ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್‌ ಅಜ್ಜನ ನೆನಪುಗಳು...

Last Updated 26 ಫೆಬ್ರುವರಿ 2016, 19:30 IST
ಅಕ್ಷರ ಗಾತ್ರ

ಗರುಡಾಚಾರ್‌ ನಿಧನ
ದೇಶಿ ಕ್ರಿಕೆಟ್‌ನಲ್ಲಿ ಛಾಪು ಮೂಡಿಸಿದ್ದ ಕರ್ನಾಟಕದ ಮಾಜಿ ನಾಯಕ ಬಿಂಡಿಗನವಿಲೆ ಕೃಷ್ಣಸ್ವಾಮಿ (ಬಿ.ಕೆ) ಅಯ್ಯಂಗಾರ್‌ ಗರುಡಾ ಚಾರ್‌ (99) ಅವರು ಶುಕ್ರವಾರ ನಿಧನ ಹೊಂದಿದ್ದಾರೆ.

ವಿಶಿಷ್ಟ ಬೌಲಿಂಗ್ ಶೈಲಿಯ ಮೂಲಕ ದೇಶಿ ಕ್ರಿಕೆಟ್‌ನಲ್ಲಿ ಗಮನ ಸೆಳೆದಿದ್ದ ಗರುಡಾಚಾರ್ ಅವರನ್ನು 2007ರಲ್ಲಿ  ಮಲ್ಲೇಶ್ವರಂನಲ್ಲಿದ್ದ  ಅವರ ಸಹೋದರಿ ಯ ಮನೆಯಲ್ಲಿ ಒಮ್ಮೆ ಭೇಟಿಯಾಗುವ ಅವಕಾಶ ಲಭಿಸಿತ್ತು.

ಆಗ ಅವರೊಂದಿಗೆ ಕಳೆದ ಸಮಯ ದಲ್ಲಿ ಹಲವಾರು ವಿಷಯಗಳನ್ನು  ತಿಳಿದುಕೊಳ್ಳಲು ಸಾಧ್ಯವಾಗಿತ್ತು. ಚಿಕ್ಕಮಗಳೂರಿನಲ್ಲಿ 1917ರಲ್ಲಿ ಜನಿಸಿದ ಅವರು ಅಂದಿನ ಮೈಸೂರು ತಂಡ, ಉತ್ತರ ಪ್ರದೇಶದ ಯುನೈಟೆಡ್‌ ಪ್ರಾವಿನ್ಸಸ್‌ ಮತ್ತು ಮುಂಬೈ (ಆಗಿನ ಬಾಂಬೆ) ತಂಡಗಳಲ್ಲಿ ಆಡಿದ್ದರು. 1946ರಲ್ಲಿ ಇಂದೋರ್‌ನಲ್ಲಿ ನಡೆದಿದ್ದ ಹೋಳ್ಕರ್‌ ಎದುರಿನ ರಣಜಿ ಸೆಮಿ ಫೈನಲ್‌ ಪಂದ್ಯಕ್ಕೆ ಮೈಸೂರು ತಂಡದ ನಾಯಕರಾಗಿದ್ದರು. ಆ ಪಂದ್ಯವನ್ನಂತೂ ಎಂದಿಗೂ ಮರೆಯ ಲಾಗದು.

ಏಕೆಂದರೆ ಅವರು ಮೈಸೂರು ತಂಡದ ನಾಯಕ ರಾಗಿದ್ದ ಮೊದಲ ಮತ್ತು ಕೊನೆಯ ಪಂದ್ಯ ಅದಾಗಿತ್ತು. ಆ ಪಂದ್ಯದಲ್ಲಿ ಹೋಳ್ಕರ್‌ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 912 ರನ್‌ಗಳನ್ನು ಬಾರಿಸಿತ್ತು. ಗರುಡಾ ಚಾರ್ ಅವರೇ 301 ರನ್‌ಗಳನ್ನು ಕೊಟ್ಟು ‘ದಾಖಲೆ’ ನಿರ್ಮಿಸಿದ್ದರು. ಅವರ ಮನೆಗೆ ಹೋದಾಗ ಈ ವಿಷಯವನ್ನು ಪ್ರಸ್ತಾ ಪಿಸಿದ್ದೆ. ಇದನ್ನು ಕೇಳಿದ ಅವರು ‘ಆ ಪಂದ್ಯವನ್ನು ನನ್ನ ಜೀವನದಲ್ಲಿ ಎಂದಿಗೂ ಮರೆಯುವುದಿಲ್ಲ. ನೀವೂ ನೆನಪಿಟ್ಟಿಕೊಂಡಿದ್ದೀರಾ’ ಎಂದು ಜೋರಾಗಿ ನಕ್ಕಿದ್ದರು.

‘ಆಗೆಲ್ಲಾ ನಾವು ಕ್ರಿಕೆಟ್‌ ಮೇಲಿನ ಪ್ರೀತಿಯಿಂದಾಗಿ ಆಡುತ್ತಿದ್ದೆವು.  ಪಂದ್ಯದ ಫಲಿತಾಂಶದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಆಗ ನಮಗೆ ಪ್ರತಿ ಪಂದ್ಯಕ್ಕೆ 10 ರಿಂದ 15 ರೂಪಾಯಿ ಸಿಕ್ಕರೆ ಅದೇ ಹೆಚ್ಚು. ಆದ್ದರಿಂದ ಹೋಳ್ಕರ್‌ ಎದುರು ಸಾವಿರದ ಸನಿಹ ರನ್ ನೀಡಿದ್ದರೂ ನಮ್ಮ ಆತ್ಮವಿಶ್ವಾಸ ಕಡಿಮೆಯಾಗಿರಲಿಲ್ಲ’ ಎಂದು ಅವರು ನೆನಪಿಸಿಕೊಂಡಿದ್ದರು.

ಬಲಗೈ ಬ್ಯಾಟ್ಸ್‌ಮನ್‌ ಹಾಗೂ ಸ್ಪಿನ್ನರ್‌ ಆಗಿದ್ದ ಅವರು ಈಗಿನ ತಲೆ ಮಾರಿನ ಅತ್ಯಂತ ಹಿರಿಯ ಕ್ರಿಕೆಟಿಗ ರೆನಿಸಿದ್ದರು. ಒಟ್ಟು 27 ಪ್ರಥಮ ದರ್ಜೆ ಪಂದ್ಯಗಳನ್ನಾಡಿ 1126 ರನ್‌ಗಳನ್ನು ಕಲೆ ಹಾಕಿದ್ದಾರೆ. ಏಳು ಅರ್ಧಶತಕ ಮತ್ತು ಒಂದು ಶತಕವನ್ನು ಬಾರಿಸಿದ್ದಾ

ರಣಜಿ ಟ್ರೋಫಿಯಲ್ಲಿ ಗರುಡಾ ಚಾರ್‌ ಮೈಸೂರು ತಂಡದ ಪರ ಹತ್ತು, ಉತ್ತರ ಪ್ರದೇಶದ ಪರ ಆರು ಮತ್ತು ಮುಂಬೈ ತಂಡದಲ್ಲಿ ಮೂರು ಪಂದ್ಯಗಳಲ್ಲಿ ಆಡಿದ್ದಾರೆ. 1935–36ರ ಋತುವಿನಲ್ಲಿ ಬೆಂಗಳೂರಿನ ಜಿಮ್ಖಾನಾ ಕ್ರೀಡಾಂಗಣ ದಲ್ಲಿ ನಡೆದ ಮದ್ರಾಸ್‌ ಎದುರಿನ ಪಂದ್ಯ ಆಡುವ ಮೂಲಕ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು.  ಗರುಡಾಚಾರ್ ಅವರಿಗೆ ಕ್ರಿಕೆಟ್‌ ಬಿಟ್ಟರೆ ಟೆನಿಸ್‌ ಬಗ್ಗೆ ಅಪರಿಮಿತ ಒಲವಿತ್ತು.

ಬನಾರಸ್‌ ವಿಶ್ವವಿದ್ಯಾಲಯ ದಲ್ಲಿ ವಿದ್ಯಾಭ್ಯಾಸ ಮಾಡಿದ್ದ ಅವರು ವಿ.ವಿ ಮಟ್ಟದ ಟೆನಿಸ್‌ ಟೂರ್ನಿಯಲ್ಲಿ ನಾಲ್ಕು ಸಲ ಚಾಂಪಿಯನ್‌ ಆಗಿದ್ದರು. ಹಿಂದೂಸ್ತಾನಿ ಮತ್ತು ಕರ್ನಾಟಕ ಸಂಗೀತದ ಬಗ್ಗೆ ಅಪಾರ ಪ್ರೀತಿ ಹೊಂದಿ ದ್ದರು. ಹೋದ ತಿಂಗಳ 13ರಂದು  99ನೇ ವಸಂತಕ್ಕೆ ಕಾಲಿಟ್ಟಿದ್ದ ಅವರು ಬದುಕಿನಲ್ಲಿಯೂ ‘ಶತಕ’ ಬಾರಿಸುತ್ತಾರೆ ಎನ್ನುವ ನಂಬಿಕೆ ಬಲ ವಾಗಿತ್ತು. ಆದರೆ ಅವರು ತೀರಿ  ಹೋದಾಗ ಸಾಧನೆಯ ನೆನಪುಗಳು ಸುಳಿದಾಡಿದವು.
(ಲೇಖಕರು: ದೇಶಿ ಅಂಕಿಅಂಶ ತಜ್ಞರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT