ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸವಾಲಿನ ಮೊತ್ತ ಪೇರಿಸುವಲ್ಲಿ ಎಡವಿದೆವು: ಹಾರ್ದಿಕ್ ಪಾಂಡ್ಯ

Published 14 ಆಗಸ್ಟ್ 2023, 21:30 IST
Last Updated 14 ಆಗಸ್ಟ್ 2023, 21:30 IST
ಅಕ್ಷರ ಗಾತ್ರ

ಲಾಡೆರ್‌ಹಿಲ್‌, ಅಮೆರಿಕ: ಕೊನೆಯ 10 ಓವರ್‌ಗಳಲ್ಲಿ ವೇಗವಾಗಿ ರನ್‌ ಗಳಿಸುವಲ್ಲಿ ವಿಫಲವಾದ್ದರಿಂದ ವೆಸ್ಟ್ ಇಂಡೀಸ್‌ ವಿರುದ್ಧದ ಅಂತಿಮ ಟಿ20 ಪಂದ್ಯದಲ್ಲಿ ಸೋಲು ಎದುರಾಯಿತು ಎಂದು ಭಾರತ ತಂಡದ ನಾಯಕ ಹಾರ್ದಿಕ್‌ ಪಾಂಡ್ಯ ಅಭಿ‍‍ಪ್ರಾಯಪಟ್ಟರು.

ಭಾನುವಾರ ನಡೆದಿದ್ದ ಸರಣಿ ನಿರ್ಣಾಯಕ ಟಿ20 ಪಂದ್ಯದಲ್ಲಿ ಭಾರತ 8 ವಿಕೆಟ್‌ಗಳಿಂದ ಸೋತಿತ್ತು. ಇದರಿಂದ ವಿಂಡೀಸ್‌ ತಂಡ ಐದು ಪಂದ್ಯಗಳ ಸರಣಿಯನ್ನು 3–2 ರಿಂದ ತನ್ನದಾಗಿಸಿಕೊಂಡಿತ್ತು.

ತಮ್ಮ ನಿಧಾನಗತಿ ಬ್ಯಾಟಿಂಗ್‌ ಕೂಡಾ ಸೋಲಿಗೆ ಕಾರಣ ಎಂಬುದನ್ನು ಅವರನ್ನು ಒಪ್ಪಿಕೊಂಡರು. ಪಾಂಡ್ಯ ಈ ಪಂದ್ಯದಲ್ಲಿ 18 ಎಸೆತಗಳಲ್ಲಿ 14 ರನ್‌ ಗಳಿಸಿದ್ದರು.

‘ಕೊನೆಯ 10 ಓವರ್‌ಗಳಲ್ಲಿ ಬಿರುಸಿನ ಆಟವಾಡುವಲ್ಲಿ ಎಡವಿದ್ದರಿಂದ ಸವಾಲಿನ ಮೊತ್ತ ಪೇರಿಸಲು ಆಗಲಿಲ್ಲ. ನಾನು ಪರಿಸ್ಥಿತಿಗೆ ಹೊಂದಿಕೊಳ್ಳಲು ತುಂಬಾ ಸಮಯ ತೆಗೆದುಕೊಂಡೆ. ಆ ಬಳಿಕವೂ ಅಬ್ಬರದ ಆಟವಾಡಲು ಆಗಲಿಲ್ಲ’ ಎಂದು ಪಂದ್ಯದ ಬಳಿಕ ಪ್ರತಿಕ್ರಿಯಿಸಿದ್ದಾರೆ.

ಟಾಸ್ ಗೆದ್ದು ಮೊದಲು ಬ್ಯಾಟ್‌ ಮಾಡಿದ ತೀರ್ಮಾನವನ್ನು ಅವರು ಸಮರ್ಥಿಸಿಕೊಂಡರು. ‘ಒಂದು ತಂಡವಾಗಿ ನಾವು ನಮ್ಮನ್ನು ಸವಾಲಿಗೆ ಒಡ್ಡಿಕೊಳ್ಳಬೇಕು. ಇಂತಹ ಪಂದ್ಯಗಳಿಂದ ನಮಗೆ ಕಲಿಯಲು ಸಾಕಷ್ಟಿರುತ್ತದೆ’ ಎಂದು ಹೇಳಿದರು.

ಕೆಳಕ್ರಮಾಂಕದ ಬ್ಯಾಟಿಂಗ್‌ ಬಲಿಷ್ಠವಾಗಬೇಕು: ತಂಡದ ಕೆಳಕ್ರಮಾಂಕದ ಬ್ಯಾಟಿಂಗ್‌ ಇನ್ನಷ್ಟು ಬಲಿಷ್ಠವಾಗಬೇಕು ಎಂದು ಕೋಚ್‌ ರಾಹುಲ್‌ ದ್ರಾವಿಡ್‌ ಹೇಳಿದ್ದಾರೆ.

‘ತಂಡವು ಕೆಲವೊಂದು ವಿಭಾಗಗಳಲ್ಲಿ ಸುಧಾರಣೆ ಕಾಣಬೇಕಿದೆ. ಕೊನೆಯ ಕ್ರಮಾಂಕದ ಬ್ಯಾಟಿಂಗ್‌ನ ಬಲ ಹೆಚ್ಚಬೇಕಿರುವುದು ಅದರಲ್ಲಿ ಒಂದು. ಈ ವಿಭಾಗದಲ್ಲಿ ಸುಧಾರಣೆ ಕಂಡುಕೊಳ್ಳಲು ಪ್ರಯತ್ನಿಸುತ್ತಾ ಇದ್ದೇವೆ. ಅದೇ ವೇಳೆ, ಬೌಲಿಂಗ್‌ ವಿಭಾಗವು ಶಕ್ತಿ ಕಳೆದುಕೊಳ್ಳದಂತೆ ನೋಡುವುದೂ ಮುಖ್ಯ’ ಎಂದು ತಿಳಿಸಿದರು.

‘ವಿಂಡೀಸ್‌ ತಂಡದಲ್ಲಿ 11ನೇ ಕ್ರಮಾಂಕದ‌ಲ್ಲಿ ಬ್ಯಾಟಿಂಗ್‌ಗೆ ಬರುವ ಅಲ್ಜರಿ ಜೋಸೆಫ್‌ ಭರ್ಜರಿ ಹೊಡೆತಗಳನ್ನು ಆಡಬಲ್ಲರು. ನಮ್ಮ ತಂಡವೂ ಅದೇ ರೀತಿಯಲ್ಲಿ ಕೊನೆಯವರೆಗೂ ಬಲಿಷ್ಠ ಬ್ಯಾಟಿಂಗ್‌ ಕ್ರಮಾಂಕ ಹೊಂದಿರಬೇಕು’ ಎಂದರು.

ವಿಂಡೀಸ್‌ ಪ್ರವಾಸದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ತಿಲಕ್‌ ವರ್ಮಾ, ಯಶಸ್ವಿ ಜೈಸ್ವಾಲ್‌ ಮತ್ತು ಮುಕೇಶ್‌ ಕುಮಾರ್‌ ಅವರ ಬಗ್ಗೆ ದ್ರಾವಿಡ್‌ ಮೆಚ್ಚಗೆಯ ಮಾತುಗಳನ್ನಾಡಿದರು.

‘ಈ ಸರಣಿಯಲ್ಲಿ ಪದಾರ್ಪಣೆ ಮಾಡಿದ ಮೂವರೂ ನಿರೀಕ್ಷೆ ಹುಸಿಗೊಳಿಸಲಿಲ್ಲ. ಯಶಸ್ವಿ ಅವರು ನಾಲ್ಕನೇ ಪಂದ್ಯದಲ್ಲಿ ಅದ್ಭುತವಾಗಿ ಆಡಿದರು. ಐಪಿಎಲ್‌ನಲ್ಲಿ ತೋರಿದ್ದ ಸಾಧನೆಯನ್ನು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲೂ ಮುಂದುವರಿಸಿದ್ದನ್ನು ನೋಡುವಾಗ ಖುಷಿಯಾಗುತ್ತದೆ. ಮಧ್ಯಮ ಕ್ರಮಾಂಕದಲ್ಲಿ ಆಡಿದ ತಿಲಕ್‌ ಕೂಡಾ ಗಮನ ಸೆಳೆದರು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT