ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಸೆರ್ದಾನ್‌ ಶಾಕಿರಿ, ಕ್ಸಾಕಾ ಮೋಡಿ

ಸ್ವಿಟ್ಜರ್‌ಲೆಂಡ್‌ಗೆ ಮಣಿದ ಸರ್ಬಿಯಾ
Last Updated 23 ಜೂನ್ 2018, 17:24 IST
ಅಕ್ಷರ ಗಾತ್ರ

ಕಲಿನಿಂಗ್ರಾದ್‌, ರಷ್ಯಾ: ಕ್ಸೆರ್ದಾನ್‌ ಶಾಕಿರಿ ಮತ್ತು ಗ್ರಾನಿಟ್‌ ಕ್ಸಾಕಾ ದಾಖಲಿಸಿದ ಗೋಲುಗಳ ನೆರವಿನಿಂದ ಸ್ವಿಟ್ಜರ್‌ಲೆಂಡ್‌ ತಂಡ 21ನೇ ವಿಶ್ವಕಪ್‌ ಫುಟ್‌ಬಾಲ್‌ ಟೂರ್ನಿಯ ಪಂದ್ಯದಲ್ಲಿ ಗೆದ್ದಿದೆ.

ಕಲಿನಿಂಗ್ರಾದ್‌ ಕ್ರೀಡಾಂಗಣದಲ್ಲಿ ಶುಕ್ರವಾರ ರಾತ್ರಿ ನಡೆದ ‘ಇ’ ಗುಂಪಿನ ಹಣಾಹಣಿಯಲ್ಲಿ ಸ್ವಿಟ್ಜರ್‌ಲೆಂಡ್‌ 2–1 ಗೋಲುಗಳಿಂದ ಸರ್ಬಿಯಾ ತಂಡವನ್ನು ಸೋಲಿಸಿತು.

ಉಭಯ ತಂಡಗಳೂ 4–2–3–1ರ ಯೋಜನೆಯೊಂದಿಗೆ ಅಂಗಳಕ್ಕಿಳಿದಿದ್ದವು. ಹೀಗಾಗಿ ಶುರುವಿನಿಂದಲೇ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿತ್ತು. ಐದನೇ ನಿಮಿಷದಲ್ಲಿ ಸರ್ಬಿಯಾ ತಂಡ ಖಾತೆ ತೆರೆಯಿತು. ಮುಂಚೂಣಿ ವಿಭಾಗದ ಆಟಗಾರ ಅಲೆಕ್ಸಾಂಡರ್‌ ಮಿತ್ರೊವಿಚ್‌ ಗೋಲು ದಾಖಲಿಸಿ ಕ್ರೀಡಾಂಗಣದಲ್ಲಿ ಸೇರಿದ್ದ ಅಭಿಮಾನಿಗಳ ಸಂಭ್ರಮಕ್ಕೆ ಕಾರಣರಾದರು. ನಂತರವೂ ಸರ್ಬಿಯಾದ ಆಟ ರಂಗೇರಿತು. ಈ ತಂಡದ ಆಟಗಾರರು ಚೆಂಡಿನೊಂದಿಗೆ ಎದುರಾಳಿ ಆವರಣ ಪ್ರವೇಶಿಸುವ ಪ್ರಯತ್ನ ಮುಂದುವರಿಸಿದರು. ಆದರೆ ಗೋಲುಗಳಿಸಲು ಮಾತ್ರ ಆಗಲಿಲ್ಲ.

0–1 ರ ಹಿನ್ನಡೆಯೊಂದಿಗೆ ವಿರಾಮಕ್ಕೆ ಹೋಗಿದ್ದ ಸ್ವಿಟ್ಜರ್‌ಲೆಂಡ್‌ ತಂಡ ದ್ವಿತೀಯಾರ್ಧದಲ್ಲಿ ಪಾರಮ್ಯ ಮೆರೆಯಿತು. 52ನೇ ನಿಮಿಷದಲ್ಲಿ ಮಿಡ್‌ಫೀಲ್ಡರ್‌ ಗ್ರಾಂಟ್‌ ಕ್ಸಾಕಾ ಗೋಲು ದಾಖಲಿಸಿ 1–1ರ ಸಮಬಲಕ್ಕೆ ಕಾರಣರಾದರು. ನಂತರ ಮುನ್ನಡೆಯ ಗೋಲಿಗಾಗಿ ಉಭಯ ತಂಡಗಳ ನಡುವೆ ತುರುಸಿನ ‍ಪೈಪೋಟಿ ಏರ್ಪಟ್ಟಿತ್ತು. 90ನೇ ನಿಮಿಷದಲ್ಲಿ ಮಿಡ್‌ಫೀಲ್ಡರ್‌ ಕ್ಸೆರ್ದಾನ್‌ ಶಾಕಿರಿ ಗೋಲು ಬಾರಿಸಿ ಸ್ವಿಟ್ಜರ್‌ಲೆಂಡ್‌ ಪಾಳಯದಲ್ಲಿ ಸಂತಸ ಗರಿಗೆದರುವಂತೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT