ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ: ಕುಲುಮೆ ಕಳಚಿದ ಕಮ್ಮಾರರು

ಯಾಂತ್ರೀಕರಣದಿಂದ ಅವಸಾನದ ಅಂಚಿಗೆ ಸರಿದ ಕಮ್ಮಾರಿಕೆ
ಪ್ರಭು ಬ. ಅಡವಿಹಾಳ
Published 13 ಏಪ್ರಿಲ್ 2024, 23:30 IST
Last Updated 13 ಏಪ್ರಿಲ್ 2024, 23:30 IST
ಅಕ್ಷರ ಗಾತ್ರ

ಕಲಬುರಗಿ: ‘ನಾವು ಕಲಬುರಗಿಗೆ ಬಂದು 40 ವರ್ಷ ಮೇಲಾತು. ನಾವೆಲ್ಲಾ ಇಲ್ಲೇ ಹುಟ್ಟಿ, ಇಲ್ಲೇ ಬೆಳದೀವಿ. ಸಿಟಿ ಬಸ್‌ಸ್ಟ್ಯಾಂಡ್‌ ಮುಂದಿನ ಹೆಡ್‌ ಪೋಸ್ಟ್‌ ಆಫೀಸ್‌ ಹತ್ತಿರ ಜೋಪಡಿ ಕಟ್ಟಿಕೊಂಡು ಜೀವನ ಮಾಡಕತ್ತೀವಿ. ಇದುವರೆಗೂ ನಮಗೆ ಮನಿ ಅನ್ನೋದು ಕನಸಿನ ಮಾತ ಆಗೇದ ನೋಡ್ರೀ ಸರ್‌. ಮಳಿ ಬಂದ್ರ ಬಾಳ ಪರೇಶ್ಯಾನ ಆಗ್ತದ...’  ಇದು ಕಲಬುರಗಿಯಲ್ಲಿ ಕಮ್ಮಾರಿಕೆ ಮಾಡುತ್ತಿರುವ ಹಣಮಂತ ಸೋಳಂಕಿಯವರ ಅಳಲು.

‘ನಮ್ಮ ಅಪ್ಪರ ಕಾಲದಾಗ ನಾವು ಧನ್ನೂರಿಗೆ ಬಂದೀವ್ರಿ. ನಮದ ಇಲ್ಲೇ ಪಕ್ಕದ ಹುಲ್ಲಳ್ಳಿ. ನಮ್ಮ ಅಪ್ಪರ ಅಣ್ತಮ್ಮಂದಿರು ಐದ ಮಂದಿ ಇದ್ರೀ. ಒಂದ ಊರಾಗ ಎಲ್ರಿಗೂ ಹೊಟ್ಟಿ ತುಂಬಲ್ಲ ಅಂತ ನಮ್ಮ ಅಪ್ಪ ಇಲ್ಲಿಗೆ ಬಂದನ್ರೀ. 50 ವರ್ಷ ಸಮೀಪ ಆತ್ರಿ. ಖಾಲಿ ಜಾಗದಾಗ ಕುಲುಮೆ ಶುರು ಮಾಡಿದ. ಅದ ಜಗದಾಗ ಅದೀವಿ ನೋಡ್ರಿ. ಆದ್ರ ಇದುವರಗೂ ಮನಿ ಇಲ್ರಿ, ಜಾಗ ಕೂಡ ನಮ್ಮ ಹೆಸರಾಗಿಲ್ಲ. ಗ್ರಾಮ ಪಂಚಾಯಿತಿಯಿಂದ ಹಿಡಿದು ಜಿಲ್ಲಾಧಿಕಾರಿ ಕಚೇರಿ ತನಕ ಅಡ್ಡಾಡೇನ್ರಿ. ಜಾಗ ನಮ್ಮ ಹೆಸರಿಗೆ ಮಾಡಿಲ್ಲ. ಯಾರಾದ್ರೂ ಎದ್ದ ಹೋಗ ಅಂದ್ರ ಇಲ್ಲೇ ಪಕ್ಕದ ಹೊಳಿಗೆ ಹೋಗ್ಬೇಕ ನೋಡ್ರಿ ನಾವು...’ ಇವು ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನ ಧನ್ನೂರಿನ ಕಮ್ಮಾರ ಮುತ್ತಪ್ಪನ ಭಾವುಕ ಮಾತುಗಳು.

‘ಈಗ ಕುಲುಮ್ಯಾಗ ಹೊಟ್ಟಿ ತುಂಬಲ್ಲ ಬಿಡ್ರಿ.. ಎಲ್ಲಾ ಮಷಿನರಿ ಬಂದಾವು, ನಮನ್ನ ಯಾರ್‌ ಕೇಳತಾರ. ಅದ್ಕ ಎಲ್ಲಾ ಬಿಟ್ಟ ಸುಮ್ನ ದುಡ್ಯಾಕ ನಿಂತೀವಿ ನೋಡ್ರಿ. ನಾನೂ 10 ವರ್ಷ ಬಾಂಬೇಕ ಹೋಗಿದ್ದೆ. ಭೀವಂಡ್ಯಾಗ ಗೌಂಡಿ ಕೆಲಸ ಮಾಡಿ ಬಂದೀನ್ರಿ. ಈಗ ವೆಲ್ಡಿಂಗ್ ಶಾಪ್‌ ಇಟ್ಕೊಂಡ ಜೀವನ ಮಾಡಕತ್ತೀನಿ. ಕುಲುಮಿ ಕೆಲಸ ಬಂದ್ರನೂ ಮಾಡ್ತೀನ್ರಿ, ಆದ್ರ ವೆಲ್ಡಿಂಗ್‌ ಕಮಾಯಿನ ಸ್ವಲ್ಪ ಚೊಲೋ ಐತ್ರಿ...’ ಎಂದು ಬಾಗಲಕೋಟೆ ಜಿಲ್ಲೆಯ ಇಳಕಲ್‌ ತಾಲ್ಲೂಕಿನ ಜಂಬಲದಿನ್ನಿ ಗ್ರಾಮದ ಕಮ್ಮಾರ ಕಾಳಪ್ಪ ತಮ್ಮ ಬದುಕಿನ ಕತೆಯನ್ನು ಹೇಳಿಕೊಂಡರು.

ಇವೆಲ್ಲಾ ಪ್ರಸ್ತುತ ಕಮ್ಮಾರಿಕೆ ಯಾವ ಪರಿಸ್ಥಿತಿಯಲ್ಲಿದೆ ಅನ್ನೋದಕ್ಕೆ ಕೆಲ ಉದಾಹರಣೆಗಳಷ್ಟೇ. ರಾಜ್ಯದ ಬಹುತೇಕ ಕಡೆ ಕಮ್ಮಾರಿಕೆ ಮತ್ತು ಕಮ್ಮಾರರ ಪರಿಸ್ಥಿತಿ ಶೋಚನೀಯವಾಗಿದೆ. ಈ ಹಿಂದೆ ‘ಕಮ್ಮಾರನಿಲ್ಲದ ಊರು ಊರೇ ಅಲ್ಲ’ ಅನ್ನೋ ಮಾತಿತ್ತು. ಕೃಷಿಗೆ ಬೇಕಾದ ಕುಡ, ನೇಗಿಲು, ಮುಂಜ, ತಾಳಿನ ಮಳಿ, ಎತ್ತಿನಗಾಡಿಗೆ ಹಳಿ ಸೇರಿದಂತೆ ರೈತನ ಕಬ್ಬಿಣದ ಕೆಲಸಗಳಿಗೆ ಕಮ್ಮಾರರು ಅತ್ಯಗತ್ಯವಾಗಿದ್ದರು. ಹೀಗಾಗಿಯೇ ಊರಿಗೊಂದು ಕಮ್ಮಾರರ ಕುಲುಮೆ ಇರುತ್ತಿದ್ದವು. ಚಿಕ್ಕ, ಚಿಕ್ಕ ಹಳ್ಳಿಗಳಿದ್ದರೆ, ನಾಲ್ಕಾರು ಹಳ್ಳಿಗಳ ರೈತರ ಕೆಲಸಗಳನ್ನು ಒಬ್ಬನೇ ಕಮ್ಮಾರ ಮಾಡುತ್ತಿದ್ದ. ಆದರೆ, ಇಂದು ಕೃಷಿ ಸಲಕರಣೆಗಳು ಕಾರ್ಖಾನೆಯಲ್ಲೇ ತಯಾರಾಗಿ ಬರುತ್ತಿರುವುದರಿಂದ ಇವರು ಕುಡುಗೋಲು, ಮಚ್ಚು, ಕೊಡಲಿ ಮಾತ್ರ ತಯಾರಿಸುತ್ತಿದ್ದಾರೆ. ಬಿಟ್ಟರೆ ಅವುಗಳನ್ನು ಹರಿತ ಮಾಡಲು ಮಾತ್ರ ಸೀಮಿತವಾಗುತ್ತಿದ್ದಾರೆ.

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ ಚಚಡಿ ಗ್ರಾಮದಲ್ಲಿ ಕಮ್ಮಾರರ ಓಣಿ ಎಂಬ ಪ್ರತ್ಯೇಕ ಜನವಸತಿಯೇ ಇದೆ. ಎರಡು ದಶಕಗಳ ಹಿಂದೆ ಇಲ್ಲಿ 60 ಕುಟುಂಬಗಳು ಕಮ್ಮಾರಿಕೆ ನಂಬಿಕೊಂಡಿದ್ದವು. 10ಕ್ಕೂ ಹೆಚ್ಚು ಕಮ್ಮಾರರ ಶಾಲೆಗಳಿದ್ದವು. 150ಕ್ಕೂ ಹೆಚ್ಚು ಮಂದಿ ದುಡಿಯುತ್ತಿದ್ದರು. ಎಲ್ಲ ಶಾಲೆಗಳೂ ಈಗ ಪಾಳುಬಿದ್ದಿವೆ. ಯಾವಾಗಲೂ ಉರಿಯುತ್ತಿದ್ದ ಕುಲುಮೆಯಲ್ಲಿ ಬೂದಿ ಮಾತ್ರ ಉಳಿದಿದೆ. ಕುಟುಂಬಗಳೆಲ್ಲ ಉದ್ಯೋಗ ಅರಸಿ ವಲಸೆ ಹೋಗಿವೆ. ಸದ್ಯ ಈ ಊರಿನಲ್ಲಿ ಬೆರಳೆಣಿಕೆಯಷ್ಟು ಜನ ಮಾತ್ರ ಪರ್ಯಾಯ ಉದ್ಯೋಗ ಕಂಡುಕೊಂಡು ಉಳಿದಿದ್ದಾರೆ.

ಕೃಷಿ ಸಲಕರಣೆ ತಯಾರಿಕೆ ಹಾಗೂ ಗೃಹ ನಿರ್ಮಾಣ ಕ್ಷೇತ್ರದಲ್ಲಿ ಕಮ್ಮಾರರ ಕೈಚಳಕ ಅನಿವಾರ್ಯವಾಗಿತ್ತು. ಕಟ್ಟಿಗೆಯಿಂದ ಮಾಡುವ ಚಕ್ಕಡಿಗಳ ಬಳಕೆ, ರೆಂಟೆ, ಕುಂಟೆ, ನೇಗಿಲು, ಕುಡಗಳು ಕಾರ್ಖಾನೆಯಲ್ಲೇ ತಯಾರಾಗುತ್ತಿವೆ. ಇಪ್ಪತ್ತು ಜನ ಮಾಡುತ್ತಿದ್ದ ಕೆಲಸವನ್ನು ಒಂದು ಟ್ರ್ಯಾಕ್ಟರ್‌ ಮಾಡುತ್ತಿದೆ. ಕಮ್ಮಾರ ಶಾಲೆಯಲ್ಲಿ ತಯಾರಾಗುತ್ತಿದ್ದ ಚಕ್ಕಡಿ ಗಾಲಿಯ ಹಳಿಗಳು ಈಗ ಇಲ್ಲ. ಚಕ್ಕಡಿಗಳಿಗೂ ಟೈರ್‌ನ ಗಾಲಿಗಳ ಬಳಕೆ ಬಂದ ಮೇಲೆ ಈ ಕೆಲಸ ಸಂಪೂರ್ಣ ನಿಂತುಹೋಗಿದೆ. ಹೀಗಾಗಿ, ಇಲ್ಲಿನ ಕಮ್ಮಾರರಿಗೆ ಕೆಲಸವೇ ಇಲ್ಲ.

ಚಚಡಿ ಮಾತ್ರವಲ್ಲ, ಬೆಳಗಾವಿ ಜಿಲ್ಲೆಯ ಯರಗಟ್ಟಿ, ಬೈಲಹೊಂಗಲ, ಯರಝರ್ವಿ, ಸೊಪ್ಪಡ್ಲ, ಕಡಕೋಳ, ಕೊಳವಿ ಮುಂತಾದ ಗ್ರಾಮಗಳ ಸ್ಥಿತಿಯೂ ಹೀಗೇ ಇದೆ. ಇಲ್ಲಿನ ಜನ ಗೋವಾ, ಬೆಂಗಳೂರು, ಬೆಳಗಾವಿ, ಮುಂಬೈ, ಪುಣೆ ಮುಂತಾದ ಕಡೆಯ ಕಾರ್ಖಾನೆಗಳನ್ನು ಸೇರಿಕೊಂಡಿದ್ದಾರೆ. ಒಂದಿಷ್ಟು ಮಂದಿ ಟ್ರ್ಯಾಕ್ಟರ್‌ ರಿಪೇರಿ, ಮೇಜು, ಕಿಟಕಿ, ಬಾಗಿಲು ಇವೇ ಮುಂತಾದ ಕೆಲಸ ಮಾಡುತ್ತಾರೆ.

ಮಳೆಗಾಲದಲ್ಲಿ ಕೃಷಿ ಚಟುವಟಿಕೆಗಳು ಬಿರುಸುಗೊಳ್ಳುತ್ತಿದ್ದುದರಿಂದ ಊರಕಮ್ಮಾರನಿಗೆ ಎಲ್ಲ ರೈತರನ್ನೂ ಸಂಬಾಳಿಸುವುದು ಕಷ್ಟವಾಗುತ್ತಿತ್ತು. ಈ ವೇಳೆ ಬಯಲುಕಮ್ಮಾರರು ಬಂದು ಊರಹೊರಗೆ ಟೆಂಟ್‌ ಹಾಕುತ್ತಿದ್ದರು. ಇವರಲ್ಲಿ ಬಹುತೇಕರು ಮಹಾರಾಷ್ಟ್ರದಿಂದ ವಲಸೆ ಬಂದವರು ಇರುತ್ತಿದ್ದರು. ಬಿತ್ತುವ ಸಮಯದಾಗ ನೆಲ ಹದಮಾಡುವ ರೈತರ ಗಳೇವು ಸಾಮಾನುಗಳನ್ನು ಹರಿತ ಮಾಡುತ್ತಿದ್ದರು. ಅದಕ್ಕೆ ಕಿತ್ತೂರು ಕರ್ನಾಟಕದಲ್ಲಿ ಬಾಯಿ ಹಣಿಯುವುದು ಎಂದು ಹೇಳಿದರೆ, ಕಲ್ಯಾಣ ಕರ್ನಾಟಕದಲ್ಲಿ ಬಾಯಿ ತೊಳೆಸುವುದು ಎನ್ನುತ್ತಾರೆ.

ಮಧ್ಯಪ್ರದೇಶದಿಂದ ಹೊಟ್ಟೆಪಾಡಿಗಾಗಿ ಪ್ರತಿ ವರ್ಷ ವಿಜಯಪುರಕ್ಕೆ ಬರುವ ‘ಲೋಹರ್‌’ (ಕಮ್ಮಾರ) ಸಮುದಾಯ ನಗರದ ಪ್ರಮುಖ ರಸ್ತೆಗಳ ಬದಿ ಸಂಸಾರ ಸಹಿತ ಟೆಂಟ್‌ ಹಾಕಿಕೊಳ್ಳುತ್ತಾರೆ. ಬಿಸಿಲು, ಚಳಿ, ಮಳೆ, ಹಗಲು, ರಾತ್ರಿ ಲೆಕ್ಕಿಸದೇ ವಸ್ತುಗಳನ್ನು ತಯಾರಿಸಿ, ಅವುಗಳನ್ನು ಮಾರಿ, ಬದುಕು ಸಾಗಿಸುತ್ತಾರೆ. ಆರೇಳು ತಿಂಗಳು ವಿಜಯಪುರದಲ್ಲಿ ಕಮ್ಮಾರಿಕೆ ಕಾಯಕದಲ್ಲಿ ತೊಡಗಿ, ಹೋಳಿ ಹಬ್ಬಕ್ಕೆ ತಮ್ಮೂರಿಗೆ ಮರಳುತ್ತಾರೆ. ಇದರಲ್ಲಿ ಅವರು ಗಳಿಸುವುದು ಹೆಚ್ಚೇನಿಲ್ಲ. ಅಂದಿನ ಬದುಕಿನ ನಿರ್ವಹಣೆಗಷ್ಟೇ ಅದು ಸಾಕಾಗುತ್ತದೆ.

ಊರು, ಸೂರಿಲ್ಲ: ‘ಮಧ್ಯಪ್ರದೇಶದಲ್ಲಿ ಲೋಹರ್‌ ಸಮುದಾಯ ಆರ್ಥಿಕವಾಗಿ ಅತ್ಯಂತ ಹಿಂದುಳಿದಿದೆ. ಅನಕ್ಷರಸ್ಥ ಹಾಗೂ ಜಾತಿ ವ್ಯವಸ್ಥೆಯಲ್ಲಿ ತುಳಿತಕ್ಕೆ ಒಳಗಾಗಿದೆ. ನಮಗೆ ಯಾವುದೇ ಸರ್ಕಾರಗಳಿಂದ ಯಾವುದೇ ಸೌಲಭ್ಯ, ಸಹಾಯ ಸಿಗುತ್ತಿಲ್ಲ. ಹೀಗಾಗಿ ನಾವು ನಂಬಿದ ಕಾಯಕದೊಂದಿಗೆ ಅಲೆಮಾರಿಗಳಾಗಿದ್ದೇವೆ’ ಎಂದು ಮಧ್ಯಪ್ರದೇಶದ ಗುನಾ ಜಿಲ್ಲೆಯ ಹರಿಪುರದ ನಿವಾಸಿ ಮುನ್ಸಿಲಾಲ್‌ ತಿಳಿಸಿದರು.

‘ನಮ್ಮೂರಲ್ಲಿ ನಮಗೆ ನೆಲೆ ಇಲ್ಲ, ಉದ್ಯೋಗವೂ ಇಲ್ಲ. ಉಳುಮೆಗೆ ಭೂಮಿ ಇಲ್ಲ. ಊರಲ್ಲಿ ಇದ್ದರೆ ಉಪವಾಸ ಇರಬೇಕು ಎಂಬ ಕಾರಣಕ್ಕೆ 20 ವರ್ಷಗಳಿಂದ ನಾನು ಕುಟುಂಬ ಸಮೇತ ವಿಜಯಪುರಕ್ಕೆ ಬರುತ್ತೇನೆ. ಕುಟುಂಬದವರೆಲ್ಲರೂ ಕೂಡಿ ಕೆಲಸ ಮಾಡುವುದರಿಂದ ಪ್ರತಿ ದಿನ ₹1 ಸಾವಿರ ದುಡಿಮೆ ಆಗುತ್ತದೆ. ದೈನಂದಿನ ಬದುಕು ಸಾಗಿಸಲು ಸಾಕು. ಏನೂ ಉಳಿಯಲ್ಲ’ ಎಂದು ಅವರು ಹೇಳಿದರು.

‘ನನ್ನ ಮಕ್ಕಳು, ಮೊಮ್ಮಕ್ಕಳು ಈ ಕೆಲಸ ಮಾಡೋದು ಬೇಡ. ನನ್ನ ತಲೆಮಾರಿಗೆ ಈ ಕೆಲಸ ಸಾಕು. ಸರ್ಕಾರ ನಮಗೆ ಉಳುಮೆ ಮಾಡಲು ಭೂಮಿ ಕೊಟ್ಟರೆ ನಮ್ಮೂರಲ್ಲೇ ನಾವು ಇರುತ್ತೇವೆ’ ಎಂದು ಮುನ್ಸಿಲಾಲ್‌ ದನಿಗೂಡಿಸಿದರು.

‘ಕಮ್ಮಾರರು ಮಳೆಗಾಲದಲ್ಲಿ ಕೃಷಿ ಕೆಲಸದ ಹೊಸ ಸಾಮಾನುಗಳನ್ನು ತಯಾರಿಸುವುದು ಕಡಿಮೆಯೇ. ಅದೆಲ್ಲಾ ಬ್ಯಾಸಗಿ ಸಮಯದಾಗ ಮಾಡೋ ಕೆಲಸ. ಕೃಷಿ ಕೆಲಸದ ವೇಳೆ ಮರದ ಬೇರುಗಳು ತಗುಲಿ, ಕಲ್ಲು ತಾಗಿ ವಸ್ತುಗಳು ಮುರಿದರೆ ಮಾತ್ರ ಆಗ ಹೊಸದನ್ನು ತಯಾರಿಸುತ್ತಾರೆ. ಇಲ್ಲದಿದ್ದರೆ, ಬಂಡಿಗೆ ಹಳಿ ಕಟ್ಟುವುದು, ಹೊಸ ಕುಡ ತಯಾರಿಸೋದು ಬ್ಯಾಸಗಿ ಕೆಲಸ. ಮಳೆಗಾಲದಾಗ ನಾವು ಕುಲುಮ್ಯಾಗ ಕುಂತ್ರ ಹೊಲದಾಗಿನ ಕೆಲಸ ನಿಲ್ಲತ್ತಲ್ರಿ’ ಎನ್ನುತ್ತಾರೆ ರೈತ ಗುರುಲಿಂಗಪ್ಪ ರಾಜಾಪೂರ.

ಕೃಷಿ ಕೆಲಸದಲ್ಲಿ ರೈತನ ಎರಡೂ ಕೈಗಳಂತಿದ್ದವರು ಕಮ್ಮಾರರು ಮತ್ತು ಬಡಿಗೇರರು. ಕೃಷಿಯಲ್ಲಿ ಯಂತ್ರೋಪಕರಣಗಳ ಬಳಕೆ, ನಗರೀಕರಣ ಹೆಚ್ಚಾದಂತೆ ಬಡಗಿಗಳು ಬಾಗಿಲು, ಕಿಟಕಿ, ಮಂಚ, ಮೇಜು, ಕುರ್ಚಿ ಎಂದು ಹೊಸ ಹೊಸ ವಸ್ತುಗಳನ್ನು ತಯಾರಿಸುತ್ತಾ ಆಧುನಿಕತೆಗೆ ಒಗ್ಗಿಕೊಂಡಿದ್ದಾರೆ. ಆದರೆ, ಕಮ್ಮಾರನದು ಶೋಚನೀಯ ಸ್ಥಿತಿ. ಕೃಷಿ ಸಲಕರಣೆಗಳೆಲ್ಲಾ ಕಾರ್ಖಾನೆಗಳಲ್ಲಿ ತಯಾರಾಗಿ ಮಾರುಕಟ್ಟೆಗೆ ಬರುತ್ತಿವೆ. ಇನ್ನು ಎತ್ತಿನ ಗಾಡಿಯ ಜಾಗಕ್ಕೆ ಟ್ರ್ಯಾಕ್ಟರ್‌ ಬಂದು ನಿಂತಿದೆ. ಉಳುಮೆಗೂ ಸೈ, ಮಾಲು ಹೇರೋದಕ್ಕೂ ಜೈ ಎಂದು ಎಲ್ಲದಕ್ಕೂ ಟ್ರ್ಯಾಕ್ಟರ್‌ ಬಳಕೆಯಾಗುತ್ತಿದೆ. ಹೀಗಾಗಿ ಹಲವೆಡೆ ಕಮ್ಮಾರ ಕುಲುಮೆ ಕಳಚಿಟ್ಟಿದ್ದಾನೆ. ಹತ್ತಾರು ಊರುಗಳನ್ನು ಹುಡುಕಿದರೂ ಕುಲುಮೆ ಕಾಣೋದು ಅಪರೂಪವಾಗಿದೆ. 

ಬಂಡಿಗೆ ಹಳಿ ಕಟ್ಟುವ ವಿಧಾನ: ಎತ್ತಿನ ಗಾಡಿ ಗ್ರಾಮೀಣ ಭಾಗದ ರೈತರ ತೇರು ಎಂದೇ ಹೆಸರಾಗಿತ್ತು. ಅದಕ್ಕೆ ಇರುತ್ತಿದ್ದ ಕಬ್ಬಿಣ ಹಳಿಯ ಕಟ್ಟಿಗೆ ಗಾಲಿ ಇತ್ತೀಚೆಗೆ ಟೈರ್‌ ಗಾಲಿಗಳ ಆಗಮನದಿಂದ ನೇಪಥ್ಯಕ್ಕೆ ಸರಿದಿದೆ. ಕಟ್ಟಿಗೆ ಗಾಲಿಯ ಚಲನೆ ನಿಧಾನವಾದರೂ ಎಂಥದ್ದೇ ಕೆಸರು, ಮಣ್ಣು ಮತ್ತು ಉಸುಕು ತುಂಬಿದ ದಾರಿಯಲ್ಲೂ ಸರಾಗವಾಗಿ ಕಿತ್ತೋಡುತ್ತಿತ್ತು. ಅದಕ್ಕೆ ಹಳಿ ಬಿಗಿಯುವುದೇ ವಿಶೇಷ ಕ್ರಮವಾಗಿತ್ತು. ಪ್ರತಿಯೊಬ್ಬ ರೈತ ಎರಡು ವರ್ಷಕ್ಕೊಮ್ಮೆಯಾದರೂ ಹಳಿ ಬಿಗಿಸುತ್ತಿದ್ದ. ಹಳಿ ಬಿಗಿಯುವುದೆಂದರೆ ಗಾಲಿಯ ಹೊರಮೇಲ್ಮೈ ಸುತ್ತಲೂ ಕಬ್ಬಿಣದ ಪಟ್ಟಿಯನ್ನು ಬಿಗಿಯಾಗಿ ಜೋಡಿಸುವುದು. ಕಬ್ಬಿಣದ ಪಟ್ಟಿಯನ್ನು ಜೋಡಿಸುವ ತನಕ ಸಡಿಲವಾಗಲೆಂದು ಕಬ್ಬಿಣವನ್ನು ಬೆರಣಿಯಲ್ಲಿ ಸುಡುತ್ತಿದ್ದರು. ಶಾಖಕ್ಕೆ ಅದು ಹಿಗ್ಗಿದಾಗ ಗಾಲಿಗೆ ಜೋಡಿಸುತ್ತಿದ್ದರು. ನಂತರ ಅದಕ್ಕೆ ನೀರುಣಿಸಿ ತಂಪುಗೊಳಿಸಿದಾಗ ಕಬ್ಬಿಣ ಗಾಲಿಯ ಅಳತೆಗೆ ಬಿಗಿಯಾಗಿ ಹೊಂದಿಕೊಳ್ಳುತ್ತಿತ್ತು. ಈ ಕಲೆಯನ್ನೇ ಬಂಡಿಗೆ ಹಳಿ ಕಟ್ಟುವ ವಿಧಾನ ಎನ್ನುತ್ತಾರೆ.

ಇದ್ದಿಲು ಸಿಗುವುದೇ ದುಸ್ತರ: ಕಬ್ಬಿಣದಿಂದ ಬೇಕಾದಂತಹ ವಸ್ತುಗಳನ್ನು ತಯಾರಿಸಲು ಅದನ್ನು ಕುಲುಮೆಯಲ್ಲಿಟ್ಟು ಕೆಂಪಗೆ ಕಾಯಿಸಬೇಕಾಗುತ್ತದೆ. ಅದಕ್ಕೆ ಇದ್ದಿಲು ಬಳಕೆ ಮಾಡಲಾಗುತ್ತದೆ. ಈ ಹಿಂದೆ ಕಬ್ಬಿಣ ಕಾಯಿಸಲು ಕಮ್ಮಾರನಲ್ಲಿಗೆ ರೈತರೇ ಇದ್ದಿಲು ತೆಗೆದುಕೊಂಡು ಹೋಗುತ್ತಿದ್ದರು. ಆದರೆ, ಇಂದು ಮನೆ ಮನೆಗೂ ಎಲ್‌ಪಿಜಿ ಬಂದಿರೋದರಿಂದ ಇದ್ದಿಲು ಸಿಗುವುದೇ ಅಪರೂಪವಾಗಿದೆ. ಇದ್ದಿಲನ್ನು ಕಮ್ಮಾರ ಕೊಂಡು ತರಬೇಕಾದ ಪರಿಸ್ಥಿತಿ ಇದೆ. ಅದಕ್ಕಾಗಿಯೇ ಇದ್ದಿಲು ಭಟ್ಟಿಗಳು ಶುರುವಾಗಿವೆ. ಅಲ್ಲಿ ಚೀಲಕ್ಕೆ ₹700 ಕೊಟ್ಟು ತರುತ್ತಿದ್ದಾರೆ. ಅದರ ವೆಚ್ಚವೂ ಕಮ್ಮಾರನ ಹೆಗಲ ಮೇಲೆಯೇ ಬಿದ್ದಿದೆ.

ಹಿಂದೆಲ್ಲಾ ಗ್ರಾಮಗಳಲ್ಲಿ ಆಯಾ ಪದ್ಧತಿ ಇತ್ತು. ಉತ್ತರ ಕರ್ನಾಟಕದಲ್ಲಿ ವರ್ಷಕ್ಕೆ ಒಬ್ಬ ರೈತ 4 ಗಿದ್ನ (64 ಸೇರು) ಜೋಳ ಕೊಡುತ್ತಿದ್ದರು. ದಕ್ಷಿಣ ಕರ್ನಾಟಕ ಭಾಗದಲ್ಲಿ ರಾಗಿ ಕೊಡುತ್ತಿದ್ದರು. ಅದೂ ಎತ್ತು ಇದ್ದ ರೈತ ಮಾತ್ರ ಆಯಾ ಕೊಡುತ್ತಿದ್ದರು. ಅಷ್ಟರಲ್ಲೇ ವರ್ಷವಿಡೀ ಅವರ ಕೆಲಸ ಮಾಡಿಕೊಡಬೇಕಿತ್ತು. ದುಡ್ಡಿನ ಬಳಕೆ ಹೆಚ್ಚಿದಂತೆ, ರೈತನೂ ವಾಣಿಜ್ಯ ಬೆಳೆಗಳ ಮೊರೆ ಹೋದ. ಹೀಗಾಗಿ ಪ್ರಸ್ತುತ ಆಯಾ ಪದ್ಧತಿ ಮರೆಯಾಗಿದೆ. ರೈತರು ದುಡ್ಡು ಕೊಟ್ಟೇ ತಮ್ಮ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ.

ಸಾಲಸೌಲಭ್ಯ ಮರೀಚಿಕೆ: ‘ಕಮ್ಮಾರರು ಭೂಹೀನರಾಗಿದ್ದರಿಂದ ಅವರಿಗೆ ಬ್ಯಾಂಕ್‌ಗಳಿಂದ ಸಾಲ ಸೌಲಭ್ಯವೂ ದೊರೆಯುತ್ತಿಲ್ಲ’ ಎಂದು ಬೇಸರಿಸುತ್ತಾರೆ ಇಳಕಲ್‌ ತಾಲ್ಲೂಕಿನ ಕಮ್ಮಾರ ಸಮಾಜದ ಪ್ರಧಾನ ಕಾರ್ಯದರ್ಶಿ ಕಾಳಪ್ಪ. ‘ನಾವು ಹೊರಗಡೆಯೇ ಶೇ 3ರಿಂದ 5ರ ಬಡ್ಡಿ ದರದಲ್ಲಿ ಸಾಲ ಪಡೆದು ಕುಲುಮೆ ಶುರು ಮಾಡಬೇಕಿದೆ. ಕುಲುಮೆಗೆ ಇದ್ದಿಲು ತೆಗೆದುಕೊಂಡು ಬರುತ್ತಿದ್ದ ರೈತ ಕಬ್ಬಿಣ ಬಡಿಯಲು ನೆರವಾಗುತ್ತಿದ್ದ. ಆದರೆ, ಇಂದು ರೈತ ಕೈಕಟ್ಟಿ ನಿಲ್ಲುತ್ತಾನೆಯೇ ಹೊರತು ಪೆಟ್ಟು ಹಾಕುವುದಿಲ್ಲ. ಹೀಗಾಗಿ ವಿದ್ಯುತ್‌ ಚಾಲಿತ ಯಂತ್ರ ಅಳವಡಿಸಲಾಗಿದೆ. ಅದಕ್ಕೆ ಮಾಸಿಕ ಮೂರು ಸಾವಿರಕ್ಕಿಂತ ಅಧಿಕ ಶುಲ್ಕ ತೆರಬೇಕಿದೆ. ಗನ್‌ ಮಶಿನ್‌, ಪಂಕಕ್ಕೆ ಮೋಟಾರ್, ತಿದಿ (ಗಾಳಿಯ ಚೀಲ, ಈ ಹಿಂದೆ ಚರ್ಮದ್ದು ಇರುತ್ತಿದ್ದು, ಈಗ ರಬ್ಬರ್‌) ಸೇರಿದಂತೆ ಕನಿಷ್ಠವೆಂದರೂ ಒಂದು ಕುಲುಮೆ ಶುರುಮಾಡಲು ₹3 ಲಕ್ಷ ಬೇಕು’ ಎಂದು ವಿವರಿಸಿದರು.

ಕಮ್ಮಾರಿಕೆಗೆ ಬೇಡಿಕೆ ಕಡಿಮೆಯಾಗಿದೆ. ಹೀಗಾಗಿ ಕಮ್ಮಾರರಿಗೆ ಕೆಲಸವಷ್ಟೇ ಅಲ್ಲ ನೆಲೆಯೂ ಇಲ್ಲದಂತಾಗಿದೆ. ಗದಗ ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನ ತಂಗೋಡ ಗ್ರಾಮದಲ್ಲಿ ಕಮ್ಮಾರರ ಕುಟುಂಬ ಕಮ್ಮಾರಿಕೆಯನ್ನೇ ಬಿಟ್ಟು ಕೃಷಿಯ ಮೊರೆ ಹೋಗಿದೆ. ರೈತರು ಪಕ್ಕದ ಕೋಗನೂರಿಗೆ ಹೋಗಿ ಪರಿಕರಗಳನ್ನು ಹರಿತ ಮಾಡಿಕೊಂಡು ಬರುತ್ತಾರೆ. ಇನ್ನು ಮುದ್ದೇಬಿಹಾಳ ತಾಲ್ಲೂಕಿನ ತಂಗಡಗಿ, ಯಾದಗಿರಿ ಜಿಲ್ಲೆಯ ನಾರಾಯಣಪುರ ಸೇರಿದಂತೆ ಹಲವೆಡೆ ಮುಸ್ಲಿಂ ಕುಟುಂಬಗಳು ಕಮ್ಮಾರಿಕೆ ಮಾಡುತ್ತಿವೆ. ಕಲಬುರಗಿ ನಗರದಲ್ಲೇ ಸುಮಾರು 25 ಮುಸ್ಲಿಂ ಕುಟುಂಬಗಳು ಕಮ್ಮಾರಿಕೆ ಮಾಡುತ್ತಿವೆ. ಆಟೊಗಳ ವೆಲ್ಡಿಂಗ್‌, ತಿಜೋರಿ, ಎತ್ತಿನ ಗಾಡಿ ಎಂದು ದೊಡ್ಡ ವಸ್ತುಗಳನ್ನು ತಯಾರಿಸುತ್ತಿರುವುದರಿಂದ ಬಂದ ಆದಾಯದಲ್ಲಿ ಬದುಕುತ್ತಿದ್ದಾರೆ. ಗ್ರಾಮಗಳಲ್ಲಿ ಮೂಲತಃ ಕಮ್ಮಾರಿಕೆ ಮಾಡಿಕೊಂಡಿದ್ದವರು ಕುಲುಮೆ ಕಳಚಿಟ್ಟು ನಗರ ಪ್ರದೇಶಗಳಲ್ಲಿ ಕಟ್ಟಡ ಕಾರ್ಮಿಕರಾಗಿ, ಖಾಸಗಿ ಕಂಪನಿಗಳಲ್ಲಿ ಸೆಕ್ಯೂರಿಟಿ ಗಾರ್ಡ್‌ಗಳಾಗಿ ಬೇರೆ ಉದ್ಯೋಗಗಳತ್ತ ವಾಲಿದ್ದಾರೆ. ಜಾಗತೀಕರಣ ಮತ್ತಷ್ಟು ವ್ಯಾಪಕವಾದರೆ ಕಮ್ಮಾರರು ಕುಲಕಸುಬಿಗೆ ಇತಿಶ್ರೀ ಹಾಡುವುದು ಖಾತ್ರಿ.

ಪ್ರತ್ಯೇಕ ಕಮ್ಮಾರ ಅಭಿವೃದ್ಧಿ ನಿಗಮದ ಬೇಡಿಕೆ

ಕಮ್ಮಾರರನ್ನು ವಿಶ್ವಕರ್ಮ ಉಪಜಾತಿಗಳಲ್ಲಿ ಗುರುತಿಸಲಾಗಿದೆ. ವಿಶ್ವಕರ್ಮರಲ್ಲಿ 41 ಉಪಜಾತಿಗಳಿವೆ. ಅವರ ಅಭಿವೃದ್ಧಿಗಾಗಿ 2014ರಲ್ಲಿ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ ಸ್ಥಾಪಿಸಲಾಗಿದೆ. ಆದರೆ, ವಿಶ್ವಕರ್ಮರಲ್ಲೇ ತಮ್ಮನ್ನು ಕಡೆಗಣಿಸಲಾಗುತ್ತಿದ್ದು, ಪ್ರತ್ಯೇಕ ಕಮ್ಮಾರ ಅಭಿವೃದ್ಧಿ ನಿಗಮ ರಚಿಸಿ ಎಂಬ ಬೇಡಿಕೆಯನ್ನು ಕಮ್ಮಾರರು ಮುಂದಿಟ್ಟಿದ್ದಾರೆ.

ಸಮುದಾಯಕ್ಕೆ ರಾಜಕೀಯ ಶಕ್ತಿಯಿಲ್ಲ: ಚಂದ್ರಶೇಖರ ಕಂಬಾರ

‘ಕಮ್ಮಾರ, ಕಂಬಾರ ಪದವ್ಯತ್ಯಾಸವಷ್ಟೇ. ನಾವು ಉತ್ತರ ಕರ್ನಾಟಕದ ಕಮ್ಮಾರರು. ಘೋಡಗೇರಿಯಲ್ಲಿ ನಮ್ಮ ತಂದೆ, ನಮ್ಮ ಅಣ್ಣಂದಿರು ಕುಲುಮೆ ಕೆಲಸ ಮಾಡುತ್ತಿದ್ದರು. ಬಾಲ್ಯದಲ್ಲಿ ನನಗೆ ಕುಲುಮೆ ಕೆಲಸ ಕಲಿಯಲಾಗಲಿಲ್ಲ, ಹೀಗಾಗಿ ನನ್ನನ್ನು ದನ ಮೇಯಿಸಲು ಕಳಿಸುತ್ತಿದ್ದರು. ನಮ್ಮ ಕುಲಕಸುಬು ಬಹಳ ಹೆಸರು ಮಾಡಿಲ್ಲ, ಕಸುಬಿನ ಬಗ್ಗೆ, ದೈವದ ಬಗ್ಗೆ ನಂಬಿಕೆ ಇದೆ. ಕಮ್ಮಾರಿಕೆಗೆ ಬೇಡಿಕೆ ಕಡಿಮೆಯಾಗಿರೋದಕ್ಕೆ ಬೇಸರವಿದೆ. ಕಮ್ಮಾರನೂ ಕಾಲದ ಜತೆ ಓಡಲೇಬೇಕಲ್ಲ. ಆದರೆ, ನಮ್ಮ ಸಮುದಾಯಕ್ಕೆ ಭಂಡತನವಿಲ್ಲ. ಹೀಗಾಗಿ ನಮಗೆ ರಾಜ ಕೀಯ ಶಕ್ತಿ ಇಲ್ಲ. ತಾವಾಯ್ತು, ತಮ್ಮ ಪಾಡಾಯ್ತು ಎಂದು ಇದ್ದು ಬಿಡುತ್ತಾರೆ. ಕೆಲಸದ ಬಗ್ಗೆ ಹೆಮ್ಮೆ ಇದೆ. ನಾನು ಕಂಡ ಹಾಗೇ ಕಮ್ಮಾರರಲ್ಲಿ ಭೇದವಿಲ್ಲ. ಆದರೆ, ಆರ್ಥಿಕ ತಾರತಮ್ಯ ಇದೆ. ನಾವೆಲ್ಲರೂ ಒಂದೇ. ಮನುಷ್ಯ ಜಾತ್ಯತೀತನಾಗಿರಬೇಕು. ಜಾತೀಯತೆ ಮಾಡಬಾರದು’ ಎಂದು ಸಾಹಿತಿ ಚಂದ್ರಶೇಖರ ಕಂಬಾರ ಅಭಿಪ್ರಾಯಪಟ್ಟರು.

ಜಾತಿ ಪ್ರಮಾಣಪತ್ರದಲ್ಲಿ ಗೊಂದಲ!

ಹಿಂದೆ ಮದ್ರಾಸ್‌ ಪ್ರಾಂತ್ಯಕ್ಕೆ ಸೇರಿದ್ದರಿಂದ ಚಾಮರಾಜನಗರದ ಕೊಳ್ಳೇಗಾಲ, ಉಡುಪಿ ಜಿಲ್ಲೆಯ ಸುಳ್ಯದಲ್ಲಿ ಕಮ್ಮಾರರಿಗೆ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರ ಸಿಗುತ್ತಿದೆ. ಉತ್ತರ ಕರ್ನಾಟಕದಲ್ಲಿ ಮಹಾರಾಷ್ಟ್ರದಿಂದ ಬಂದವರು ಹೆಚ್ಚಿರುವುದರಿಂದ ಜಾತಿ ಕಾಲಂನಲ್ಲಿ ಹಿಂದೂ ಮರಾಠ, ಹಿಂದೂ ಕ್ಷತ್ರೀಯ, ಹಿಂದೂ ಆರೇರ, ಹಿಂದೂ ಲಿಂಗಾಯತ ಎಂದು ಇದ್ದಲ್ಲಿ 3ಬಿಗೆ ಸೇರಿಸಲಾಗಿದೆ. ಇನ್ನು ಕಲಬುರಗಿಯಲ್ಲಿರುವ ಕಮ್ಮಾರರಿಗೆ ಪ್ರವರ್ಗ–1ರ ಪ್ರಮಾಣ ಪತ್ರ ನೀಡಲಾಗಿದೆ. ‘ಹಿಂದೂ ಕಮ್ಮಾರ’ ಎಂದು ನಮೂದಿಸಿದ್ದರೆ ಮಾತ್ರ 2ಎ ನೀಡುತ್ತಾರೆ. 2ಎ ಪ್ರಮಾಣಪತ್ರ ಇದ್ದರೆ ಮಾತ್ರ ವಿಶ್ವಕರ್ಮ ಅಭಿವೃದ್ಧಿ ನಿಗಮದ ಪ್ರಯೋಜನ ಸಿಗುತ್ತದೆ. ಇನ್ನು ಪಿಎಂ ವಿಶ್ವಕರ್ಮ ಯೋಜನೆ ಸೌಲಭ್ಯ ಪಡೆಯಲು ಯೋಜನಾ ವರದಿ ನೀಡಬೇಕು. ಅದರಲ್ಲಿ ಕಬ್ಬಿಣವನ್ನು ಎಷ್ಟು ತಾಪಮಾನದಲ್ಲಿ ಕಾಯಿಸುತ್ತೀರಿ? ಇದ್ದಿಲು ಎಷ್ಟು ಹಾಕುತ್ತೀರಿ... ಎಂಬಿತ್ಯಾದಿ ಪ್ರಶ್ನೆಗಳಿವೆ. ಇದೆಲ್ಲಾ ಗೊಂದಲದಿಂದಾಗಿ ಬಾಗಲಕೋಟೆ ಜಿಲ್ಲೆಯಲ್ಲಿ ಯಾರೂ ಪ್ರಯೋಜನ ಪಡೆದಿಲ್ಲ ಎಂದು ಮುತ್ತಣ್ಣ ಭರಮಪ್ಪ ಕಂಬಾರ ವಿವರಿಸಿದರು.

ಕೃಷಿ ವಿವಿಯಲ್ಲೂ ಇಲ್ಲ ಕಮ್ಮಾರಿಕೆ ಪಾಠ!

ರಾಯಚೂರು, ಧಾರವಾಡ, ಶಿವಮೊಗ್ಗ ಹಾಗೂ ಬೆಂಗಳೂರು ಹೀಗೆ ರಾಜ್ಯದಲ್ಲಿ ನಾಲ್ಕು ಕೃಷಿ ವಿಶ್ವವಿದ್ಯಾಲಗಳು ಇವೆ. ‘ರಾಜ್ಯದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯಗಳಲ್ಲಿ ಕಮ್ಮಾರಿಕೆ ಪಾಠ ಬೋಧನೆ ಇರುವುದಿಲ್ಲ. ಆದರೆ, ಕೃಷಿ ಪರಿಕರಗಳ ಬಗ್ಗೆ ಪ್ರಾಥಮಿಕ ಹಂತದಲ್ಲಿ ವಿದ್ಯಾರ್ಥಿಗಳಿಗೆ ಮಾಹಿತಿ ಕೊಡಲಾಗುತ್ತಿದೆ. ಸುಧಾರಿತ ಕೃಷಿ ಉಪಕರಣಗಳ ಪರಿಚಯಿಸುವ ದಿಸೆಯಲ್ಲಿ ರಾಜ್ಯದಲ್ಲಿ ಎರಡು ಕೃಷಿ ಎಂಜಿನಿಯರಿಂಗ್‌ ಕಾಲೇಜುಗಳು ಕಾರ್ಯನಿರ್ವಹಿಸುತ್ತಿವೆ’ ಎಂದು ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಕುಲಪತಿ ಡಾ.ಎಂ.ಹನುಮಂತಪ್ಪ ಹೇಳುತ್ತಾರೆ.

ಕೃಷಿ ಉಪಕರಣಗಳ ನಿರಂತರ ಸಂಶೋಧನೆ: ಆಧುನಿಕತೆಯ ಪರಿಣಾಮ ಕಮ್ಮಾರಿಕೆಯ ವ್ಯಾಪ್ತಿಯೇ ವಿಸ್ತೃತಗೊಂಡಿದೆ. ಕೃಷಿ ಕಾರ್ಮಿಕರ ಕೊರತೆ ಇರುವ ಇಂದಿನ ಕಾಲದಲ್ಲಿ ಒಂದೇ ಉಪಕರಣದಿಂದ ಹಲವು ಕಾರ್ಯಗಳನ್ನು ಮಾಡಿಕೊಳ್ಳುವ ದಿನಗಳು ಬಂದಿವೆ. ಸಾಂಪ್ರದಾಯಿಕ ಉಪಕರಣಗಳು ಯಂತ್ರಗಳ ಸ್ವರೂಪ ಪಡೆದುಕೊಂಡಿವೆ. ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯವು 2009ರಿಂದ 2023ರವರೆಗೆ 46 ಕೃಷಿ ಉಪಕರಣಗಳನ್ನು ಅಭಿವೃದ್ಧಿ ಪಡಿಸಿದೆ. ಇನ್ನುಳಿದ ವಿಶ್ವವಿದ್ಯಾಲಯಗಳು ಹೊಸ ಉಪಕರಣಗಳನ್ನು ಆವಿಷ್ಕಾರ ಮಾಡಿವೆ.

‘ಕೃಷಿ ಎಂಜಿನಿಯರಿಂಗ್‌ ಸಂಶೋಧನೆಯೊಂದಿಗೆ ವ್ಯವಹರಿಸುತ್ತದೆ. ಕೊಯ್ಲು ಹಾಗೂ ಕೃಷಿಯ ಹಲವು ಪ್ರಕಾರದ ಯಂತ್ರೋಪಕರಣಗಳನ್ನು ಅಭಿವೃದ್ಧಿಪಡಿಸುವುದಕ್ಕೆ ಒತ್ತು ನೀಡಲಾಗಿದೆ. ಆಧುನಿಕ ವಿಧಾನದ ಉಪಕರಣಗಳ ಮೂಲಕ ಬೀಜಗಳ ವಿಂಗಡಣೆ ಮತ್ತು ಪ್ರತ್ಯೇಕತೆ ಸುಲಭ. ಸಾಂಪ್ರದಾಯಿಕ ಬಡಿಗತನ, ಕಮ್ಮಾರಿಕೆ ಒಂದು ಹಂತಕ್ಕೆ ಸೀಮಿತವಾಗಿದೆ. ಆದರೆ, ಹೊಸ ತಂತ್ರಜ್ಞಾನದ ಕೃಷಿ ಉಪಕರಣಗಳು ಕೃಷಿಕರಿಗೆ ಹೆಚ್ಚು ಅನುಕೂಲ ಕಲ್ಪಿಸಿದೆ’ ಎನ್ನುತ್ತಾರೆ ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕ ಡಿ.ಕೆ.ದೇಸಾಯಿ.

ಅಗತ್ಯವಿದ್ದರೆ ಕಮ್ಮಾರರ ಶಾಲೆ ಎಂದರೇನು?

‘ಎಲ್ಲೂ ಮಣಿಯದ ಕಬ್ಬಿಣ ಕಮ್ಮಾರ ಶಾಲೆಯಲ್ಲಿ ಮಣಿಯುತ್ತದೆ’ ಎಂಬ ಗಾದೆ ಮಾತು ಇದೆ. ಬುದ್ಧಿ ಮಾತು ಕೇಳದವರಿಗೆ ಹೇಗೆ ಬುದ್ಧಿ ಕಲಿಸಬೇಕು ಎಂಬರ್ಥದಲ್ಲಿ ಈ ಗಾದೆ ಈಗಲೂ ಜನಜನಿತ.

ಕಮ್ಮಾರರು ಕುಲುಮೆ ಕೆಲಸ ಮಾಡುತ್ತಿದ್ದ ಸ್ಥಳಗಳನ್ನೇ ‘ಕಮ್ಮಾರ ಶಾಲೆ’ ಎಂದು ಕರೆಯುವುದು ಹಳ್ಳಿಗರ ರೂಢಿ. ಅನಾದಿ ಕಾಲದಿಂದಲೂ ಕಮ್ಮಾರರ ಕುಲುಮೆಗಳು ವೃತ್ತಿ ಕಲಿಕಾ ಕೇಂದ್ರಗಳೂ ಆಗಿದ್ದವು. ಕೃಷಿ ಸಲಕರಣೆ, ಕಬ್ಬಿಣದ ಸಾಮಗ್ರಿ, ಗೃಹೋಪಯೋಗಿ ವಸ್ತುಗಳು, ಕಬ್ಬಿಣದ ಕಂಬಗಳು, ಆಲಂಕಾರಿಕ ವಸ್ತುಗಳನ್ನು ಸಿದ್ಧಪಡಿಸಬೇಕೆಂದರೆ ಕುಲುಮೆಯಲ್ಲಿ ಪಳಗುವುದು ಅನಿವಾರ್ಯ ಆಗಿತ್ತು. ಹೀಗಾಗಿ, ಈ ಕುಲುಮೆಗಳನ್ನು ಇತಿಹಾಸದುದ್ದಕ್ಕೂ ಶಾಲೆಗಳು ಎಂದೇ ಪರಿಗಣಿಸಲಾಗಿತ್ತು.

ಸರ್ಕಾರಿ ನೌಕರರ ಕುಟುಂಬಸ್ಥರಿಗಿಲ್ಲ ಸೌಲಭ್ಯ!

ಪಿಎಂ ವಿಶ್ವಕರ್ಮ ಯೋಜನೆ ವ್ಯಾಪ್ತಿಗೆ ಬರುವ 18 ವರ್ಗದ ಕುಶಲಕರ್ಮಿಗಳಂತೆ ಕಮ್ಮಾರರಿಗೂ ನೆರವು ದೊರೆಯುತ್ತಿದೆ. ಕೇಂದ್ರ ಸರ್ಕಾರ ₹13 ಸಾವಿರ ಕೋಟಿ ಮೀಸಲಿಟ್ಟಿದೆ. ಈ ಯೋಜನೆಯಡಿ ಕೌಶಲ ಅಭಿವೃದ್ಧಿ ತರಬೇತಿ, ತಾಂತ್ರಿಕ ಜ್ಞಾನ, ಹೊಸ ಉಪಕರಣ ಹಾಗೂ ಖಾತರಿ ರಹಿತ ಬ್ಯಾಂಕ್‌ ಸಾಲ ಸೌಲಭ್ಯ ದೊರೆಯುತ್ತಿದೆ. ಹಿಂದುಳಿದ ವರ್ಗಗಳಿಗೆ ಸೇರಿದ 30 ಲಕ್ಷಕ್ಕೂ ಅಧಿಕ ಕುಟುಂಬಗಳ ಜತೆಗೆ ರಾಜ್ಯದ ಕಮ್ಮಾರರೂ ಪ್ರಯೋಜನ ಪಡೆದಿದ್ದಾರೆ. 

‘ಮೊದಲು ಟೆಂಟ್‌ ಹಾಕಿಕೊಂಡು ಕೆಲಸ ಮಾಡುತ್ತಿದ್ದೆವು. ಪಿಎಂ ವಿಶ್ವಕರ್ಮ ಯೋಜನೆ ಜಾರಿಯಾದ ನಂತರ ₹2 ಲಕ್ಷ ಸಾಲ ಪಡೆದು ಸ್ವಂತ ಶೆಡ್‌ ನಿರ್ಮಿಸಿಕೊಂಡಿದ್ದೇವೆ. 30 ಕಂತುಗಳಲ್ಲಿ ಸಾಲ ತೀರಿಸಿದ್ದೇವೆ’ ಎನ್ನುತ್ತಾರೆ ಬೆಂಗಳೂರು ಗ್ರಾಮಾಂತರದ ಕಮ್ಮಾರ ಕಾಳಪ್ಪ.

ಆದರೆ, ಸರ್ಕಾರಿ ನೌಕರ ಹಾಗೂ ಅವರ ಕುಟುಂಬದ ಸದಸ್ಯರಿಗೆ ಸೌಲಭ್ಯ ಸಿಗುತ್ತಿಲ್ಲ. ‘ಸಹೋದರ ಶಿಕ್ಷಕನಾದ ನಂತರ ನಮಗೆ ಸಿಗುತ್ತಿದ್ದ ನೆರವು ನಿಂತಿದೆ. ನಮಗೂ ಸಹಾಯ ಮಾಡಬೇಕು’ ಎನ್ನುತ್ತಾರೆ ತುಮಕೂರಿನ ರಾಜಾಚಾರಿ.

ಕಮ್ಮಾರರ ಬೇಡಿಕೆಗಳು

  • ಕಮ್ಮಾರರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು

  • ಗ್ರಾಮ ಪಂಚಾಯಿತಿಯಿಂದ ಕುಲುಮೆಗೆ ಜಾಗ ಒದಗಿಸಬೇಕು

  • ವಸತಿಗೆ ಸರ್ಕಾರದಿಂದಲೇ ಜಾಗ ನೀಡಬೇಕು

  • ವಸತಿ ಯೋಜನೆಗಳಲ್ಲಿ ಕಮ್ಮಾರರನ್ನೂ ಪರಿಗಣಿಸಿ ಮನೆ ನೀಡಬೇಕು

  • ಕಮ್ಮಾರರ ಮಕ್ಕಳಿಗೆ ವಸತಿನಿಲಯಗಳಲ್ಲಿ ಅವಕಾಶ ಕಲ್ಪಿಸಬೇಕು

  • ಪ್ರತಿ ಊರಲ್ಲಿ ಕಮ್ಮಾರ ಕಲ್ಲಯ್ಯ ಸಮುದಾಯ ಭವನ ನಿರ್ಮಿಸಬೇಕು

ಕಮ್ಮಾರರಿಗೆ ಎಂದು ಯಾವುದೇ ಪ್ರತ್ಯೇಕ ಯೋಜನೆಗಳಿಲ್ಲ. ಅಸಂಘಟಿತ ಕಾರ್ಮಿಕರಿಗೆ ನೀಡುವ ಎಲ್ಲ ಸವಲತ್ತುಗಳನ್ನೂ ಅವರಿಗೂ ನೀಡಲಾಗುತ್ತಿದೆ.
–ಸಂತೋಷ್‌ ಲಾಡ್‌, ಕಾರ್ಮಿಕ ಸಚಿವ
ಕೋವಿಡ್‌ ಸಮಯದಲ್ಲಿ ಸಮಯದಲ್ಲಿ ಅಸಂಘಟಿತ ವಲಯದ ಕಾರ್ಮಿಕರಿಗೆ ₹5 ಸಾವಿರ ಪರಿಹಾರದ ಜತೆಗೆ ಆಹಾರದ ಕಿಟ್ ನೀಡಿದರು. ನಮ್ಮ ಕುಲುಮೆಗಳು ಬಂದ್‌ ಆದರೂ ಯಾವ ನೆರವೂ ಸಿಗಲಿಲ್ಲ.
--ಬಸವರಾಜ ಕಮ್ಮಾರ, ಹುನಗುಂದ ಕಮ್ಮಾರ ಸಂಘದ ಅಧ್ಯಕ್ಷ
ವಿಶ್ವಕರ್ಮರಲ್ಲಿ 41 ಉಪಜಾತಿಗಳಿದ್ದು, ಮೈಸೂರು ವಿವಿಯಿಂದ ಕುಲಶಾಸ್ತ್ರೀಯ ಅಧ್ಯಯನ ನಡೆಯುತ್ತಿದೆ. ಕಮ್ಮಾರರ ವಿಚಾರದಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳು ಕಂಡುಬಂದಿದ್ದು, ಪ್ರಸ್ತುತ 28 ಜಿಲ್ಲೆಗಳಲ್ಲಿ ಅಧ್ಯಯನ ಮುಗಿದಿದೆ. 2025ರಲ್ಲಿ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಲಿದೆ.
-ಕೃಷ್ಣಮೂರ್ತಿ, ಪ್ರಾಧ್ಯಾಪಕ, ಮೈಸೂರು ವಿವಿ
ಕಟ್ಟಿಗೆಯ ಚಕ್ಕಡಿಯಾದರೆ ಪ್ರತಿ ಹಂಗಾಮಿಗೂ ಸಣ್ಣಪುಟ್ಟ ಕೆಲಸಗಳು ಬರುತ್ತಿದ್ದವು. ಕಬ್ಬಿಣದ ಚಕ್ಕಡಿ ಸಿದ್ಧಗೊಂಡರೆ ಕನಿಷ್ಠ 50 ವರ್ಷ ಬಾಳಿಕೆ ಬರುತ್ತದೆ. ಹೀಗಾಗಿ, ಕುಡಗೋಲು, ಕೊಡಲಿ, ಕುಡ, ಟೇಬಲ್‌, ಕುರ್ಚಿ ಮುಂತಾದ ಸಣ್ಣಪುಟ್ಟ ಕೆಲಸಗಳೇ ನಮಗೆ ಜೀವನಾಧಾರ.
– ಸುನೀಲ ಕಂಬಾರ, ಚಚಡಿ

ಪೂರಕ ಮಾಹಿತಿ: ಚಂದ್ರಕಾಂತ ಮಸಾನಿ, ಬಸವರಾಜ್‌ ಸಂಪಳ್ಳಿ, ಸಂತೋಷ ಈ.ಚಿನಗುಡಿ, ಚಂದ್ರಹಾಸ ಹಿರೇಮಳಲಿ

ಕಲಬುರಗಿಯ ಬಂಬೂ ಬಜಾರ್‌ನಲ್ಲಿ ಚಕ್ಕಡಿಯ ಕಟ್ಟಿಗೆ ಗಾಲಿಗೆ ಹಳಿಜೋಡಿಸಲು ಬೆರಣಿ ಜೋಡಿಸುತ್ತಿರುವ ಕಮ್ಮಾರ –ಪ್ರಜಾವಾಣಿ ಚಿತ್ರ/ತಾಜುದ್ದೀನ್ ಆಜಾದ್‌
ಕಲಬುರಗಿಯ ಬಂಬೂ ಬಜಾರ್‌ನಲ್ಲಿ ಚಕ್ಕಡಿಯ ಕಟ್ಟಿಗೆ ಗಾಲಿಗೆ ಹಳಿಜೋಡಿಸಲು ಬೆರಣಿ ಜೋಡಿಸುತ್ತಿರುವ ಕಮ್ಮಾರ –ಪ್ರಜಾವಾಣಿ ಚಿತ್ರ/ತಾಜುದ್ದೀನ್ ಆಜಾದ್‌
ಕಲಬುರಗಿಯ ಬಂಬೂ ಬಜಾರ್‌ನಲ್ಲಿ ಕುಲುಮೆ ಕೆಲಸದಲ್ಲಿ ತೊಡಗಿರುವ ಕಾರ್ಮಿಕರು –ಪ್ರಜಾವಾಣಿ ಚಿತ್ರ/ತಾಜುದ್ದೀನ್ ಆಜಾದ್‌
ಕಲಬುರಗಿಯ ಬಂಬೂ ಬಜಾರ್‌ನಲ್ಲಿ ಕುಲುಮೆ ಕೆಲಸದಲ್ಲಿ ತೊಡಗಿರುವ ಕಾರ್ಮಿಕರು –ಪ್ರಜಾವಾಣಿ ಚಿತ್ರ/ತಾಜುದ್ದೀನ್ ಆಜಾದ್‌
ಕಲಬುರಗಿಯ ಬಂಬೂ ಬಜಾರ್‌ನಲ್ಲಿ ಕುಲುಮೆ ಕೆಲಸದಲ್ಲಿ ತೊಡಗಿರುವ ಕಮ್ಮಾರ – ಪ್ರಜಾವಾಣಿ ಚಿತ್ರ/ತಾಜುದ್ದೀನ್ ಆಜಾದ್‌
ಕಲಬುರಗಿಯ ಬಂಬೂ ಬಜಾರ್‌ನಲ್ಲಿ ಕುಲುಮೆ ಕೆಲಸದಲ್ಲಿ ತೊಡಗಿರುವ ಕಮ್ಮಾರ – ಪ್ರಜಾವಾಣಿ ಚಿತ್ರ/ತಾಜುದ್ದೀನ್ ಆಜಾದ್‌
ರಾಯಚೂರು ಕೃಷಿ ಎಂಜಿನಿಯರಿಂಗ್‌ ಕಾಲೇಜಿನ ಕೃಷಿ ಯಂತ್ರೋಪಕರಣಗಳ ಹಾಗೂ ತಾಂತ್ರಿಕ ವಿಭಾಗದಲ್ಲಿ ಇಡಲಾದ ಬಹು ಉಪಕರಣ ಅಳವಡಿಸುವ ಯಂತ್ರಗಳು
ರಾಯಚೂರು ಕೃಷಿ ಎಂಜಿನಿಯರಿಂಗ್‌ ಕಾಲೇಜಿನ ಕೃಷಿ ಯಂತ್ರೋಪಕರಣಗಳ ಹಾಗೂ ತಾಂತ್ರಿಕ ವಿಭಾಗದಲ್ಲಿ ಇಡಲಾದ ಬಹು ಉಪಕರಣ ಅಳವಡಿಸುವ ಯಂತ್ರಗಳು
 ಚಂದ್ರಶೇಖರ ಕಂಬಾರ 
 ಚಂದ್ರಶೇಖರ ಕಂಬಾರ 
ವಿಜಯಪುರದ ಸೋಲಾಪುರ ರಸ್ತೆ ಬದಿ ಕಬ್ಬಿಣವನ್ನು ಹದಗೊಳಿಸಿ ಬಡಿಯುತ್ತಿರುವ ಲೋಹರ್‌ ಸಮುದಾಯದವರು
–ಪ್ರಜಾವಾಣಿ ಚಿತ್ರ: ಸಂಜೀವ ಅಕ್ಕಿ
ವಿಜಯಪುರದ ಸೋಲಾಪುರ ರಸ್ತೆ ಬದಿ ಕಬ್ಬಿಣವನ್ನು ಹದಗೊಳಿಸಿ ಬಡಿಯುತ್ತಿರುವ ಲೋಹರ್‌ ಸಮುದಾಯದವರು –ಪ್ರಜಾವಾಣಿ ಚಿತ್ರ: ಸಂಜೀವ ಅಕ್ಕಿ
ವಿಜಯಪುರದ ಸೋಲಾಪುರ ರಸ್ತೆ ಬದಿ ಕಬ್ಬಿಣವನ್ನು ಹದಗೊಳಿಸಿ ಬಡಿಯುತ್ತಿರುವ ಲೋಹರ್‌ ಸಮುದಾಯದವರು
–ಪ್ರಜಾವಾಣಿ ಚಿತ್ರ: ಸಂಜೀವ ಅಕ್ಕಿ
ವಿಜಯಪುರದ ಸೋಲಾಪುರ ರಸ್ತೆ ಬದಿ ಕಬ್ಬಿಣವನ್ನು ಹದಗೊಳಿಸಿ ಬಡಿಯುತ್ತಿರುವ ಲೋಹರ್‌ ಸಮುದಾಯದವರು –ಪ್ರಜಾವಾಣಿ ಚಿತ್ರ: ಸಂಜೀವ ಅಕ್ಕಿ

Quote - ಪುಟ 1 ಕೋವಿಡ್‌ ಲಾಕ್‌ಡೌನ್‌ ಸಮಯದಲ್ಲಿ ಚಾಲಕರು ಆಟೊ ಡ್ರೈವರ್‌ಗಳು ಸವಿತಾ ಸಮಾಜ ಸೇರಿದಂತೆ ಅಸಂಘಟಿತ ವಲಯದ ಕಾರ್ಮಿಕರಿಗೆ ₹5 ಸಾವಿರ ಪರಿಹಾರದ ಜತೆಗೆ ಆಹಾರದ ಕಿಟ್ ನೀಡಿದರು. ನಮ್ಮ ಕುಲುಮೆಗಳು ಬಂದ್‌ ಆದರೂ ಯಾವ ನೆರವೂ ಸಿಗಲಿಲ್ಲ. ಬಸವರಾಜ ಕಮ್ಮಾರ ಹುನಗುಂದ ಕಮ್ಮಾರ ಸಂಘದ ಅಧ್ಯಕ್ಷ

Quote - ವಿಶ್ವಕರ್ಮರಲ್ಲಿ 41 ಉಪಜಾತಿಗಳಿದ್ದು ಮೈಸೂರು ವಿವಿಯಿಂದ ಕುಲಶಾಸ್ತ್ರೀಯ ಅಧ್ಯಯನ ನಡೆಯುತ್ತಿದೆ. ಕಮ್ಮಾರರ ವಿಚಾರದಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳು ಕಂಡುಬಂದಿದ್ದು ಪ್ರಸ್ತುತ 28 ಜಿಲ್ಲೆಗಳಲ್ಲಿ ಅಧ್ಯಯನ ಮುಗಿದಿದೆ. 2025ರಲ್ಲಿ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಲಿದೆ ಕೃಷ್ಣಮೂರ್ತಿ ಪ್ರಾಧ್ಯಾಪಕ ಮೈಸೂರು ವಿವಿ

Quote - ಕಟ್ಟಿಗೆಯ ಚಕ್ಕಡಿಯಾದರೆ ಪ್ರತಿ ಹಂಗಾಮಿಗೂ ಸಣ್ಣಪುಟ್ಟ ಕೆಲಸಗಳು ಬರುತ್ತಿದ್ದವು. ಕಬ್ಬಿಣದ ಚಕ್ಕಡಿ ಸಿದ್ಧಗೊಂಡರೆ ಕನಿಷ್ಠ 50 ವರ್ಷ ಬಾಳಿಕೆ ಬರುತ್ತದೆ. ಹೀಗಾಗಿ ಕುಡಗೋಲು ಕೊಡಲಿ ಕುಡ ಟೇಬಲ್‌ ಕುರ್ಚಿ ಮುಂತಾದ ಸಣ್ಣಪುಟ್ಟ ಕೆಲಸಗಳೇ ನಮಗೆ ಜೀವನಾಧಾರ. – ಸುನೀಲ ಕಂಬಾರ ಚಚಡಿ

Quote - ಕಟ್ಟಿಗೆ ಚಕ್ಕಡಿಯ ಒಂದು ಗಾಲಿ ಸಿದ್ಧಪಡಿಸಿದರೆ ₹3000 ಸಿಗುತ್ತಿತ್ತು. ಈಗ ಎಲ್ಲರೂ ಕಬ್ಬಿಣದ ಚಕ್ಕಡಿ ಟೈರ್‌ ಗಾಲಿ ಬಳಸುವುದರಿಂದ ಬಡಿಗರು– ಕಮ್ಮಾರರು ನಿರುದ್ಯೋಗಿ ಆಗಿದ್ದೇವೆ. ನಾನೀಗ ಪೀಠೋಪಕರಣ ಕೆಲಸ ನಂಬಿಕೊಂಡಿದ್ದೇನೆ – ಮಹಾರುದ್ರಪ್ಪ ಬಡಿಗೇರ ಕಟಕೋಳ

Quote - ಪುಟ 1 ಕಮ್ಮಾರರಿಗೆ ಎಂದು ಯಾವುದೇ ಪ್ರತ್ಯೇಕ ಯೋಜನೆಗಳಿಲ್ಲ. ಅಸಂಘಟಿತ ಕಾರ್ಮಿಕರಿಗೆ ನೀಡುವ ಎಲ್ಲ ಸವಲತ್ತುಗಳನ್ನೂ ಅವರಿಗೂ ನೀಡಲಾಗುತ್ತಿದೆ. ಕಾರ್ಡ್‌ ಹೊಂದಿದವರು ಸೌಲಭ್ಯ ಪಡೆಯುತ್ತಿದ್ದಾರೆ - ಸಂತೋಷ್‌ ಲಾಡ್‌ ಕಾರ್ಮಿಕ ಸಚಿವ

Quote - ವಿಶ್ವಕರ್ಮ ಅಭಿವೃದ್ಧಿ ನಿಗಮದಡಿ ಕಮ್ಮಾರರು ಸೇರಿದಂತೆ ಐದು ಕುಶಲಕರ್ಮಿ ಪಂಗಡಗಳು ಬರುತ್ತವೆ. ಮೊದಲ ಬಾರಿ ₹25 ಕೋಟಿ ನೀಡಲಾಗಿತ್ತು. ಈಚೆಗೆ ಅನುದಾನ ಕಡಿಮೆಯಾಗಿದೆ. – ಕೆ.ಪಿ.ನಂಜುಂಡಿ ವಿಶ್ವಕರ್ಮ ಸಮಾಜದ ಮುಖಂಡ

Cut-off box - ಕಮ್ಮಾರರ ಬೇಡಿಕೆಗಳು * ಕಮ್ಮಾರರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು * ಗ್ರಾಮ ಪಂಚಾಯಿತಿಯಿಂದ ಕುಲುಮೆಗೆ ಜಾಗ ಒದಗಿಸಬೇಕು * ವಸತಿಗೆ ಸರ್ಕಾರದಿಂದಲೇ ಜಾಗ ನೀಡಬೇಕು * ವಸತಿ ಯೋಜನೆಗಳಲ್ಲಿ ಕಮ್ಮಾರರನ್ನೂ ಪರಿಗಣಿಸಿ ಮನೆ ನೀಡಬೇಕು * ಕಮ್ಮಾರರ ಮಕ್ಕಳಿಗೆ ವಸತಿನಿಲಯಗಳಲ್ಲಿ ಅವಕಾಶ ಕಲ್ಪಿಸಬೇಕು * ಪ್ರತಿ ಊರಲ್ಲಿ ಕಮ್ಮಾರ ಕಲ್ಲಯ್ಯ ಸಮುದಾಯ ಭವನ ನಿರ್ಮಿಸಬೇಕು * ಕಮ್ಮಾರಿಕೆಗೆ ಸರ್ಕಾರದಿಂದ ಪ್ರೋತ್ಸಾಹ ಸಿಗಬೇಕು

Cut-off box - ಒಳಪುಟಕ್ಕೆ ಸಮುದಾಯಕ್ಕೆ ರಾಜಕೀಯ ಶಕ್ತಿಯಿಲ್ಲ: ಚಂದ್ರಶೇಖರ ಕಂಬಾರ ‘ಕಮ್ಮಾರ ಕಂಬಾರ ಪದವ್ಯತ್ಯಾಸವಷ್ಟೇ. ನಾವು ಉತ್ತರ ಕರ್ನಾಟಕದ ಕಮ್ಮಾರರು. ಘೋಡಗೇರಿಯಲ್ಲಿ ನಮ್ಮ ತಂದೆ ನಮ್ಮ ಅಣ್ಣಂದಿರು ಕುಲುಮೆ ಕೆಲಸ ಮಾಡುತ್ತಿದ್ದರು. ಬಾಲ್ಯದಲ್ಲಿ ನನಗೆ ಕುಲುಮೆ ಕೆಲಸ ಕಲಿಯಲಾಗಲಿಲ್ಲ ಹೀಗಾಗಿ ನನ್ನನ್ನು ದನ ಮೇಯಿಸಲು ಕಳಿಸುತ್ತಿದ್ದರು. ನಮ್ಮ ಕುಲಕಸುಬು ಬಹಳ ಹೆಸರು ಮಾಡಿಲ್ಲ ಕಸುಬಿನ ಬಗ್ಗೆ ದೈವದ ಬಗ್ಗೆ ನಂಬಿಕೆ ಇದೆ. ಕಮ್ಮಾರಿಕೆಗೆ ಬೇಡಿಕೆ ಕಡಿಮೆಯಾಗಿರೋದಕ್ಕೆ ಬೇಸರವಿದೆ. ಕಮ್ಮಾರನೂ ಕಾಲದ ಜತೆ ಓಡಲೇಬೇಕಲ್ಲ. ಆದರೆ ನಮ್ಮ ಸಮುದಾಯಕ್ಕೆ ಭಂಡತನವಿಲ್ಲ. ಹೀಗಾಗಿ ನಮಗೆ ರಾಜಕೀಯ ಶಕ್ತಿ ಇಲ್ಲ. ತಾವಾಯ್ತು ತಮ್ಮ ಪಾಡಾಯ್ತು ಎಂದು ಇದ್ದು ಬಿಡುತ್ತಾರೆ. ಕೆಲಸದ ಬಗ್ಗೆ ಹೆಮ್ಮೆ ಇದೆ. ನಾನು ಕಂಡ ಹಾಗೇ ಕಮ್ಮಾರರಲ್ಲಿ ಭೇದವಿಲ್ಲ. ಆದರೆ ಆರ್ಥಿಕ ತಾರತಮ್ಯ ಇದೆ. ನಾವೆಲ್ಲರೂ ಒಂದೇ. ಮನುಷ್ಯ ಜಾತ್ಯತೀತನಾಗಿರಬೇಕು. ಜಾತೀಯತೆ ಮಾಡಬಾರದು’ ಎಂದು ಸಾಹಿತಿ ಚಂದ್ರಶೇಖರ ಕಂಬಾರ ಅಭಿಪ್ರಾಯಪಟ್ಟರು.

Cut-off box - ಪ್ರತ್ಯೇಕ ಕಮ್ಮಾರ ಅಭಿವೃದ್ಧಿ ನಿಗಮದ ಬೇಡಿಕೆ ಕಮ್ಮಾರರನ್ನು ವಿಶ್ವಕರ್ಮ ಉಪಜಾತಿಗಳಲ್ಲಿ ಗುರುತಿಸಲಾಗಿದೆ. ವಿಶ್ವಕರ್ಮರಲ್ಲಿ 41 ಉಪಜಾತಿಗಳಿವೆ. ಅವರ ಅಭಿವೃದ್ಧಿಗಾಗಿ 2014ರಲ್ಲಿ ಸಿದ್ದರಾಮಯ್ಯನವರು ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ ಸ್ಥಾಪಿಸಿದ್ದಾರೆ. ಆದರೆ ವಿಶ್ವಕರ್ಮರಲ್ಲೇ ತಮ್ಮನ್ನು ಕಡೆಗಣಿಸಲಾಗುತ್ತಿದ್ದು ಪ್ರತ್ಯೇಕ ಕಮ್ಮಾರ ಅಭಿವೃದ್ಧಿ ನಿಗಮ ರಚಿಸಿ ಎಂಬ ಬೇಡಿಕೆಯನ್ನು ಕಮ್ಮಾರರು ಮುಂದಿಟ್ಟಿದ್ದಾರೆ.

Cut-off box - ಒಳಪುಟಕ್ಕೆ.. ಜಾತಿ ಪ್ರಮಾಣಪತ್ರದಲ್ಲಿ ಗೊಂದಲ! ಹಿಂದೆ ಮದ್ರಾಸ್‌ ಪ್ರಾಂತ್ಯಕ್ಕೆ ಸೇರಿದ್ದರಿಂದ ಚಾಮರಾಜನಗರದ ಕೊಳ್ಳೇಗಾಲ ಉಡುಪಿ ಜಿಲ್ಲೆಯ ಸುಳ್ಯದಲ್ಲಿ ಕಮ್ಮಾರರಿಗೆ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರ ಸಿಗುತ್ತಿದೆ. ಉತ್ತರ ಕರ್ನಾಟಕದಲ್ಲಿ ಮಹಾರಾಷ್ಟ್ರದಿಂದ ಬಂದವರು ಹೆಚ್ಚಿರುವುದರಿಂದ ಜಾತಿ ಕಾಲಂನಲ್ಲಿ ಹಿಂದೂ ಮರಾಠ ಹಿಂದೂ ಕ್ಷತ್ರೀಯ ಹಿಂದೂ ಆರೇರ ಹಿಂದೂ ಲಿಂಗಾಯತ ಎಂದು ಇದ್ದಲ್ಲಿ 3ಬಿಗೆ ಸೇರಿಸಲಾಗಿದೆ. ಇನ್ನು ಕಲಬುರಗಿಯಲ್ಲಿರುವ ಕಮ್ಮಾರರಿಗೆ ಪ್ರವರ್ಗ–1ರ ಪ್ರಮಾಣ ಪತ್ರ ನೀಡಲಾಗಿದೆ. ‘ಹಿಂದೂ ಕಮ್ಮಾರ’ ಎಂದು ನಮೂದಿಸಿದ್ದರೆ ಮಾತ್ರ 2ಎ ನೀಡುತ್ತಾರೆ. 2ಎ ಪ್ರಮಾಣಪತ್ರ ಇದ್ದರೆ ಮಾತ್ರ ವಿಶ್ವಕರ್ಮ ಅಭಿವೃದ್ಧಿ ನಿಗಮದ ಪ್ರಯೋಜನ ಸಿಗುತ್ತದೆ. ಇನ್ನು ಪಿಎಂ ವಿಶ್ವಕರ್ಮ ಯೋಜನೆ ಸೌಲಭ್ಯ ಪಡೆಯಲು ಯೋಜನಾ ವರದಿ ನೀಡಬೇಕು. ಅದರಲ್ಲಿ ಕಬ್ಬಿಣವನ್ನು ಎಷ್ಟು ತಾಪಮಾನದಲ್ಲಿ ಕಾಯಿಸುತ್ತೀರಿ? ಇದ್ದಿಲು ಎಷ್ಟು ಹಾಕುತ್ತೀರಿ... ಎಂಬಿತ್ಯಾದಿ ಪ್ರಶ್ನೆಗಳಿವೆ. ಇದೆಲ್ಲಾ ಗೊಂದಲದಿಂದಾಗಿ ಬಾಗಲಕೋಟೆ ಜಿಲ್ಲೆಯಲ್ಲಿ ಯಾರೂ ಪ್ರಯೋಜನ ಪಡೆದಿಲ್ಲ ಎಂದು ಮುತ್ತಣ್ಣ ಭರಮಪ್ಪ ಕಂಬಾರ ವಿವರಿಸಿದರು.

Cut-off box - ಕೃಷಿ ವಿವಿಯಲ್ಲೂ ಇಲ್ಲ ಕಮ್ಮಾರಿಕೆ ಪಾಠ! ರಾಯಚೂರು ಧಾರವಾಡ ಶಿವಮೊಗ್ಗ ಹಾಗೂ ಬೆಂಗಳೂರು ಹೀಗೆ ರಾಜ್ಯದಲ್ಲಿ ನಾಲ್ಕು ಕೃಷಿ ವಿಶ್ವವಿದ್ಯಾಲಗಳು ಇವೆ. ‘ರಾಜ್ಯದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯಗಳಲ್ಲಿ ಕಮ್ಮಾರಿಕೆ ಪಾಠ ಬೋಧನೆ ಇರುವುದಿಲ್ಲ. ಆದರೆ ಕೃಷಿ ಪರಿಕರಗಳ ಬಗ್ಗೆ ಪ್ರಾಥಮಿಕ ಹಂತದಲ್ಲಿ ವಿದ್ಯಾರ್ಥಿಗಳಿಗೆ ಮಾಹಿತಿ ಕೊಡಲಾಗುತ್ತಿದೆ. ಸುಧಾರಿತ ಕೃಷಿ ಉಪಕರಣಗಳ ಪರಿಚಯಿಸುವ ದಿಸೆಯಲ್ಲಿ ರಾಜ್ಯದಲ್ಲಿ ಎರಡು ಕೃಷಿ ಎಂಜಿನಿಯರಿಂಗ್‌ ಕಾಲೇಜುಗಳು ಕಾರ್ಯನಿರ್ವಹಿಸುತ್ತಿವೆ’ ಎಂದು ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಕುಲಪತಿ ಡಾ.ಎಂ.ಹನುಮಂತಪ್ಪ ಹೇಳುತ್ತಾರೆ. ಕೃಷಿ ಉಪಕರಣಗಳ ನಿರಂತರ ಸಂಶೋಧನೆ: ಆಧುನಿಕತೆಯ ಪರಿಣಾಮ ಕಮ್ಮಾರಿಕೆಯ ವ್ಯಾಪ್ತಿಯೇ ವಿಸ್ತೃತಗೊಂಡಿದೆ. ಕೃಷಿ ಕಾರ್ಮಿಕರ ಕೊರತೆ ಇರುವ ಇಂದಿನ ಕಾಲದಲ್ಲಿ ಒಂದೇ ಉಪಕರಣದಿಂದ ಹಲವು ಕಾರ್ಯಗಳನ್ನು ಮಾಡಿಕೊಳ್ಳುವ ದಿನಗಳು ಬಂದಿವೆ. ಸಾಂಪ್ರದಾಯಿಕ ಉಪಕರಣಗಳು ಯಂತ್ರಗಳ ಸ್ವರೂಪ ಪಡೆದುಕೊಂಡಿವೆ. ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯವು 2009ರಿಂದ 2023ರವರೆಗೆ 46 ಕೃಷಿ ಉಪಕರಣಗಳನ್ನು ಅಭಿವೃದ್ಧಿ ಪಡಿಸಿದೆ. ಇನ್ನುಳಿದ ವಿಶ್ವವಿದ್ಯಾಲಯಗಳು ಹೊಸ ಉಪಕರಣಗಳನ್ನು ಆವಿಷ್ಕಾರ ಮಾಡಿವೆ. ‘ಕೃಷಿ ಎಂಜಿನಿಯರಿಂಗ್‌ ಸಂಶೋಧನೆಯೊಂದಿಗೆ ವ್ಯವಹರಿಸುತ್ತದೆ. ಕೊಯ್ಲು ಹಾಗೂ ಕೃಷಿಯ ಹಲವು ಪ್ರಕಾರದ ಯಂತ್ರೋಪಕರಣಗಳನ್ನು ಅಭಿವೃದ್ಧಿಪಡಿಸುವುದಕ್ಕೆ ಒತ್ತು ನೀಡಲಾಗಿದೆ. ಆಧುನಿಕ ವಿಧಾನದ ಉಪಕರಣಗಳ ಮೂಲಕ ಬೀಜಗಳ ವಿಂಗಡಣೆ ಮತ್ತು ಪ್ರತ್ಯೇಕತೆ ಸುಲಭ. ಸಾಂಪ್ರದಾಯಿಕ ಬಡಿಗತನ ಕಮ್ಮಾರಿಕೆ ಒಂದು ಹಂತಕ್ಕೆ ಸೀಮಿತವಾಗಿದೆ. ಆದರೆ ಹೊಸ ತಂತ್ರಜ್ಞಾನದ ಕೃಷಿ ಉಪಕರಣಗಳು ಕೃಷಿಕರಿಗೆ ಹೆಚ್ಚು ಅನುಕೂಲ ಕಲ್ಪಿಸಿದೆ’ ಎನ್ನುತ್ತಾರೆ ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕ ಡಿ.ಕೆ.ದೇಸಾಯಿ.

Cut-off box - ಅಗತ್ಯವಿದ್ದರೆ ಕಮ್ಮಾರರ ಶಾಲೆ ಎಂದರೇನು? ‘ಎಲ್ಲೂ ಮಣಿಯದ ಕಬ್ಬಿಣ ಕಮ್ಮಾರ ಶಾಲೆಯಲ್ಲಿ ಮಣಿಯುತ್ತದೆ’ ಎಂಬ ಗಾದೆ ಮಾತು ಇದೆ. ಬುದ್ಧಿ ಮಾತು ಕೇಳದವರಿಗೆ ಹೇಗೆ ಬುದ್ಧಿ ಕಲಿಸಬೇಕು ಎಂಬರ್ಥದಲ್ಲಿ ಈ ಗಾದೆ ಈಗಲೂ ಜನಜನಿತ. ಕಮ್ಮಾರರು ಕುಲುಮೆ ಕೆಲಸ ಮಾಡುತ್ತಿದ್ದ ಸ್ಥಳಗಳನ್ನೇ ‘ಕಮ್ಮಾರ ಶಾಲೆ’ ಎಂದು ಕರೆಯುವುದು ಹಳ್ಳಿಗರ ರೂಢಿ. ಅನಾದಿ ಕಾಲದಿಂದಲೂ ಕಮ್ಮಾರರ ಕುಲುಮೆಗಳು ವೃತ್ತಿ ಕಲಿಕಾ ಕೇಂದ್ರಗಳೂ ಆಗಿದ್ದವು. ಕೃಷಿ ಸಲಕರಣೆ ಕಬ್ಬಿಣದ ಸಾಮಗ್ರಿ ಗೃಹೋಪಯೋಗಿ ವಸ್ತುಗಳು ಕಬ್ಬಿಣದ ಕಂಬಗಳು ಆಲಂಕಾರಿಕ ವಸ್ತುಗಳನ್ನು ಸಿದ್ಧಪಡಿಸಬೇಕೆಂದರೆ ಕುಲುಮೆಯಲ್ಲಿ ಪಳಗುವುದು ಅನಿವಾರ್ಯ ಆಗಿತ್ತು. ಹೀಗಾಗಿ ಈ ಕುಲುಮೆಗಳನ್ನು ಇತಿಹಾಸದುದ್ದಕ್ಕೂ ಶಾಲೆಗಳು ಎಂದೇ ಪರಿಗಣಿಸಲಾಗಿತ್ತು.

Cut-off box - ಸರ್ಕಾರಿ ನೌಕರರ ಕುಟುಂಬಸ್ಥರಿಗಿಲ್ಲ ಸೌಲಭ್ಯ! ಪಿಎಂ ವಿಶ್ವಕರ್ಮ ಯೋಜನೆ ವ್ಯಾಪ್ತಿಗೆ ಬರುವ 18 ವರ್ಗದ ಕುಶಲಕರ್ಮಿಗಳಂತೆ ಕಮ್ಮಾರರಿಗೂ ನೆರವು ದೊರೆಯುತ್ತಿದೆ. ಕೇಂದ್ರ ಸರ್ಕಾರ ₹13 ಸಾವಿರ ಕೋಟಿ ಮೀಸಲಿಟ್ಟಿದೆ. ಈ ಯೋಜನೆಯಡಿ ಕೌಶಲ ಅಭಿವೃದ್ಧಿ ತರಬೇತಿ ತಾಂತ್ರಿಕ ಜ್ಞಾನ ಹೊಸ ಉಪಕರಣ ಹಾಗೂ ಖಾತರಿ ರಹಿತ ಬ್ಯಾಂಕ್‌ ಸಾಲ ಸೌಲಭ್ಯ ದೊರೆಯುತ್ತಿದೆ. ಹಿಂದುಳಿದ ವರ್ಗಗಳಿಗೆ ಸೇರಿದ 30 ಲಕ್ಷಕ್ಕೂ ಅಧಿಕ ಕುಟುಂಬಗಳ ಜತೆಗೆ ರಾಜ್ಯದ ಕಮ್ಮಾರರೂ ಪ್ರಯೋಜನ ಪಡೆದಿದ್ದಾರೆ.  ‘ಮೊದಲು ಟೆಂಟ್‌ ಹಾಕಿಕೊಂಡು ಕೆಲಸ ಮಾಡುತ್ತಿದ್ದೆವು. ಪಿಎಂ ವಿಶ್ವಕರ್ಮ ಯೋಜನೆ ಜಾರಿಯಾದ ನಂತರ ₹2 ಲಕ್ಷ ಸಾಲ ಪಡೆದು ಸ್ವಂತ ಶೆಡ್‌ ನಿರ್ಮಿಸಿಕೊಂಡಿದ್ದೇವೆ. 30 ಕಂತುಗಳಲ್ಲಿ ಸಾಲ ತೀರಿಸಿದ್ದೇವೆ’ ಎನ್ನುತ್ತಾರೆ ಬೆಂಗಳೂರು ಗ್ರಾಮಾಂತರದ ಕಮ್ಮಾರ ಕಾಳಪ್ಪ.  ಆದರೆ ಸರ್ಕಾರಿ ನೌಕರ ಹಾಗೂ ಅವರ ಕುಟುಂಬದ ಸದಸ್ಯರಿಗೆ ಸೌಲಭ್ಯ ಸಿಗುತ್ತಿಲ್ಲ. ‘ಸಹೋದರ ಶಿಕ್ಷಕನಾದ ನಂತರ ನಮಗೆ ಸಿಗುತ್ತಿದ್ದ ನೆರವು ನಿಂತಿದೆ. ನಮಗೂ ಸಹಾಯ ಮಾಡಬೇಕು’ ಎನ್ನುತ್ತಾರೆ ತುಮಕೂರಿನ ರಾಜಾಚಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT