ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಿಕಾ ತೊಂದರೆಯೇ?

Last Updated 14 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಬೇರೆ ಮಕ್ಕಳಿಗಿಂತ ತಮ್ಮ ಮಗುವೇ ಎಲ್ಲದರಲ್ಲೂ ಮುಂದಿರಬೇಕು. ತಮ್ಮ ಹೆಸರನ್ನು ಹೇಳುವಂತೆ ಪ್ರತಿಭೆಯನ್ನು ಹೊಂದಿರಬೇಕೆಂದು ಪ್ರತಿಕ್ಷಣವೂ ತಂದೆ-ತಾಯಿ ಅಪೇಕ್ಷೆ ಪಡುತ್ತಾರೆ. ಆದರೆ ಮಗು ಯಾವ ಯಾವ ತೊಂದರೆಗಳಿಂದ ಬಳಲುತ್ತಿದೆಯೆಂದು ನಾವುಗಳ್ಯಾರೂ ಗಮನಿಸುವುದಿಲ್ಲ. ನಾವು ಕೇವಲ ಮಕ್ಕಳಿಗೆ ಯಾವಾಗಲು ಓದು, ಬರೆ, ಇಷ್ಟು ದೊಡ್ಡವನಾಗಿದ್ದೀಯಾ, ಹೇಳಿದ್ದು ತಿಳಿದುಕೊಳ್ಳಲ್ಲ. ಅದೇ ನಿನ್ನ ಕ್ಲಾಸಿನ ನಿನ್ನ ಫ್ರೆಂಡ್‌ ನೋಡು ಎಷ್ಟು ಜಾಣನಾಗಿದ್ದಾನೆ. ಪ್ರತಿ ಬಾರಿಯೂ ಅವನೇ ಮುಂದಿರುತ್ತಾನೆ.

ಪ್ರತಿವರ್ಷ ಕ್ಲಾಸಿಗೆ ಅವನೇ ಪ್ರಥಮ ಬಹುಮಾನ ಪಡೆಯುತ್ತಾನೆ. ‘ನೀನು ನೋಡು, ಇದಿಯಾ ಕೇವಲ ತಿನ್ನೋಕೆ. ಒಂದೆರಡಕ್ಷರ ಸರಿಯಾಗಿ ಓದೋಕೆ, ಬರಿಯೋಕೆ ಬರಲ್ಲ’ ಹೀಗೆ ನಾವೆಲ್ಲ ಮಕ್ಕಳ ಮೇಲೆ ರೇಗಾಡುತ್ತೇವೆ. ಆದರೆ ನಾವು ಮಕ್ಕಳಲ್ಲಿನ ತೊಂದರೆಗಳನ್ನು ಗಮನಿಸುವುದಿಲ್ಲ. ಮಕ್ಕಳು ಓದುವಾಗ, ಬರೆಯುವಾಗ, ಸಂಖ್ಯೆಗಳನ್ನು ಗುರುತಿಸುವಲ್ಲಿ ಯಾವ ಸಮಸ್ಯೆಯನ್ನು ಎದುರಿಸುತ್ತಾರೆ ಎಂಬುದನ್ನು ಗಮನಿಸುವುದಿಲ್ಲ.

ಮನೆಯಲ್ಲಿ ಎಷ್ಟೋ ಬಾರಿ ತಿಳಿ ಹೇಳಿದರೂ ಮಕ್ಕಳು ಅದೇ ತಪ್ಪನ್ನೂ ಮಾಡಿ, ಗೊಂದಲಕ್ಕೊಳಗಾಗುತ್ತಾರೆ.  ಹೀಗಿರುವಾಗ ಮಕ್ಕಳು ಕಲಿಕೆಯ ತೊಂದರೆಗಳನ್ನು ಅನುಭವಿಸುತ್ತಾರೆಂದು ತಿಳಿದಿರುವುದಿಲ್ಲ. ಕಲಿಕೆಯ ತೊಂದರೆಯಲ್ಲಿ ಮಗು ಬೆಳೆಯುತ್ತಿರುವ ಪರಿಸರ, ಬಾಹ್ಯ ಕಾರಣದ ಜೊತೆಗೆ ಮಕ್ಕಳ ಮೇಲೆ ಒತ್ತಡ, ಶ್ರವಣದೋಷ, ದೃಷ್ಟಿದೋಷಗಳ ಜೊತೆಗೆ ನರಗಳ ತೊಂದರೆಗಳಿದ್ದರೂ ಕಲಿಯುವಿಕೆಯಲ್ಲಿ ಗೊಂದಲ, ತೊಂದರೆಗಳನ್ನು ಅನುಭವಿಸುತ್ತಾರೆ.

ತೊಂದರೆ ಗುರುತಿಸುವುದು
ಮಕ್ಕಳ ಬೆಳೆವಣಿಗೆಯ ಹಂತಗಳಲ್ಲಿ ಕೆಲವು ಮಕ್ಕಳು ಸಮಯಕ್ಕೆ ಸರಿಯಾದ ಬೆಳವಣಿಗೆಯ ಹಂತವನ್ನು ತಲುಪುತ್ತಾರೆ. ಕೆಲವು  ಮಕ್ಕಳು ನಿಧಾನ ಪ್ರವೃತ್ತಿಯನ್ನು ಹೊಂದಿರುತ್ತಾರೆ. ನಿಧಾನ ಬೆಳವಣಿಗೆ ಕಲಿಕೆಯ ತೊಂದರೆಗಳಿಗೆ ಕಾರಣವಾಗುತ್ತದೆ. ಗರ್ಭಿಣಿಯಾಗಿದ್ದಾಗ ರಕ್ತದೊತ್ತಡವನ್ನು ಅನುಭವಿಸುತ್ತಿದ್ದರೆ, ಸಂಬಂಧದಲ್ಲಿ ಮದುವೆ, ಹೆರಿಗೆ ಸಮಯದಲ್ಲಿ ಮಗುವಿನ ತಲೆಗೆ ಪೆಟ್ಟಾದಲ್ಲಿ, ತಾಯಿ ಮದ್ಯಪಾನ ವ್ಯಸನಿಯಾಗಿದ್ದಲ್ಲಿ, ಮಗು ಕಡಿಮೆ ತೂಕವನ್ನು ಹೊಂದಿದ್ದರೆ, ಉಸಿರಾಟದ ತೊಂದರೆ ಇದ್ದಲ್ಲಿ, ಅವಧಿಗೆ ಮುನ್ನವೇ ಮಗು ಜನಸಿದಲ್ಲಿ, ಮಗುವಿನ ಬೆಳವಣಿಗೆಯ ಹಂತಗಳಲ್ಲಿ ನಾವು ಏರು-ಪೇರನ್ನು ಅಥವಾ ನಿಧಾನ ಪ್ರವೃತ್ತಿಯನ್ನು ಕಾಣುತ್ತೆವೆ.

ಮಕ್ಕಳು ಕಲಿಯುವಿಕೆಯ ತೊಂದರೆಯನ್ನು ಹೇಗೆ ಅನುಭವಿಸುತ್ತಾರೆಂದರೆ, ಪಾಠವನ್ನು ಓದುವಲ್ಲಿ, ಅಕ್ಷರಗಳನ್ನು ಗುರುತಿಸಿ ಓದುವಲ್ಲಿ, ಅಕ್ಷರಗಳ ಉಚ್ಚಾರ, ಓದಿದ್ದನ್ನು ಅರ್ಥೈಸಿಕೊಳ್ಳದಿರುವುದು ಬೇರೆ ಬೇರೆ ಅಕ್ಷರಗಳನ್ನು ಸಮಾನಾಂತರವಾಗಿ ಓದುವುದು. ವಾಕ್ಯಕ್ಕೆ ಎಲ್ಲಿ ಪೂರ್ಣವಿರಾಮ, ಅಲ್ಪವಿರಾಮ, ಪ್ರಶ್ನಾರ್ಥಕ ಚಿಹ್ನೆಗಳನ್ನು ಗುರುತಿಸದೇ ಹಾಗೆಯೇ ಓದುವುದು. ಅಕ್ಷರಗಳನ್ನು ಗುರುತಿಸುವಲ್ಲಿ ಕಷ್ಟವಾಗುವುದು. ಈ ರೀತಿಯಾಗಿ ಮಕ್ಕಳು ಓದುವಾಗ ಕಲಿಕೆಯ ತೊಂದರೆಯನ್ನು ಗುರುತಿಸಬಹುದಾಗಿದೆ.

ಅಕ್ಷರ, ಒತ್ತಾಕ್ಷರ, ವಾಕ್ಯ, ಪ್ಯಾರಾಗಳನ್ನು ಮಾಡುವಲ್ಲಿ ತೊಂದರೆ ಅನುಭವಿಸುತ್ತಾರೆ, ಗೊಂದಲಕ್ಕೊಳಗಾಗುತ್ತಾರೆ. ಪ್ರತಿಯೊಂದು ಅಕ್ಷರಗಳ ಒತ್ತಾಕ್ಷರಗಳನ್ನು ಗೊಂದಲ ಮಾಡಿಕೊಂಡು ಬರೆಯುತ್ತಾರೆ. ಶಬ್ಧಗಳನ್ನು ಹಿಂದೆ-ಮುಂದೆ ಬರೆಯುವುದು, ಅಕ್ಷರಗಳನ್ನು ಉಚ್ಛರಿಸಿದರು, ಬರೆಯುವಲ್ಲಿ ತೊಂದರೆಗೆ ಸಿಲುಕುತ್ತಾರೆ. ದೀರ್ಘವನ್ನು ಬರೆಯುವಾಗ ಉಲ್ಟಾಮಾಡಿ ಬರೆಯುತ್ತಾರೆ. ಇನ್ನೂ ಅಂಕಿ ಸಂಖ್ಯೆಗಳ ವಿಷಯದಲ್ಲಿ ಮಕ್ಕಳಿಗೆ ಸಂಕಲನ, ವ್ಯವಕಲನ, ಗುಣಕಾರ, ಭಾಗಾಕಾರ, ಮತ್ತು ಸಮಯವನ್ನು ಗುರುತಿಸುವಲ್ಲಿ ಮತ್ತು ನೆನಪಿಡುವಲ್ಲಿ ತೊಂದರೆ ಅನುಭವಿಸುತ್ತಾರೆ.

ಅದಲ್ಲದೇ ಸಂಖ್ಯೆಗಳನ್ನು ಹೆಸರಿಸುವಲ್ಲಿ ಸರಿಯಾದ ಕ್ರಮದಲ್ಲಿ ಬರೆಯುವಾಗ ತೊಂದರೆ ಅನುಭವಿಸುತ್ತಾರೆ. ಅಂಕಿಗಳನ್ನು ಸರಿಯಾಗಿ ಬರೆಯದಿದ್ದರೂ, ಓದುವಾಗ ತಪ್ಪಾಗಿ ಓದುವುದು. ಇದು ಕೆಲವೊಂದು ಮಕ್ಕಳಲ್ಲಿ ಭಿನ್ನ ಭಿನ್ನವಾಗಿ ಕಾಣುತ್ತದೆ. ಇಂಥ ಮಕ್ಕಳು ಸಾಮಾನ್ಯವಾಗಿ ಐದನೇ ತರಗತಿಯಿಂದ ಏಳನೇ ತರಗತಿಯಲ್ಲಿ ಕಲಿಕೆಯ ತೊಂದರೆಗಳನ್ನು ಅನುಭವಿಸುತ್ತಾರೆ. ಆದರೆ, ಒಂದನೇ ತರಗತಿಯಿಂದ ಐದನೇ ತರಗತಿಯವರೆಗೆ ಕಲಿಕೆಯ ತೊಂದರೆಗಳು ಸಾಮಾನ್ಯವಾಗಿರುತ್ತವೆ.

ಇಂಥ ಮಕ್ಕಳನ್ನು ಗುರುತಿಸಬೇಕಾದರೆ, ಇದಕ್ಕಾಗಿಯೇ ಇರುವ ನುರಿತ ತಜ್ಞರಿಂದ, ಪರೀಕ್ಷೆಗೆ ಒಳಪಡಿಸಿ, ತೊಂದರೆ- ಗುರುತಿಸಬಹುದಾಗಿದೆ. ಮಕ್ಕಳಿಗೆ ತಿಳಿವಳಿಕೆ ನೀಡಿ, ತರಬೇತಿಯನ್ನು ನೀಡಿ ಸುಧಾರಿಸಬಹುದು, ವಿಶೇಷ ತಜ್ಞರ ಸಹಕಾರದ ಜೊತೆಗೆ, ಶಾಲೆಯಲ್ಲಿ ಶಿಕ್ಷಕರ ಹಾಗೂ ಮನೆಯಲ್ಲಿ ಪೋಷಕರ ಸಲಹೆ- ಸಹಕಾರ, ತರಬೇತಿ ನೀಡಿ, ಮಕ್ಕಳಿಗೆ ಸರಿಯಾದ ಮಾರ್ಗದರ್ಶನದ ಮೂಲಕ ಸುಧಾರಣೆ ತರಬಹುದು.

ಇದಕ್ಕಾಗಿಯೇ ಸರ್ಕಾರವು ಇಂತಹ ಮಕ್ಕಳು ಪರೀಕ್ಷೆ ಬರೆಯುವಾಗ, ಅಂಕಿ-ಸಂಖ್ಯೆ ಗಣನೆಯಲ್ಲಿ ಕ್ಯಾಲ್ಕುಲೇಟರ್, ಒಂದು ವಿಷಯದಲ್ಲಿ ವಿನಾಯಿತಿ, ಒಂದು ಗಂಟೆಯ ಪರೀಕ್ಷಾ ಅವಧಿಯನ್ನು ಹೆಚ್ಚಿಸಲಾಗಿದೆ ಮತ್ತು ಚಿಕ್ಕ ಚಿಕ್ಕ ತಪ್ಪುಗಳನ್ನು, ವ್ಯಾಕರಣವನ್ನು ಗಮನಿಸಲಾಗುವುದಿಲ್ಲವೆಂದು ವಿನಾಯಿತಿ ನೀಡಲಾಗಿದೆ.

ಇವುಗಳನ್ನೆಲ್ಲ ಪೋಷಕರು ತಿಳಿದುಕೊಂಡು ನಮ್ಮ ಮನೆಯಲ್ಲಿನ ಮಕ್ಕಳಾಗಲಿ, ನೆರೆಹೊರೆಯ ಮಕ್ಕಳಾಗಲಿ, ಮಕ್ಕಳ ಕಲಿಯುವಿಕೆಯಲ್ಲಿನ ತೊಂದರೆಗಳನ್ನು ಗಮನಿಸಿದಾಗ, ನುರಿತ ತಜ್ಞರಲ್ಲಿ ಪರೀಕ್ಷೆಗೊಳಪಡಿಸಲು ಸೂಚಿಸುವುದು  ಸೂಕ್ತ. ಇದನ್ನು ಮೊದಲ ಹಂತದಿಂದಲೇ ಗುರುತಿಸಿ ತರಬೇತಿ ನೀಡಿದಲ್ಲಿ ಕಲಿಕೆಯ ತೊಂದರೆಯಿಂದ ಮಕ್ಕಳನ್ನೂ ಹೊರ ತರಬಹುದು.
ಮಾಹಿತಿಗೆ: 95355 46054                                                         
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT