ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಕಾಗಿದೆ, ಏನಾದರೂ ಮಾಡಿಕೊಳ್ಳಲಿ: ಸಿದ್ದರಾಮಯ್ಯ

ಅತೃಪ್ತ ಕಾಂಗ್ರೆಸ್ ಶಾಸಕರ ವಿರುದ್ಧ ಅಸಮಾಧಾನ
Last Updated 5 ಜುಲೈ 2019, 20:00 IST
ಅಕ್ಷರ ಗಾತ್ರ

ಬೆಂಗಳೂರು: ‘ಅತೃಪ್ತ ಶಾಸಕರ ಜತೆಗೆ ಮಾತನಾಡಿ ನನಗೂ ಸಾಕಾಗಿದೆ. ಏನಾದರೂ ಮಾಡಿಕೊಳ್ಳಲಿ ಎಂದು ಬಿಟ್ಟುಬಿಟ್ಟಿದ್ದೇನೆ’ ಎಂದು ಮೈತ್ರಿಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಶುಕ್ರವಾರ ತೀವ್ರ ಅಸಮಾಧಾನ ಹೊರಹಾಕಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್, ರಾಜೀನಾಮೆ ನೀಡುವುದಾಗಿ ಬೆದರಿಕೆ ಹಾಕುತ್ತಿರುವ ರಮೇಶ ಜಾರಕಿಹೊಳಿ ವಿರುದ್ಧ ಕಿಡಿಕಾರಿದರು.

‘ಆನಂದ್ ಸಿಂಗ್ ಜತೆ ಮಾತನಾಡಿಲ್ಲ. ಅವರೇ ಮುಂದೆ ಬಂದು ರಾಜೀನಾಮೆ ವಾಪಸ್ ತೆಗೆದುಕೊಳ್ಳಬೇಕು. ಸಾಕಷ್ಟು ಸಲ ನನ್ನನ್ನು ಭೇಟಿಯಾಗಿದ್ದು, ಆ ಸಮಯದಲ್ಲಿ ಜಿಂದಾಲ್‌ ಕಂಪೆನಿಗೆ ಜಮೀನು ನೀಡುವ ವಿಚಾರವಾಗಲಿ, ಇತರ ಸಮಸ್ಯೆಗಳನ್ನಾಗಲಿ ಹೇಳಿಕೊಂಡಿಲ್ಲ. ಇಷ್ಟು ದಿನ ಸುಮ್ಮನಿದ್ದು, ಈಗ ಜಿಂದಾಲ್‌ಗೆ ಭೂಮಿ ನೀಡಬಾರದು ಎಂದು ಒತ್ತಾಯಿಸುತ್ತಿದ್ದಾರೆ. ಇದೆಲ್ಲ ಅರ್ಥವಿಲ್ಲದ ವಿಚಾರ’ ಎಂದರು.

‘ರಮೇಶ ಜಾರಕಿಹೊಳಿ ಜತೆ ಸಾಕಷ್ಟು ಸಲ ಮಾತನಾಡಿದ್ದು, ನನಗೂ ಸಾಕಾಗಿದೆ. ಅವರು ಏನುಬೇಕಾದರೂ ಮಾಡಿಕೊಳ್ಳಲಿ’ ಎಂದು ಕಿಡಿಕಾರಿದರು.

ನಿಲ್ಲದ ಪ್ರಯತ್ನ:ಮೈತ್ರಿ ಸರ್ಕಾರ ಅಸ್ಥಿರಗೊಳಿಸುವ ಕೆಲಸ ನಡೆಯುತ್ತಲೇ ಇದೆ. ‘ಆಪರೇಷನ್ ಕಮಲ’ ಮಾಡುತ್ತಿಲ್ಲ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸುಳ್ಳು ಹೇಳುತ್ತಲೇ ಇದ್ದಾರೆ. ಶಾಸಕರಿಗೆ ಯಡಿಯೂರಪ್ಪ ಹಣದ ಆಮಿಷ ಒಡ್ಡಿದ ಆಡಿಯೊ ಬಿಡುಗಡೆ ಆಗಿದ್ದು, ಕಾಂಗ್ರೆಸ್ ಶಾಸಕರನ್ನು ಮುಂಬೈಗೆ ಕರೆದುಕೊಂಡು ಹೋಗಿದ್ದು ಸುಳ್ಳೇ ಎಂದು ಪ್ರಶ್ನಿಸಿದರು.

ಎಸ್‌ಐಟಿ ತನಿಖೆ:ಶಾಸಕರಿಗೆ ಹಣದ ಆಮಿಷ ಒಡ್ಡಿದ ಆಡಿಯೊ, ಇದರಲ್ಲಿ ಸ್ಪೀಕರ್ ರಮೇಶ್ ಕುಮಾರ್ ಹೆಸರು ಪ್ರಸ್ತಾಪವಾಗಿರುವ ಬಗ್ಗೆ ಎಸ್‌ಐಟಿ ತನಿಖೆಗೆ ನಿರ್ಧರಿಸಿದ್ದರೂ ಈವರೆಗೂ ತನಿಖಾ ತಂಡ ರಚಿಸದಿರುವ ಬಗ್ಗೆ ಪ್ರತಿಕ್ರಿಯಿಸಿ, ಈ ಬಗ್ಗೆ ಮುಖ್ಯಮಂತ್ರಿ ಜತೆ ಚರ್ಚಿಸಲಾಗುವುದು ಎಂದು ಹೇಳಿದರು.

ಅಹಿಂದ ಸಮಾವೇಶ ಇಲ್ಲ:ಕಾಂಗ್ರೆಸ್ ಪಕ್ಷವೇ ‘ಅಹಿಂದ’ ಪರವಾಗಿದ್ದು, ಪ್ರತ್ಯೇಕವಾಗಿ ಸಮಾವೇಶ ಮಾಡುವುದಿಲ್ಲ. ಅಗತ್ಯವೆನಿಸಿದರೆ ಪಕ್ಷದ ನೇತೃತ್ವದಲ್ಲೇ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು.

‘ಅಧಿಕಾರಿ ವರ್ಗಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಕೆ.ಜೆ.ಜಾರ್ಜ್ ಹಾಗೂ ಶಾಸಕ ಬೈರತಿ ಬಸವರಾಜ್ ನಡುವೆ ನಡೆದಿರುವ ವಾಗ್ವಾದ ಪರಿಹರಿಸಿದ್ದೇನೆ. ಇಬ್ಬರ ಜತೆಗೂ ಮಾತನಾಡಿದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT