ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನದ ಭಾವ ಅರ್ಥೈಸುವ ಫೇಸ್‌ಬುಕ್‌ ತಂತ್ರಜ್ಞಾನ

Last Updated 4 ಆಗಸ್ಟ್ 2015, 19:34 IST
ಅಕ್ಷರ ಗಾತ್ರ

ಎದುರಿಗೆ ಕುಳಿತಿರುವ ವ್ಯಕ್ತಿಯ ಮನದಲ್ಲಿ ನಮ್ಮ ಬಗ್ಗೆ ಯಾವ ಭಾವನೆ ಇದೆ ಎಂದು ತಿಳಿದುಕೊಳ್ಳುವ ಕುತೂಹಲ, ಹಂಬಲ ಎಲ್ಲರಿಗೂ ಇರುತ್ತದೆ. ಒಂದು ವೇಳೆ ಆ  ವಿಶಿಷ್ಟ ಶಕ್ತಿ ನಮ್ಮದಾದರೆ ಹೇಗಿರುತ್ತದೆ? ಇಲ್ಲ, ಅದು ಖಂಡಿತಾ ಸಾಧ್ಯವಿಲ್ಲ ಎನ್ನುವು ದಾದರೆ ನಿಮ್ಮ ಊಹೆ  ತಪ್ಪು. ಮಾನವನ ಸುಪ್ತ ಭಾವನೆಗಳನ್ನು ತಿಳಿಯಲು ಸಾಧ್ಯ ಎನ್ನುತ್ತಾರೆ  ಫೇಸ್‌ಬುಕ್‌  ಸಿಇಒ ಮಾರ್ಕ್ ಝುಕರ್‌ಬರ್ಗ್‌.

ಸಾಮಾಜಿಕ ಜಾಲತಾಣಗಳ ಮೂಲಕ ಸಂದೇಶ, ಚಿತ್ರ, ವಿಡಿಯೊಗಳನ್ನು ಪರಸ್ಪರ ಹಂಚಿಕೊಳ್ಳುವಂತೆಯೇ ನಮ್ಮ ಎದುರಿನ ವ್ಯಕ್ತಿಯ ಮನದ ಭಾವನೆ, ಆಲೋಚನೆಗಳನ್ನೂ ತಿಳಿಯಬಹುದು. ಯಾವುದೇ ಸಂದೇಶ, ಚಿತ್ರ ಅಥವಾ ವಿಡಿಯೊಗಳ ನೆರವಿಲ್ಲದೆ ನಮ್ಮ ಎದುರಿರುವ ವ್ಯಕ್ತಿ ಕೂಡ ನಮ್ಮ ಮನದ ಭಾವನೆಗಳನ್ನು ತಿಳಿದುಕೊಳ್ಳಬಹುದು ಎನ್ನುತ್ತಾರೆ ಝಕರ್‌ಬರ್ಗ್‌.

ಒಂದು ವೇಳೆ ನಿಮಗೆ ಒಬ್ಬ ಯುವತಿ ಇಲ್ಲವೇ ಯುವಕನ ಮೇಲೆ ಪ್ರೀತಿಯ ಭಾವನೆ ಮೊಳಕೆಯೊಡದೀತು ಎಂದಿಟ್ಟುಕೊಳ್ಳಿ.  ಇಲ್ಲವೇ ಆ ವ್ಯಕ್ತಿಯ ಬಗ್ಗೆ ತಿರಸ್ಕಾರ ಮೂಡೀತು ಎಂದಾದರೂ  ಎಂದಿಟ್ಟುಕೊಳ್ಳಿ. ನಿಮ್ಮ ಮನದಲ್ಲಿಯ ಭಾವನೆಗಳನ್ನು ಬಹಿರಂಗವಾಗಿ ವ್ಯಕ್ತಪಡಿಸದಿದ್ದರೂ   ಎದುರಿನ ಆ ವ್ಯಕ್ತಿ ನಿಮ್ಮ ಭಾವನೆಗಳನ್ನು ಅರ್ಥ ಮಾಡಿಕೊಳ್ಳಬಲ್ಲ.

ಆಪ್ತರು, ಗೆಳೆಯರು ಅಥವಾ ನೀವು ದ್ವೇಷಿಸುವ ವ್ಯಕ್ತಿಗಳ ಬಗ್ಗೆ ಮನಸ್ಸಿನಲ್ಲಿ ನೀವು ಏನಾದರೂ ಅಂದುಕೊಂಡರೂ  ತಕ್ಷಣಕ್ಕೆ ಅದನ್ನು ಅವರು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದಂತೆ! ಮಾರ್ಕ್‌ ಝಕರ್‌ಬರ್ಗ್‌ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ನಡೆಸಿದ ಸಂವಾದದಲ್ಲಿ ಇಂಥ ಕೆಲವು ಸಾಧ್ಯತೆಗಳನ್ನು ಅವರು ಹರಿಬಿಟ್ಟಿದ್ದಾರೆ.

ಭವಿಷ್ಯದಲ್ಲಿಯ ಇಂಥ ತಂತ್ರಜ್ಞಾನದ ಬಗ್ಗೆ ಝಕರ್‌ಬರ್ಗ್‌ ವ್ಯಕ್ತಪಡಿಸಿರುವ ಅಭಿಪ್ರಾಯ ಗಳನ್ನು ಹಲವರು ಸಂದೇಹದಿಂದ ನೋಡಿ ದ್ದಾರೆ. ಅವರೊಂದಿಗೆ ಸಂವಾದ ನಡೆಸಿದ ಬಹುತೇಕ ಜನರು ಇದು ವಾಸ್ತವವಾ ಅಥವಾ ಬರೀ ಕಲ್ಪನೆಯೇ? ಎಂದು ಶಂಕೆಯನ್ನೂ ವ್ಯಕ್ತಪಡಿಸಿದ್ದಾರೆ.

ಮಾನವನಗಿಂತ ಹೆಚ್ಚು ಗ್ರಹಿಕೆ, ದೃಷ್ಟಿ ಮತ್ತು ಭಾವನೆಗಳನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಹೊಂದಿದ ತಂತ್ರಜ್ಞಾನವನ್ನು  ‘ಫೇಸ್‌ಬುಕ್‌’  ಅಭಿವೃದ್ಧಿಪಡಿಸುತ್ತಿದೆ ಎಂದು ಅವರು ಹೇಳಿದ್ದಾರೆ. ಭಾವಚಿತ್ರ ಅಥವಾ ವೀಡಿಯೊ ನೋಡಿ ಅದರಲ್ಲಿರುವ ವ್ಯಕ್ತಿಗಳ ಸಂಪೂರ್ಣ ವ್ಯಕ್ತಿತ್ವವನ್ನು ಅಳೆಯುವ ಶಕ್ತಿ ಈ ತಂತ್ರಜ್ಞಾನಕ್ಕಿರುತ್ತದೆ.

ಮಾನವನಗಿಂತಲೂ ಹೆಚ್ಚು ಶಕ್ತಿ, ಸಾಮರ್ಥ್ಯವನ್ನು ಈ ತಂತ್ರಜ್ಞಾನ ಹೊಂದಿರುತ್ತದೆ ಎಂದು ಝಕರ್‌ಬರ್ಗ್‌ ಹೇಳಿದ್ದಾರೆ.  ತಮ್ಮ ಈ ಹೊಸ ತಂತ್ರಜ್ಞಾನದ ಬಗ್ಗೆ ಅವರು ಹೆಚ್ಚಿನ ವಿಷಯಗಳನ್ನು ಬಾಯ್ಬಿಟ್ಟಿಲ್ಲ. ಆದರೆ, ಶೀಘ್ರ ಇದು ನನಸಾಗಲಿದೆ ಎಂದು ಮಾತ್ರ ಸುಳಿವು ನೀಡಿದ್ದಾರೆ. ಇದಕ್ಕಾಗಿ ನಾವು ಇನ್ನೂ ಸ್ವಲ್ಪ ದಿನ ಕಾಯಬೇಕಾಗಬಹುದು.

ಹಲವು ವೈಜ್ಞಾನಿಕ ವಿಷಯಗಳು ಹಾಗೂ ಮಾನವನ ಶಕ್ತಿಗೆ ಸವಾಲೊಡ್ಡಬಲ್ಲ ಸಂಗತಿಗಳ ಬಗ್ಗೆ ಖ್ಯಾತ ವಿಜ್ಞಾನಿ ಸ್ಟೀಫನ್ ಹಾಕಿಂಗ್ ಮತ್ತು ಹಾಲಿವುಡ್‌ ನಟ ಅರ್ನಾಲ್ಡ್ ಶ್ವಾಜನೇಗರ್ ಸೇರಿದಂತೆ ಅನೇಕರು ಝುಕರ್‌ಬರ್ಗ್‌  ಅವರನ್ನು ಪ್ರಶ್ನಿಸಿದ್ದರು. ಸದ್ಯದ ಸಾಮಾಜಿಕ ಸಂವಹನ ಕ್ಷೇತ್ರದ ಕ್ರಾಂತಿಕಾರಿ ಬೆಳವಣಿಗೆ ಎಂದರೆ ‘ಫೇಸ್‌ಬುಕ್‌’ ಹಾಗೂ ‘ಟ್ವೀಟರ್‌’ ಎನ್ನುವುದು ನಿರ್ವಿವಾದ. 

ಬದಲಾಗುತ್ತಿರುವ ಸಮಾಜದ ಪ್ರತಿಬಿಂಬ ಎಂದು ಬಣ್ಣಿಸಲಾಗುವ ಫೇಸ್‌ಬುಕ್‌  ಹಾಗೂ ಟ್ವೀಟರ್‌ಗಳು ಆಧುನಿಕ ಜಗತ್ತಿನ ಎದುರು ತಂತ್ರಜ್ಞಾನದ  ಸಾಧ್ಯತೆ,   ಮಿತಿ ಹಾಗೂ ಅಪಾಯಗಳನ್ನು ತೆರೆದಿಟ್ಟಿವೆ. ಇದರ ನಡುವೆ ನಮ್ಮೆದುರಿನ ವ್ಯಕ್ತಿಯ ಮನಸ್ಸನ್ನು ನೇರವಾಗಿ ಅರ್ಥೈಸಿಕೊಳ್ಳುವ  ಹೊಸ ತಂತ್ರಜ್ಞಾನ ನಮ್ಮೆದಿರು ಮತ್ತೊಂದು ಹೊಸ ಲೋಕವನ್ನು ತೆರೆದಿಡುವ ಸಾಧ್ಯತೆಯಂತೂ ಇದ್ದೆ ಇದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT