ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದಲಾವಣೆ ಹಾಗೂ ಹೊಸ ಸವಾಲುಗಳ ನಡುವೆ...

ರಣಜಿ
Last Updated 2 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ಭಾರತದಲ್ಲಿ ಕ್ರಿಕೆಟ್ ಈಗಿನಷ್ಟು ಜನಪ್ರಿಯತೆ ಹೊಂದಿರದ ಕಾಲವದು. 1930ರ ದಶಕದಲ್ಲಿ ಕ್ಲಬ್‌ ಮಟ್ಟದ ಟೂರ್ನಿಗಳೇ ಹೆಚ್ಚಾಗಿ ನಡೆಯುತ್ತಿದ್ದವು.  ಆಗಷ್ಟೇ ಟೆಸ್ಟ್ ಕ್ರಿಕೆಟ್ ಅಧಿಕೃತವಾಗಿ ಭಾರತಕ್ಕೆ ಕಾಲಿಟ್ಟಿತ್ತು. 1932ರಲ್ಲಿ ಲಾರ್ಡ್ಸ್‌ನಲ್ಲಿ ಭಾರತ ತಂಡ ಇಂಗ್ಲೆಂಡ್ ಎದುರು ತನ್ನ ಮೊದಲ ಅಂತರರಾಷ್ಟ್ರೀಯ ಟೆಸ್ಟ್‌ ಪಂದ್ಯವನ್ನಾಡಿತ್ತು.

ಇದು ಭಾರತದ ಕ್ರಿಕೆಟ್‌ ಇತಿಹಾಸದ ಮಟ್ಟಿಗೆ ಬಹುದೊಡ್ಡ ಬೆಳವಣಿಗೆ. ಇದಾದ ಎರಡು ವರ್ಷಗಳಲ್ಲಿಯೇ ದೇಶಿ ಟೂರ್ನಿಯಲ್ಲೊಂದು ಮೈಲಿಗಲ್ಲು ಸ್ಥಾಪನೆಯಾಯಿತು. ಅದುವೇ ರಣಜಿ ಟೂರ್ನಿ. 1934ರಲ್ಲಿ ಅಂದಿನ ಮದ್ರಾಸ್‌ ಕ್ರಿಕೆಟ್ ಕ್ಲಬ್‌ ಮೈದಾನದಲ್ಲಿ  ಮೈಸೂರು  ಮತ್ತು ಮದ್ರಾಸ್ ತಂಡಗಳು ಪಂದ್ಯವಾಡಿದ್ದವು. ಆಗಿನಿಂದ ದೇಶಿ ಟೂರ್ನಿಯಲ್ಲಿ ಕರ್ನಾಟಕದ ಅಭಿಯಾನ ಆರಂಭವಾಯಿತು.

ಈಗ ಇರಾನಿ ಕಪ್‌, ದುಲೀಪ್‌ ಟ್ರೋಫಿ, ವಿಜಯ್‌ ಹಜಾರೆ, ಎನ್‌ಕೆಪಿ ಸಾಳ್ವೆ ಚಾಲೆಂಜರ್‌ ಟ್ರೋಫಿ ಹೀಗೆ ಅನೇಕ ಟೂರ್ನಿಗಳು ನಡೆಯುತ್ತವೆ. ಆದರೂ ಈ ಎಲ್ಲಾ ಟೂರ್ನಿಗಳಿಗಿಂತ ರಣಜಿಗೆ ವಿಶೇಷವಾದ ಮಹತ್ವವಿದೆ. 82 ವರ್ಷಗಳ ಇತಿಹಾಸ ಹೊಂದಿರುವ ರಣಜಿ ಕಾಲಕಾಲಕ್ಕೆ ತಕ್ಕಂತೆ ಹಲವಾರು ಬದಲಾವಣೆಗಳನ್ನು ಕಂಡಿದೆ.

ಮೊದಲೆಲ್ಲಾ ವಲಯವಾರು ಟೂರ್ನಿಗಳು ನಡೆಯುತ್ತಿದ್ದವು. ಇದು ಬದಲಾಗಿ ಸಾಕಷ್ಟು ವರ್ಷಗಳೇ ಉರುಳಿವೆ. ಈಗ ಎಲ್ಲಾ ತಂಡಗಳ ಮುಂದೆ ಮೊದಲ ಬಾರಿಗೆ ತಟಸ್ಥ ಸ್ಥಳದಲ್ಲಿ ಪಂದ್ಯಗಳನ್ನು ಆಡಬೇಕಾದ ಸವಾಲಿದೆ. ಚತ್ತೀಸಗಡ ತಂಡ ಮೊದಲ ಬಾರಿಗೆ ರಣಜಿಯಲ್ಲಿ ಆಡಲು ಅವಕಾಶ ಪಡೆದಿದೆ.

2013ಕ್ಕೂ ಮೊದಲು ಕರ್ನಾಟಕ ತಂಡ ಸತತ 14 ವರ್ಷ ಈ ಟೂರ್ನಿಯಲ್ಲಿ  ಪ್ರಶಸ್ತಿಯ ಬರ ಎದುರಿಸಿತ್ತು. ಆ ನಂತರದ ಎರಡು ವರ್ಷ ದೇಶಿರಾಜನಾಗಿ ಮೆರೆದಾಡಿತು. ಆಗಲೇ  ಎಲ್ಲಾ ರಾಜ್ಯಗಳ ಕಣ್ಣು ಕರ್ನಾಟಕದ ಮೇಲೆ ಬಿದ್ದಿದ್ದು.

ಕೆ.ಎಲ್‌. ರಾಹುಲ್‌, ಕರುಣ್‌ ನಾಯರ್‌, ರಾಬಿನ್‌ ಉತ್ತಪ್ಪ, ಗೌತಮ್‌, ವಿನಯ್‌ ಕುಮಾರ್‌, ಅಭಿಮನ್ಯು ಮಿಥುನ್‌, ಎಚ್‌.ಎಸ್‌. ಶರತ್‌, ಎಸ್‌. ಅರವಿಂದ್‌ ಅವರ ಬಲ ಹೊಂದಿರುವ ತಂಡ ದೇಶದ  ಶ್ರೇಷ್ಠ ತಂಡಗಳಲ್ಲಿ ಒಂದು ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿತ್ತು. ವಿಶೇಷವೆಂದರೆ ಆ ಎರಡು ವರ್ಷ ಟ್ರೋಫಿ ಜಯಿಸಿದ್ದಾಗ ಕರ್ನಾಟಕ ಒಂದೂ ಪಂದ್ಯದಲ್ಲಿ ಸೋತಿರಲಿಲ್ಲ.

ಆದರೆ ಹೋದ ವರ್ಷ ಕಾಡಿದ ನಿರಾಸೆಯಿಂದ ರಾಜ್ಯ ತಂಡ ಸಾಕಷ್ಟು ಟೀಕೆ ಎದುರಿಸಬೇಕಾಯಿತು.  ಚಾಂಪಿಯನ್ ತಂಡ ಲೀಗ್ ಹಂತದಿಂದಲೇ ಹೊರಬಿದ್ದಿದ್ದಕ್ಕೆ ಒತ್ತಡಕ್ಕೆ ಒಳಗಾಯಿತು. 

ತಟಸ್ಥ ಸ್ಥಳವೂ ಅನುಕೂಲ
ತಟಸ್ಥ ಸ್ಥಳದಲ್ಲಿ ಪಂದ್ಯ ನಡೆಯುತ್ತಿರುವುದು ಒಳ್ಳೆಯ ಬೆಳವಣಿಗೆ ಆಗಿದೆ. ಅಂಪೈರ್‌ಗಳ ತೀರ್ಪುಗಳು ಮತ್ತು ಪಿಚ್‌ ವಿಷಯದಲ್ಲಿ  ಕರ್ನಾಟಕ ಸೇರಿದಂತೆ ಅನೇಕ ತಂಡಗಳಿಗೆ ಹಿಂದೆ ಸಾಕಷ್ಟು ಬಾರಿ ಅನ್ಯಾಯವಾಗಿದೆ. ಅಂಪೈರ್‌ಗಳ ಕೆಲ ತಪ್ಪು ತೀರ್ಪುಗಳು ರಾಜ್ಯ ತಂಡಕ್ಕೆ ಮುಳುವಾಗಿ ಪರಿಣಮಿಸಿವೆ.

2011ರ ಟೂರ್ನಿಯ ಸೆಮಿಫೈನಲ್ ಪಂದ್ಯ ಇದಕ್ಕೆ ಉತ್ತಮ ಉದಾಹರಣೆ. ವಡೋದರಲ್ಲಿ ನಡೆದಿದ್ದ ಆ ಪಂದ್ಯದ ಪಿಚ್‌ ಅನ್ನು ಪೂರ್ಣವಾಗಿ ತವರಿನ ಬರೋಡ ತಂಡಕ್ಕೆ ಅನುಕೂಲವಾಗುವಂತೆ ನಿರ್ಮಿಸಲಾಗಿತ್ತು .

ರಾಬಿನ್‌ ಉತ್ತಪ್ಪ, ಮನೀಷ್‌ ಪಾಂಡೆ, ಅಮಿತ್ ವರ್ಮಾ, ಸ್ಟುವರ್ಟ್‌ ಬಿನ್ನಿ, ವಿನಯ್‌ ಕುಮಾರ್‌ ಸುನಿಲ್‌ ಜೋಶಿ ಅವರಂಥ ಅನುಭವಿ ಆಟಗಾರರು ಅಂದಿನ ಪಂದ್ಯದಲ್ಲಿದ್ದರೂ  ಕರ್ನಾಟಕ ಮೊದಲ ಇನಿಂಗ್ಸ್‌ನಲ್ಲಿ 107 ರನ್ ಮಾತ್ರ ಗಳಿಸಿತ್ತು.

ಎರಡನೇ ಇನಿಂಗ್ಸ್‌ನಲ್ಲಿ ಕಲೆ ಹಾಕಿದ್ದು 88 ರನ್! ಇದರಿಂದಾಗಿ ಐದು ದಿನಗಳ ಪಂದ್ಯ ಒಂದೂವರೆ ದಿನದಲ್ಲಿಯೇ ಮುಗಿದು ಹೋಗಿತ್ತು. ಇದೊಂದು ಉದಾಹರಣೆಯಷ್ಟೇ. ಹೀಗೆ ತವರಿನ ಪಿಚ್‌ನ ಲಾಭ ಪಡೆದ ತಂಡಗಳು ಸಾಕಷ್ಟಿವೆ.

ಸ್ಪರ್ಧಾತ್ಮಕವೇ ಸೂಕ್ತ
ಯಾವ ತಂಡವೇ ಗೆಲ್ಲಲಿ, ಸೋಲಲಿ ಅದು ಬೇರೆ ಮಾತು. ಆದರೆ ಉತ್ತಮ ಪಂದ್ಯವೊಂದು ನಡೆಯಲು ಸ್ಪರ್ಧಾತ್ಮಕ ಪಿಚ್ ಇರುವುದೇ ಸೂಕ್ತ ಎಂದು ರಾಜ್ಯ ತಂಡಗಳ ಆಟಗಾರರು ಅಭಿಪ್ರಾಯಪಡುತ್ತಾರೆ. ರಾಜ್ಯ ತಂಡದ ನಾಯಕ ವಿನಯ್‌ ಕುಮಾರ್ ಮತ್ತು ಈಗ ಮುಖ್ಯ ಕೋಚ್ ಆಗಿರುವ ಜೆ. ಅರುಣ್‌ ಕುಮಾರ್ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಕಠಿಣ ಗುಂಪಿನ ಸವಾಲು
ಹಾಲಿ ಚಾಂಪಿಯನ್‌ ಆಗಿದ್ದ ಕಾರಣ ಕರ್ನಾಟಕ ಹೋದ ವರ್ಷ ‘ಎ’ ಗುಂಪಿನಲ್ಲಿ ಸ್ಥಾನ ಪಡೆದಿತ್ತು. ಅಸ್ಸಾಂ, ಬಂಗಾಳ, ದೆಹಲಿ, ಹರಿಯಾಣ, ಮಹಾರಾಷ್ಟ್ರ, ಒಡಿಶಾ, ರಾಜಸ್ತಾನ ಮತ್ತು ವಿದರ್ಭ ತಂಡಗಳು ಇದೇ ಗುಂಪಿನಲ್ಲಿದ್ದವು.

ಆದರೆ ಈ ವರ್ಷ ರಾಜ್ಯ ತಂಡ ‘ಬಿ’ ಗುಂಪಿನಲ್ಲಿದೆ. ಅಸ್ಸಾಂ, ದೆಹಲಿ, ಜಾರ್ಖಂಡ್‌, ಕರ್ನಾಟಕ, ಮಹಾರಾಷ್ಟ್ರ, ಒಡಿಶಾ, ರಾಜಸ್ತಾನ, ಸೌರಾಷ್ಟ್ರ ಮತ್ತು ವಿದರ್ಭ ತಂಡಗಳಿವೆ.

ಇಷ್ಟು ವರ್ಷ ರಣಜಿ ಟೂರ್ನಿಯಲ್ಲಿ ಲೆಕ್ಕಕ್ಕೇ ಇರದಿದ್ದ ಅಸ್ಸಾಂ ಈಗ ಬಲಿಷ್ಠ ತಂಡವಾಗಿ ಬೆಳೆಯುತ್ತಿದೆ. ಜಾರ್ಖಂಡ್ ಬೆಂಗಳೂರಿನಲ್ಲಿ ನಡೆದ  ವಿಜಯ್ ಹಜಾರೆ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದೆ. ಮಹಾರಾಷ್ಟ್ರ, ರಾಜಸ್ತಾನ, ಸೌರಾಷ್ಟ್ರ ಮತ್ತು ವಿದರ್ಭ ತಂಡಗಳು ಕಠಿಣ ಸವಾಲು ಒಡ್ಡಬಲ್ಲ ಸಾಮರ್ಥ್ಯ ಹೊಂದಿವೆ. ಈ ಎಲ್ಲಾ ಸವಾಲುಗಳನ್ನು ಮೀರಿ ರಾಜ್ಯ ತಂಡ ಚಾಂಪಿಯನ್ ಪಟ್ಟ ಮರಳಿ ಪಡೆಯಲಿ.

**
ಒಟ್ಟು 4411 ಪಂದ್ಯಗಳು...

ರಣಜಿ ಟೂರ್ನಿ ಆರಂಭವಾದಾಗಿನಿಂದ 2015–16ರ ಋತುವಿನವರೆಗೂ ಒಟ್ಟು 4411 ಪಂದ್ಯಗಳು ನಡೆದಿವೆ. ಕರ್ನಾಟಕ 412 ಪಂದ್ಯಗಳನ್ನು ಆಡಿದೆ.

ಟೂರ್ನಿಯಲ್ಲಿ ನಾಲ್ಕು ತಂಡಗಳಷ್ಟೇ 400ಕ್ಕಿಂತಲೂ ಹೆಚ್ಚು ಪಂದ್ಯಗಳನ್ನು ಆಡಿವೆ. ಈ ಸಾಧನೆ ಮುಂಬೈ (485),  ದೆಹಲಿ (424) ಮತ್ತು ತಮಿಳುನಾಡು (416) ತಂಡಗಳ ಹೆಸರಿನಲ್ಲಿದೆ.

**
ನಾಯಕನಾಗಿ ವಿನಯ್ ಸಾಧನೆ

ಪಂದ್ಯ  40
ಗೆಲುವು 17
ಸೋಲು 3
ಡ್ರಾ  20

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT