ. ಸಹರಾ ಮರುಭೂಮಿಗೆ ಸಂಪರ್ಕ ಕಲ್ಪಿಸುವ ಹಲವಾರು ಕಿರು ದಾರಿಗಳು ಇಲ್ಲಿವೆ. ಈ ನಗರದ ಮಾರ್ಗವಾಗಿಯೇ ಉತ್ತರ ಆಫ್ರಿಕಾದಿಂದ ಉಪ್ಪು, ಸಾಂಬಾರ ಪದಾರ್ಥ ಮತ್ತು ಬಟ್ಟೆಬರೆಗಳು ಒಂಟೆಗಳ ಮೂಲಕ ಹರಿದು ಬರುತ್ತವೆ. ನೈಗರ್ ನದಿಯ ಮೂಲಕ ಪಶ್ಚಿಮ ಆಫ್ರಿಕಾದ ವಿವಿಧೆಡೆಗೆ ಬಂಗಾರವನ್ನು ಸಾಗಿಸಲಾಗುತ್ತದೆ. ಇನ್ನೂ ವಿಶೇಷ ಎಂದರೆ ಗುಲಾಮರನ್ನೂ ರವಾನಿಸುವ ಮಾರ್ಗವೂ ಇದೇ..!

ಚರಿತ್ರೆಯ ಎಲ್ಲ ಸಂದರ್ಭಗಳಲ್ಲೂ ಯಾವಾಗೆಲ್ಲಾ ಅಪಾಯಗಳು ಎದುರಾಗಿವೆಯೋ ಆಗ ಟಿಂಬಕ್ಟು ಜನಾಂಗೀಯರು ಈ ಹಸ್ತಪ್ರತಿಗಳನ್ನು ಮರುಭೂಮಿಯ ಆಳದಲ್ಲಿ ಹುದುಗಿಸಿ ಸಮಾಧಿಗಳನ್ನು ಕಟ್ಟಿ ಅವುಗಳನ್ನು ಕಾಪಾಡಿದ್ದಾರೆ. ಎದೆಗವುಚಿಕೊಂಡು ಮುಂದಿನ ತಲೆಮಾರುಗಳಿಗೆ ವರ್ಗಾಯಿಸಿದ್ದಾರೆ. ಟಿಂಬಕ್ಟು ನಗರವು ಸರ್ಕಾರದ ನಿಯಂತ್ರಣಕ್ಕೆ ಬಂದ ಮೇಲಂತೂ ಇಲ್ಲಿನ ಬಹುತೇಕ ಗ್ರಂಥಾಲಯಗಳಲ್ಲಿ, ಹಲವೆಡೆ ಗುಪ್ತ ಸ್ಥಳಗಳಲ್ಲಿ ಈ ಅಮೂಲ್ಯ ಹಸ್ತಪ್ರತಿಗಳನ್ನು ಸಂರಕ್ಷಿಸಿಡಲಾಗಿದೆ.

ಉಗ್ರರ ದಾಳಿಗಳ ನಂತರ ಟಿಂಬಕ್ಟು ಸಮೀಪದ ಗೋವಾ ಹಾಗೂ ಉತ್ತರಕ್ಕಿರುವ ಹೊರ ವಲಯದ ಕಿಡಾಲ್ ಪ್ರದೇಶಗಳು ಸೇನಾ ನೆಲೆಗಳಾಗಿ ಪರಿವರ್ತನೆಗೊಂಡಿವೆ. ಇಲ್ಲೆಲ್ಲಾ ಫ್ರೆಂಚ್ ಪಡೆ ಬೀಡುಬಿಟ್ಟಿದೆ. ಉಗ್ರರ ನೆಲೆಗಳ ಮೇಲೆ ಇಲ್ಲಿಂದ ವಾಯುದಾಳಿ ನಡೆಸಲಾಗುತ್ತಿದೆ. ಇಲ್ಲಿಗೆ ಸಮೀಪದ ನೈಜೀರಿಯಾದ ಗಡಿ ಪ್ರದೇಶಗಳವರೆಗೂ ಈ ವಾಯುದಾಳಿ ಭೋರ್ಗರೆಯುತ್ತಿದೆ. ಆದರೂ ಯಾವಾಗ ಏನಾಗುತ್ತದೆ ಎಂದು ಹೇಳಲು ಬರುವುದಿಲ್ಲ ಎಂಬ ಅವ್ಯಕ್ತ ಭೀತಿ ಮಾತ್ರ ಇಲ್ಲಿನ ಜನರನ್ನು ಕಾಡುತ್ತಲೇ ಇದೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT