ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಫ್‌ಲೈನ್‌ನಲ್ಲಿ ಯು ಟ್ಯೂಬ್ ವಿಡಿಯೊ!

Last Updated 23 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ವಿಶ್ವದಾದ್ಯಂತ ಅಂತರ್ಜಾಲ ಸಂಬಂಧಿತ ಸೇವೆ ಒದಗಿಸುವ ಗೂಗಲ್, ಭಾರತದಲ್ಲಿ ಆ್ಯಂಡ್ರಾಯಿಡ್‌ ಫೋನ್ ಬಿಡುಗಡೆ ಮಾಡುವ ಯೋಜನೆಯನ್ನು ಪ್ರಕಟಿಸಿದ ಬೆನ್ನಲ್ಲೇ ಯು ಟ್ಯೂಬ್ ಬಳಕೆದಾರರಿಗೂ ಸಂತೋಷದ ಸುದ್ದಿಯನ್ನು ನೀಡಿದೆ.


ಗೂಗಲ್‌ನ ಒಡೆತನದಲ್ಲಿರುವ  ಜಾಲತಾಣ ‘ಯು ಟ್ಯೂಬ್’ನಲ್ಲಿನ ವಿಡಿಯೊಗಳನ್ನು ಬಳಕೆದಾರರಿಗೆ ಆಫ್‌ಲೈನ್‌ನಲ್ಲಿಯೂ ವೀಕ್ಷಿಸಲು ಅವಕಾಶ ಮಾಡಿಕೊಡುವುದಾಗಿ ಹೇಳಿಕೊಂಡಿದೆ.
ಈ ಸೇವೆಯಿಂದ  ಯು ಟ್ಯೂಬ್‌ನಲ್ಲಿರುವ ವಿಡಿಯೊಗಳನ್ನು ಬಳಕೆದಾರರು ಡೌನ್‌ಲೋಡ್‌ ಮಾಡಿಕೊಂಡು ಯಾವಾಗ ಬೇಕಾದರೂ ನೋಡಬಹುದಾಗಿದೆ.

ಭಾರತದಲ್ಲಿ ಯು ಟ್ಯೂಬ್ ಬಹಳ ಪ್ರಸಿದ್ಧಿ ಹೊಂದಿದ್ದು ವಿಡಿಯೊಗಳನ್ನು ಮತ್ತೆ ಮತ್ತೆ ವೀಕ್ಷಿಸುವವರಿದ್ದಾರೆ. ಇನ್ನು ಮುಂದೆ ದತ್ತಾಂಶಕ್ಕಾಗಿ ಹಣ ವ್ಯಯಿಸದೇ ವಿಡಿಯೊ ವೀಕ್ಷಿಸಬಹುದು ಎಂದಿದ್ದಾರೆ ಗೂಗಲ್‌ನ ಪ್ರಾಡಕ್ಟ್ ಮ್ಯಾನೇಜ್‌ಮೆಂಟ್‌ ಉಪಾಧ್ಯಕ್ಷ ಸೀಸರ್‌ ಸೇನ್‌ಗುಪ್ತಾ.

ಬೇರೆ ಯಾವ ದೇಶದಲ್ಲೂ ಇರದ ಈ ಸೌಲಭ್ಯ  ಮೊದಲು ಭಾರತೀಯರಿಗೆ ದೊರೆಯಲಿದ್ದು, ಅದು ಕೆಲವೇ ವಾರಗಳಲ್ಲಿ ಲಭ್ಯವಾಗಲಿದೆ ಎಂದಿದ್ದಾರೆ.ಇದುವರೆಗೂ ಯು ಟ್ಯೂಬ್ ತನ್ನಲ್ಲಿರುವ ವಿಡಿಯೊಗಳನ್ನು ಡೌನ್ ಲೋಡ್ ಮಾಡಿಕೊಳ್ಳುವ ಅವಕಾಶವನ್ನು ಬಳಕೆದಾರರಿಗೆ ನೀಡಿರಲಿಲ್ಲ. ಇನ್ನು ಮುಂದೆ ಸದ್ಯದಲ್ಲೇ ಈ ಅವಕಾಶವನ್ನು ಮೊದಲ ಬಾರಿಗೆ ಭಾರತೀಯರು  ಪಡೆದುಕೊಳ್ಳಲಿದ್ದಾರೆ.

ಭಾರತದಲ್ಲಿ ಯು ಟ್ಯೂಬ್‌ ಬಳಕೆದಾರರ ಸಂಖ್ಯೆ ಬಹಳಷ್ಟಿದ್ದು, ಈ ನೂತನ ಸೇವೆಯಿಂದ ಬಳಕೆದಾರರ ಸಂಖ್ಯೆಯಲ್ಲಿ ಇನ್ನಷ್ಟು ಹೆಚ್ಚಳವಾಗಬಹುದು. ಏನೇ ಆದರೂ ತಮ್ಮ ಇಷ್ಟದ ವಿಡಿಯೊವನ್ನು ಯು ಟ್ಯೂಬ್‌ನಿಂದ ಸುಲಭವಾಗಿ ಡೌನ್‌ಲೋಡ್‌ ಮಾಡಿಕೊಂಡು ಬೇಕಾದ ಸಮಯದಲ್ಲಿ ನೋಡುವ ಅವಕಾಶ ನಮ್ಮದಾಗಲಿದೆ.

ಸಂತೋಷ ಅಳೆಯಲು ಹ್ಯಾಪಿನೆಸ್‌ ಆ್ಯಪ್‌

ನಾವು ಸಂತೋಷವಾಗಿರಲು ಕಾರಣ­ಗಳೇನು? ಒತ್ತಡದ ಮಧ್ಯೆಯೂ ಸಂತೋಷವಾಗಿ ಇರುವುದು ಹೇಗೆ? ನಮ್ಮೊಳಗಿನ ಈ ‘ಸಂತೋಷ’ಕ್ಕೆ ಸಂಬಂಧಿಸಿದ ವಿಚಾರಗಳನ್ನು ನಮಗೇ ಸ್ಪಷ್ಟವಾಗಿ ತಿಳಿಸಿಕೊಡುವ ‘ಹ್ಯಾಪಿನೆಸ್‌’ ಎಂಬ ಅಪ್ಲಿಕೇಷನ್‌ (ಆ್ಯಪ್‌) ಬಂದಿದೆ.

ದಿನನಿತ್ಯದ ನಮ್ಮ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವುದೇ ಇದರ ಮುಖ್ಯ ಕೆಲಸ. ಹೀಗೆ ಅರ್ಥ ಮಾಡಿಕೊಂಡ ಭಾವನೆಗಳನ್ನು  ದಾಖಲಿಸಿಟ್ಟುಕೊಳ್ಳುತ್ತದೆ. ಬೇಕೆಂದರೆ ಹಿಂದಿನ ದಿನ/ತಿಂಗಳು ನಾವು ಎಷ್ಟು ಸಂತೋಷವಾಗಿದ್ದೆವು ಎಂದು ದಾಖಲೆಯಿಂದ ತಿಳಿಯಬಹುದು. ಬರ್ಕಲೆ ಎಂಬ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಮೂವರು  ವಿದ್ಯಾರ್ಥಿಗಳು ಐಫೋನ್‌ಗಾಗಿ ಇದನ್ನು ತಯಾರಿಸಿದ್ದಾರೆ.

ಸಂಕಷ್ಟದಲ್ಲಿರುವ ಮಕ್ಕಳ ರಕ್ಷಣೆಗೆ ಆ್ಯಪ್‌
ಮಕ್ಕಳ ಮೇಲ್ವಿಚಾರಣೆ ಮತ್ತು ರಕ್ಷಣೆಗೆ  ಹೊಸ ‘ಸೇವ್‌ ಮಿ’ ಅಪ್ಲಿಕೇಷನ್‌ ತಯಾರಾಗಿದೆ.

ಈಗಾಗಲೇ ಮಾರುಕಟ್ಟೆಯಲ್ಲಿ ಮಕ್ಕಳ ರಕ್ಷಣೆಗೆಂದು ಸಾಕಷ್ಟು ಆ್ಯಪ್‌ಗಳಿವೆ. ಹೀಗಿರುವಾಗ ಇದರ­ಲ್ಲೇನು ವಿಶೇಷ ಎನ್ನುವಿರಾ?

ಇದುವರೆಗೂ ತಂತ್ರಜ್ಞರು ಮಕ್ಕಳಿಗಾಗಿ ಆ್ಯಪ್‌ ರೂಪಿಸುತ್ತಿದ್ದರು. ಆದರೆ ಈ ಆ್ಯಪ್‌ ಅಭಿವೃದ್ಧಿ­ಪಡಿಸಿರುವುದು ಅಮೆರಿಕದ ಟೆಕ್ಸಾಸ್‌ ನಗರದ 12 ವರ್ಷದ ಪೋರ ಡೈಲೇನ್‌ ಪುಕೆಟ್ಟಿ. ಮೊಬೈಲ್‌ ಫೋನ್‌ ಲಾಕ್‌ ಆಗಿರುವ ಸಂದರ್ಭದಲ್ಲಿ ಪವರ್‌ ಬಟನ್‌ ಆರು ಬಾರಿ ಒತ್ತಿದರೆ ಮುಂಚಿತವಾಗಿ ಸಿದ್ಧಪಡಿ­ಸಿಟ್ಟಿರುವ ಮೆಸೇಜ್‌ ದಾಖಲಿಸಿರುವ ವ್ಯಕ್ತಿಗಳಿಗೆ ರವಾನೆ ಆಗುತ್ತದೆ. ಈ ಆ್ಯಪ್‌ನ ಪರಿಷ್ಕೃತ ಆವೃತ್ತಿಯಲ್ಲಿ ಪವರ್‌ ಬಟನ್‌ ಒತ್ತಿದರೆ ಸಾಕು ಆಪತ್ತಿನಲ್ಲಿರುವ ಮಕ್ಕಳು ಇರುವ ನಿರ್ದಿಷ್ಟ ಸ್ಥಳದ ಜಿಪಿಎಸ್‌ ನಕ್ಷೆಯು ಸಂಬಂಧಪಟ್ಟವರಿಗೆ ಸ್ವಯಂಚಾಲಿತವಾಗಿ ರವಾನೆ ಆಗುತ್ತದೆ. ಸದ್ಯ ಆ್ಯಂಡ್ರಾಯ್ಡ್‌ ಫೋನಿಗೆ ಮಾತ್ರ ಈ ಆ್ಯಪ್‌ ರೂಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT