ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಸ್ಥಾನಕ್ಕೆ ಲಖನೌ ಸವಾಲು ಇಂದು

ಸಂಜು ಪಡೆ ವಿರುದ್ಧ ಮುಯ್ಯಿ ತೀರಿಸಿಕೊಳ್ಳುವ ಛಲದಲ್ಲಿ ರಾಹುಲ್‌ ಬಳಗ
Published 26 ಏಪ್ರಿಲ್ 2024, 23:04 IST
Last Updated 26 ಏಪ್ರಿಲ್ 2024, 23:04 IST
ಅಕ್ಷರ ಗಾತ್ರ

ಲಖನೌ: ಲಖನೌ ಸೂಪರ್‌ಜೈಂಟ್ಸ್ ತಂಡವು ತನ್ನ ತವರಿನಲ್ಲಿ ಶನಿವಾರ ನಡೆಯಲಿರುವ ರಾಜಸ್ಥಾನ ರಾಯಲ್ಸ್‌ ವಿರುದ್ಧದ ಪಂದ್ಯದಲ್ಲಿ  ಹಿಂದಿನ ಸೋಲಿಗೆ ಮುಯ್ಯಿ ತೀರಿಸಿಕೊಳ್ಳುವ ಛಲದಲ್ಲಿದೆ. ಆದರೆ ಗೆಲುವಿನ ನಾಗಲೋಟದಲ್ಲಿರುವ ಸಂಜು ಸ್ಯಾಮ್ಸನ್‌ ಬಳಗವು ಅದೇ ಲಯವನ್ನು ಮುಂದುವರಿಸುವ ಹುಮ್ಮಸ್ಸಿನಲ್ಲಿದೆ.

2008ರ ಚಾಂಪಿಯನ್‌ ರಾಜಸ್ಥಾನ ತಂಡವು ಈ ಋತುವಿನಲ್ಲಿ ಆಡಿರುವ ಎಂಟು ಪಂದ್ಯಗಳಲ್ಲಿ ಏಳರಲ್ಲಿ ಗೆಲುವು ಸಾಧಿಸಿ 14 ಅಂಕಗಳೊಂದಿಗೆ ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಕೆ.ಎಲ್‌. ರಾಹುಲ್‌ ಪಡೆಯು ಎಂಟು ಪಂದ್ಯಗಳ ಪೈಕಿ ಐದರಲ್ಲಿ ಜಯ ಸಾಧಿಸಿದೆ. ಕೊನೆಯ ಎರಡು ಪಂದ್ಯಗಳನ್ನು ಗೆದ್ದಿರುವ ತಂಡವು ಹ್ಯಾಟ್ರಿಕ್‌ ಗೆಲುವಿನ ನಿರೀಕ್ಷೆಯಲ್ಲಿದೆ.

ರಾಯಲ್ಸ್ ತಂಡವು ಟೂರ್ನಿಯ ಆರಂಭದಲ್ಲಿ ನಾಲ್ಕು ಪಂದ್ಯಗಳಲ್ಲಿ ಸತತವಾಗಿ ಗೆದ್ದಿತ್ತು. ಆದರೆ ಐದನೇ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ವಿರೋಚಿತ ಹೋರಾಟ ಮಾಡಿದರೂ ಸೋತಿತ್ತು. ಅದರ ನಂತರದ ಮೂರು ಪಂದ್ಯಗಳಲ್ಲಿ ಸತತ ಜಯ ಸಾಧಿಸುವ  ಮೂಲಕ ಅಗ್ರಸ್ಥಾನಕ್ಕೇರಿದೆ.  ಮಾರ್ಚ್‌ 24ರಂದು ಜೈಪುರದಲ್ಲಿ ನಡೆದಿದ್ದ ಪಂದ್ಯದಲ್ಲಿ ಲಖನೌ ತಂಡವನ್ನು 20 ರನ್‌ಗಳಿಂದ ಮಣಿಸಿದ್ದ ಸಂಜು ಪಡೆ ಮತ್ತೆ ಪಾರಮ್ಯ ಮೆರೆಯುವ ತವಕದಲ್ಲಿದೆ.

ಎದುರಾಳಿ ತಂಡಕ್ಕೆ ಹೋಲಿಸಿದರೆ ರಾಜಸ್ಥಾನ ತಂಡದ ಬ್ಯಾಟಿಂಗ್‌ ವಿಭಾಗ ಬಲಿಷ್ಠವಾಗಿದೆ. ಅಸ್ಸಾಂ ಬ್ಯಾಟರ್ ರಿಯಾನ್ ಪರಾಗ್ ತಂಡಕ್ಕೆ ಪ್ರಮುಖ ಅಸ್ತ್ರವಾಗಿದ್ದಾರೆ. 22 ವರ್ಷದ ಅವರು ಏಳು ಇನ್ನಿಂಗ್ಸ್‌ಗಳಲ್ಲಿ 63ರ ಸರಾಸರಿಯಲ್ಲಿ 318 ರನ್‌ ಸೇರಿಸಿ ತಂಡದ ಗರಿಷ್ಠ ಸ್ಕೋರರ್‌ ಆಗಿದ್ದಾರೆ.

ಆರಂಭದ ಪಂದ್ಯಗಳಲ್ಲಿ ರನ್‌ ಗಳಿಸಲು ಪರದಾಡಿದ್ದ ಯಶಸ್ವಿ ಜೈಸ್ವಾಲ್‌ ಫಾರ್ಮ್‌ಗೆ ಮರಳಿರುವುದು ತಂಡದ ಬ್ಯಾಟಿಂಗ್‌ ಶಕ್ತಿಯನ್ನು ಹೆಚ್ಚಿಸಿದೆ. ಮುಂಬೈ ಇಂಡಿಯನ್ಸ್‌ ವಿರುದ್ಧದ ಕೊನೆಯ ಪಂದ್ಯದಲ್ಲಿ 180 ರನ್‌ಗಳ ಗುರಿ ಬೆನ್ನಟ್ಟಿದ್ದ ತಂಡಕ್ಕೆ ಜೈಸ್ವಾಲ್‌ ಆಸರೆಯಾಗಿದ್ದರು. ಅವರು 60 ಎಸೆತಗಳಲ್ಲಿ ಔಟಾಗದೆ 104 ರನ್‌ ಸಿಡಿಸಿ, 9 ವಿಕೆಟ್‌ಗಳ ಸುಲಭ ಜಯವನ್ನು ತಂದುಕೊಟ್ಟಿದ್ದರು. 

ಜೋಸ್‌ ಬಟ್ಲರ್‌ ಎರಡು ಶತಕ ಹೊಡೆದಿದ್ದು ಅಮೋಘ ಲಯದಲ್ಲಿದ್ದಾರೆ.  ಸಂಜು ನಾಯಕನಿಗೆ ತಕ್ಕ  ಆಟವಾಡುತ್ತಿದ್ದಾರೆ. ಅವರು ಎಂಟು ಪಂದ್ಯಗಳಲ್ಲಿ 314 ರನ್‌ ಕಲೆ ಹಾಕಿದ್ದಾರೆ. ರೋವ್ಮನ್‌ ಪೊವೆಲ್‌ ಮತ್ತು ಧ್ರುವ್ ಜುರೇಲ್‌ ಅವರಿಂದ ಇನ್ನಷ್ಟು ಕೊಡುಗೆ ಬರಬೇಕಿದೆ.

ತಂಡದ ಬೌಲಿಂಗ್‌ ವಿಭಾಗವೂ ಸಮತೋಲನದಲ್ಲಿದೆ. ಅನುಭವಿ ಟ್ರೆಂಟ್ ಬೌಲ್ಟ್, ಅವೇಶ್ ಖಾನ್ ಮತ್ತು ಸಂದೀಪ್ ಶರ್ಮಾ ಎದುರಾಳಿ ತಂಡದ ರನ್‌ ಕಡಿವಾಣಕ್ಕೆ ಅಸ್ತ್ರವಾಗಿದ್ದಾರೆ. ಮುಂಬೈ ವಿರುದ್ಧದ ಪಂದ್ಯದಲ್ಲಿ ಸಂದೀಪ್‌ ಐದು ವಿಕೆಟ್‌ ಗೊಂಚಲು ಸಾಧನೆ ಮೆರೆದಿದ್ದರು. ಮತ್ತೊಂದೆಡೆ ಅನುಭವಿ ಸ್ಪಿನ್ನರ್‌ಗಳಾದ ಯಜುವೇಂದ್ರ ಚಾಹಲ್‌, ರವಿಚಂದ್ರನ್‌ ಅಶ್ವಿನ್‌ ಎದುರಾಳಿ ಬ್ಯಾಟರ್‌ಗಳನ್ನು ಕಟ್ಟಿಹಾಕುವ ಸಾಮರ್ಥ್ಯ ಹೊಂದಿದ್ದಾರೆ. ಚಾಹಲ್‌ ಈ ಆವೃತ್ತಿಯಲ್ಲಿ 13 ವಿಕೆಟ್‌ ಗಳಿಸಿದ್ದಾರೆ.

ಲಖನೌ ತಂಡದ ಬ್ಯಾಟರ್‌ಗಳಿಂದ ಸ್ಥಿರ ಪ್ರದರ್ಶನ ಬರುತ್ತಿಲ್ಲ. ಅನುಭವಿ ಕ್ವಿಂಟನ್‌ ಡಿ ಕಾಕ್‌ ಮತ್ತು ರಾಹುಲ್‌ ತಂಡಕ್ಕೆ ಉತ್ತಮ ಆರಂಭ ಒದಗಿಸುವ ಸಾಮಥ್ಯವಿರುವ ಆಟಗಾರರು. ನಿಕೊಲಸ್ ಪೂರನ್ ಅವರ ಸ್ಫೋಟಕ ಶೈಲಿಯ ಬ್ಯಾಟಿಂಗ್‌ನಿಂದಾಗಿ ಮಧ್ಯಮ ಕ್ರಮಾಂಕವು ಉತ್ತಮವಾಗಿದೆ. ಕಳೆದ ಪಂದ್ಯದಲ್ಲಿ ಮಾರ್ಕಸ್ ಸ್ಟೋಯಿನಿಸ್ ಶತಕ ಗಳಿಸಿ ತಂಡದ ಬ್ಯಾಟಿಂಗ್ ಬಲ ಹೆಚ್ಚಿಸಿದ್ದಾರೆ.  ಆದರೆ,  ದೇವದತ್ತ ಪಡಿಕ್ಕಲ್ ಮತ್ತು ದೀಪಕ್ ಹೂಡಾ ಅವರಿಂದ ಸುಧಾರಿತ ಆಟ ಬರಬೇಕಿದೆ.

ಆರಂಭದ ಕೆಲವು ಪಂದ್ಯಗಳಲ್ಲಿ ಪರಿಣಾಮಕಾರಿಯಾಗಿದ್ದ ಯುವ ವೇಗಿ ಮಯಂಕ್ ಯಾದವ್‌ ಹೊಟ್ಟೆನೋವಿನಿಂದ ವಿಶ್ರಾಂತಿ ಪಡೆದಿದ್ದರು. ಅವರು ಚೇತರಿಸಿಕೊಂಡಿದ್ದು ಈ ಪಂದ್ಯಕ್ಕೆ ಹಿಂದಿರುಗುವ ಸಾಧ್ಯತೆಯಿದೆ.

ಪಂದ್ಯ ಆರಂಭ: ರಾತ್ರಿ 7.30

=

ಮುಖಾಮುಖಿ

ಒಟ್ಟು ಪಂದ್ಯ 4

ರಾಜಸ್ಥಾನ ಜಯ 3

ಲಖನೌ ಗೆಲುವು 1

ಲಖನೌ ಸೂಪರ್‌ ಜೈಂಟ್ಸ್‌ ತಂಡದ ನಾಯಕ ಕೆ.ಎಲ್‌. ರಾಹುಲ್‌ –ಪಿಟಿಐ ಚಿತ್ರ
ಲಖನೌ ಸೂಪರ್‌ ಜೈಂಟ್ಸ್‌ ತಂಡದ ನಾಯಕ ಕೆ.ಎಲ್‌. ರಾಹುಲ್‌ –ಪಿಟಿಐ ಚಿತ್ರ

Highlights - null

Cut-off box - null

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT