ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಉತ್ತರ’ ಕುಮಾರನ ಉದ್ಯೋಗ ಪರ್ವದ ಮುನ್ನ

Last Updated 3 ಮೇ 2014, 19:30 IST
ಅಕ್ಷರ ಗಾತ್ರ

ಗಾಂಪೇಶ್ವರ ಸ್ವಾಮಿಗಳು ಪತ್ರಿಕೆ ಆರಂಭಿಸಿದಾಗ ಅರೆಮರುಳನಿಗೆ ಕೆಲಸ ಸಿಕ್ಕಿದ್ದು ನಿಜ. ಆದರೆ ಅದು ಅಷ್ಟು ಸಲೀಸಾಗಿ ಸಿಕ್ಕಿರಲಿಲ್ಲ. ಸ್ವಾಮಿಗಳು ತಾವೇ ಸ್ವತಃ ಸಂದರ್ಶನ ನಡೆಸಿದ್ದರು. ಅವರ ಕ್ಲಿಷ್ಟ ಪ್ರಶ್ನೆಗಳಿಗೆ ಅಷ್ಟೇ ಸಲೀಸಾಗಿ ಉತ್ತರಿಸಿ ಭೇಷ್ ಎಂದು ಅನಿಸಿ ಉದ್ಯೋಗ ಗಿಟ್ಟಿಸಿದ್ದು ಅರೆಮರುಳನ ಸಾಧನೆ. ಆದರೆ, ಬಹಳಷ್ಟು ಜನರು ಗಿಂಡಿ ಮಾಣಿಯಾಗಿದ್ದ ಕಾರಣ ಉದ್ಯೋಗ ಗಿಟ್ಟಿಸಿದ್ದಾನೆ ಎಂದು ಅಂದುಕೊಂಡಿದ್ದಾರೆ.

ಗಾಂಪೇಶ್ವರ ಸ್ವಾಮಿಗಳು ಅಂದು ಕೇಳಿದ ಪ್ರಶ್ನೆ ಮತ್ತು ಅರೆಮರುಳ ನೀಡಿದ ಉತ್ತರಗಳನ್ನು ಯಥಾವತ್ ಇಲ್ಲಿ ಕೊಡಲಾಗಿದೆ. ಉತ್ತರ ಸಖತ್ ಆಗಿದೆ ಎಂದು ಅನಿಸಿದರೆ ನೀವು ಮಾರ್ಕ್ಸ್ ಕೊಡಬಹುದು.
ಸಂದರ್ಶನದ ಪೂರ್ಣಪಾಠ ಇಲ್ಲಿದೆ

*ಜನರು ನಲ್ಲಿಯಲ್ಲಿ ನೀರು ಬಂದಾಗಲೂ ಜಲಮಂಡಳಿಯನ್ನು ಟೀಕಿಸುವುದು ಯಾವ ಸಂದರ್ಭದಲ್ಲಿ?
ನಲ್ಲಿಯಿಂದ ನೀರಿನ ಜತೆ ಮೀನು ಬಂದಾಗ. ಸಸ್ಯಾಹಾರಿ ಗಳು ಮೀನು ಬಂತು ಎಂಬ ಕಾರಣಕ್ಕೆ,  ಮಾಂಸಾಹಾರಿಗಳು ಒಂದೇ ಮೀನು ಬಂತು ಎಂಬ ಕಾರಣಕ್ಕೆ ಸಿಟ್ಟಿಗೆದ್ದು ಟೀಕಿಸುತ್ತಾರೆ.

*ಬೆಂಗಳೂರಿನಲ್ಲಿ ಇಂಗ್ಲಿಷಿನ ಹಂಗಿಲ್ಲದೆ ಯಾರು ಬದುಕುತ್ತಾರೆ ?
ಬೀದಿ ನಾಯಿಗಳು.

*ಕೊಳ್ಳೆ ಹೊಡೆದ ಸರ್ಕಾರಿ ಅಧಿಕಾರಿಗಳು ಲೋಕಾಯುಕ್ತರ ಬಲೆಗೆ ಬಿದ್ದಾಗ ಪತ್ರಕರ್ತರು ‘ಬಲೆಗೆ ಬಿದ್ದ ತಿಮಿಂಗಿಲಗಳು’ ಎಂದು ಬರೆಯುವುದು ಯಾಕೆ ?
ತಿಮಿಂಗಿಲಗಳನ್ನು ಜೈಲಿಗೆ ಹಾಕುವುದಿಲ್ಲ. ಲೋಕಾಯುಕ್ತ ದಾಳಿಗೆ ಒಳಗಾದವರು ಜೈಲು ಶಿಕ್ಷೆ ಅನುಭವಿಸಿದ್ದನ್ನು  ನಾನಂತೂ ಕಂಡಿಲ್ಲ. ಆದ್ದರಿಂದ ಅವರನ್ನು ತಿಮಿಂಗಿಲಗಳಿಗೆ ಹೋಲಿಸುತ್ತಾರೆ.

*ಹೆಂಡತಿಯನ್ನು ಸ್ವೀಟಿ ಎಂದು ಕರೆಯಲು ಹಿಂದೇಟು ಹಾಕುವವರು ಯಾರು?
ಮಧುಮೇಹಿಗಳು.

*ಹೆಂಡತಿಯನ್ನು ಸ್ವೀಟಿ ಎಂದು ಕರೆಯುವುದರಲ್ಲಿ ಆನಂದ ಅನುಭವಿಸುವವರು ಯಾರು?
ಮಧು ಮೋಹಿಗಳು.

*ಅಕಾಲಿಕವಾಗಿ ಕೂದಲು ಬೆಳ್ಳಗಾದರೆ ಆಗುವ ಲಾಭ ಏನು ?
ಬಿಎಂಟಿಸಿಯಲ್ಲಿ ‘ಹಿರಿಯ ನಾಗರಿಕರಿಗೆ’ ಎಂದು ಬರೆದಲ್ಲಿ ಕುಳಿತರೂ ಯಾರೂ ತುಟಿಪಿಟಿಕ್ ಅನ್ನುವುದಿಲ್ಲ.

*ಕಡು ಬೇಸಿಗೆಯ ಸಂದರ್ಭದಲ್ಲಿಯೂ ಹೆಣ್ಣು ಸೊಂಟಕ್ಕೆ ಸ್ವೆಟರ್ ಕಟ್ಟಿಕೊಂಡು ಬಿಸಿಲಲ್ಲಿ ಓಡಾಡಿದರೆ...
ಪ್ಯಾಂಟ್ ತುಂಬಾ ಟೈಟ್. ಬಗ್ಗಿದರೆ ಹರಿದೇ ಹೋಗುತ್ತದೆ ಎಂಬ ಕಾರಣಕ್ಕೆ ರಕ್ಷಣೆಗೆ ಕಟ್ಟಿಕೊಂಡಿದ್ದಾಳೆ ಎಂದರ್ಥ.

*ಯಾರನ್ನು ಸಂದರ್ಶಿಸದೆ ಲೇಖನ ಬರೆಯಬಹುದು ?
ರೂಪದರ್ಶಿಯರನ್ನು.

*ಯಾಕೆ ಶಿಷ್ಯಾ?
ಎಲ್ಲಾ ರೂಪದರ್ಶಿಯರು ಒಂದೇ ವಿಷಯ ತಿಳಿಸುತ್ತಾರೆ. ‘ಬೆಳಿಗ್ಗೆ ಐದು ಗಂಟೆಗೆ ಏಳುತ್ತೇನೆ. ಒಂದು ಗಂಟೆ ಯೋಗ ಮಾಡುತ್ತೇನೆ. ಅನಂತರ ಪ್ರಾಣಾಯಾಮ ಮಾಡುತ್ತೇನೆ. ಕಾಫಿ, ಚಹಾ ಕುಡಿಯುವುದಿಲ್ಲ. ಜ್ಯೂಸ್ ಕುಡಿಯುತ್ತೇನೆ. ಬೆಳಿಗ್ಗೆ ಎರಡೇ ಎರಡು ಇಡ್ಲಿ ತಿನ್ನುತ್ತೇನೆ. ಮಸಾಲೆಪುರಿ, ಬೇಲ್ಪುರಿ ಎಂದರೆ ತುಂಬಾ ಇಷ್ಟ. ಆದರೆ ನಾನು ತಿನ್ನುವುದಿಲ್ಲ’ ಇತ್ಯಾದಿ... ಇತ್ಯಾದಿ..

*ಚಿತ್ರೀಕರಣ ಸಂದರ್ಭದಲ್ಲಿ ತಾರೆಯರನ್ನು ಪತ್ರಕರ್ತರು ಭೇಟಿಯಾಗಿ ಪ್ರಶ್ನಿಸಿದಾಗಲೆಲ್ಲ ತಾವು ಅಭಿನಯಿಸುವ ಚಿತ್ರ, ತಮ್ಮ ಪಾತ್ರದ ಬಗ್ಗೆ ಏನೆಂದು ಹೇಳುತ್ತಾರೆ?
‘ಈ ಚಿತ್ರ ಎಲ್ಲ ಚಿತ್ರಗಳಂತೆ ಅಲ್ಲ, ಬೇರೆಯೇ ಥರದ್ದು. ಇಡೀ ಯೂನಿಟ್‌ನವರು ಒಂದೇ ಕುಟುಂಬದವರಂತೆ ಇದ್ದು ಒಳ್ಳೆಯ ಸಹಕಾರ ಕೊಡುತ್ತಿದ್ದಾರೆ. ನಿರ್ದೇಶಕರು ಕಥೆ ಬಗ್ಗೆ ಏನೂ ಹೇಳಬೇಡಿ ಅಂದಿದ್ದಾರೆ. ನನ್ನ ಪಾತ್ರ ಎಂದರೆ ಬಬ್ಲಿ ಎಂದರೆ ಬಬ್ಲಿ ಕ್ಯಾರೆಕ್ಟರ್‌. ತುಂಬಾ ತುಂಟತನ ಮಾಡುತ್ತೇನೆ. ಎಲ್ಲರನ್ನು ಗೋಳು ಹೊಯ್ಕೊಳುತ್ತೇನೆ’ ಇತ್ಯಾದಿ... ಇತ್ಯಾದಿ.

‘ಭೇಷ್, ಅರೆಮರುಳಾ... ಭೇಷ್. ನಿನಗೆ ಇಷ್ಟು ಬುದ್ಧಿವಂತಿಕೆ ಇದೆ ಎನ್ನುವುದನ್ನು ನನಗೆ ಗೊತ್ತೇ ಇರಲಿಲ್ಲ. ಇಷ್ಟು ಬುದ್ಧಿವಂತಿಕೆ ಇರುವ ನಿನಗೆ ಅರೆಮರುಳ ಅಂತ ಯಾಕೆ ಹೆಸರಿಟ್ಟರು?’ ಸ್ವಾಮಿಗಳು ಅಚ್ಚರಿಯಿಂದ ಪ್ರಶ್ನಿಸಿದರು.  
‘ಸಂದರ್ಭ ಬಂದಾಗ ನಾನೇ ನಿಮಗೆ ತಿಳಿಸುತ್ತೇನೆ ಗುರುಗಳೇ’ ಅರೆಮರುಳ ಮುಖ ಚಿಕ್ಕದು ಮಾಡಿ ಉತ್ತರಿಸಿದ.
‘ಸರಿ, ನಿನಗೆ ಇನ್ನೊಂದು ಪುಟ್ಟ ಪರೀಕ್ಷೆ. ರಾಜಕಾರಣಿ ಸಿಡಿಮಿಡಿ ಸಿಂಗಪ್ಪ ಅವರನ್ನು ಸಂದರ್ಶಿಸಿ ಬಾ’
ತಕ್ಷಣ ಚಂಗನೇ ಜಿಗಿದ ಅರೆಮರುಳ ಸ್ವಲ್ಪ ಹೊತ್ತಲ್ಲೇ ಸಿಂಗಪ್ಪ ಅವರ ಕಚೇರಿಯಲ್ಲಿದ್ದ. ಸಂದರ್ಶನದ ಮೊದಲ ಪ್ರಶ್ನೆಯನ್ನು ಚೀನಾದ ಪ್ರಸ್ತಾಪದೊಂದಿಗೆ ಆರಂಭಿಸಿದ.

*ಸರ್, ಚೀನಾದಲ್ಲಿ ಚಾಲಕ ರಹಿತ ರೈಲು ಓಡಿಸ್ತಾ ಇದ್ದಾರಂತೆ ?
ಹಳಿ ಇಲ್ಲದ ರೈಲು ನಾವು ಓಡಿಸ್ತಾ ಇಲ್ವಾ? ಅದಕ್ಕಿಂತ ದೊಡ್ಡ ಸಾಧನೆ ಬೇರೆ ಏನಿದೆ? ಸರಿ ಮುಂದಿನ ಪ್ರಶ್ನೆಗೆ ಹೋಗಿ.

*ಅಂತರ್ಜಲ ಪೂರಣಕ್ಕೆ ರಸ್ತೆ ಬದಿಯಲ್ಲಿ ಇಂಗು ಗುಂಡಿ ನಿರ್ಮಾಣ ಮಾಡುವ ಯೋಜನೆ ಏನಾಯ್ತು ಸರ್?
ರಸ್ತೆಗಳ ಮಧ್ಯೆ ಗುತ್ತಿಗೆದಾರರ ಕೃಪೆಯಿಂದ ನೂರಾರು ಗುಂಡಿಗಳು ಇರುವಾಗ ಅದರ ಅಗತ್ಯ ಇದೆಯಾ ಮಿಸ್ಟರ್ ಅರೆ ಮರುಳಾ?

*ಮೃಗಾಲಯಗಳಲ್ಲಿ ಹಾಲು ಕುಡಿಸದ ತಾಯಿ ಹುಲಿಗಳಿಂದಾಗಿ ಮರಿಗಳ ಸಾವು ಹೆಚ್ಚುತ್ತಿದೆಯಂತೆ?
ಸ್ತನ್ಯಪಾನದ ಅರಿವು ಮೂಡಿಸುವ ಕಾರ್ಯಕ್ರಮ ಅಲ್ಲೂ ನಡೆಯಬೇಕು.

*ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರ ವಿಸರ್ಜಿಸುವವರಿಗೆ ಶಿಕ್ಷೆ ವಿಧಿಸುವ ವಿಷಯ ಏನಾಯ್ತು ಸಾರ್?
ಮೂತ್ರ ಪರಿಸರದಲ್ಲಿರುವ ಇಂಗಾಲದ ಡೈ ಆಕ್ಸೈಡ್ ಮತ್ತು ದುಷ್ಪರಿಣಾಮ ಬೀರುವ ಅನಿಲಗಳನ್ನು ಹೀರಿಕೊಂಡು ಮಾಲಿನ್ಯ ನಿಯಂತ್ರಣಕ್ಕೆ ನೆರವಾಗುತ್ತದೆ ಎಂದು ಸ್ಪೇನ್ ದೇಶದ ಸಂಶೋಧನೆ ತಿಳಿಸಿದೆ ಎಂದು ಪೇಪರಿನಲ್ಲಿ ಬಂದಿದೆ. ಅದನ್ನು ಓದಿದ ದಿನದಿಂದ ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡುವವರಿಗೆ ದಂಡ ಅಲ್ಲ, ಬಹುಮಾನ ಕೊಡಬೇಕು ಎಂದು ಅನಿಸುತ್ತದೆ.

ಮುಚ್ಚಿದ ಕೊಠಡಿಯಲ್ಲಿ ಸಂದರ್ಶನ ನಡೆಯುತ್ತಿರುವಾಗ ಬಾಗಿಲು ತಟ್ಟಿದ ಸದ್ದು. ‘ಒಂದು ನಿಮಿಷ ಸರ್’ ಎಂದು ಅರೆಮರುಳ ಹೊರ ಹೋಗಿ, ಸ್ವಲ್ಪ ಹೊತ್ತಲ್ಲಿಯೇ ಮರಳಿ ಬಂದ. ‘ಸರ್ ಹೊರಗಡೆ ವಿಸಿಟರ್ಸ್ ಕಾಯ್ತಾ ಇದ್ದಾರೆ.  ಅವರಲ್ಲಿ ಒಬ್ಬರು ಬುದ್ಧಿಜೀವಿ, ಇನ್ನೊಬ್ಬರು ಪತ್ರಕರ್ತ, ಮತ್ತೊಬ್ಬರು ಸ್ತ್ರೀವಾದಿ’ ಎಂದು ಒಂದೇ ಉಸಿರಲ್ಲಿ ಹೇಳಿದ. ಸಿಂಗಪ್ಪನವರು ಕಂಗಾಲಾಗಿ ‘ಅವರಲ್ಲಿ ಯಾರನ್ನೂ ಪ್ರಶ್ನಿಸದೆ ಅವರು ಯಾರು ಎನ್ನುವುದು ಹೇಗೆ ಗೊತ್ತಾಯ್ತು, ಮಿಸ್ಟರ್ ಅರೆಮರುಳಾ’ ಎಂದು ಅಚ್ಚರಿಯಿಂದ ಪ್ರಶ್ನಿಸಿದರು.

‘ನನ್ನನ್ನು ನೋಡಿದ ತಕ್ಷಣ ಒಬ್ಬರು ನನ್ನ ಕುಲಗೋತ್ರ ವಿಚಾರಿಸಿದರು. ಆದ್ದರಿಂದ ಅವರು ಬುದ್ಧಿಜೀವಿ ಎನ್ನುವುದು ಖಚಿತವಾಯಿತು. ಇನ್ನೊಬ್ಬರು ಫೋನಿನಲ್ಲಿ ಮಾತನಾಡುತ್ತಾ ಹೆಡ್ ಲೈನ್, ಡೆಡ್ ಲೈನ್, ಬೈಲೈನ್್ ಎನ್ನುತ್ತಿದ್ದರು. ಮೇಲಿಂದ ಮೇಲೆ ಲೈನ್, ಲೈನ್ ಎಂದು ಹೇಳುತ್ತಿರುವುದನ್ನು ಕೇಳಿ ಗಾಬರಿಯಾಯ್ತು. ನನಗೇ ಲೈನಾ ಎಂದು ಗಾಬರಿ ಆಯ್ತು. ಭಾರತೀಯ ದಂಡ ಸಂಹಿತೆಯ 377ನೇ ಸೆಕ್ಷನ್  ನೆನಪಾಯಿತು. ಆದರೆ ಪತ್ರಕರ್ತರು ಇದೇ ರೀತಿ ಹೇಳುತ್ತಿರುತ್ತಾರೆ ಎನ್ನುವುದು ಹೊಳೆದು ಅವರು ಪತ್ರಕರ್ತ ಎಂದು ಅಂದುಕೊಂಡೆ.

ಮೂರನೆಯವರು ‘ಪುರುಷ ಪ್ರಧಾನ ಸಮಾಜದಲ್ಲಿ ನಮ್ಮನ್ನು ಕೇಳುವವರೇ ಇಲ್ಲ’ ಎಂದು ಗೊಣಗುವುದನ್ನು ಕೇಳಿಸಿಕೊಂಡೆ. ಆದುದರಿಂದ ಅವರು ಸ್ತ್ರೀವಾದಿ ಎನ್ನುವುದು ನನಗೆ ಮನವರಿಕೆ ಆಯಿತು ಎಂದ ಅರೆಮರುಳ.
ರಾಜಕಾರಣಿ ಸಿಂಗಪ್ಪ ‘ಭೇಷ್, ಭೇಷ್’ ಎಂದರು.
ಅರೆಮರುಳ ಸಂದರ್ಶನ ಮುಗಿಸಿ ಅದರ ಪ್ರತಿಯನ್ನು ಗಾಂಪೇಶ್ವರ ಸ್ವಾಮಿಯವರ ಮೇಜಿನ ಮೇಲಿಟ್ಟ. ಸ್ವಲ್ಪ ಹೊತ್ತಲ್ಲಿಯೇ ನೇಮಕಾತಿ ಪತ್ರ ಆತನ ಜೇಬು ಸೇರಿತು ಎಂದು ಬೇರೆ ಹೇಳಬೇಕೆ ?
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT