ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2024: ರಾಹುಲ್ ಪಡೆಗೆ ಜಯದ ಖಾತೆ ತೆರೆಯುವ ಛಲ

ಲಖನೌ ಸೂಪರ್ ಜೈಂಟ್ಸ್‌ –ಪಂಜಾಬ್ ಕಿಂಗ್ಸ್ ಹಣಾಹಣಿ ಇಂದು
Published 29 ಮಾರ್ಚ್ 2024, 20:12 IST
Last Updated 29 ಮಾರ್ಚ್ 2024, 20:12 IST
ಅಕ್ಷರ ಗಾತ್ರ

ಲಖನೌ: ಕನ್ನಡಿಗ ಕೆ.ಎಲ್. ರಾಹುಲ್ ನಾಯಕತ್ವದ ಲಖನೌ ಸೂಪರ್‌ಜೈಂಟ್ಸ್ ತಂಡವು ಐಪಿಎಲ್ ಟೂರ್ನಿಯಲ್ಲಿ ಗೆಲುವಿನ ಖಾತೆ ತೆರೆಯುವ ಕನಸು ಕಾಣುತ್ತಿದೆ. 

ಶನಿವಾರ ಏಕನಾ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂಜಾಬ್ ಕಿಂಗ್ಸ್ ಎದುರಿನ ಪಂದ್ಯದಲ್ಲಿ ಜಯಿಸುವ ವಿಶ್ವಾಸದಲ್ಲಿದೆ. ರಾಹುಲ್ ಬಳಗವು ತನ್ನ ಮೊದಲ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಎದುರು ಸೋತಿತ್ತು. ಆ ಪಂದ್ಯದಲ್ಲಿ ಕೃಣಾಲ್ ಪಾಂಡ್ಯ  ಒಬ್ಬರನ್ನು ಬಿಟ್ಟು ಉಳಿದೆಲ್ಲ ಬೌಲರ್‌ಗಳೂ ಹೆಚ್ಚು ರನ್‌ ಕೊಟ್ಟಿದ್ದರು. ಕೃಣಾಲ್ ವಿಕೆಟ್ ಗಳಿಸಿರಲಿಲ್ಲ. ಆದರೆ ನಾಲ್ಕು ಓವರ್‌ಗಳಲ್ಲಿ 19 ರನ್‌ ಮಾತ್ರ ನೀಡಿದ್ದರು. 

ಮಾರ್ಕ್ ವುಡ್ ಅನುಪಸ್ಥಿತಿಯಲ್ಲಿ ಡೇವಿಡ್ ವಿಲಿ, ಮೊಹಸೀನ್ ಖಾನ್, ನವೀನ್ ಉಲ್ ಹಕ್ ಮತ್ತು ಯಶ್ ಠಾಕೂರ್ ಅವರು ಇರುವ ವೇಗದ ಬೌಲಿಂಗ್ ವಿಭಾಗ ಉತ್ತಮವಾಗಿದೆ. ಮುಂಬರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಡುವ ಅವಕಾಶ ಗಿಟ್ಟಿಸುವ ನಿರೀಕ್ಷೆಯಲ್ಲಿರುವ ರವಿ ಬಿಷ್ಣೋಯಿ ಕೂಡ ಮೊದಲ ಪಂದ್ಯದಲ್ಲಿ ಪರಿಣಾಮಕಾರಿಯಾಗಿರಲಿಲ್ಲ. ವಿಕೆಟ್‌ಕೀಪಿಂಗ್ ಹಾಗೂ ಬ್ಯಾಟಿಂಗ್ ಹೊಣೆ ನಿಭಾಯಿಸುತ್ತಿರುವ ನಾಯಕ ರಾಹುಲ್, ರಾಯಲ್ಸ್ ಎದುರು ಅರ್ಧಶತಕ ಗಳಿಸಿದ್ದರು. 

ತಂಡದಲ್ಲಿರುವ ಬೆಂಗಳೂರಿನ ಬ್ಯಾಟರ್ ದೇವದತ್ತ ಪಡಿಕ್ಕಲ್, ದೆಹಲಿಯ ಆಯುಷ್ ಬದೋನಿ, ದೀಪಕ್ ಹೂಡಾ  ಅವರು ಬ್ಯಾಟಿಂಗ್ ವಿಭಾಗದ ಭರವಸೆಯಾಗಿದ್ದಾರೆ. ಆಲ್‌ರೌಂಡರ್ ಮಾರ್ಕಸ್ ಸ್ಟೊಯಿನಿಸ್ ಹೋದ ವರ್ಷದ ಲಖನೌ ತಂಡದ ಪರ ಹೆಚ್ಚು ರನ್ (408) ಗಳಿಸಿದ್ದ ಆಟಗಾರನಾಗಿದ್ದರು. ಅವರು ಲಯಕ್ಕೆ ಮರಳಿದರೆ ತಂಡದ ಬಲ ಹೆಚ್ಚಲಿದೆ. 

ಶಿಖರ್ ಧವನ್ ನಾಯಕತ್ವದ ಪಂಜಾಬ್ ತಂಡವು ಟೂರ್ನಿಯಲ್ಲಿ ಎರಡು ಪಂದ್ಯಗಳಲ್ಲಿ ಆಡಿದೆ. ಒಂದು ಗೆದ್ದು, ಇನ್ನೊಂದರಲ್ಲಿ ಸೋತಿದೆ. ತಂಡವು ಪವರ್‌ಪ್ಲೇ ಅವಧಿಯಲ್ಲಿ ಎಡವುತ್ತಿದೆ. ಜಾನಿ ಬೆಸ್ಟೊ ವೈಫಲ್ಯ ಮುಂದುವರಿದಿದೆ. ಐಪಿಎಲ್ ಮಾತ್ರ ಆಡುವ ಧವನ್, ಪ್ರಭಸಿಮ್ರನ್ ಸಿಂಗ್, ಆಲ್‌ರೌಂಡರ್ ಸ್ಯಾಮ್ ಕರನ್, ಉಪನಾಯಕ ಜಿತೇಶ್ ಶರ್ಮಾ ಅವರ ಮೇಲೆ ಬ್ಯಾಟಿಂಗ್ ವಿಭಾಗದ ಜವಾಬ್ದಾರಿ ಇದೆ. 

ಕಗಿಸೊ ರಬಾಡ, ಆರ್ಷದೀಪ್ ಸಿಂಗ್, ಹರಪ್ರೀತ್ ಬ್ರಾರ್‌, ರಾಹುಲ್ ಚಾಹರ್ ಹಾಗೂ  ಹರ್ಷಲ್ ಪಟೇಲ್ ಇರುವ ಬೌಲಿಂಗ್ ಪಡೆ ಉತ್ತಮವಾಗಿದೆ. ಆದರೆ ಫೀಲ್ಡಿಂಗ್ ಚುರುಕಾಗಬೇಕಿದೆ. 

ಪಂದ್ಯ ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌, ಜಿಯೊ ಸಿನಿಮಾ  ಆ್ಯಪ್. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT