ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪರ್ಣಾರ ಕಲೆಯಲ್ಲಿ ಅರಳಿದ ‘ಸೋಪ್’!

Last Updated 11 ಅಕ್ಟೋಬರ್ 2019, 19:30 IST
ಅಕ್ಷರ ಗಾತ್ರ

ಸಾಬೂನುಗಳು ಆಯತ, ಚೌಕ, ಗೋಲ ಅಥವಾ ಮೊಟ್ಟೆಯಾಕಾರದಲ್ಲಿರುವುದು ಸಾಮಾನ್ಯ. ಅವುಗಳನ್ನೇ ಬಳಸಿ ಗ್ರಾಹಕರು ಬೇಸರಿಸಬಾರದೆಂದು ಸಾಬೂನು ಕಂಪನಿಗಳು ಅವುಗಳ ವೈವಿಧ್ಯತೆಯನ್ನು ಇನ್ನಷ್ಟು ವಿಸ್ತರಿಸಲು ತರಹೆವಾರಿ ಬಣ್ಣಗಳನ್ನು, ಅನೈಸರ್ಗಿಕ ಸುಗಂಧಗಳನ್ನು ಬಳಸುತ್ತಿವೆ. ಮಾರುಕಟ್ಟೆಗಳಲ್ಲಿ ನೂರಾರು ಬ್ರ್ಯಾಂಡ್‌ನ ಆಕರ್ಷಕ ಸಾಬೂನುಗಳಿದ್ದರೂ ಸಾಮಾನ್ಯವಾಗಿ ಕಾಣ ಸಿಗುವುದು ಹಾಗೂ ಎಲ್ಲರಿಗೂ ನಿಲುಕುವ ಸಾಬೂನುಗಳ ಚೌಕಟ್ಟು ಇಷ್ಟರಲ್ಲೇ ಇರುತ್ತದೆ. ಇದರಾಚೆಯ ಅದ್ಭುತ, ರಮ್ಯ ಸಾಬೂನು ಲೋಕಕ್ಕೆ ಅದನ್ನು ನಿರ್ಮಿಸಿದ ವಿ.ಅಪರ್ಣಾ ರಾವ್ ಅವರು ಕೈಹಿಡಿದು ನಾಜೂಕಾಗಿ ನಡೆಸಿಕೊಂಡು ಹೋಗುತ್ತಾರೆ. ಅವರು ತಮ್ಮ ಮನೆಯಲ್ಲಿ ತಯಾರಿಸುವ ಸಾಬೂನುಗಳು ಬಣ್ಣ, ಆಕಾರ, ಸುಗಂಧಗಳ ಜೊತೆಗೆ ಕಲಾತ್ಮಕತೆಯನ್ನು ಮೈಗೂಡಿಸಿಕೊಂಡಿವೆ. ಜೊತೆಗೆ ಅಪ್ಪಟ ದೇಸೀ ವಸ್ತುಗಳನ್ನು ಆರೋಗ್ಯಪೂರ್ಣವಾಗಿ ಬಳಸಿ ಸಿದ್ಧಪಡಿಸುತ್ತಾರೆ.

ಮೂಲತಃ ಬೆಂಗಳೂರಿನವರಾದ ಅಪರ್ಣಾ ರಾವ್ ಫೈನ್ ಆರ್ಟ್‌ನಲ್ಲಿ ಡಿಪ್ಲೋಮಾ ಓದುತ್ತಿರುವಾಗ ವಿವಾಹವಾಗಿ ಮುಂಬೈ ಸೇರಿದರು. ತಮ್ಮ ಪತಿಯೊಂದಿಗೆ ಅವರ ವ್ಯಾಪಾರಕ್ಕೆ ಸಂಬಂಧಿಸಿದ ಮೇಳಗಳಲ್ಲಿ ಭಾಗವಹಿಸಿದಾಗ, ಮನೆಯಲ್ಲಿ ತಯಾರಿಸಿದ ಸಾಬೂನುಗಳನ್ನು ಮೆಚ್ಚಿ, ಮುಟ್ಟಿ, ಅವುಗಳ ಬೆಲೆ ಕೇಳಿ ತಟ್ಟಿಸಿಕೊಂಡು ಖರೀದಿಸದೇ ಬಂದಿದ್ದರು. ಆದರೆ ಆ ಸಾಬೂನುಗಳ ಮೋಹಕತೆ ಅವರನ್ನು ಆಗ ಸುಪ್ತವಾಗಿ ಸೆಳೆದದ್ದು ಸುಳ್ಳಲ್ಲ. ಅವರ ನೆರೆಹೊರೆಯಲ್ಲಿದ್ದ ಗುಜರಾತ್‌ ಮೂಲದ ಕೆಲವು ಮಹಿಳೆಯರು ತಯಾರಿಸುತ್ತಿದ್ದ ಸಾಬೂನುಗಳನ್ನು ಖರೀದಿಸಿ ಎಷ್ಟು ಚೆನ್ನಾಗಿವೆ ಎಂದು ಸುಖಿಸುತ್ತ ಅವುಗಳ ತಯಾರಿಕೆಯ ಹೆಚ್ಚಿನ ಮಾಹಿತಿಗೆ ಅಂತರ್ಜಾಲವನ್ನು ತಡಕಾಡಿದರು. ಆಗ ಮೊದಲ ಬಾರಿಗೆ ಅಂಧೇರಿ ಬಳಿಯಲ್ಲಿ ಸಾಬೂನು ತಯಾರಿಕೆಯನ್ನು ಕಲಿಸುವವರ ವಿಳಾಸ ಹಾಗೂ ದೂರವಾಣಿ ಸಂಖ್ಯೆಗಳು ದೊರೆತವು. ಸ್ವರ್ಗಕ್ಕೆ ಮೂರೇ ಗೇಣು ಎಂದುಕೊಂಡ ಅಪರ್ಣಾ ಕರೆ ಮಾಡಿ ವಿಚಾರಿಸಿದಾಗ ಕೇವಲ ಒಂದು ದಿನದ ತರಬೇತಿಯಲ್ಲಿ ನಾಲ್ಕು ವಿಧಾನಗಳನ್ನು ಹೇಳಿಕೊಡಲು ತೆರಬೇಕಾದ ಶುಲ್ಕ ₹ 5000 ಎಂದು ಕೇಳಿ ಹೌಹಾರಿದರು. ಆದರೂ ಪಕ್ಕಾ ಗುಜರಾತಿಯಂತೆ ಚೌಕಾಸಿಗಿಳಿದು ಕೇವಲ ಆರಂಭಿಕ ತರಬೇತಿಯನ್ನು ₹2,500 ತೆತ್ತು ಪಡೆದುಕೊಂಡರು.

ಸಾಬೂನಿನಲ್ಲಿ, ಆಹಾರ ತಯಾರಿಕೆಯಲ್ಲಿ ಬಳಸುವ ಉನ್ನತ ಗುಣಮಟ್ಟದ ಎಣ್ಣೆಯನ್ನು ಬಳಸಲಾಗುತ್ತದೆ. ಅದರಲ್ಲಿ ಸ್ವಲ್ಪ ಏರುಪೇರಾದರೂ ಸಾಬೂನಿನ ಡಿಸೈನಿನ ಆಚೆಗೆ ಎಣ್ಣೆ ಸರಿದು ಬಿಡುತ್ತದೆ. ಇದು ಅಪರ್ಣಾ ಎದುರಿಸಿದ ಇನ್ನೊಂದು ಸವಾಲು. ಅವರ ಮುಂದಿನ ದೃಷ್ಟಿ ಸಾಬೂನಿನ ಮೌಲ್ಡ್‌ಗಳ ಖರೀದಿಯತ್ತ ಹರಿಯಿತು. ಮಾರುಕಟ್ಟೆಯಲ್ಲಿ ತರಹೆವಾರಿ ಅಚ್ಚುಗಳು ಸಿಗುತ್ತವೆ. ವಿದೇಶಗಳಿಂದಲೂ ಆಮದಾಗುತ್ತವೆ. ಆದರೆ ಮೂರು ತಿಂಗಳ ಅವಧಿಯಲ್ಲಿ ಅವೆಲ್ಲ ಹಳಸಲಾಗುತ್ತವೆ.

ಈ ಎಲ್ಲ ಸವಾಲುಗಳ ನಡುವೆ 2018ರ ಆರಂಭದಲ್ಲಿ ಅಪರ್ಣಾ ಸಾಬೂನು ತಯಾರಿಕೆ ಆರಂಭಿಸಿದರು. ಬಣ್ಣಗಳ ಬಗ್ಗೆ ಅರಿವಿದ್ದ ಅವರು ಅವುಗಳನ್ನು ಮನಮೋಹಕವಾಗಿ ಬಳಸುವುದನ್ನು, ಆಕರ್ಷಕವಾಗಿ ಚಿತ್ರಿಸುವುದನ್ನು ಕಲಿತರು. ಅವರ ಕೈಯಲ್ಲಿ ಸಾಬೂನು ಕಲೆಯಾಯಿತು; ಕುಸುರಿಯಾಯಿತು. ಸಾಬೂನು ಒಂದೊಂದೂ ಆರ್ಟ್‌ ಪೀಸ್‌ನಂತಿದೆ. ಅವರೊಳಗಿನ ಕಲಾವಿದೆ ಇದಕ್ಕಾಗಿ ಹಗಲಿರುಳೂ ದುಡಿದಿದ್ದಾಳೆ. ಸಾಬೂನು ತಯಾರಿಕೆಯ ಬಗ್ಗೆ ಲಭ್ಯವಿರುವ ಅಗಣಿತ ಮಾಹಿತಿಯನ್ನು ಕಲೆಹಾಕಿ ಅವರು ಅಭ್ಯಾಸ ಮಾಡಿದ್ದಾರೆ. ಅವರ ಸತತ ಪರಿಶ್ರಮ ಈಗ ಫಲ ನೀಡುತ್ತಿದೆ. ಅವುಗಳ ತಯಾರಿಕಾ ವಿಧಾನವನ್ನು ಉಚಿತವಾಗಿ ಬಡ ಮಹಿಳೆಯರಿಗೆ ಹೇಳಿಕೊಡಬೇಕು ಎಂಬ ಹಂಬಲ ಅಪರ್ಣಾ ಅವರದ್ದು.


ಸಾಬೂನು ತಯಾರಿಕೆ ನೂರಕ್ಕೆ ನೂರರಷ್ಟು ವಿಜ್ಞಾನವಾದರೂ ಅದರಲ್ಲಿ ಅಷ್ಟೇ ಪಾಲಿನ ಅಧ್ಯಯನ, ಪ್ರಯೋಗ, ಜಾಣ್ಮೆ, ಕೌಶಲ, ಕಲಾತ್ಮಕತೆ, ಸಹನೆ ಎಲ್ಲವೂ ಬೇಕು ಎನ್ನುವ ಅವರು ಇವೆಲ್ಲವುಗಳ ಪ್ರತಿರೂಪವಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT