ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಂಗ್ಲಾ –ಲಂಕಾ ಅಂತಿಮ ಟೆಸ್ಟ್‌ ಇಂದಿನಿಂದ: ತಂಡಕ್ಕೆ ಮರಳಿದ ಶಕೀಬ್

Published 30 ಮಾರ್ಚ್ 2024, 1:19 IST
Last Updated 30 ಮಾರ್ಚ್ 2024, 1:19 IST
ಅಕ್ಷರ ಗಾತ್ರ

ಚಿತ್ತಗಾಂಗ್: ಮೊದಲ ಟೆಸ್ಟ್‌ನಲ್ಲಿ ಶ್ರೀಲಂಕಾ ಎದುರು ಸೋತು ಸುಣ್ಣವಾಗಿರುವ ಬಾಂಗ್ಲಾದೇಶ ಈಗ ಪುನಶ್ಚೇತನಕ್ಕಾಗಿ, ತಂಡಕ್ಕೆ ಮರಳಿರುವ ಹಿರಿಯ ಆಲ್‌ರೌಂಡರ್‌ ಶಕೀಬ್‌ ಅಲ್ ಹಸನ್ ಅವರ ನೆರವನ್ನು ನಿರೀಕ್ಷಿಸುತ್ತಿದೆ. ಶನಿವಾರ ಎರಡನೇ ಹಾಗೂ ಅಂತಿಮ ಟೆಸ್ಟ್‌ ಆರಂಭವಾಗಲಿದೆ.

ಸಿಲ್ಹೆಟ್‌ನಲ್ಲಿ ನಡೆದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಆತಿಥೇಯ ಬಾಂಗ್ಲಾದೇಶ 328 ರನ್‌ಗಳಿಂದ ಸೋಲನುಭವಿಸಿತ್ತು. ಎರಡೂ ಇನಿಂಗ್ಸ್‌ಗಳಲ್ಲಿ 200 ದಾಟಲು ಆಗಿರಲಿಲ್ಲ. ಸುಮಾರು ಒಂದು ವರ್ಷದ ನಂತರ ಶಕೀಬ್ ಟೆಸ್ಟ್ ತಂಡಕ್ಕೆ ಮರಳುತ್ತಿದ್ದಾರೆ. ಇದರ ನಡುವೆ ಅವರು ರಾಜಕೀಯ ಕ್ಷೇತ್ರಕ್ಕಿಳಿದು ಜನವರಿಯಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಸಂಸತ್‌ ಸದಸ್ಯರೂ ಆಗಿದ್ದಾರೆ.

‘ಶಕೀಬ್ ಅವರನ್ನು ಹೊಂದಿರುವ ಯಾವುದೇ ತಂಡ ಅದೃಷ್ಟಶಾಲಿ. ಅವರನ್ನು ಮರಳಿ ಸ್ವಾಗತಿಸುತ್ತೇವೆ’ ಎಂದು ತಂಡದ ಹಂಗಾಮಿ ಕೋಚ್ ನಿಕ್ ಪೋತಾಸ್‌ ತಿಳಿಸಿದ್ದಾರೆ. ಅವರಲ್ಲಿರುವ ಹುರುಪು ತಂಡದಲ್ಲಿ ಲವಲವಿಕೆ ಮೂಡಿಸುತ್ತದೆ ಎಂದರು.

ಬಾಂಗ್ಲಾದೇಶ ಬ್ಯಾಟರ್‌ಗಳ ಹಿನ್ನಡೆಯನ್ನು ಅವರು ಸಮರ್ಥಿಸಿಕೊಂಡರು. ‘ತಂಡ ಈಗ ಪರಿವರ್ತನೆಯ ಹಾದಿಯಲ್ಲಿದೆ.  ನಮ್ಮ ತಂಡ ಯುವ ಆಟಗಾರರು ಮತ್ತು ಅನನುಭವಿಗಳಿಂದ ಕೂಡಿದೆ. ತಂಡವನ್ನು ಕಟ್ಟುವ ಹಾದಿಯಲ್ಲಿದ್ದೇವೆ’ ಎಂದರು. ಅಭಿಮಾನಿಗಳು ತಾಳ್ಮೆಯಿಂದ ಇರಬೇಕು ಎಂದರು.

‘ಮೊದಲ ಟೆಸ್ಟ್‌ನಲ್ಲಿ ವಿಫಲರಾಗಿದ್ದ ಆಟಗಾರರು ಚಿತ್ತಗಾಂಗ್‌ನಲ್ಲಿ ಉತ್ತಮ ಆಟವಾಡಲಿದ್ದಾರೆ’ ಎಂದು ಶ್ರೀಲಂಕಾ ತಂಡದ ಕ್ಯಾಪ್ಟನ್ ಧನಂಜಯ ಡಿಸಿಲ್ವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆ ಪಂದ್ಯದಲ್ಲಿ ಧನಂಜಯ ಮತ್ತು ಕಮಿಂದು ಮೆಂಡಿಸ್‌ ಎರಡೂ ಇನಿಂಗ್ಸ್‌ಗಳಲ್ಲಿ ಶತಕ ಬಾರಿಸಿದ್ದು ವಿಶೇಷ. ಒಂದೇ ಟೆಸ್ಟ್‌ ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ ಇಬ್ಬರು ಶತಕ ಬಾರಿಸಿದ್ದು ಅದು ಮೂರನೇ ಸಲವಾಗಿತ್ತು. ಆಸ್ಟ್ರೇಲಿಯಾದ ಗ್ರೆಗ್ ಮತ್ತು ಇಯಾನ್ ಚಾಪೆಲ್, ಪಾಕಿಸ್ತಾನದ ಮಿಸ್ಬಾ–ಉಲ್–ಹಕ್ ಮತ್ತು ಅಝರ್ ಅಲಿ ಅವರಿಗಿಂತ ಮೊದಲು ಈ ಸಾಧನೆಗೆ ಪಾತ್ರರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT