ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿ ಸಂಕಷ್ಟದಲ್ಲಿ ಹನುಮಂತ!

Last Updated 23 ಡಿಸೆಂಬರ್ 2018, 4:18 IST
ಅಕ್ಷರ ಗಾತ್ರ

ಬೆಂಗಳೂರು: ಭಗವಂತ ಹನುಮನು ಸದ್ಯ ತೀವ್ರ ಅಸ್ಮಿತೆಯ ಸಂಕಷ್ಟದಲ್ಲಿ ಮುಳುಗಿದ್ದಾನೆ. ಬುಡಕಟ್ಟು ಜನಾಂಗದವನಾಗಿದ್ದ ಹನುಮ ಮರುದಿನವೇ ದಲಿತನಾದ. ನಂತರ ಮುಸ್ಲಿಂ, ಜಾಟ್‌... ಹೀಗೆ ಬಿಜೆಪಿ ಮುಖಂಡರು ಹನುಮಂತನನ್ನುದಿನಕ್ಕೊಂದು ಜಾತಿಗೆ ಎಳೆದುಕೊಳ್ಳುತ್ತಿದ್ದಾರೆ.ರಾಮನ ವಿಚಾರದಲ್ಲಿ ಒಗ್ಗಟ್ಟಾಗಿದ್ದ ಬಿಜೆಪಿ ಈಗ ಆತನ ಬಂಟ ಆಂಜನೇಯನವಿಚಾರದಲ್ಲಿ ಒಡೆದುಹೋಗುತ್ತಿದೆ.

ಸದ್ಯ ಹನುಮಂತ ಯಾರು ಗೊತ್ತಾ?

ಸಮಾಜವಾದಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್‌ಶಂಕರ್ ವಿದ್ಯಾರ್ಥಿ ಶನಿವಾರವಷ್ಟೇ ರಾಮದೂತನನ್ನು ಗೊಂಡ್ ಸಮುದಾಯಕ್ಕೆ ಸೇರಿಸಿದ್ದಾರೆ. ಬಿಜೆಪಿ ನಾಯಕರು ಹೇಳಿಕೆಗಳನ್ನು ಅಲ್ಲಗಳೆದ ಅವರು ವಾಯುಪುತ್ರ ತಮ್ಮ ಸಮುದಾಯದ ಸದಸ್ಯ ಎಂದು ಪ್ರತಿಪಾದಿಸಿದ್ದಾರೆ. ಹೀಗಾಗಿ ಸದ್ಯ ಹನುಮಂತನ ಜಾತಿ ಗೊಂಡ್‌.

ಉತ್ತರ ಪ್ರದೇಶದ ಮುಜರಾಯಿ ಇಲಾಖೆ ಸಚಿವ ಚೌಧರಿ ಲಕ್ಷ್ಮಿನಾರಾಯಣ ಸಿಂಗ್‌ ಶುಕ್ರವಾರ ಬಿಜೆಪಿ ಶಾಸಕ ಬುಕ್ಕಲ್‌ ನವಾಬ್‌ ಹೇಳಿಕೆಗೆ ಪ್ರತಿಕ್ರಿಯಿಸಿ ’ಹನುಮಂತ ಮುಸ್ಲಿಂ ಅಲ್ಲ, ನನಗನ್ನಿಸುತ್ತಿದೆ ಅವನು ಜಾಟ್‌ ಸಮುದಾಯಕ್ಕೆ ಸೇರಿದವನು. ಏಕೆಂದರೆ, ಯಾರಾದರೂ ಕಷ್ಟದಲ್ಲಿದ್ದರೆ ಯಾರು, ಏನು ಎಂದು ತಿಳಯದೆ ಜಾಟ್‌ ಸಮುದಾಯದವರು ಸಹಾಯಕ್ಕೆ ಹಾರುತ್ತಾರೆ. ನಮ್ಮ ಸ್ವಭಾವೇ ಪವನತನಯನಲ್ಲಿದೆ’ ಎಂದಿದ್ದರು.

ಇದೆಲ್ಲ ಯಾವಾಗ ಶುರುವಾಯಿತು ಅಂತೀರಾ?

ನವೆಂಬರ್‌ 27ರಂದು ರಾಜಸ್ಥಾನದಲ್ಲಿ ನಡೆದ ಚುನಾವಣಾ ರ್‍ಯಾಲಿಯಲ್ಲಿ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ಹನುಮಂತ ದಲಿತ ಎಂದು ಹೇಳುವ ಮೂಲಕ ಈ ಚರ್ಚೆ ಹುಟ್ಟು ಹಾಕಿದ್ದರು. ಆ ನಂತರರಾಷ್ಟ್ರೀಯ ಪರಿಶಿಷ್ಟ ಪಂಗಡದ ಆಯೋಗದ ಅಧ್ಯಕ್ಷ ನಂದಕುಮಾರ್ ಸಾಯಿ, ಲಖನೌನ ಒಂದು ಸಭೆಯಲ್ಲಿ ಹನುಮಂತ ಬುಡಕಟ್ಟು ಸಮುದಾಯಕ್ಕೆ ಸೇರಿದವನು ಎಂದು ಘೋಷಿಸಿಯೇ ಬಿಟ್ಟರು. ಆಗಿನಿಂದ ಹನುಮನಿಗೆ ಅಸ್ಮಿತೆಯ ಸಂಕಷ್ಟ ಶುರುವಾಗಿದೆ.

ಹಾಗಾದರೆ ಹನುಮನ ಹಿನ್ನಲೆ ಏನು?

ಹನುಮನ ಬಗ್ಗೆ ಸಾಕಷ್ಟು ಕಥೆಗಳಿವೆ. ಆದರೆ, ಪಠ್ಯದ ರೂಪದಲ್ಲಿ ಮೊದಲು ಹನುಮಂತನ ಉಲ್ಲೇಖವಾಗಿದ್ದು ವಾಲ್ಮೀಕಿಯ ರಾಮಾಯಣದಲ್ಲಿ. ಕಪ್ಪಗೆ, ಉದ್ದ ಕೂದಲು, ಊದಿದ ಮೂತಿ..ಹೀಗೆ ಮನುಷ್ಯನಿಗಿಂತ ಭಿನ್ನ ರೂಪಲಕ್ಷಣಗಳಲ್ಲಿ ಹನುಮನನ್ನು ಅದರಲ್ಲಿ ಚಿತ್ರಿಸಲಾಗಿತ್ತು. ವಾನರ ಸೇನೆಯ ಅಧಿಪತಿಯಾಗಿದ್ದ ಹನುಮಂತ ರಾಮನ ಭಂಟನಾಗಿದ್ದ. ಬಾಲದಲ್ಲಿ ಲಂಕೆಯನ್ನು ಸುಡುವ ಹನುಮ ರಾಮ–ರಾವಣರ ನಡುವಿನ ಯುದ್ಧದಲ್ಲಿ ಬಹುಮುಖ್ಯ ಪಾತ್ರವಹಿಸಿದ್ದ.ಮತ್ತೊಂದು ಕಥೆಯಲ್ಲಿಸೂರ್ಯನನ್ನು ಹಣ್ಣು ಎಂದು ಭಾವಿಸಿದ ಹನುಮಂತ ಸೂರ್ಯನನ್ನು ತಿನ್ನಲುಹೋಗಿ ಮೂತಿ ಊದಿಕೊಂಡಿತು ಎಂದಿದೆ.

ಉಪ ಜಾತಿಗಳ ಮೇಲೆ ನಿಯಂತ್ರಣ ಸಾಧಿಸುವುದಕ್ಕಾಗಿ ಬ್ರಾಹ್ಮಣ ಸಮುದಾಯ ಪುರಾಣ ಕಥೆಗಳಿಗೆ ಸೈದ್ಧಾಂತಿಕ ನೆಲೆಯನ್ನು ನೀಡಿದ್ದಾರೆ ಎಂದು ಜ್ಯೋತಿರಾವ್‌ ಫುಲೆ, ಅಂಬೇಡ್ಕರ್ ಹಾಗೂ ಇತರೆ ತಜ್ಞರು ವಾದಿಸುತ್ತಾರೆ.

ಹನುಮಂತ ಹುಟ್ಟಿನ ಬಗ್ಗೆ ವಾಲ್ಮೀಕಿ ರಾಮಾಯಣದಲ್ಲಾಗಲಿ, ಆ ನಂತರ ಬಂದ ಇತರೆ ರಾಮಾಯಣದ ಆವೃತ್ತಿಗಳಲ್ಲಿ ಸ್ಪಷ್ಟವಾಗಿ ಹೇಳಿಲ್ಲ. ಶಿವನಿಂದ ಜನಿಸಿದವನು ಎಂದು ಅನೇಕರು ಹೇಳಿದರೆ, ಇನ್ನು ಕೆಲವರು ಗಾಳಿದೇವ ಹನುಮನ ತಂದೆ ಎನ್ನುತ್ತಾರೆ.

16ನೇ ಶತಮಾನದಲ್ಲಿ, ಆ ಸಮಯದಲ್ಲಾಗಲೇ ರಾಮ ವಿಷ್ಣುವಿನ ಅವತಾರ ಎಂದು ಹಿಂದೂ ಪಠ್ಯಗಳಲ್ಲಿ ಉಲ್ಲೇಖವಾಗುತ್ತಿತ್ತು. ಅದಾಗಲೇ ಹನುಮನನ್ನು ಜಾತಿ ಆಧಾರಿತ ಚಿನ್ಹೆಗಳ ಮೂಲಕ ಗುರುತಿಸಲಾಗುತ್ತಿತ್ತು. ಉದಾಹರಣೆಗೆ ತುಳಸಿದಾಸರು ರಚಿಸಿದರಾಮಚರಿತಮಾನಸ, ಹನುಮ ಬ್ರಾಹ್ಮಣ ಮತ್ತು ಕ್ಷತ್ರಿಯಾ ಎಂದು ಬಿಂಬಿಸುತ್ತದೆ.

ಕಾಂಗ್ರೆಸ್‌ ನಾಯಕರ ಟೀಕೆ

ಹನುಮಂತನನ್ನು ದಿನಕ್ಕೊಂದು ಜಾತಿಗೆ ಸೇರಿಸುತ್ತಿರುವಬಿಜೆಪಿ ಮುಖಂಡರ ಬಗ್ಗೆ ಟೀಕಿಸಿರುವ ಕಾಂಗ್ರೆಸ್‌,‘ದೇವರ ಹೆಸರಿನಲ್ಲಿ ಜಾತಿ ರಾಜಕಾರಣ ಶುರುಮಾಡಿದ್ದಾರೆ ಎಂದಿದ್ದಾರೆ.

ಉತ್ತರ ಪ್ರದೇಶ ಸಚಿವರ ಹೇಳಿಕೆಗೆ ವ್ಯಂಗ್ಯ ಮಾಡಿರುವ ಸಚಿವ ಪ್ರಿಯಾಂಕ್ ಖರ್ಗೆ, ‘ಬಿಜೆಪಿ ನಾಯಕರಿಗೆ ಆಪ್ತಸಮಾಲೋಚನೆಯ ಅಗತ್ಯವಿದೆ’ ಎಂದು ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT