ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇರ ನೇಮಕ: ಮೀಸಲು ಗೊಂದಲಕ್ಕೆ ಕಾಯ್ದೆ

ಕೆಪಿಎಸ್‌ಸಿ: ಹೊಸ ಮಸೂದೆ ಮಂಡನೆಗೆ ಸರ್ಕಾರ ಸಿದ್ಧತೆ l1994ರಿಂದಲೇ ಪೂರ್ವಾನ್ವಯ
Last Updated 14 ಡಿಸೆಂಬರ್ 2018, 20:15 IST
ಅಕ್ಷರ ಗಾತ್ರ

ಬೆಳಗಾವಿ: ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಮೂಲಕ ನಡೆಯುವ ನೇರ ನೇಮಕಾತಿಗಳಲ್ಲಿ (ಗೆಜೆಟೆಡ್‌ ಪ್ರೊಬೇಷನರಿ) ಮೀಸಲಾತಿ ಅನ್ವಯಿಸುವ ಕುರಿತು ಗೊಂದಲ ಪರಿಹರಿಸುವ ಉದ್ದೇಶದಿಂದ ಹೊಸ ಕಾಯ್ದೆ ರೂಪಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಇಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಈ ಉದ್ದೇಶದಿಂದ ‘ಕರ್ನಾಟಕ ಸಿವಿಲ್‌ ಸೇವೆಗಳ (ನೇಮಕಾತಿಯ ಸಮಯದಲ್ಲಿ ಅಭ್ಯರ್ಥಿಗಳ ಆಯ್ಕೆ ಕಾರ್ಯವಿಧಾನ)–2018’ ಎಂಬ ಹೊಸ ಮಸೂದೆಯನ್ನು ಸರ್ಕಾರ ಮಂಡಿಸಲಿದೆ. ಅಡ್ವೊಕೇಟ್‌ ಜನರಲ್‌ ನೀಡಿದ ಅಭಿಪ್ರಾಯದ ಅನ್ವಯ ಕರಡು ರೂಪಿಸಲಾಗಿದ್ದು, ಇದಕ್ಕೆ ಕೆಪಿಎಸ್‌ಸಿ ಕೂಡ ಸಹಮತ ಸೂಚಿಸಿದೆ.

ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ನೇಮಕಾತಿಗೆ ನಡೆಯುವ ಸ್ಪರ್ಧಾತ್ಮಕ ಮುಖ್ಯ ಪರೀಕ್ಷೆ, ಪೂರ್ವಭಾವಿ ಪರೀಕ್ಷೆ, ಅಂತಿಮ ಆಯ್ಕೆ ಪಟ್ಟಿ ಮತ್ತು ಹೆಚ್ಚುವರಿ ಪಟ್ಟಿಗಳಿಗೆ ಅಭ್ಯರ್ಥಿಗಳ ಆಯ್ಕೆ ಕಾರ್ಯವಿಧಾನವನ್ನು ಈ ಕಾಯ್ದೆಯಲ್ಲಿ ವಿವರಿಸಲಾಗಿದೆ.

ರಾಜ್ಯದಲ್ಲಿ ಗ್ರೂಪ್‌ ಎ, ಬಿ, ಸಿ ಮತ್ತು ಡಿ ಹುದ್ದೆಗಳ ನೇಮಕದ ಸಂಬಂಧ 1994ರ ಮೇ 3 ಮತ್ತು 1995ರ ಜೂನ್‌ 20ರಂದು ಸರ್ಕಾರ ಹೊರಡಿಸಿದ ಆದೇಶದ ಪ್ರಕಾರ ಮೀಸಲಾತಿ ಪದ್ಧತಿಯನ್ನು ಅನುಸರಿಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

1994 ಮೇ 3ರಿಂದ ಜಾರಿಯಲ್ಲಿರುವ ಈ ಆದೇಶದ ಆಯ್ಕೆ ಪ್ರಾಧಿಕಾರವು ಯಾವ ಜಾತಿ, ಪಂಗಡ, ವರ್ಗಗಳಿಗೆ ಸೇರಿದವರೆನ್ನುವುದನ್ನು ಪರಿಗಣಿಸದೆ, ಕೇವಲ ಅರ್ಹತೆ ಆಧಾರದಲ್ಲಿ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಬೇಕು. ಅಂದರೆ, ಎಸ್‌.ಸಿ, ಎಸ್‌.ಟಿ ಹಾಗೂ ಇತರ ಹಿಂದುಳಿದ ವರ್ಗಗಳ ಅಭ್ಯರ್ಥಿಗಳು ಸಾಮಾನ್ಯ ವರ್ಗದ ಅಭ್ಯರ್ಥಿಗಳಿಂದ ಹೆಚ್ಚಿನ ಅಂಕ ಪಡೆದರೆ ಅಂತಹ ಅಭ್ಯರ್ಥಿಗಳು ಸಾಮಾನ್ಯ ವರ್ಗದ ಅಡಿ ಆಯ್ಕೆ ಆಗುತ್ತಾರೆ. ಈ ಅಂಶ ಮಸೂದೆಯಲ್ಲಿದೆ.

ಹೊಸ ಕಾಯ್ದೆಯನ್ನು 1994ರ ಮೇ 3ರಿಂದಲೇ ಪೂರ್ವಾನ್ವಯಗೊಳಿಸುವ ಪ್ರಸ್ತಾಪವೂ ಮಸೂದೆಯಲ್ಲಿದೆ. ಕಾಯ್ದೆಯನ್ನು ಪೂರ್ವಾನ್ವಯಗೊಳಿಸಿದರೆ, 1998, 1999 ಮತ್ತು 2004ನೇ ಸಾಲಿನಲ್ಲಿ ನಡೆದ ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ನೇಮಕಾತಿ ಅಸಾಂವಿಧಾನಿಕವೆಂದು ಹೈಕೋರ್ಟ್‌ ನೀಡಿದ್ದ ತೀರ್ಪನ್ನು ಕಡೆಗಣಿಸಿದಂತಾಗುತ್ತದೆ. ಆ ಮೂಲಕ, ಈ ಸಾಲುಗಳಲ್ಲಿ ಅಕ್ರಮವಾಗಿ ನೇಮಕಗೊಂಡವರನ್ನು ರಕ್ಷಿಸಲು ಮತ್ತು ಐಎಎಸ್‌ಗೆ ಬಡ್ತಿ ಪಡೆದ ಏಳು ಅಧಿಕಾರಿಗಳು ಹಿಂಬಡ್ತಿ ಪಡೆಯದಂತೆ ರಕ್ಷಣೆ ನೀಡಲು ಸರ್ಕಾರ ಮುಂದಾಗಿದೆ ಎಂದೂ ಹೇಳಲಾಗುತ್ತಿದೆ.

ಹೊಸ ಕಾಯ್ದೆ ಏಕೆ?

2015ನೇ ಸಾಲಿನ 428 ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳಿಗೆ ನೇಮಕಾತಿ ವೇಳೆ, 1998, 1999, 2004ರ ಸಾಲಿನ ನೇಮಕಾತಿ ಪ್ರಕರಣದಲ್ಲಿ ಹೈಕೋರ್ಟ್‌ ನೀಡಿದ ತೀರ್ಪಿನ ಪ್ರಕಾರ, ಮುಖ್ಯ ಪರೀಕ್ಷೆಯಿಂದ ವ್ಯಕ್ತಿತ್ವ ಪರೀಕ್ಷೆಗೆ (ಸಂದರ್ಶನ) ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕೇ ಎಂಬ ಬಗ್ಗೆ ಕೆಪಿಎಸ್‌ಸಿ ರಾಜ್ಯ ಸರ್ಕಾರದಿಂದ ಸ್ಪಷ್ಟೀಕರಣ ಕೇಳಿತ್ತು.

ಮೀಸಲಾತಿ ಪಡೆಯುವ ಅಭ್ಯರ್ಥಿಗಳು ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗಿಂತ ಹೆಚ್ಚಿನ ಅಂಕಗಳನ್ನು ಪಡೆದರೂ ಅವರನ್ನು ಮೀಸಲಾತಿಯಲ್ಲೇ ಪರಿಗಣಿಸಬೇಕು ಎಂದು ಹೈಕೋರ್ಟ್‌ ತೀರ್ಪಿನಲ್ಲಿ ಹೇಳಿತ್ತು. ಕೆಪಿಎಸ್‌ಸಿಗೆ ನ. 3ರಂದು ಪತ್ರ ಬರೆದಿದ್ದ ಸರ್ಕಾರ, ಹೈಕೋರ್ಟ್ ತೀರ್ಪು ಪಾಲಿಸುವಂತೆ ಸೂಚಿಸಿತ್ತು.

ಈ ನಿರ್ದೇಶನ ಪಾಲಿಸಲು ಕೆಪಿಎಸ್‌ಸಿ ಮುಂದಾಗುತ್ತಿದ್ದಂತೆ ಆಕ್ರೋಶ ವ್ಯಕ್ತವಾಗಿತ್ತು. ಮಾಜಿ ಸಚಿವ ಎಚ್‌.ಸಿ. ಮಹದೇವಪ್ಪ ವಿರೋಧ ವ್ಯಕ್ತಪಡಿಸಿದ್ದರು. ಸಚಿವರಾದ ಪ್ರಿಯಾಂಕ್‌ ಖರ್ಗೆ, ಸಿ.ಪುಟ್ಟರಂಗಶೆಟ್ಟಿ, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗೆ ಪತ್ರ ಬರೆದು, 1995ರ ಆದೇಶದಲ್ಲಿರುವ ನಿಯಮವನ್ನೇ 2015ನೇ ಸಾಲಿನ ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ನೇಮಕಾತಿಯೂ ಸೇರಿದಂತೆ ಎಲ್ಲ ನೇರ ನೇಮಕಾತಿಗಳಿಗೂ ಅನುಸರಿಸುವಂತೆ ಕೆಪಿಎಸ್‌ಸಿಗೆ ಸೂಚಿಸಬೇಕು ಎಂದು ಒತ್ತಡ ಹಾಕಿದ್ದರು.

ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆದಾಗ, ಉಪಮುಖ್ಯಮಂತ್ರಿ ಜಿ. ಪರಮೇಶ್ವರ, ಪ್ರಿಯಾಂಕ್‌ ಖರ್ಗೆ, ನಿಯಮ ಬದಲಾವಣೆಯನ್ನು ಗಂಭೀರವಾಗಿ ಪರಿಗಣಿಸುವಂತೆ ಒತ್ತಡ ಹೇರಿದ್ದರು. ಈ ಬಗ್ಗೆ ಕಾನೂನು ಸಲಹೆ ಪಡೆದು ತೀರ್ಮಾನಕ್ಕೆ ಬರಲು ನಿರ್ಧರಿಸಲಾಗಿತ್ತು. ಇದೀಗ, ಅಡ್ವೊಕೇಟ್‌ ಜನರಲ್‌ ನೀಡಿದ ಅಭಿಪ್ರಾಯದಂತೆ ನಡೆಯಲು ಸರ್ಕಾರ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.

ಕಾಯ್ದೆ ಪರಿಣಾಮ ಏನು?

l 1998, 1999 ಮತ್ತು 2004ನೇ ಸಾಲಿನ ನೇಮಕಾತಿ ಸಂಬಂಧ ಹೈಕೋರ್ಟ್‌ ನೀಡಿದ್ದ ತೀರ್ಪು ಅನೂರ್ಜಿತವಾಗಲಿದೆ

l ಈ ಸಾಲುಗಳಲ್ಲಿ ನೇಮಕಗೊಂಡು ಹುದ್ದೆ ಕಳೆದುಕೊಳ್ಳುವ ಮತ್ತು ಹಿಂಬಡ್ತಿ ಭೀತಿಯಲ್ಲಿರುವವರಿಗೆ ರಕ್ಷಣೆ ಸಿಗಲಿದೆ

l ಹೈಕೋರ್ಟ್ ನೀಡಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. ಈ ತೀರ್ಪು ಪಾಲನೆಯಾಗಿಲ್ಲ ಎಂದು ಸಲ್ಲಿಕೆಯಾದ ನ್ಯಾಯಾಂಗ ಅರ್ಜಿ ವಿಚಾರಣೆ ಹಂತದಲ್ಲಿರುವುದರಿಂದ, ಕೋರ್ಟ್‌ನಲ್ಲಿ ‘ತಿದ್ದುಪಡಿ’ ಪ್ರಶ್ನಿಸಬಹುದು.

l 2015ರ ಗೆಜೆಟೆಡ್‌ ಪ್ರೊಬೇಷನರಿಯ ಪೂರ್ವಭಾವಿ ಪರೀಕ್ಷೆ, ಮುಖ್ಯ ಪರೀಕ್ಷೆ ಮತ್ತು ವ್ಯಕ್ತಿತ್ವ ಪರೀಕ್ಷೆಗಳಿಗೆ ಅಭ್ಯರ್ಥಿಗಳ ಆಯ್ಕೆಗೆ 1995ರ ಆದೇಶ ಅನ್ವಯ ಆಗಲಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT