‘ಮಹಿಳೆಯರಿಗಾಗಿ ಐದು ಕೈಗಾರಿಕಾ ಪಾರ್ಕ್’

7

‘ಮಹಿಳೆಯರಿಗಾಗಿ ಐದು ಕೈಗಾರಿಕಾ ಪಾರ್ಕ್’

Published:
Updated:
‘ಮಹಿಳೆಯರಿಗಾಗಿ ಐದು ಕೈಗಾರಿಕಾ ಪಾರ್ಕ್’

ಬೆಂಗಳೂರು: ‘ಮಹಿಳಾ ಕೈಗಾರಿಕೋದ್ಯಮಿಗಳ ಅಭಿವೃದ್ಧಿಗಾಗಿ ಐದು ಕೈಗಾರಿಕಾ ಪಾರ್ಕ್‌ ಸ್ಥಾಪಿಸಲಾಗುತ್ತಿದ್ದು, ಇದರಿಂದ ಉದ್ಯಮ ವಲಯದಲ್ಲಿ ಮಹಿಳೆಯರೂ ಸ್ವಾವಲಂಬಿಗಳಾಗಲಿದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಆಯೋಜಿಸಿರುವ ಎರಡು ದಿನಗಳ ‘ಮಹಿಳಾ ಸಾಮರ್ಥ್ಯ ಮತ್ತು ಮೌಲ್ಯ’ (ವುಮನ್‌ ಆಫ್‌ ವರ್ತ್‌) ಕುರಿತ ಸಮಾವೇಶಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದ ಅವರು, ‘ರಾಜ್ಯದ ಹೊಸ ಕೈಗಾರಿಕಾ ನೀತಿಯಲ್ಲಿ ಮಹಿಳೆಯರಿಗೆ ಪ್ರತ್ಯೇಕ ಅವಕಾಶ ಕಲ್ಪಿಸಲಾಗಿದೆ’ ಎಂದರು.

‘ಬಸವಣ್ಣನವರು ಅನುಭವ ಮಂಟಪದಲ್ಲಿ ಮಹಿಳೆಯರಿಗೆ ಸಮಾನ ಅವಕಾಶ ಸಿಗಬೇಕು ಎಂದು ಸಾರಿದ್ದರು. ಆ ಕನಸನ್ನು ರಾಜ್ಯದಲ್ಲಿ ಸಕಾರಗೊಳಿಸಲು ಪ್ರಯತ್ನಿಸಿದ್ದೇವೆ’ ಎಂದೂ ಹೇಳಿದರು.

‘ಮಹಿಳೆಯರ ಅಭಿವೃದ್ಧಿಗಾಗಿ ವಿವಿಧ ಇಲಾಖೆಗಳಿಗೆ ಬಜೆಟ್‌ನಲ್ಲಿ ₹ 32,388 ಕೋಟಿ ನೀಡಲಾಗಿದೆ. ಎಲ್ಲ ಮಹಿಳೆಯರಿಗೆ ಮತದಾನದ ಹಕ್ಕು, ಅಧಿಕಾರ, ಸಂಪತ್ತು, ಶಿಕ್ಷಣದಲ್ಲಿ ಸಮಾನ ಅವಕಾಶ ಸಿಗುವಂತಾಗಬೇಕು. ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಈಗಾಗಲೇ ಶೇ 50ರಷ್ಟು ಮೀಸಲು ನೀಡಲಾಗುತ್ತಿದೆ. ಇದರಿಂದಾಗಿ ಬಿಬಿಎಂಪಿಯಲ್ಲಿ ಇರುವ ಒಟ್ಟು 198 ಸದಸ್ಯರ ಪೈಕಿ 102 ಮಹಿಳೆಯರಿದ್ದಾರೆ ಎಂದರು.

‘ನನೆಗುದಿಗೆ ಬಿದ್ದಿರುವ ಮಹಿಳಾ ಮೀಸಲಾತಿ ಮಸೂದೆ ಲೋಕಸಭೆಯಲ್ಲಿ ಅಂಗೀಕಾರಗೊಳ್ಳುವಂತೆ ಮಹಿಳೆಯರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು. ಆಗ ಮಾತ್ರ ರಾಜಕೀಯ ವಲಯದಲ್ಲಿ ಮಹಿಳೆಯರಿಗೆ ಇನ್ನಷ್ಟು ಅವಕಾಶ ಸಿಗಲು ಸಾಧ್ಯ’ ಎಂದರು.

ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಆರ್.ವಿ. ದೇಶಪಾಂಡೆ ಮಾತನಾಡಿ, ‘ಮಕ್ಕಳ ಪಾಲನೆ, ಅಡುಗೆ ಮನೆಗೆ ಮಹಿಳೆಯರು ಸೀಮಿತವಾಗಿದ್ದ ದಿನಗಳಿದ್ದವು. ಆದರೆ, ಈ ಸ್ಥಿತಿ ಬದಲಾಗಿದೆ. ಮಹಿಳೆಯರೂ ಉದ್ಯಮದಲ್ಲಿ ತೊಡಗಿಸಿಕೊಂಡು ನೂರಾರು ಮಂದಿಗೆ ಉದ್ಯೋಗ ನೀಡುತ್ತಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರದ ಹೊಸ ಉದ್ಯಮ ನೀತಿಯಿಂದ 2019ರ ಅಂತ್ಯದ ವೇಳೆಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ವಲಯದಲ್ಲಿ 30 ಲಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ. 15 ಲಕ್ಷ ಯುವ ಉದ್ಯಮಿಗಳು ರೂಪುಗೊಳ್ಳಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಸಣ್ಣ ಕೈಗಾರಿಕೆ ಮತ್ತು ಸಕ್ಕರೆ ಸಚಿವೆ ಎಂ.ಸಿ. ಮೋಹನಕುಮಾರಿ ಇದ್ದರು.

ಧಾರವಾಡ, ಮೈಸೂರು, ಬೆಂಗಳೂರಿನ ಹಾರೋಹಳ್ಳಿ, ಬಳ್ಳಾರಿ, ಹುಬ್ಬಳ್ಳಿಯಲ್ಲಿ ಮಹಿಳೆಯರಿಗಾಗಿ ಪ್ರತ್ಯೇಕ ಕೈಗಾರಿಕಾ ಪಾರ್ಕ್ ನಿರ್ಮಾಣವಾಗಲಿದೆ. ಸಮಾವೇಶದ ಅಂಗವಾಗಿ 141 ಮಳಿಗೆಗಳನ್ನು ಸ್ಥಾಪಿಸಲಾಗಿತ್ತು. 500ಕ್ಕೂ ಹೆಚ್ಚು ಮಹಿಳಾ ಉದ್ಯಮಿಗಳು ಮತ್ತು ಪ್ರತಿನಿಧಿಗಳು ಭಾಗವಹಿಸಿದ್ದರು.

*

ರಾಜ್ಯದಲ್ಲಿ ಒಂದು ಸಾವಿರ ಪುರುಷರಿಗೆ 947 ಮಹಿಳೆಯರಿದ್ದಾರೆ. ಹೆಣ್ಣು ಭ್ರೂಣ ಹತ್ಯೆ ತಡೆಗಟ್ಟಬೇಕು. ಆಗ ಈ ಅಸಮಾನತೆ ಹೋಗಲಾಡಿಸಲು ಸಾಧ್ಯ.

–ಸಿದ್ದರಾಮಯ್ಯ, ಮುಖ್ಯಮಂತ್ರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry