ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಯಕಟ್ಟಿನ ತಾಣದಲ್ಲಿ ರೋವರ್‌

ಮಂಗಳನಲ್ಲಿ ಮುಂದುವರಿದ ಶೋಧ
Last Updated 22 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಮಂಗಳ ಗ್ರಹಕ್ಕೆ ಉಡಾಯಿಸಿರುವ ಗಗನನೌಕೆ ತನ್ನ ಗುರಿಯ ಅರ್ಧ ದಾರಿ ಕ್ರಮಿಸಿರುವ ಸಂದರ್ಭದಲ್ಲೇ ಅಲ್ಲಿ ಮಂಗಳನ ಅಂಗಳದಲ್ಲಿ ಗಮನ ಸೆಳೆಯುವ ವಿದ್ಯಮಾನವೊಂದು ಜರುಗಿದೆ. ಅಲ್ಲಿ ಹಿಂದೊಮ್ಮೆ ಇದ್ದಿರಬಹುದಾದ ವಾಸಯೋಗ್ಯ ಪರಿಸರದ ಕುರುಹುಗಳಿಗಾಗಿ ಶೋಧನೆಯಲ್ಲಿ ಮಗ್ನವಾಗಿರುವ ಅಮೆರಿಕದ ನಾಸಾದ ‘ಕ್ಯೂರಿಯಾಸಿಟಿ ರೋವರ್‌’ ವೈಜ್ಞಾನಿಕ ವಿಶ್ಲೇಷಣೆಯ ದೃಷ್ಟಿಯಿಂದ ಅತ್ಯಂತ ಮಹತ್ವದ್ದೆನ್ನಲಾದ ಜಾಗವನ್ನು ತಲುಪಿದೆ. ಆ ಜಾಗದಲ್ಲಿನ ಬಂಡೆ ಹಾಗೂ ನೆಲವನ್ನು ಕೊರೆಯಲಿರುವ ಕ್ಯೂರಿಯಾಸಿಟಿಯು ಕೆಂಪು ಕಾಯದ ಪರಿಸರ ಒಂದೊಮ್ಮೆ ಜೀವಿಗಳಿಗೆ ಅನುಕೂಲಕರವಾಗಿತ್ತೇ? ಎಂಬ ಸುಳಿವುಗಳಿಗಾಗಿ ಇನ್ನಷ್ಟು ತಡಕಾಟ ನಡೆಸಲಿದೆ.

ಮಂಗಳನ ಮೇಲಿನ ಪ್ರಾಚೀನ ವಾತಾವರಣದ ಬಗೆಗೆ ಸುಳಿವುಗಳನ್ನು ಪಡೆಯುವ ದಿಸೆಯಲ್ಲಿ ಶಿಲಾ ಮಾದರಿಗಳ ಅಧ್ಯಯನಕ್ಕೆ ಇದು ಸೂಕ್ತ ಜಾಗ ಎಂದು 2013ರ ಆರಂಭದಲ್ಲೇ  ನಾಸಾ ವಿಜ್ಞಾನಿಗಳು ನಿರ್ಧರಿಸಿದ್ದರು. 2012ರ ಆಗಸ್‌್ಟನಲ್ಲಿ ಅಂಗಾರಕನ ಅಂಗಳದ ಗೇಲ್‌ ಕ್ರೇಟರ್‌ ಕುಳಿಯಲ್ಲಿ ಇಳಿದ ನಂತರ ಈವರೆಗೆ ಒಟ್ಟು 6.1 ಕಿ.ಮೀ. ಕ್ರಮಿಸಿರುವ ಕ್ಯೂರಿಯಾಸಿಟಿ ಇದೀಗ 98 ಅಡಿ ದೂರ ತೆರಳಿ ಈ ಆಯಕಟ್ಟಿನ ತಾಣಕ್ಕೆ ಬಂದಿದೆ.
‘ಪಸಡೇನಾ ಕ್ಯಾಲಿಫೋರ್ನಿಯಾ ಇನ್‌್ಸಟಿಟ್ಯೂಟ್‌ ಆಫ್‌ ಟೆಕ್ನಾಲಜಿ’ಯ ತಜ್ಞರಾದ ಮೆಲಿಸ್ಸಾ ರೈಸ್‌ ಅವರ ನೇತೃತ್ವದಲ್ಲಿ ಈ ಅಧ್ಯಯನ ನಡೆಯಲಿದೆ.

‘ಕಿಂಬರ್ಲಿ’ ಎಂದು ನಾಮಕರಣ ಮಾಡಲಾಗಿರುವ ಈ ತಾಣವು ನಾಲ್ಕು ಬಗೆಯ ಶಿಲಾ ಮಾದರಿಗಳ ಸಂಗಮ ಸ್ಥಳವಾಗಿದ್ದು, ಈ ಬಂಡೆಗಳ ಪುಡಿಯ ಮಾದರಿಗಳನ್ನು ರೋವರ್‌ನ ಕ್ಯಾಮೆರಾಗಳು ಸಮೀಕ್ಷೆಗೆ ಒಳಪಡಿಸಲಿವೆ ಎನ್ನುತ್ತಾರೆ ರೈಸ್‌.

ಒಂದು ಟನ್‌ ತೂಕದ ಕ್ಯೂರಿಯಾಸಿಟಿಯು ಕೆಂಪುಕಾಯದ ಮೇಲೆ ನಡೆಸಲಿರುವ ಅತ್ಯಂತ ವ್ಯಾಪಕ ವಿಶ್ಲೇಷಣೆ ಇದಾಗಲಿದೆ. ಇದಕ್ಕೆ ಮುನ್ನ ಅದು 2013ರ ಮೊದಲ ಆರು ತಿಂಗಳ ಕಾಲ ‘ಯೆಲ್ಲೊನೈಫ್‌ ಬೇ’ ಎಂಬ ಪ್ರದೇಶದಲ್ಲಿ ವಿವಿಧ ಬಗೆಯ ಬಂಡೆಗಳನ್ನು ಕೊರೆದು ನಡೆಸಿದ ವಿಶ್ಲೇಷಣೆ ದೀರ್ಘಾವಧಿಯದಾಗಿತ್ತು. ಅದೇ ಮೊತ್ತ ಮೊದಲ ಬಾರಿಗೆ ನಡೆದ ಮಂಗಳನ ಶಿಲಾ ಪುಡಿಗಳ ಈ ವಿಶ್ಲೇಷಣೆಯಿಂದಾಗಿ ಅಲ್ಲಿ ಪುರಾತನ ಕಾಲದಲ್ಲಿ ಸರೋವರ ಇದ್ದ ಸುಳಿವುಗಳು ಸಿಕ್ಕಿದ್ದವು.

‘ಕಿಂಬರ್ಲಿ’ಯಲ್ಲಿ ತನ್ನ ಕೆಲಸ ಮುಗಿಸಿದ ನಂತರ ಕ್ಯೂರಿಯಾಸಿಟಿ ಪುನಃ ಗೇಲ್‌ ಕ್ರೇಟರ್‌ನ ಮೌಂಟ್‌ ಶಾರ್ಪ್‌ ಎಂಬ ಇಳಿಜಾರು ತಾಣಕ್ಕೆ ತೆರಳಲಿದೆ. ಅಲ್ಲಿನ ಭೂಗರ್ಭದ ಮೇಲಿನ ಶಿಲಾಸ್ತರಗಳಲ್ಲಿ ಹಿಂದೊಮ್ಮೆ ವಾಸಯೋಗ್ಯ ವಾತಾವರಣವೇನಾದರೂ ಇತ್ತೆ? ಅಲ್ಲಿನ ವಾತಾವರಣ ಈವರೆಗೆ ಕಂಡ ಬದಲಾವಣೆಗಳು ಯಾವುವು?– ಎಂಬ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಬಂಡೆಗಳ ಕೊರೆತ, ಶಿಲಾ ಪುಡಿಗಳ ವಿಶ್ಲೇಷಣೆಯನ್ನು ಮುಂದುವರಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT