ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯರ ಅಂತರ ವಲಯ ಕ್ರಿಕೆಟ್‌ ಟೂರ್ನಿ: ಇನಿಂಗ್ಸ್ ಗೆಲುವಿನತ್ತ ಪೂರ್ವ ವಲಯ

Published 29 ಮಾರ್ಚ್ 2024, 15:54 IST
Last Updated 29 ಮಾರ್ಚ್ 2024, 15:54 IST
ಅಕ್ಷರ ಗಾತ್ರ

ಪುಣೆ: ಭಾರತದ ಮಾಜಿ ಆಲ್‌ರೌಂಡರ್ ಅನುಜಾ ಪಾಟೀಲ್ ಅವರ ಶತಕದ ನೆರವಿನಿಂದ ಪಶ್ಚಿಮ ವಲಯ ತಂಡವು ಇಲ್ಲಿ ನಡೆಯುತ್ತಿರುವ ಮಹಿಳೆಯರ ಅಂತರ ವಲಯ ಬಹುದಿನಗಳ ಕ್ರಿಕೆಟ್‌ ಟೂರ್ನಿಯಲ್ಲಿ ಎರಡನೇ ದಿನವಾದ ಶುಕ್ರವಾರ ಸೆಂಟ್ರಲ್‌ ವಲಯ ವಿರುದ್ಧ ಮೊದಲ ಇನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸಿದೆ.

ಸೆಂಟ್ರಲ್‌ ತಂಡವು ಮೊದಲ ಇನಿಂಗ್ಸ್‌ನಲ್ಲಿ ಗಳಿಸಿದ 245 ರನ್‌ಗಳಿಗೆ ಉತ್ತರವಾಗಿ ಪಶ್ಚಿಮ ತಂಡವು ಅನುಜಾ (122; 120ಎ, 4x20, 6x1) ಮತ್ತು ಜೆಮಿಮಾ ರಾಡ್ರಿಗಸ್‌ (69, 97ಎ) ಅವರ ಬ್ಯಾಟಿಂಗ್‌ ಬಲದಿಂದ 356 ರನ್‌ ಗಳಿಸಿ, 111 ರನ್‌ಗಳ ಮುನ್ನಡೆ ಪಡೆದಿದೆ.

ಎರಡನೇ ಇನಿಂಗ್ಸ್‌ ಆರಂಭಿಸಿರುವ ಸೆಂಟ್ರಲ್‌ ತಂಡವು ದಿನದಾಟಕ್ಕೆ 25 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 68 ರನ್‌ ಗಳಿಸಿ, ಮೊದಲ ಇನಿಂಗ್ಸ್‌ನ ಹಿನ್ನಡೆಯನ್ನು 43ಕ್ಕೆ ಇಳಿಸಿತು. ಆರಂಭಿಕ ಬ್ಯಾಟರ್‌ಗಳಾದ ಪೂನಂ ರಾವತ್ (ಔಟಾಗದೆ 32) ಮತ್ತು ನುಝತ್ ಪರ್ವೀನ್ (ಔಟಾಗದೆ 35) ಕ್ರೀಸ್‌ನಲ್ಲಿದ್ದಾರೆ.

ಇದಕ್ಕೂ ಮುನ್ನ ವಿಕೆಟ್ ನಷ್ಟವಿಲ್ಲದೆ 26 ರನ್‌ಗಳಿಂದ ದಿನದಾಟ ಆರಂಭಿಸಿದ ಪಶ್ಚಿಮ ವಲಯ ತಂಡವು 98 ರನ್‌ ಗಳಿಸುವಷ್ಟರಲ್ಲಿ ಪ್ರಮುಖ ನಾಲ್ಕು ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಹಂತದಲ್ಲಿ ಅನುಜಾ ಮತ್ತು ಜೆಮಿಮಾ ಅವರು ಐದನೇ ವಿಕೆಟ್‌ಗೆ 155 ರನ್‌ ಕಲೆಹಾಕಿ ಇನಿಂಗ್ಸ್‌ ಮುನ್ನಡೆಗೆ ಕಾರಣರಾದರು.

ಆರಂಭಿಕ ಆಟಗಾರ್ತಿ ದೇವಿಕಾ ವೈದ್ಯ (52, 58ಎ) ಮತ್ತು ಎಂಟನೇ ಕ್ರಮಾಂಕದಲ್ಲಿ ನಾಯಕಿ ಸ್ಮೃತಿ ಮಂದಾನ (50, 52ಎ) ಅರ್ಧಶತಕದೊಂದಿಗೆ ಉಪಯುಕ್ತ ಕಾಣಿಕೆ ನೀಡಿದರು. ಸೆಂಟ್ರಲ್ ತಂಡದ ಲೆಗ್ ಸ್ಪಿನ್ನರ್ ಪೂನಂ ಯಾದವ್‌ 116ಕ್ಕೆ ಏಳು ವಿಕೆಟ್‌ ಪಡೆದು ಮಿಂಚಿದರು.

ಮತ್ತೊಂದು ಪಂದ್ಯದಲ್ಲಿ ನಾಯಕಿ ದೀಪ್ತಿ ಶರ್ಮಾ ಅವರ ಪರಿಣಾಮಕಾರಿ ಬೌಲಿಂಗ್‌ ನೆರವಿನಿಂದ ಪೂರ್ವ ವಲಯ ತಂಡವು ಈಶಾನ್ಯ ತಂಡದ ವಿರುದ್ಧ ಇನಿಂಗ್ಸ್‌ ಗೆಲುವಿನತ್ತ ಸಾಗಿದೆ.

ಪೂರ್ವ ತಂಡವು ಮೊದಲ ಇನಿಂಗ್ಸ್‌ನಲ್ಲಿ ಎಂಟು ವಿಕೆಟ್‌ಗೆ 385 ರನ್‌ ಗಳಿಸಿ ಡಿಕ್ಲೇರ್‌ ಮಾಡಿಕೊಂಡಿತು. ಅದಕ್ಕೆ ಉತ್ತರವಾಗಿ ಬ್ಯಾಟಿಂಗ್‌ಗೆ ಇಳಿದ ಈಶಾನ್ಯ ತಂಡವು 108 ರನ್‌ಗೆ ಕುಸಿಯಿತು.

ಫಾಲೋ ಆನ್‌ಗೆ ಒಳಗಾಗಿ ಎರಡನೇ ಇನಿಂಗ್ಸ್‌ ಆರಂಭಿಸಿದ ಈಶಾನ್ಯ ತಂಡವು ಮತ್ತೆ ಮುಗ್ಗರಿಸಿದೆ. ಎರಡನೇ ದಿನದಾಟದ ಅಂತ್ಯಕ್ಕೆ 72 ಓವರ್‌ಗಳಲ್ಲಿ ಎಂಟು ವಿಕೆಟ್‌ ಕಳೆದುಕೊಂಡು 156 ರನ್‌ ಗಳಿಸಿ ಸೋಲಿನ ಅಂಚಿನಲ್ಲಿದೆ. ಇನಿಂಗ್ಸ್‌ ಸೋಲಿನಿಂದ ತಪ್ಪಿಸಿಕೊಳ್ಳಲು ಇನ್ನೂ 121 ರನ್‌ ಸೇರಿಸಬೇಕಿದೆ. ಮೊದಲ ಇನಿಂಗ್ಸ್‌ನಲ್ಲಿ 9 ರನ್‌ಗೆ ಐದು ವಿಕೆಟ್‌ ಪಡೆದಿದ್ದ ದೀಪ್ತಿ, ಎರಡನೇ ಇನಿಂಗ್ಸ್‌ನಲ್ಲಿ ಎರಡು ವಿಕೆಟ್‌ ಪಡೆದರು.

ಸಂಕ್ಷಿಪ್ತ ಸ್ಕೋರ್‌: ಮೊದಲ ಇನಿಂಗ್ಸ್‌: ಸೆಂಟ್ರಲ್‌ ವಲಯ 87.3 ಓವರ್‌ಗಳಲ್ಲಿ 245. ಪಶ್ಚಿಮ ವಲಯ 76.2 ಓವರ್‌ಗಳಲ್ಲಿ 356 (ದೇವಿಕಾ ವೈದ್ಯ 52, ಜೆಮಿಮಾ ರಾಡ್ರಿಗಸ್‌ 69, ಅನುಜಾ ಪಾಟೀಲ್‌ 122, ಸ್ಮೃತಿ ಮಂದಾನ 50; ಪೂನಂ ಯಾದವ್‌ 116ಕ್ಕೆ 7). ಎರಡನೇ ಇನಿಂಗ್ಸ್‌: ಸೆಂಟ್ರಲ್‌ ವಲಯ 25 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 68 (ಪೂನಂ ರಾವತ್‌ ಔಟಾಗದೆ 32, ನುಝತ್ ಪರ್ವೀನ್ ಔಟಾಗದೆ 35).

ಮೊದಲ ಇನಿಂಗ್ಸ್‌: ಪೂರ್ವ ವಲಯ 100 ಓವರ್‌ಗಳಲ್ಲಿ ಎಂಟು ವಿಕೆಟ್‌ಗೆ 385ಕ್ಕೆ ಡಿಕ್ಲೇರ್‌. ಈಶಾನ್ಯ ವಲಯ 34.3 ಓವರ್‌ಗಳಲ್ಲಿ 108 (ಪ್ರಧಾನ ಸಮಯಿತಾ 40, ದೀಪ್ತಿ ಶರ್ಮಾ 9ಕ್ಕೆ 5). ಎರಡನೇ ಇನಿಂಗ್ಸ್‌: ಈಶಾನ್ಯ ವಲಯ 72 ಓವರ್‌ಗಳಲ್ಲಿ ಎಂಟು ವಿಕೆಟ್‌ಗೆ 156 (ಆಯು ಸೆಂಟಿಲೆಮ್ಲಾ ಔಟಾಗದೆ 32, ನಿಂಗ್ತೌಜಮ್ ದೇವಿ 39; ಮೋನಿಕಾ ದಾಸ್‌ 58ಕ್ಕೆ 2, ದೀಪ್ತಿ 36ಕ್ಕೆ 2, ಸುಶ್ರೀ ದಿವ್ಯದರ್ಶಿನಿ 19ಕ್ಕೆ 2, ಮಮತಾ ಪಾಸ್ವಾನ್‌ 42ಕ್ಕೆ 2)

ದೀಪ್ತಿ ಶರ್ಮಾ
ದೀಪ್ತಿ ಶರ್ಮಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT