ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಚೆ ಚೀಟಿಯಲ್ಲಿ ಕಂಗೊಳಿಸಿದ ಕ್ರಿಕೆಟಿಗರು

Last Updated 15 ಮೇ 2016, 19:54 IST
ಅಕ್ಷರ ಗಾತ್ರ

ಭಾರತೀಯ ಕ್ರಿಕೆಟ್‌ಗೂ ಅಂಚೆ ಚೀಟಿ (ಸ್ಟ್ಯಾಂಪ್)ಗೂ ಅನೇಕ ವರ್ಷಗಳ ಇತಿಹಾಸವಿದೆ.  1951ರಲ್ಲಿ  ಭಾರತ ಸರ್ಕಾರ ಕ್ರೀಡೆಗೆ ಸಂಬಂಧಿಸಿ ದಂತೆ ಮೊಟ್ಟ ಮೊದಲ ಅಂಚೆ ಚೀಟಿ ಬಿಡುಗಡೆ ಮಾಡಿತ್ತು.

1966 ರಲ್ಲಿ ಬ್ಯಾಂಕಾಕ್‌ನಲ್ಲಿ ನಡೆದ ಐದನೇ ಏಷ್ಯನ್‌ ಕ್ರೀಡಾಕೂಟದಲ್ಲಿ ಭಾರತ  ಹಾಕಿ ತಂಡ ಪದಕ ಗೆದ್ದಾಗ  ಸರ್ಕಾರ , ಇದರ  ನೆನಪಾರ್ಥ ವಾಗಿ ಅಂಚೆ ಚೀಟಿ ಹೊರತಂದಿತ್ತು. ಆಗೆಲ್ಲ  ಕ್ರಿಕೆ ಟ್‌ಗಿಂತ ಹಾಕಿ ಹೆಚ್ಚು ಜನಮನ್ನಣೆ ಪಡೆದಿತ್ತು.

1970/71 ರಲ್ಲಿ ಭಾರತ  ಕ್ರಿಕೆಟ್ ತಂಡ  ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್  ನೆಲದಲ್ಲಿ  ಸರಣಿ ಗೆದ್ದು  ಇತಿಹಾಸ ನಿರ್ಮಿಸಿತ್ತು.  ಈ ಅವಧಿಯಲ್ಲಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದವರು  ಅಜಿತ್ ವಾಡೇಕರ್. ವಿಂಡೀಸ್‌ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ನಾಲ್ಕರಲ್ಲಿ ಡ್ರಾ ಮಾಡಿಕೊಂಡಿದ್ದ ಭಾರತ  ಟ್ರಿನಿಡಾಡ್‌ನಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಗೆದ್ದು ಚಾರಿತ್ರಿಕ ಸಾಧನೆ ಮಾಡಿತ್ತು.

ಇದರಿಂದ ನವಚೈತನ್ಯ ಪಡೆದು ಕೊಂಡ  ತಂಡ ಆಂಗ್ಲರ ನೆಲದಲ್ಲಿಯೂ ಚೊಚ್ಚಲ ಸರಣಿ ಗೆದ್ದು ಸಂಭ್ರಮಿಸಿತ್ತು. ಈ ಎರಡು ಸರಣಿ ಗೆಲುವಿನ ಸ್ಮರಣಾರ್ಥವಾಗಿ ಅಂಚೆ ಇಲಾಖೆ ಪ್ರಥಮ ಬಾರಿಗೆ ಕ್ರಿಕೆಟ್‌ಗೆ ಸಂಬಂಧಿಸಿದಂತೆ ಬ್ಯಾಟಿಂಗ್, ಬೌಲಿಂಗ್ ಮತ್ತು ವಿಕೆಟ್ ಕೀಪಿಂಗ್ ಚಿತ್ರವನ್ನೊಳಗೊಂಡ  ಅಂಚೆ ಚೀಟಿ ಬಿಡುಗಡೆ ಮಾಡಿತ್ತು.  ಈ  ಚೀಟಿಯ ಮೌಲ್ಯ 20 ಪೈಸೆಯಾಗಿತ್ತು. 

1973ರಲ್ಲಿ ಅಂಚೆ ಇಲಾಖೆಯು ಕ್ರಿಕೆಟ್‌ ದಿಗ್ಗಜ  ಕೆ. ಎಸ್ ರಣಜಿತ್ ಸಿನ್ಹಜಿಯವರ ಭಾವಚಿತ್ರವನ್ನೊಳಗೊಂಡ  ಚೀಟಿ ಹೊರ ತಂದಿತು. ಆ ಹೊತ್ತಿಗಾಗಲೇ ರಣಜಿತ್‌ ಅವರು ಗತಿಸಿ 40 ವರ್ಷಗಳಾಗಿದ್ದವು.

ಸಿನ್ಹಜಿ ಅವರು ರಾಷ್ಟ್ರೀಯ ತಂಡದಲ್ಲಿ  ಟೆಸ್ಟ್ ಕ್ರಿಕೆಟ್ ಆಡದೆ ಹೋದರೂ ನವನಗರ್‌ನ ಮಹಾರಾಜರಾಗಿ ಆಳ್ವಿಕೆ ನಡೆಸಿ ಭಾರತದಲ್ಲಿ ಕ್ರಿಕೆಟ್ ಬೆಳೆಯಲು  ಕಾರಣರಾಗಿದ್ದರು. ರಾಷ್ಟ್ರದ ಪ್ರಮುಖ ದೇಶಿಯ ಟೂರ್ನಿಗಳಲ್ಲಿ ಒಂದಾದ  ರಣಜಿ ಟ್ರೋಫಿಗೆ ಇವರ  ಹೆಸರಿಡಲು ಇದೇ ಕಾರಣ. 

ಇದಾದ ಸುಮಾರು 23  ವರ್ಷಗಳ ನಂತರ 1996  ರಲ್ಲಿ  ಅಂಚೆ ಇಲಾಖೆ  'ಕ್ರಿಕೆಟ್ ಇನ್ ಇಂಡಿಯಾ' ಎಂಬ ಶೀರ್ಷಿಕೆಯಡಿ ಭಾರತದ ಆಗಿನ ನಾಲ್ಕು ಮಹಾನ್ ಕ್ರಿಕೆಟಿಗರಾದ  ಸಿ.ಕೆ. ನಾಯ್ಡು , ಡಿ.ಬಿ.ದೇವಧರ್, ಎಂ. ಎಚ್. ಮಂಕಡ್   ಮತ್ತು ವಿ. ಎಮ್.ಮರ್ಚಂಟ್ ಅವರ ಕುರಿತಾದ ಅಂಚೆ ಚೀಟಿ ಬಿಡುಗಡೆ ಮಾಡಿತ್ತು. ಆ ಅಂಚೆ ಚೀಟಿಯ ಮೌಲ್ಯ ₹2 ಆಗಿತ್ತು.

2007ರಲ್ಲಿ ತಮಿಳುನಾಡು ಕ್ರಿಕೆಟ್ ಸಂಸ್ಥೆಯ ಕುರಿತಾದ ಅಂಚೆ ಚೀಟಿ ಹೊರತಂದಿದ್ದು ಬಿಟ್ಟರೆ 2013 ರವರೆಗೂ ಕ್ರಿಕೆಟ್ ಆಟಗಾರರಿಗೆ ಸಂಬಂಧಿಸಿದಂತೆ  ಕೇಂದ್ರ ಸರ್ಕಾರ ಯಾವ ಅಂಚೆ ಚೀಟಿಯನ್ನೂ ಬಿಡುಗಡೆ ಮಾಡಲಿಲ್ಲ.   

2013ರಲ್ಲಿ ಭಾರತದ ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಹೆಸರಿನಲ್ಲಿ ಎರಡು ಅಂಚೆ ಚೀಟಿಗಳು ಬಿಡುಗಡೆಯಾದವು. (ಮೌಲ್ಯ ₹ 20  ಮತ್ತು ₹ 40).

ತೆಂಡೂಲ್ಕರ್ ಅವರು ಮುಂಬೈಯಲ್ಲಿ ತಮ್ಮ ಕ್ರಿಕೆಟ್ ಬದುಕಿನ ಕೊನೆಯ ಟೆಸ್ಟ್ ಪಂದ್ಯ ಆಡಿದಾಗ ಈ ಅಂಚೆ ಚೀಟಿ ಮತ್ತು ಮೊದಲ ದಿನದ ಕವರ್‌ಗಳನ್ನು ಬಿಡುಗಡೆ ಮಾಡಲಾಯಿತು.  ವಿಪರ್ಯಾಸವೆಂದರೆ ನಮ್ಮ ಸರ್ಕಾರ, ಸಚಿನ್  ಅವರನ್ನು ಅಂಚೆ ಚೀಟಿ ಮೂಲಕ ಗೌರವಿಸುವ ಮುನ್ನವೇ ಸ್ಕಾಟ್ಲೆಂಡ್, ಇಂಗ್ಲೆಂಡ್ ಒಳಗೊಂಡಂತೆ ಒಂಬತ್ತು ರಾಷ್ಟ್ರಗಳು ‘ಮುಂಬೈಕರ್‌’ ಕುರಿತ ಅಂಚೆ ಚೀಟಿ ಹೊರತಂದಿದ್ದವು.

ಭಾರತದ ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗರಾದ  ಗಾವಸ್ಕರ್ ಹಾಗೂ 1983  ರಲ್ಲಿ ದೇಶಕ್ಕೆ ಮೊದಲ ವಿಶ್ವಕಪ್ ತಂದುಕೊಟ್ಟ ಕಪಿಲ್ ದೇವ್ ಅವರ ಕುರಿತಾಗಿ ಸರ್ಕಾರ ಇದುವರೆಗೂ ಯಾವುದೇ ಅಂಚೆ ಚೀಟಿ ಹೊರತರದಿರುವುದು ಅಚ್ಚರಿಗೆ ಕಾರಣವಾಗಿದೆ. 

ಖುಷಿಯ ವಿಚಾರವೆಂದರೆ ವೆಸ್ಟ್ ಇಂಡೀಸ್ 1988ರಲ್ಲಿ ಇವರ ಕುರಿತು ಅಂಚೆ ಚೀಟಿ ಹೊರತಂದಿರುವುದು. ಗಾವಸ್ಕರ್ ಅಂಚೆ ಚೀಟಿಯ ಮೌಲ್ಯ ಒಂದು ಡಾಲರ್ ಆದರೆ ಕಪಿಲ್ ದೇವ್ ಕುರಿತ ಅಂಚೆ ಚೀಟಿಯ ಮೌಲ್ಯ 75ಸೆಂಟ್ ಆಗಿತ್ತು.

ಮಹತ್ವದ ವಿಶ್ವಕಪ್ ಕ್ರಿಕೆಟ್‌ನ ಆತಿಥ್ಯ ವಹಿಸಿದಾಗಲೂ ಭಾರತ ಸರ್ಕಾರ ಈ ಬಗ್ಗೆ ಅಂಚೆ ಚೀಟಿ ಹೊರತಂದಿಲ್ಲ. ಆದರೆ 2015 ರ ವಿಶ್ವಕಪ್ ಆತಿಥ್ಯ ವಹಿಸಿದ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ರಾಷ್ಟ್ರಗಳಲ್ಲಿ ನ್ಯೂಜಿಲೆಂಡ್ '14 ಟೀಮ್ಸ್ ಒನ್ ಚಾಂಪಿಯನ್' ಎಂಬ ಶೀರ್ಷಿಕೆಯಡಿ ವಿವಿಧ ಬಗೆಯ 14 ಅಂಚೆ ಚೀಟಿ ಮತ್ತು ಎರಡು ಮೊದಲ ದಿನದ ಕವರ್ ಗಳನ್ನು ಬಿಡುಗಡೆ ಮಾಡಲಾಗಿತ್ತು. 

ಟೆಸ್ಟ್ ಕ್ರಿಕೆಟ್‌ನ ಒಂದೇ ಇನಿಂಗ್ಸ್‌ನಲ್ಲಿ ಎಲ್ಲಾ ಹತ್ತು ವಿಕೆಟ್‌ಗಳನ್ನು ಪಡೆಯುವುದು ಅಸಾಮಾನ್ಯ ಸಾಧನೆ.  139  ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಇಂತಹ ಸಾಧನೆ ಮೂಡಿ ಬಂದಿರುವುದು ಎರಡು ಬಾರಿ ಮಾತ್ರ.

1999 ರಲ್ಲಿ ಭಾರತದ ಅನಿಲ್ ಕುಂಬ್ಳೆ ಅವರು ಪಾಕಿಸ್ತಾನ ತಂಡದ ವಿರುದ್ಧ ದೆಹಲಿಯಲ್ಲಿ ನಡೆದಿದ್ದ ಪಂದ್ಯ ಇನಿಂಗ್ಸ್‌ನ  ಎಲ್ಲಾ ಹತ್ತು ವಿಕೆಟ್ ಉರುಳಿಸಿ 1956ರಲ್ಲಿ ಇಂಗ್ಲೆಂಡ್‌ನ ಜಿಮ್ಮಿ ಲೇಕರ್ ಆಸ್ಟ್ರೇಲಿಯಾ ವಿರುದ್ಧ ಸ್ಥಾಪಿಸಿದ್ದ ವಿಶ್ವ ದಾಖಲೆಯನ್ನು ಸರಿಗಟ್ಟಿದ್ದರು. 

ಮತ್ತೊಬ್ಬ ಮಹಾನ್ ಕ್ರಿಕೆಟಿಗ ರಾಹುಲ್ ದ್ರಾವಿಡ್ ಭಾರತೀಯ ಕ್ರಿಕೆಟ್‌ಗೆ ಸಲ್ಲಿಸಿರುವ ಸೇವೆ ಅವಿಸ್ಮರಣೀಯ. ಇಷ್ಟಾದರು ಭಾರತ ಸರ್ಕಾರ ಇವರಿಬ್ಬರ ಬಗ್ಗೆ ಅಂಚೆ ಚೀಟಿ ಬಿಡುಗಡೆ ಮಾಡುವ  ಮನಸ್ಸು ಮಾಡಿಲ್ಲ. ಬಹುಶಃ ಬದುಕಿರುವ ಸಾಧಕರ ಬಗ್ಗೆ ಅಂಚೆ ಚೀಟಿ ಹೊರತರದಿರುವ ಸರ್ಕಾರದ ನಿಯಮ  ಇದಕ್ಕೆ ಕಾರಣವಾಗಿರಬಹುದೇ ಅಥವಾ ಬೇರೆ ಏನಾದರು ಮಾನದಂಡವಿದೆಯೇ ಎಂಬುದು ತಿಳಿದಿಲ್ಲ. 

ಕೇರಳ ಮೂಲದ ಟಾಮ್ ಜಾನ್ ಎಂಬುವರು ಸಹಸ್ರಾರು ಅಂಚೆ ಚೀಟಿ ಸಂಗ್ರಹಿಸಿದ್ದಾರೆ. ಇವುಗಳಲ್ಲಿ 900   ಅಂಚೆ ಚೀಟಿಗಳು ಕ್ರಿಕೆಟ್ ಹಾಗೂ ಆಟಗಾರರಿಗೆ ಸಂಬಂಧಿಸಿವೆ.  ಭಾರತದ ಟೆಸ್ಟ್‌ ತಂಡದ ನಾಯಕರಾಗಿದ್ದಾಗ ಧೋನಿ  ಇವರನ್ನು ತಮ್ಮ ಮನೆಗೆ ಕರೆದು ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. 

ಬಿಲ್ವಾಡದ ಅರವಿಂದ್ ಜೈನ ಎಂಬುವರು ಸಚಿನ್ ತೆಂಡೂಲ್ಕರ್ ಬಗ್ಗೆ ಬಿಡುಗಡೆಯಾಗಿರುವ ಇತರ ರಾಷ್ಟ್ರಗಳ ಅಂಚೆ ಚೀಟಿಗಳನ್ನು ಹೊಂದಿರುವುದಾಗಿ ವರದಿಯಾಗಿದೆ. ಅಪರೂಪದ ಅಂಚೆ ಚೀಟಿ ಸಂಗ್ರಹಕಾರ ಎಂದು ಇವರನ್ನು 'ಲಿಮ್ಕಾ' ಸಂಸ್ಥೆ ಗುರುತಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT