ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳೇಕೆ ಓದುವುದಿಲ್ಲ?

Last Updated 26 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಮಕ್ಕಳು ಕಲಿಕೆಯಲ್ಲಿ ಕಷ್ಟ ಪಡುತ್ತಿದ್ದರೆ, ಅವರಿಗೆ ಮಾನಸಿಕ ಸಮಸ್ಯೆಗಳಿರಬಹುದು. ಗಮನಿಸಿ ಕಾಯಿಲೆ ಅಲ್ಲ. ಸಮಸ್ಯೆಗಳಿರಬಹುದು. ಪ್ರೀತಿ ಮತ್ತು ಸಹನೆಯಿಂದ ಆ ಮಕ್ಕಳನ್ನು ಮುಖ್ಯವಾಹಿನಿಗೆ ತರಬಹುದು. ನಮ್ಮ ಮಕ್ಕಳಲ್ಲಿವೆಯೇ ಈ ಲಕ್ಷಣಗಳು? ಬೈಯ್ದು ಹೀಗಳೆಯುವ ಮುನ್ನ ಒಮ್ಮೆ ಪರೀಕ್ಷಿಸಿ.

ಮಕ್ಕಳ ಕಲಿಕೆಯ ವಿಷಯದಲ್ಲಿ ಸಾಮಾನ್ಯವಾಗಿ ಪಾಲಕರು ಅತಿ ನಿರೀಕ್ಷೆಗಳನ್ನು ಇಟ್ಟುಕೊಂಡಿರುತ್ತಾರೆ. ಸಾಮಾನ್ಯ ಕಲಿಕೆಯ ಮಕ್ಕಳೊಂದಿಗೆ ನಿಧಾನ ಕಲಿಕೆಯ ಮಕ್ಕಳು ಅಥವಾ ಅತಿ ಚಟುವಟಿಕೆ ಇರುವ ಮಕ್ಕಳಿಗೆ ಇದರಿಂದ ಒತ್ತಡ ಉಂಟಾಗುತ್ತದೆ.
ಮಕ್ಕಳಿಗೆ ಕಲಿಕೆಯಲ್ಲಿ ತೊಂದರೆ ಇದೆ ಎನ್ನುವ ವಿಷಯ ಬಹುತೇಕ ಪಾಲಕರಿಗೆ ಗೊತ್ತಿರುವುದೇ ಇಲ್ಲ. ಗಮನ ಕೊಟ್ಟು ಓದುವುದಿಲ್ಲ ಎನ್ನುವ ದೂರು ಬಹುತೇಕ ಪಾಲಕರದ್ದು. ಆದರೆ ಆ ಮಗು ಗಮನ ಕೊಡದೇ ಇರುವುದೂ ಒಂದು ಅಸಹಾಯಕತನ, ಅಥವಾ ಅಸಾಮರ್ಥ್ಯ ಎನ್ನಬಹುದು. ಅಂಥ ಮಕ್ಕಳಿಗೆ ಬೇಕಿರುವುದು ಮಾನಸಿಕ ಬೆಂಬಲ ಮತ್ತು ಪ್ರೋತ್ಸಾಹ. ಇವನ್ನು ಉದಾಹರಣೆಗಳೊಂದಿಗೆ ಗಮನಿಸುವ.

ವಿನಯ್‌ ತುಂಬಾ ಚೂಟಿ ಹುಡುಗ. ಗಣಿತ ಮತ್ತು ಇಂಗ್ಲಿಷ್‌ನಲ್ಲಿ ಮಾತ್ರ ಹಿಂದೆ. ಕೇಳಿದ ಪ್ರಶ್ನೆಗಳಿಗೆ ಪಟ ಪಟ ಎಂದು ಉತ್ತರಿಸುತ್ತಾನೆ ಆದರೆ ಓದುವಲ್ಲಿ ಬರೆಯುವುದರಲ್ಲಿ ಹಿಂದೆ ಬೀಳುತ್ತಾನೆ. ಓದುವಾಗ ನಿಧಾನವಾಗಿ ಓದುತ್ತಾನೆ, ಕೆಲವು ಪದಗಳನ್ನು ಬಿಟ್ಟುಬಿಡುತ್ತಾನೆ (SENT ಅನ್ನು SET ಎಂದು ಓದುತ್ತಾನೆ), ಪದಗಳನ್ನು ತಪ್ಪಾಗಿ ಉಚ್ಚರಿಸುತ್ತಾನೆ (FELT ಅನ್ನು LEFT ಅಂದು), ಪದಗಳನ್ನು ಹಿಂದೆ ಮುಂದಾಗಿ ಓದುತ್ತಾನೆ(MAD ಅನ್ನು DAM ಅಂದು). ಗಣಿತದಲ್ಲಿ ಭಾಗಾಕಾರ ಮತ್ತು ಗುಣಾಕಾರ ಮಾಡುವಲ್ಲಿ ಗೊಂದಲ ಮಾಡಿಕೊಳ್ಳುತ್ತಾನೆ. ನಾಲ್ಕ್‌ ನಾಕ್ಲೇ ಎಷ್ಟು ಎಂದರೆ ಪದೇ ಪದೇ ‘8’ ಎಂದು ಉತ್ತರಿಸುತ್ತಾನೆ. 63 ಅನ್ನು 36 ಅಂದು ಓದುತ್ತಾನೆ. ವಿನಯ ಡಿಸ್‌ಲೆಕ್ಸೀಯ ಎಂಬ ತೊಂದರೆ ಇರುವ ಹುಡುಗ.

ವಿನಯ್‌ಗೆ ಹೇಗೆ ಸಹಾಯ ಮಾಡಬಹುದು?
ಡಿಸ್‌ಲೆಕ್ಸೀಯ ಇರುವ ಮಕ್ಕಳನ್ನು ಶಿಕ್ಷಕರು ಮತ್ತು ಪೋಷಕರು ಆದಷ್ಟು ಬೇಗ ಗುರುತಿಸಿ, ಮನೋವೈದ್ಯರಿಂದ ಪರೀಕ್ಷೆ ಮಾಡಿಸಬೇಕು. ಮಗುವನ್ನು ಬೈಯುವುದು, ರೇಗಿಸುವುದು, ದಡ್ಡ, ಸೋಮಾರಿ ಎಂದು ಹೀಯಾಳಿಸಬಾರದು. ಮಗುವನ್ನು ಅಪರಾಧಿಯಂತೆ ನೋಡಬೇಡಿ, ಮಗು ನಿಜವಾಗಿಯೂ ಕಲಿಕೆ ತೊಂದರೆಯಿಂದ ಕಷ್ಟಪಡುತ್ತಿದೆ ಎಂದು ಅರ್ಥಮಾಡಿಕೊಳ್ಳಿ. ಸಹನೆಯಿಂದ ಮಗುವಿಗೆ ತಜ್ಞರ ಸಹಾಯ ಪಡೆದು ತರಬೇತಿ ಕೊಡಿ. ಮಗುವಿನ ಪ್ರತಿಭೆಯನ್ನು ಗುರುತಿಸಿ ಅದರಲ್ಲಿ ಮುಂದೆ ಬರುವಂತೆ ಪ್ರೋತ್ಸಾಹಿಸಿ. ಶಿಕ್ಷಕರು ಡಿಸ್‌ಲೆಕ್ಸೀಯ ಮಗುವಿಗೆ ವಿಶೇಷ ತರಬೇತಿ ಕೊಡಬೇಕು. ಬರೆಯಲು ಹೆಚ್ಚು ಸಮಯ ಕೊಡಿ, ಅಕ್ಷರಗಳನ್ನು ದೊಡ್ಡದಾಗಿ ಬರೆದು ತಿದ್ದಲು ಹೇಳಿ. ಒಂದೇ ರೂಪದ ಅಕ್ಷರಗಳ ವ್ಯತ್ಯಾಸಗಳನ್ನು ಪದೇ ಪದೇ ಹೇಳಿಕೊಡಿ. ಪದದ ಒಂದೊಂದು ಅಕ್ಷರವನ್ನು ಸರಿಯಾಗಿ ಉಚ್ಚರಿಸಿ, ಅಂತೆಯೇ ಉಚ್ಚರಿಸಲು ಮಗುವಿಗೆ ಹೇಳಿ. ಕಠಿಣ ಪದಗಳನ್ನು ಹಾಳೆಯ ಮೇಲೆ ಬಣ್ಣದ ಪೆನ್ನಿನಿಂದ ಬರೆದು ಪದೇ ಪದೇ ನೋಡಲು ಹೇಳಿಕೊಡಿ. ಚಿತ್ರ ನೋಡಿ ಪದ ಬರೆಯುವ ಆಟ, ಸ್ಪೆಲಿಂಗ್ ಹೇಳುವ ಸ್ಪರ್ಧೆ, ಒಂದೇ ಅಕ್ಷರದಿಂದ ಬರುವ ಪದಗಳ ಪಟ್ಟಿ ಮಾಡಲು ಪ್ರೋತ್ಸಾಹಿಸಿ. ಮಗುವಿನ ವಿದ್ಯಾಭಾಸ ನಲಿ-ಕಲಿ ಎಂತಾಗಬೇಕು.

ತೀವ್ರ ಬಗೆಯ ಡಿಸ್‌ಲೆಕ್ಸೀಯ ಮಕ್ಕಳಿಗೆ ವಿಶೇಷ ಶಿಕ್ಷಕರ ಮತ್ತು ವಿಶೇಷ ಶಾಲೆಯ (ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್) ಅಗತ್ಯ ಬರಬಹುದು. ಬಹುತೇಕ ಡಿಸ್‌ಲೆಕ್ಸೀಯ ಮಕ್ಕಳು ಮಾಮೂಲು ಶಾಲೆಯಲ್ಲಿ ಇತರ ಮಕ್ಕಳೊಂದಿಗೆ ಬೆರೆತು ವಿದ್ಯಾಭ್ಯಾಸ ಮಾಡಬಹುದು. 

ರವಿ 7 ವರ್ಷದ ಹುಡುಗ. ಅತಿಯಾದ ಚಟುವಟಿಕೆಯಲ್ಲಿ ತೊಡಗುತ್ತಾನೆ. ಸ್ವಲ್ಪ ಹೊತ್ತು ಕೂಡ ಸುಮ್ಮನೆ ಕೂರಲಾರ, ಸದಾ ಒಂದಲ್ಲ ಒಂದು ಕೆಲಸ ಮಾಡುತ್ತಿರುತ್ತಾನೆ. ಅವನ ಮನಸ್ಸು ಚಂಚಲ, ಏಕಾಗ್ರತೆ ಕಡಿಮೆ. ಶಾಲೆಯಲ್ಲಿ ಶಿಕ್ಷಕರು ಹೇಳಿಕೊಡುವ ಪಾಠದ ಕಡೆ ಗಮನಹರಿಸುವುದಿಲ್ಲ. ಶಿಕ್ಷಕರು ಪಾಠ ಮಾಡುವಾಗ ಕಿಟಕಿ ಮತ್ತು ಬಾಗಿಲ ಹೊರಗೆ ನೋಡುತ್ತಿರುತ್ತಾನೆ. ಶಾಲೆಯಲ್ಲಿ ಕುಳಿತುಕೊಳ್ಳುವ ಸ್ಥಳವನ್ನು ಪದೇ ಪದೇ ಬದಲಿಸುತ್ತಾನೆ. ತರಗತಿಯಲ್ಲಿ ವಿಪರೀತ ಮಾತನಾಡುತ್ತಾನೆ. ಮಕ್ಕಳನ್ನು ಕಂಡರೆ ಜಗಳಕ್ಕೆ ಹೋಗುತ್ತಾನೆ. ಇವನಿಂದ ಇಡೀ ತರಗತಿಗೆ ತೊಂದರೆಯಾಗುತ್ತಿದೆ ಎಂಬುದು ರವಿ ಶಿಕ್ಷಕರ ದೂರು. ರವಿ ಅತಿ ತೀಟೆ ಮತ್ತು ಅತಿ ಚೇಷ್ಟೆ (ADHD) ಎಂಬ ತೊಂದರೆಯನ್ನು ಹೊಂದಿದ್ದಾನೆ. 

ಗಮನ ಕೊರತೆ ಮತ್ತು ಅತಿ ಓಡಾಟದ (ADHD) ಲಕ್ಷಣಗಳು
*ಸುಮ್ಮನೆ ಕುಳಿತುಕೊಳ್ಳಲು ಕಷ್ಟವಾಗುವದು, ಕೈ ಕಾಲುಗಳಿಂದ ಏನಾದರೂ ಮಾಡುತ್ತಿರುವುದು. 
*ಮೋಟಾರ್ ಸೈಕಲ್‌ನಂತೆ ಯಾವಾಗಲೂ ಓಡಾಡುತ್ತಿರುವುದು.
*ತುಂಬಾ ಮಾತನಾಡುವುದು, ಪ್ರಶ್ನೆ ಮುಗಿಸುವ ಮುಂಚೆ ಉತ್ತರಿಸುವುದು.
*ಸಾಲುಗಳಲ್ಲಿ ನಿಲ್ಲಲು ಮತ್ತು ಸರದಿಗಾಗಿ ಕಾಯಲು ತೊಂದರೆಯಾಗುವುದು. ಕೆಲಸದಲ್ಲಿ ವಿಳಂಬವಾದರೆ ಕಿರಿಕಿರಿ ಮಾಡಿಕೊಳುವುದು.
*ಮಾಡಬೇಕಾದ ಕೆಲಸದಲ್ಲಿ ಗಮನ ಕಡಿಮೆ ಇರುವುದರಿಂದ ಅಜಾಗರೂಕತೆ ವಹಿಸುವುದು.
*ನೇರವಾಗಿ ಮಾತನಾಡಿದರು ಕೇಳಿಸಿಕೊಳ್ಳದಂತೆ ಕಾಣಿಸುವುದು, ಸೂಚನೆಗಳನ್ನು ಅನುಸರಿಸುವಲ್ಲಿ ಕಷ್ಟಪಡುವುದು.
*ಪ್ರಾರಂಭಿಸಿದ ಕೆಲಸವನ್ನು ಪೂರ್ತಿಗೊಳಿಸದಿರುವುದು ಅಥವಾ ಅದನ್ನು ಅರ್ಧಕ್ಕೆ ಬಿಟ್ಟು, ಬೇರೆ ಕೆಲಸ ಪ್ರಾರಂಭಿಸುವುದು.
*ಕೆಲಸ ಮಾಡುವ ಮುನ್ನ ಪೂರ್ವಸಿದ್ಧತೆ ಮಾಡದಿರುವುದು ಮತ್ತು ಕೊನೆ ಗಳಿಗೆವರೆಗೂ ಕೆಲಸಗಳನ್ನು ಮುಂದೆ ತಳ್ಳುವುದು.
*ದಿನನಿತ್ಯದ ಚಟುವಟಿಕೆಗಳನ್ನು ಮರೆಯುವುದು ಮತ್ತು ಕೆಲಸಕ್ಕೆ ಬೇಕಾಗುವ ವಸ್ತುಗಳನ್ನು ಕಳೆದುಕೊಳ್ಳುವುದು.
*ಸುತ್ತಲಿನ ಘಟನೆ ಮತ್ತು ಶಬ್ದದಿಂದ ಬಹು ಬೇಗ ಗಮನ ಭಂಗವಾಗುವುದು.

ಅಲ್ಪ ಪ್ರಮಾಣದ ತೊಂದರೆಯನ್ನು ನಡುವಳಿಕೆ ಚಿಕಿತ್ಸೆಯಿಂದ ಕಡಿಮೆ ಮಾಡಬಹುದು. ಮಗುವಿನ ಗಮನವನ್ನು ಹಿಡಿದಿಡುವ ಚಟುವಟಿಕೆಗಳನ್ನು ಮಗುವಿನಿಂದ ಮಾಡಿಸಬೇಕು. ಮುತ್ತು ಪೋಣಿಸುವುದು, ಬಣ್ಣ ಹಾಕುವುದು, ಮಣ್ಣು ಅಥವಾ ಹಿಟ್ಟಿನ ಗೊಂಬೆ ಮಾಡುವುದು, ಚಿತ್ರಕಲೆ ಬಿಡಿಸುವುದು ಇತ್ಯಾದಿ. ತೀವ್ರ ಪ್ರಮಾಣದ ತೊಂದರೆಗಳಿಗೆ ಪರಿಣಾಮಕಾರಿಯಾದ ಔಷಧಿಗಳು ಲಭ್ಯ. ಇಂಥ ಮಕ್ಕಳನ್ನು ನೋಡಿಕೊಳ್ಳುವಲ್ಲಿ ಶಿಕ್ಷಕರ ಪಾತ್ರ ಮಹತ್ವವಾದದ್ದು. ಇಂಥ ಮಕ್ಕಳಿಗೆ ಶಿಕ್ಷಕರ ವಿಶೇಷ ಗಮನದ ಅವಶ್ಯಕತೆ ಇರುತ್ತದೆ. ಇಂಥ ಮಕ್ಕಳನ್ನು ಮೊದಲ ಸಾಲಿನಲ್ಲಿ ಕೂರುವಂತೆ ಮಾಡಬೇಕು. ಇದರಿಂದ ಮಕ್ಕಳ ಮೇಲೆ ವಿಶೇಷ ಗಮನ ಇಡಲು ಸಾಧ್ಯವಾಗುತ್ತದೆ ಮತ್ತು ಮಗುವಿನ ಗಮನ ಬೇರೆ ಕಡೆಗೆ ಹರಿಸುವುದು ಕಡಿಮೆಯಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ WWW.CHAAD.ORG ಸಂಪರ್ಕಿಸಿ.
ಲೇಖಕರು: ಸಹಾಯಕ ಪ್ರಾಧ್ಯಾಪಕರು
ಡಿಮ್ಯಾನ್ಸ್ ಧಾರವಾಡ.
ಮಾಹಿತಿಗೆ: sugnyani.devi63@gmail.com)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT