ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2024 KKR v RR: ಕೋಲ್ಕತ್ತ ವಿರುದ್ಧ ರೋಚಕ ಜಯ ಸಾಧಿಸಿದ ರಾಜಸ್ಥಾನ ರಾಯಲ್ಸ್

ಜೋಸ್‌ ಬಟ್ಲರ್‌ ಅವರ ಅಜೇಯ ಶತಕದ (ಔಟಾಗದೆ 107; 60ಎ, 4x9, 6x6) ಮುಂದೆ ಸುನಿಲ್‌ ನಾರಾಯಣ (109; 56ಎ, 4x13, 6x6) ಅವರ ಶತಕದಾಟ ಮಂಕಾಯಿತು.
Published 16 ಏಪ್ರಿಲ್ 2024, 14:07 IST
Last Updated 16 ಏಪ್ರಿಲ್ 2024, 18:25 IST
ಅಕ್ಷರ ಗಾತ್ರ

ಕೋಲ್ಕತ್ತ: ಜೋಸ್‌ ಬಟ್ಲರ್‌ ಅವರ ಅಜೇಯ ಶತಕದ (ಔಟಾಗದೆ 107; 60ಎ, 4x9, 6x6) ಮುಂದೆ ಸುನಿಲ್‌ ನಾರಾಯಣ (109; 56ಎ, 4x13, 6x6) ಅವರ ಶತಕದಾಟ ಮಂಕಾಯಿತು. ಮಂಗಳವಾರ ನಡೆದ ಐಪಿಎಲ್‌ ಪಂದ್ಯದ ರೋಚಕ ಹಣಾಹಣಿಯಲ್ಲಿ ರಾಜಸ್ಥಾನ ರಾಯಲ್ಸ್‌ ತಂಡವು ಎರಡು ವಿಕೆಟ್‌ಗಳಿಂದ ಕೋಲ್ಕತ್ತ ನೈಟ್‌ ರೈಡರ್ಸ್‌ ತಂಡವನ್ನು ಮಣಿಸಿತು.

ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ಸುನಿಲ್ (109; 56ಎಸೆತ) ಅವರ ಮಿಂಚಿನ ಬ್ಯಾಟಿಂಗ್‌ ಬಲದಿಂದ ಕೋಲ್ಕತ್ತ ತಂಡವು 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 223 ರನ್‌ ಗಳಿಸಿತು. 

ಈ ಗುರಿಯನ್ನು ಬೆನ್ನತ್ತಿದ ರಾಜಸ್ಥಾನ ತಂಡದ ಪರ ಬಟ್ಲರ್‌ ಮತ್ತೆ ಮಿಂಚಿದರು. ಆರಂಭಿಕ ಆಟಗಾರನಾಗಿ ಕ್ರೀಸ್‌ಗೆ ಬಂದ ಅವರು, ತಾಳ್ಮೆಯಿಂದ ಆಟವಾಡಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಕೊನೆಯ ಓವರ್‌ನಲ್ಲಿ 9 ರನ್‌ ಬೇಕಿದ್ದಾಗ ಮೊದಲ ಎಸೆತವನ್ನು ಸಿಕ್ಸರ್‌ ಸಿಡಿಸುವ ಮೂಲಕ ಐಪಿಎಲ್‌ನ ಈ ಆವೃತ್ತಿಯಲ್ಲಿ ಎರಡನೇ ಶತಕ ಪೂರೈಸಿದರು. ತಂಡವು 20 ಓವರ್‌ಗಳಲ್ಲಿ 8 ವಿಕೆಟ್‌ ಕಳೆದುಕೊಂಡು 224 ರನ್‌ ಗಳಿಸುವುದರೊಂದಿಗೆ ಪಾಯಿಂಟ್‌ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿಯಿತು.

ರಾಯಲ್ಸ್‌ ತಂಡದ ಆರಂಭ ಉತ್ತಮವಾಗಿರಲಿಲ್ಲ. 22 ರನ್‌ ಗಳಿಸುವಷ್ಟರಲ್ಲಿ ಯಶಸ್ವಿ ಜೈಸ್ವಾಲ್‌ (19; 9ಎ) ಅವರನ್ನು ಕಳೆದುಕೊಂಡಿತು. ನಂತರ ಬಂದ ನಾಯಕ ಸಂಜು ಸ್ಯಾಮ್ಸನ್ (12) ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಮೂರನೇ ವಿಕೆಟ್‌ಗೆ ಬಟ್ಲರ್‌ ಮತ್ತು ರಿಯಾನ್‌ ಪರಾಗ್‌ 22 ಎಸೆತಗಳಲ್ಲಿ 50 ರನ್‌ ಸೇರಿಸಿದರು. ಧ್ರುವ ಜುರೇಲ್‌ (2), ರವಿಚಂದ್ರನ್‌ ಅಶ್ವಿನ್‌ (8), ಶಿಮ್ರಾನ್ ಹೆಟ್ಮೆಯರ್ (0) ವೈಫಲ್ಯ ಅನುಭವಿಸಿದರು. ಈ ಹಂತದಲ್ಲಿ ತಂಡಕ್ಕೆ ಗೆಲುವಿನ ಹಾದಿ ಕಠಿಣವಾಗಿತ್ತು.

ಆದರೆ, ಏಳನೇ ವಿಕೆಟ್‌ ಜೊತೆಯಾಟದಲ್ಲಿ ಬಟ್ಲರ್‌ ಅವರು ರೋವ್ಮನ್ ಪೊವೆಲ್ ಅವರೊಂದಿಗೆ 27 ಎಸೆತಗಳಲ್ಲಿ 57 ರನ್‌ ಸೇರಿಸಿ ಗೆಲುವಿನ ಆಸೆ ಚಿಗುರಿಸಿದರು. ಪೊವೆಲ್‌ ಔಟಾದಾಗ ಗೆಲುವಿಗೆ ಇನ್ನೂ 46 ರನ್‌ ಅಗತ್ಯವಿತ್ತು. ನಂತರದಲ್ಲಿ ಗೆಲುವಿಗೆ ಬೇಕಾದ ಅಷ್ಟೂ ರನ್‌ಗಳನ್ನು ಬಟ್ಲರ್‌ ಒಬ್ಬರೇ ಸೂರೆಮಾಡಿದರು. ಕೋಲ್ಕತ್ತ ಪರ ಹರ್ಷಿತ್‌ ರಾಣಾ, ಸುನಿಲ್‌ ನಾರಾಯಣ್ ಮತ್ತು ವರುಣ್‌ ಚಕ್ರವರ್ತಿ ತಲಾ ಎರಡು ವಿಕೆಟ್‌ ಪಡೆದರು.

ಇದಕ್ಕೂ ಮೊದಲು ಬ್ಯಾಟಿಂಗ್‌ಗೆ ಇಳಿದ ಕೋಲ್ಕತ್ತ ತಂಡಕ್ಕೆ ನಾಲ್ಕನೇ ಓವರ್‌ನಲ್ಲಿ ಆವೇಶ್ ಖಾನ್ ತಮ್ಮದೇ ಎಸೆತದಲ್ಲಿ ಫಿಲ್ ಸಾಲ್ಟ್ ಕ್ಯಾಚ್ ಪಡೆದು ಮೊದಲ ಬೇಟೆಯಾಡಿದರು.  ಆದರೆ ಇನ್ನೊಂದು ಬದಿಯಲ್ಲಿ ತಮ್ಮ ಎಂದಿನ ಶಾಂತ ಮುಖಭಾವದೊಂದಿಗೆ ಬ್ಯಾಟ್ ಬೀಸಲು ಆರಂಭಿಸಿದ ಸುನಿಲ್ ಅವರನ್ನು ನಿಯಂತ್ರಿಸಲು 18ನೇ ಓವರ್‌ನವರೆಗೂ ಸಾಧ್ಯವಾಗಲಿಲ್ಲ. 

ಈ ನಡುವೆ ಸುನಿಲ್ ಅವರು ಅಂಗಕ್ರಿಷ್ ರಘುವಂಶಿ (30; 18ಎ) ಅವರೊಂದಿಗೆ ಎರಡನೇ ವಿಕೆಟ್ ಜೊತೆಯಾಟದಲ್ಲಿ 85 ರನ್‌ ಸೇರಿಸಿದರು. ಅದರಲ್ಲಿ ಸುನಿಲ್ ಅವರದ್ದೇ ಸಿಂಹಪಾಲು. 11ನೇ ಓವರ್‌ನಲ್ಲಿ ಕುಲದೀಪ್ ಸೇನ್ ಅವರು ರಘುವಂಶಿ ವಿಕೆಟ್ ಗಳಿಸಿ ಜೊತೆಯಾಟ ಮುರಿದರು. ನಾಯಕ ಶ್ರೇಯಸ್ ಅಯ್ಯರ್ ಕ್ರೀಸ್‌ಗೆ ಬಂದರು. ಒಂದು ಬೌಂಡರಿ ಹಾಗೂ ಸಿಕ್ಸರ್ ಗಳಿಸಿ ಸ್ಪಿನ್ನರ್ ಯಜುವೆಂದ್ರ ಚಾಹಲ್ ಬೀಸಿದ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. 

ಈ ಹಂತದಲ್ಲಿ ಸುನಿಲ್ ಜೊತೆಗೂಡಿದ ಆ್ಯಂಡ್ರೆ ರಸೆಲ್ ತಮ್ಮ ಹೊಡಿ ಬಡಿ ಆಟಕ್ಕೆ ಒತ್ತು ಕೊಡಲಿಲ್ಲ. ಬದಲಿಗೆ ಸುನಿಲ್ ಅವರ ಆಟಕ್ಕೆ ಸಾಕ್ಷಿಯಾದರು.  79 ರನ್ ಗಳಿಸಿದ್ದ ಸುನಿಲ್ ಅವರು ಚಾಹಲ್ ಹಾಕಿದ 16ನೇ ಓವರ್‌ನಲ್ಲಿ ಎರಡು ಸಿಕ್ಸರ್ ಮತ್ತು ಎರಡು ಬೌಂಡರಿ ಸಹಿತ 21 ರನ್ ಗಳಿಸಿ 100ರ ಗಡಿ ಮುಟ್ಟಿದರು. ಬ್ಯಾಟ್‌ ಎತ್ತಿ ಜಿಗಿದು ಸಂಭ್ರಮಿಸಿದರು. ಧಾವಿಸಿ ಬಂದ ರಸೆಲ್ ತಮ್ಮ ಗೆಳೆಯನನ್ನು ಆಲಂಗಿಸಿ ಅಭಿನಂದಿಸಿದರು. ಸುನಿಲ್‌ ಅವರಿಗೆ ಐಪಿಎಲ್‌ನಲ್ಲಿ ತಮ್ಮ ಚೊಚ್ಚಲ ಶತಕವಾಗಿದೆ. 

ತಮ್ಮ ಆಟದ ವೇಗವನ್ನು ಮತ್ತಷ್ಟು ಹೆಚ್ಚಿಸಿದ ಸುನಿಲ್‌ ಅವರನ್ನು 18ನೇ ಓವರ್‌ನಲ್ಲಿ ಟ್ರೆಂಟ್ ಬೌಲ್ಟ್ ಅವರು ಯಾರ್ಕರ್‌ ಮೂಲಕ ಕ್ಲೀನ್‌ಬೌಲ್ಡ್ ಮಾಡಿದರು. ‌

ಆವೇಶ್ ಖಾನ್ ಹಾಕಿದ 19ನೇ ಓವರ್‌ನಲ್ಲಿ  16 ರನ್ ಹಾಗೂ ಕುಲದೀಪ್ ಹಾಕಿದ ಕೊನೆಯ ಓವರ್‌ನಲ್ಲಿ 20 ರನ್‌ಗಳು ಬರುವಂತೆ ವೆಂಕಟೇಶ್ ಅಯ್ಯರ್ ಮತ್ತು ರಿಂಕು ಸಿಂಗ್ ನೋಡಿಕೊಂಡರು. ಇದರಿಂದಾಗಿ ತಂಡದ ಮೊತ್ತವು ಬೆಳೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT