ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2024: RCB vs SRH- ವೀರೋಚಿತ ಸೋಲು ಕಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು

ಸನ್‌ ರೈಸರ್ಸ್ ಹೈದರಾಬಾದ್ ತಂಡಕ್ಕೆ 25 ರನ್‌ಗಳ ಜಯ
Published 15 ಏಪ್ರಿಲ್ 2024, 18:17 IST
Last Updated 15 ಏಪ್ರಿಲ್ 2024, 18:17 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರಿನಲ್ಲಿ ಈ ಬಾರಿ ಮಳೆಯಾಗಿಲ್ಲ. ಆದರೆ ಶತಕ ಬಾರಿಸಿದ ಟ್ರಾವಿಸ್‌ ಹೆಡ್‌ (102, 41ಎ, 4x9, 6x8) ಆದಿಯಾಗಿ ಹೈದರಾಬಾದ್‌ನ ಪ್ರಮುಖ ಬ್ಯಾಟರ್‌ಗಳು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬೌಂಡರಿ, ಸಿಕ್ಸರ್‌ಗಳ ಸುರಿಮಳೆಗರೆದರು. ಸೋಮವಾರ ನಡೆದ ಐಪಿಎಲ್‌ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಲೀಗ್‌ನ ಸರ್ವಾಧಿಕ ಮೊತ್ತ ದಾಖಲಿಸಿತಲ್ಲದೇ, ಅಂತಿಮವಾಗಿ ಪಂದ್ಯವನ್ನು 25 ರನ್‌ಗಳಿಂದ ಗೆದ್ದುಕೊಂಡಿತು.

ಸನ್‌ರೈಸರ್ಸ್‌ ತಂಡ ‘ಹಿಮಾಲಯದೆತ್ತರದ ಮೊತ್ತ’ದ ಎದುರು ಆರ್‌ಸಿಬಿ ಒಂದು ಹಂತದಲ್ಲಿ ಕುಸಿದರೂ (5 ವಿಕೆಟ್‌ಗೆ 122) ಹೋರಾಟ ತೋರಿತು.

ಸನ್‌ರೈಸರ್ಸ್‌ ಹೈದರಾಬಾದ್‌ ತಂಡ 3 ವಿಕೆಟ್‌ಗೆ 287 ರನ್‌ಗಳ ಭಾರಿ ಮೊತ್ತ ಗಳಿಸಿ, ಇದೇ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್‌ ವಿರುದ್ಧ ಗಳಿಸಿದ್ದ 277 ರನ್‌ಗಳ ತನ್ನದೇ ದಾಖಲೆಯನ್ನು ಸುಧಾರಿಸಿತು. ಬೆಂಗಳೂರು ತಂಡ 7 ವಿಕೆಟ್‌ಗೆ 262 ರನ್‌ ಗಳಿಸಿತು.

ವಿರಾಟ್ ಕೊಹ್ಲಿ ಮತ್ತು ಫಫ್‌ ಡುಪ್ಲೆಸಿ 80 ರನ್‌ ಸೇರಿಸಿ ಉತ್ತಮ ಆರಂಭ ನೀಡಿದರು. ನಂತರ ದಿನೇಶ್ ಕಾರ್ತಿಕ್‌ (83, 35ಎ, 4x5, 6x7) ಮತ್ತೊಮ್ಮೆ ಏಕಾಂಗಿಯಾಗಿ ಹೋರಾಡಿದರು. ಅವರಿಗೆ ಉಳಿದವರಿಂದ ಬೆಂಬಲ ಸಿಗಲಿಲ್ಲ.

ಮುರಿದ ದಾಖಲೆಗಳು:

ದಾಖಲೆಗಳಿಗೆ ಬರವಿರಲಿಲ್ಲ. ಈ ಪಂದ್ಯದಲ್ಲಿ 38 ಸಿಕ್ಸರ್‌ಗಳು ಬಂದಿದ್ದು ದಾಖಲೆ. ಸನ್‌ರೈಸರ್ಸ್ ಹೊಡೆದ 22 ಸಿಕ್ಸರ್‌ಗಳು ಅತ್ಯಧಿಕ. 2013ರಲ್ಲಿ ಪುಣೆ ವಾರಿಯರ್ಸ್ ವಿರುದ್ಧ ಆರ್‌ಸಿಬಿ 21 ಸಿಕ್ಸರ್‌ಗಳನ್ನು ಬಾರಿಸಿತ್ತು. ಇಂದಿನ ಪಂದ್ಯದಲ್ಲಿ ಒಟ್ಟು 549  ರನ್‌ಗಳು ಬಂದಿದ್ದೂ ದಾಖಲೆ. ಹೈದರಾಬಾದ್‌ ಮತ್ತು ಮುಂಬೈ ತಂಡಗಳ ನಡುವಣ ಇತ್ತೀಚಿನ ಪಂದ್ಯದಲ್ಲಿ 523 ರನ್ ಬಂದಿದ್ದು ಈ ಹಿಂದಿನ ದಾಖಲೆ.

ಕೊಹ್ಲಿ ಮತ್ತು ನಾಯಕ ಫಫ್‌ ಡುಪ್ಲೆಸಿ ಮೊದಲ ವಿಕೆಟ್‌ಗೆ 6.2 ಓವರುಗಳಲ್ಲಿ 80 ರನ್ ಸೇರಿಸಿದಾಗ ಆಸೆ ಚಿಗುರಿತ್ತು. ಆದರೆ ಲೆಗ್‌ ಸ್ಪಿನ್ನರ್‌ ಮಯಂಕ್‌ ಮಾರ್ಕಂಡೆ ತಮ್ಮ ಮೊದಲ ಓವರ್‌ನಲ್ಲೇ ಕೊಹ್ಲಿ (42, 20ಎ, 4x6, 6x2) ಅವರ ವಿಕೆಟ್‌ ಪಡೆದಾಗ ಕಿಕ್ಕಿರಿದಿದ್ದ ಕ್ರೀಡಾಂಗಣ ಸ್ತಬ್ಧವಾಯಿತು.  ಗೂಗ್ಲಿ ಎಸೆತವನ್ನು ಸ್ವೀಪ್ ಮಾಡಲು ಹೋಗಿ ಅವರು ಎಡವಿದರು. ಮುಂದಿನ ಎರಡು ಓವರ್‌ಗಳ ಅಂತರದಲ್ಲಿ ವಿಲ್‌ ಜಾಕ್ಸ್‌ ಮತ್ತು ರಜತ್‌ ಪಾಟೀದಾರ್ ಕೂಡ ನಿರ್ಗಮಿಸಿದರು.

ನಂತರ ವೇಗದ ಬೌಲರ್‌ ಪ್ಯಾಟ್‌ ಕಮಿನ್ಸ್‌ ಒಂದೇ ಓವರ್‌ನಲ್ಲಿ ಡುಪ್ಲೆಸಿ (62, 28ಎ, 4x7, 6x4) ಮತ್ತು ಸೌರವ್‌ ಚೌಹಾನ್ ವಿಕೆಟ್‌ ಪಡೆದು ಪೆಟ್ಟು ನೀಡಿದರು. ನಂತರ ದಿನೇಶ್ ಹೋರಾಟ ಪ್ರೇಕ್ಷಕರನ್ನು ರಂಜಿಸಿದರು. ದಿನೇಶ್ ಅವರ ವಿಕೆಟ್‌ ಸೇರಿದಂತೆ ಪ್ಯಾಟ್‌ ಕಮಿನ್ಸ್‌ 43 ರನ್ನಿಗೆ 3 ವಿಕೆಟ್‌ ಪಡೆದು ಬ್ಯಾಟರ್‌ಗಳ ಮೇಲಾಟ ಕಂಡ ಪಂದ್ಯದಲ್ಲಿ ಯಶಸ್ವಿ ಬೌಲರ್‌ ಎನಿಸಿದರು.

ಇದಕ್ಕೆ ಮೊದಲು, ಟಾಸ್‌ ಸೋತರೂ ಸನ್‌ರೈಸರ್ಸ್‌ ತಂಡ ಆರಂಭದಿಂದಲೇ ಆಕ್ರಮಣಕಾರಿ ಆಟದ ಇರಾದೆ ಪ್ರದರ್ಶಿಸಿತು. ಟೋಪ್ಲಿ ಮಾಡಿದ ಇನಿಂಗ್ಸ್‌ನ ಎರಡನೇ ಓವರ್‌ನಲ್ಲಿ ಎರಡು ಸಿಕ್ಸರ್‌ ಸೇರಿ 20 ರನ್‌ಗಳು ಬಂದವು. ಹೆಡ್‌ ಮತ್ತು ಅಭಿಷೇಕ್‌ ಶರ್ಮಾ ಅಬ್ಬರದ ಆಟದೆದುರು ಬೌಲರ್‌ಗಳು ಲಯ ತಪ್ಪಿದರು. ಪವರ್‌ಪ್ಲೇ ಅವಧಿಯಲ್ಲೇ 76 ರನ್‌ಗಳು ಬಂದವು. ನಂತರವೂ ಏನೂ ವ್ಯತ್ಯಾಸ ಆಗಲಿಲ್ಲ. ವೈಶಾಖ್ ವಿಜಯಕುಮಾರ್ ಅವರ ಮೊದಲ (ಪಂದ್ಯದ 8ನೇ) ಎಸೆತವನ್ನೇ ಲಾಂಗ್‌ಆಫ್‌ಗೆ ಸಿಕ್ಸರ್ ಎತ್ತಿದ ಅಭಿಷೇಕ್‌ ಶರ್ಮಾ (34, 22ಎ) ತಂಡದ ಮೊತ್ತವನ್ನು ನೂರು ದಾಟಿಸಿದರು. ಮೊದಲ ವಿಕೆಟ್‌ಗೆ ಇವರಿಬ್ಬರು ಕೇವಲ ಎಂಟು ಓವರ್‌ಗಳಲ್ಲಿ 108 ರನ್ ಸೇರಿಸಿದರು. 

ಅಭಿಷೇಕ್‌ ಶರ್ಮಾ 9ನೇ ಓವರ್‌ನಲ್ಲಿ ನಿರ್ಗಮಿಸಿದರು. ಆದರೆ ಹೆಡ್‌ ಜೊತೆಗೂಡಿದ ವಿಕೆಟ್‌ ಕೀಪರ್‌ ಹೆನ್ರಿಚ್‌ ಕ್ಲಾಸೆನ್‌ (67, 31ಎ, 4x2, 7x6), ಹೆಡ್‌ ಜೊತೆ ಆಕ್ರಮಣದ ಆಟ ಮುಂದುವರಿಸಿದರು. ವೈಶಾಖ್‌ ವಿಜಯಕುಮಾರ್ ಬೌಲಿಂಗ್‌ನಲ್ಲಿ ಲಾಂಗ್‌ಆನ್‌ಗೆ ಸೊಗಸಾದ ಬೌಂಡರಿ ಎತ್ತಿದ ಹೆಡ್‌ 39ನೇ ಎಸೆತಗಳಲ್ಲೇ ಶತಕ ಪೂರೈಸಿದರು. ಇದು ಐಪಿಎಲ್‌ನಲ್ಲಿ ಅವರ ಮೊದಲ ಶತಕ.

ಎರಡನೇ ವಿಕೆಟ್‌ಗೆ ಕೇವಲ 26 ಎಸೆತಗಳಲ್ಲಿ 57 ರನ್‌ಗಳು ಬಂದವು. 13ನೇ ಓವರ್‌ನಲ್ಲಿ ಟ್ರಾವಿಸ್‌ ಹೆಡ್‌ ಮಿಡ್‌ಆಫ್‌ನಲ್ಲಿ ಕ್ಯಾಚಿತ್ತು ನಿರ್ಗಮಿಸಿದರೂ ಆರ್‌ಸಿಬಿ ಗೋಳು ಮುಂದುವರಿಯಿತು.

ಕ್ಲಾಸೆನ್ ಮತ್ತು ಮರ್ಕರಂ (ಔಟಾಗದೇ 32, 17ಎ) ಕೇವಲ 27 ಎಸೆತಗಳಲ್ಲಿ ಮೂರನೇ ವಿಕೆಟ್‌ಗೆ 66 ರನ್‌ ಹರಿಸಿದರು.  ನಂತರ ಮರ್ಕರಂ ಮತ್ತು ಸಮದ್‌ ಮುರಿಯದ ನಾಲ್ಕನೇ ವಿಕೆಟ್‌ಗೆ ಕೇವಲ 19 ಎಸೆತಗಳಲ್ಲಿ 56 ರನ್ ಸೇರಿಸಿದರು. 19ನೇ ಓವರ್‌ನಲ್ಲಿ (ಯಶ್‌ ದಯಾಳ್‌) 25 ರನ್‌ಗಳು ಬಂದಿದ್ಉ ಸಮದ್‌ ಒಬ್ಬರೇ 24 ರನ್‌ ಸಿಡಿಸಿದರು. ಅವರು 10 ಎಸೆತಗಳಲ್ಲೇ 4 ಬೌಂಡರಿ, ಮೂರು ಸಿಕ್ಸರ್‌ಗಳಿದ್ದ 37 ರನ್‌ ಚಚ್ಚಿದರು.

ಏಳು ಪಂದ್ಯಗಳಲ್ಲಿ ಇದು ಆರ್‌ಸಿಬಿಗೆ ಆರನೇ ಸೋಲು. ತವರಿನಲ್ಲಿ ಮೂರನೇಯದ್ದು. ಇದರಿಂದ ತಂಡದ ಪ್ಲೇ ಆಫ್‌ ಹಾದಿ ಕಠಿಣವಾಗುತ್ತಿದೆ. ಸನ್‌ರೈಸರ್ಸ್‌ಗೆ ಇದು ನಾಲ್ಕನೇ ಜಯ.

ಈ ಪಂದ್ಯಕ್ಕೆ ಬೆಂಗಳೂರಿನ ತಂಡ ಮೂರು ಬದಲಾವಣೆ ಮಾಡಿದರೂ ಪರಿಣಾಮ ಏನೂ ಆಗಲಿಲ್ಲ. ಗ್ಲೆನ್‌ ಮ್ಯಾಕ್ಸ್‌ವೆಲ್‌ ಬದಲು ಲಾಕಿ ಫರ್ಗ್ಯೂಸನ್‌, ಮೊಹಮ್ಮದ್‌ ಸಿರಾಜ್ ಬದಲು ಯಶ್‌ ದಯಾಳ್, ಆಕಾಶ್ ದೀಪ್‌ ಬದಲು ಸೌರವ್‌ ಚೌಹಾನ್‌ ಸ್ಥಾನ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT