ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾರಿಗ್ಹೇಳೋಣಾ ನನ್ನ ಪ್ರಾಬ್ಲೆಮ್ಮು?

Last Updated 17 ಜನವರಿ 2020, 19:30 IST
ಅಕ್ಷರ ಗಾತ್ರ

ಬೆಳ್ಳಂಬೆಳಿಗ್ಗೆ ಐದು ಗಂಟೆಗೇ ಅಮ್ಮ ಹಾಗೂ ಮನೆಯ ಹೆಣ್ಣು ಮಕ್ಕಳೆಲ್ಲಾ ಸಾಲಾಗಿ ಎದ್ದು, ‘ಚಂಬು ತಗಂಡು ಹೋಗೋಣ ಎದ್ದೇಳ್ರೇ, ಬೆಳಕು ಹರಿಯುತ್ತೆ, ಮತ್ತೆ ಗಂಡುಮಕ್ಳು ಹೊರಡ್ತಾರೆ’ ಎಂದು ಹೊರಡಿಸುತ್ತಿದ್ದರು. ರಾತ್ರಿ ಮಲಗುವ ಮೊದಲೇ ಎಂಟತ್ತು ಚರಿಗೆಗಳಲ್ಲಿ ನೀರು ತುಂಬಿಸಿ ಹೊರಗೆ ಇಟ್ಟುಬಿಡುತ್ತಿದ್ದರು.

ಮನೆ ಕಟ್ಟಿಸಬೇಕಾದರೆ ನಮ್ಮ ಯಜಮಾನರಿಗೆ ಸ್ಟ್ರಿಕ್ಟ್ ಆಗಿ ಹೇಳಿಬಿಟ್ಟಿದ್ದೆ, ‘ನೋಡ್ರೀ ಬಾಡಿಗೆ ಮನೆಯ ಚಿಕ್ಕ ಚಿಕ್ಕ ಬಾತ್‌ರೂಮ್, ಟಾಯ್ಲೆಟ್ಟುಗಳ ಸಹವಾಸ ಸಾಕಾಗಿದೆ. ಈಗಲಾದರೂ ಪ್ಲಾನ್ ಮಾಡಿ ಎಲ್ಲಾ ಮೂರು ಕೋಣೆಗಳಿಗೂ ಅಟ್ಯಾಚ್ಡ್ ಬಾತ್‌ರೂಮು, ಜೊತೆಗೆ ಒಂದು ಕಾಮನ್ ಬಾತ್ ರೂಮು, ಹಿಂದುಗಡೆ ಕೆಲಸದವರಿಗೆ ಇಂಡಿಯನ್ ಸ್ಟೈಲಿನ ಬಾತ್ ರೂಮು, ಮತ್ತೆ ಫಂಕ್ಷನ್ ಗಿಂಕ್ಷನ್ ಆದ್ರೆ ಜನ ಬಂದಾಗ ಇರಲಿ ಅಂತಾ ಟೆರೇಸ್ ಮೇಲೊಂದು ಬೇಕೇ ಬೇಕು’ ಅಂತಾ. ‘ಆಯ್ತು ತಾಯೀ, ಒಂದು ರೂಮು ಕಡಿಮೆಯಾದರೂ ಪರವಾಗಿಲ್ಲ, ಬಚ್ಚಲು ಮನೆ ಮಾತ್ರ ಕಡಿಮೆ ಆಗದ ಹಾಗೆ ಪ್ಲಾನ್ ಹಾಕಿಸುತ್ತೇನೆ ಬಿಡು’ ಎಂದು ನಾಟಕೀಯವಾಗಿ ಕೈಮುಗಿದಿದ್ದರು. ಹೀಗೆ ಮನೆಯಲ್ಲಿ ಕೋಣೆಗಳಿಗಿಂತ ಹೆಚ್ಚಾಗಿ ಬಚ್ಚಲುಕೋಣೆಗಳೇ ಹೆಚ್ಚಿ ಈಗ ಅವುಗಳ ಸ್ವಚ್ಛತೆಯನ್ನು ನಿಭಾಯಿಸುವ ಹೊತ್ತಿಗೆ ಹುಚ್ಚಿಯಾಗುವ ಹಾಗಾಗಿದೆ ನನ್ನ ಸರದಿ. ಮಾಡಿದ್ದುಣ್ಣೋ ಮಹಾರಾಯಾ ಅನ್ನುವ ಹಾಗೆ ಅದಕ್ಕಾಗಿಯೇ ಕೆಲಸದವಳಿಗೆ ತಿಂಗಳಿಗೆ ಆಕೆ ಕೇಳಿದಷ್ಟು ಪಗಾರ ಇಡುವ ಪರಿಸ್ಥಿತಿ.

ನಾನು ಹೀಗೆ ಕಟ್ಟಿಸಬೇಕು ಎನ್ನುವ ನನ್ನ ಆಸೆಯ ಹಿಂದೆ ನನ್ನದೇ ಆದ ಕೆಲವು ಕಾರಣಗಳಿವೆ, ಮಾಸದ ಅನುಭವಗಳಿವೆ. ಚಿಕ್ಕವಳಿದ್ದಾಗ ನನಗೆ ಅಮ್ಮನ ತವರುಮನೆ ಹಳ್ಳಿಗೆ ಹೋಗುವುದೆಂದರೆ ತುಂಬಾ ಅಲರ್ಜಿ. ತಪ್ಪು ತಿಳಿಯಬೇಡಿ, ಹಳ್ಳಿ ಅಂದರೆ ನನಗೂ ಇಷ್ಟವೇ. ಆದರೆ ಅಲ್ಲಿಯ ಓಪನ್ ಬಚ್ಚಲು ಹಾಗೂ ಬಯಲು ಶೌಚಾಲಯದ್ದೇ ಸಮಸ್ಯೆ. ಹಾಗಾಗಿ ಬರುವುದಿಲ್ಲಾ ಎಂದು ರಚ್ಚೆ ಹಿಡಿಯುತ್ತಿದ್ದೆ. ಅಮ್ಮ ಎರಡೇಟು ಬಿಟ್ಟು ಕರೆದುಕೊಂಡು ಹೋಗುತ್ತಿದ್ದಳು. ಮುಖ ಧುಮ್ಮಿಸಿಕೊಂಡೇ ನನ್ನ ಸವಾರಿ ಚಿತ್ತೈಸುತ್ತಿತ್ತು.

ಬೆಳ್ಳಂಬೆಳಿಗ್ಗೆ ಐದು ಗಂಟೆಗೇ ಅಮ್ಮ ಹಾಗೂ ಮನೆಯ ಹೆಣ್ಣು ಮಕ್ಕಳೆಲ್ಲಾ ಸಾಲಾಗಿ ಎದ್ದು, ‘ಚಂಬು ತಗಂಡು ಹೋಗೋಣ ಎದ್ದೇಳ್ರೇ, ಬೆಳಕು ಹರಿಯುತ್ತೆ, ಮತ್ತೆ ಗಂಡುಮಕ್ಳು ಹೊರಡ್ತಾರೆ’ ಎಂದು ಹೊರಡಿಸುತ್ತಿದ್ದರು. ರಾತ್ರಿ ಮಲಗುವ ಮೊದಲೇ ಎಂಟತ್ತು ಚರಿಗೆಗಳಲ್ಲಿ ನೀರು ತುಂಬಿಸಿ ಹೊರಗೆ ಇಟ್ಟುಬಿಡುತ್ತಿದ್ದರು. ಎಂಟು ಗಂಟೆಗೆ ಮೊದಲು ಎದ್ದೇ ರೂಢಿ ಇರದ ನನಗೆ ಇದೊಂದು ದೊಡ್ಡ ಹಿಂಸೆ. ಕಣ್ಣುಜ್ಜಿಕೊಳ್ಳುತ್ತಾ ಅವರ ಹಿಂದೆ ಹೋಗುತ್ತಿದ್ದೆ. ಕತ್ತಲಿನಲ್ಲಿ ಒಂದು ಟಾರ್ಚ್‌ ಹಿಡಿದು, ಅಲ್ಲೆಲ್ಲೋ ಕಣದ ಪೊದೆಯ ಹಿಂದೆ ಎಲ್ಲರೂ ಸಾಲಾಗಿ ಸಂಸಾರದ, ಮನೆಯ ವಿಷಯ ಹರಟುತ್ತಾ ಕುಳಿತುಕೊಳ್ಳುತ್ತಿದ್ದರು. ಜೊತೆಗೆ ನಾಯಿ, ಹಂದಿ, ಹುಳ, ಹುಪ್ಪಡಿ ಓಡಿಸಲು ಒಂದು ಕಟ್ಟಿಗೆಯಂತಹುದನ್ನು ಹಿಡಿದಿರುತ್ತಿದ್ದರು. ಕಸ, ಕಡ್ಡಿ, ಕಲ್ಲು, ಮುಳ್ಳು, ಇರುವೆ ಗುದ್ದು ಎಲ್ಲವೂ ಸಾಮಾನ್ಯ ವಿಷಯ ಅವರಿಗೆ. ಮೊದಲೇ ನಾಚಿಕೆ ಸ್ವಭಾವದ ನನಗೆ ಒಂದು ರೀತಿಯ ಮುಜುಗರ. ಎಲ್ಲರಿಗಿಂತ ದೂರ ಹೋಗಿ ಒಂದೆಡೆ ಮರೆಯಲ್ಲಿ ಕುಳಿತುಕೊಳ್ಳುತ್ತಿದ್ದೆ. ಕುಳಿತುಕೊಳ್ಳುವುದೇನೋ ಸರಿ, ಆದರೆ ಬರಬೇಕಲ್ಲ, ಏನೇ ತಿಣುಕಿದರೂ, ಒತ್ತಡ ಹಾಕಿದರೂ ಊಹೂ.. ಒಂದು ರೀತಿಯ ಹಿಂಸೆ. ಕೆಲವೊಮ್ಮೆ ‘ನನಗೇನೂ ಬಂದಿಲ್ಲಾ, ನೀವೆಲ್ಲಾ ಹೋಗಿ’ ಎಂದು ತಪ್ಪಿಸಿಕೊಂಡದ್ದಿದೆ.

ಆದರೆ ರಾತ್ರಿ ಹೊರಬರುವ ಸುಗಂಧ ಎಲ್ಲರನ್ನೂ ಉಸಿರುಗಟ್ಟುವಂತೆ ಮಾಡಿ, ನನ್ನನ್ನು ಸಿಕ್ಕಿಹಾಕಿಸಿ ಮುಂಜಾನೆ ಎಳೆದೊಯ್ಯುವಂತೆ ಮಾಡುತ್ತಿತ್ತು. ಒಂದು ವಾರ ಹಳ್ಳಿಯಲ್ಲಿದ್ದರೆ ಒಂದೋ, ಎರಡೋ ಸಲ ಹೋಗಿದ್ದು ಅಷ್ಟೇ. ಜೊತೆಗೆ ಆ ಒಂದು ಪುಟ್ಟ ಚರಿಗಿ ನೀರು ಎತ್ತಲಗೂ ಸಾಲುತ್ತಿರಲಿಲ್ಲ. ಕೊನೆಗೆ ಮಾಮಿದೋ, ಕಾಕಿದೋ ತೊಗೊಂಡು ಖಾಲಿಮಾಡಿ ಬಿಡುತ್ತಿದ್ದೆ.

ಇನ್ನು ಬಚ್ಚಲಿನದು ಮತ್ತೊಂದು ರೀತಿಯ ಸಮಸ್ಯೆ. ದೊಡ್ಡ ಅಡುಗೆ ಮನೆಯ ಮೂಲೆಯಲ್ಲಿ ಆರಡಿ ಎತ್ತರದ ಗೋಡೆಯಿಂದ ಮರೆಯಾದ, ಬಾಗಿಲು ಸಹ ಇಲ್ಲದೆ, ಒಂದು ಕರ್ಟನ್ ತರಹದ ಬಟ್ಟೆಯಿಂದ ಮರೆ ಮಾಡಿದ ಕೋಣೆ ಅದು. ಅದರಲ್ಲಿ ಸ್ನಾನಕ್ಕೆ ಹೋಗಲು ಗೋಳಾಡುತ್ತಿದ್ದೆ. ಎಷ್ಟು ಹೇಳಿದರೂ ಕೇಳದೆ, ಒಮ್ಮೊಮ್ಮೆ ಸೀದಾ ಕರ್ಟನ್ನು ಸರಿಸಿ ಬೆನ್ನುಜ್ಜುತ್ತೇನೆಂದು ಬರುವ ಅಜ್ಜಿಯಂದಿರು, ‘ಅಕ್ಕಾ ಸ್ನಾನ ಆಯ್ತಾ, ಆಟಕ್ಕೆ ಬರ‍್ತೀಯಾ?’ ಅಂತಾ ಕೂಗುತ್ತಾ ಬಂದು ಕರ್ಟನ್ನೊಳಗೆ ಇಣುಕಿ ಕೇಳುತ್ತಿದ್ದ ಮನೆಯ ಪುಟ್ಟ ಮಕ್ಕಳು, ನನ್ನ ಸಿಟ್ಟಿಗೆ ಮತ್ತಷ್ಟು ಅರ್ಜ್ಯ ಹೊಯ್ಯುತ್ತಿದ್ದರು. ಹಾಗಾಗಿ ಬಾಗಿಲಿಗೆ ಅಮ್ಮನನ್ನು ನಿಲ್ಲಿಸಿ, ‘ಯಾರೂ ಬರದ ಹಾಗೆ ನೋಡಿಕೊಂಡಿರು’ ಅಂತಾ ಹೇಳಿ ಜಳಕಕ್ಕಿಳಿಯುತ್ತಿದ್ದೆ. ಒಮ್ಮೊಮ್ಮೆ ಮರೆತು ಅಮ್ಮ ಯಾರನ್ನಾದರೂ ಮಾತನಾಡಿಸುತ್ತಾ ಹೋಗಿಬಿಡುತ್ತಿದ್ದಳು. ಏನಾದರೂ ಬೇಕೆಂದು ‘ಅಮ್ಮಾ’ ಎಂದು ಕೂಗಿದರೆ ಅಲ್ಲೇ ಅಡುಗೆ ಮನೆಯಲ್ಲಿರುತ್ತಿದ್ದ ಯಾರಾದರೊಬ್ಬರು ಕರ್ಟನ್ ಸರಿಸಿಕೊಂಡು ಬಂದು ಕೊಟ್ಟಾಗ, ನಾಚಿಕೆಯಿಂದ ಮೈ ಹಿಡಿಯಾಗುತ್ತಿತ್ತು. ಹೊರ ಬಂದ ಮೇಲೆ ಅಮ್ಮನ ಜೊತೆ ಮಹಾಭಾರತವೇ. ‘ಅಯ್ಯೋ, ನಾವು ಹೆಂಗಸ್ರೇ, ತಗಾ’ ಎಂದು ಎಲ್ರೂ ನಗುವಾಗ ಕಣ್ತುಂಬ ನೀರು. ಇನ್ನೊಮ್ಮೆ ಬಂದ್ರೆ ಕೇಳು ನಿಮ್ಮೂರಿಗೆ ಎಂದು ಕೋಪದಿಂದ ಹಲ್ಲು ಕಡಿಯುತ್ತಿದ್ದೆ.

ಹಾಗಂತ ನಮ್ಮ ಅಪ್ಪನ ಮನೆಯ ಬಚ್ಚಲು ಮನೆಯೇನೂ ಹೈ-ಫೈ ಇರಲಿಲ್ಲ. ಅರ್ಧ ಶತಮಾನ ಕಳೆದ ಬಚ್ಚಲ ಬಾಗಿಲು ನೆಪಕ್ಕಷ್ಟೆ ಇತ್ತು. ಕೆಳಗೆ ಒಂದು ಅಡಿ, ಈಗಿನ ಹುಡುಗಿಯರ ಜಿಗ್ ಜಾಗ್ ಟಾಪ್ ಡಿಸೈನಿನ ರೀತಿಯಲ್ಲಿ ಗೆದ್ದಲು ತಿಂದಿತ್ತು, ನಡುವೆ ಅಲ್ಲಲ್ಲಿ ಕ್ರಾಪ್ ಟಾಪ್‌ನ ಹಾಗೆ ಸಿಳುಕು ಬಿಟ್ಟಿತ್ತು. ಚಿಲಕಗಳು ಮಾಯವಾಗಿ ದಶಕಗಳೇ ಉರುಳಿದ್ದವೇನೋ! ಹಿಡಿಕೆಯಿಂದ ಬಾಗಿಲಿನ ಚೌಕಟ್ಟಿಗೆ ಹೊಡೆದ ಮೊಳೆಗೆ ದಾರವನ್ನೋ, ತಂತಿಯನ್ನೋ ಕಟ್ಟಿಕೊಂಡು ಸ್ನಾನಕ್ಕೆ ಇಳಿಯಬೇಕಿತ್ತು. ಮೇಲೆ ಅಟ್ಟಕ್ಕೆ ಶೀಟು ಹೊದ್ದಿಸಿತ್ತು. ಅದೂ ನೀರೊಲೆಯ ಉರಿಗೆ ಕಪ್ಪಾಗಿ ಹೋಗಿತ್ತು. ತೊಲೆಗೆ ಹಾವಿನಂತೆ ಸುತ್ತಿಬಂದು, ತಲೆಕೆಳಗಾಗಿ ಹೆಡೆ ಎತ್ತಿದಂತೆ ನೇತಾಡುತ್ತಿದ್ದ ವಯರು ಮತ್ತು ಮಂದ ಬಲ್ಬು ಹೆಸರಿಗಷ್ಟೆ ಬೆಳಕು ನೀಡುತ್ತಿತ್ತು. ಪುಟ್ಟ ಕಿಟಕಿ, ಚಕ್ಕಳಿಕೆ ಎದ್ದು ಉದುರುತ್ತಿದ್ದ ಮಾಸಲು ಗೋಡೆ, ಅದರ ಮೇಲೊಂದು ಪುಟ್ಟ ಕನ್ನಡಿ, ಅದೂ ಸಹ ಒಂದೆಡೆ ಜಂಗು ಹಿಡಿದು, ಮತ್ತೊಂದೆಡೆ ಮೊಳೆ ಎದ್ದು ಸೊಟ್ಟದಾಗಿ ಗಡಿಯಾರದ ಪೆಂಡುಲಮ್ ತರಹ ಆಡುತ್ತಿತ್ತು. ಒರೆಸಿ, ತಿಕ್ಕಿ ಹೇಗೆ ನೋಡಿದರೂ ಮುಖ ಸರಿಯಾಗಿ ಕಾಣದ ಅದರಲ್ಲಿ ಮನೆಯ ಗಂಡಸರು ಅದ್ಹೇಗೆ ಶೇವಿಂಗ್, ಮೀಸಿ ಟ್ರಿಮ್ಮಿಂಗ್ ಮಾಡಿಕೊಳ್ಳುತ್ತಿದ್ದರೋ ನಾಕಾಣೆ.

ಆ ಬಚ್ಚಲಿನಲ್ಲಿ ನಾವು ಮಕ್ಕಳು ಒಂಟಿಯಾಗಿ ಸ್ನಾನ ಮಾಡಿದ್ದು ತುಂಬಾ ಕಡಿಮೆ. ಕೂಡು ಕುಟುಂಬವಾದ್ದರಿಂದ ಮುಂಜಾನೆ ಕೆಲಸಕ್ಕೆ ಹೋಗುವ ಗಂಡಸರು, ಶಾಲೆ ಕಾಲೇಜಿಗೆ ಹೋಗುವ ಸೋದರತ್ತೆಯರು, ಅದಾದ ನಂತರ ಮನೆಯ ಹೆಂಗಸರು.. ಒಟ್ಟಿನಲ್ಲಿ ಅದು ಖಾಲಿಯಾಗಿ ಒಣಗಿದ್ದಿದ್ದು ನೋಡಿದ ನೆನಪೇ ಇಲ್ಲ. ಮನೆಯಲ್ಲಿ ರಣರಂಗ ನಡೆದಾಗ ಬಚ್ಚಲಿನಲ್ಲಿ ಬಾಗಿಲು ಹಾಕಿಕೊಂಡು ಹಗುರಾಗುತ್ತಿದ್ದ ಹೆಣ್ಣುಮಕ್ಕಳು, ಇನ್ನು ಒಬ್ಬರಲ್ಲದಿದ್ದರೆ ಮತ್ತೊಬ್ಬರು ತಿಂಗಳ ರಜೆಯಲ್ಲಿ ಇರುತ್ತಿದ್ದರಿಂದ ಬಚ್ಚಲಿನಲ್ಲಿ ಬಟ್ಟೆ ಒಗೆಯುತ್ತಿದ್ದುದು, ಜೊತೆಗೆ ಬಸಿರಿನಲ್ಲಿ ವಾಂತಿ, ಬಾಣಂತನದಲ್ಲಿ ತಾಯಿ, ಕೂಸಿನ ಸ್ನಾನ ಒಟ್ಟಿನಲ್ಲಿ ಬಚ್ಚಲು ಮನೆಯಲ್ಲಿ ಸ್ನಾನ ಮನೆಯ ಮಕ್ಕಳ ಪಾಲಿಗೆ ಗಗನಕುಸುಮವೇ ಸೈ.

ಬಚ್ಚಲಿನಲ್ಲಿ ಅಜ್ಜಿ ಬಿಸಿನೀರು ಬಕೆಟ್ಟಿಗೆ ತುಂಬಿಸಿಕೊಂಡು, ಮಕ್ಕಳನ್ನೆಲ್ಲಾ ಕರೆದು, ಎಲ್ಲರಿಗೂ ಎರಡೆರಡು ಚೊಂಬು ನೀರು ಹೊಯ್ದು, ತೆಂಗಿನ ಗುಂಜಿನಲ್ಲಿ ಭರಭರನೆ ಎಮ್ಮೆ ಉಜ್ಜಿದಂತೆ ಉಜ್ಜಿ ಮತ್ತೆರಡು ಚರಿಗಿ ಹೊಯ್ದು ಟವೆಲ್ ಸುತ್ತಿ ಕಳುಹಿಸುತ್ತಿದ್ದಳು. ಒಮ್ಮೊಮ್ಮೆ ‘ನಾನೂ ಅತ್ತೆಯರ ಹಾಗೆ ಒಬ್ಬಳೇ ಬಚ್ಚಲಿನಲ್ಲಿ ಸ್ನಾನ ಮಾಡುತ್ತೇನೆ’ ಎಂದು ಹಠ ಹಿಡಿಯುತ್ತಿದ್ದೆ. ಆಗ ‘ನೀನು ನಿಮ್ಮ ಅತ್ತೆಯವರಷ್ಟು ದೊಡ್ಡಾಕಿ ಆದಾಗ ಒಬ್ಬಾಕಿನೇ ಜಳಕ ಮಾಡುವೆಯಂತೆ’ ಎಂದು ಸಮಾಧಾನ ಮಾಡುತ್ತಿದ್ದರು. ಆ ಕಾಲ ಕೂಡಿ ಬರುವಷ್ಟರಲ್ಲಿ ಅಪ್ಪನಿಗೆ ಹುಬ್ಬಳ್ಳಿಗೆ ವರ್ಗವಾಗಿತ್ತು.

ಅಲ್ಲಿ ಅಪ್ಪನಿಗೆ ಹಳೆಯ ಕ್ವಾರ್ಟರ್ಸ್‌ ಕೊಟ್ಟಿದ್ದರು. ಅಪ್ಪ, ಅಮ್ಮ ಹಾಗೂ ನಾವು ಮೂರು ಜನ. ಹಾಗಾಗಿ ಬಚ್ಚಲನ್ನು ಆರಾಮವಾಗಿ ತೃಪ್ತಿಯಾಗುವಂತೆ ಬಳಸುತ್ತಿದ್ದೆವು. ಏನೋ ಆಗಾಗ ಹಾವು, ಚೇಳು, ಜರಿ ದರುಶನ ಕೊಟ್ಟು ಹೆದರಿಸಿ ಹೋಗುತ್ತಿದ್ದವು ಅಷ್ಟೆ. ಆದರೆ ಇಲ್ಲಿ ತೊಂದರೆಯಾಗಿದ್ದು ಮನೆ ಬಿಟ್ಟು ಒಂದು ಫರ್ಲಾಂಗ್ ದೂರ ಇದ್ದ ಸಂಡಾಸಿನದು. ನಾಲ್ಕು ಮನೆಗೆ ಒಂದು ಸಂಡಾಸನ್ನು ಬಳಸಬೇಕಿತ್ತು. ಎಲ್ಲ ಕುಟುಂಬಕ್ಕೂ ಒಂದೊಂದು ಕೀಲಿಕೈ ಕೊಟ್ಟಿದ್ದರು. ಬೆಳ್ಳಂಬೆಳಿಗ್ಗೆ ಹೋಗಬೇಕೆಂದು ಅಷ್ಟು ದೂರ ನಡೆದುಕೊಂಡು ಹೋಗುವಷ್ಟರಲ್ಲಿ ಯಾರಾದರೊಬ್ಬರು ಒಳಗೆ ಸೇರಿಕೊಂಡಿರುತ್ತಿದ್ದರು. ಅವರು ಹೊರಬರುವುದನ್ನು ಕಾಯುವಷ್ಟು ತಾಳ್ಮೆಯೂ ಒಮ್ಮೊಮ್ಮೆ ಇರದೆ ಒದ್ದಾಡಿ ಹೋಗುತ್ತಿದ್ದೆವು. ಕೆಲವೊಮ್ಮೆ ರಾತ್ರಿ ಯಾರಿಗಾದರೂ ಅವಸರವಾದರೆ ಅಪ್ಪನನ್ನು ಎಬ್ಬಿಸಿಕೊಂಡು ಸವಾರಿ ಹೊರಡಬೇಕಿತ್ತು. ಕತ್ತಲಲ್ಲಿ ಯಾರಿಗೂ ಒಬ್ಬರೇ ಹೋಗಲು ಧೈರ್ಯವಿರುತ್ತಿರಲಿಲ್ಲ. ನೆರೆಮನೆಯ ಅಕ್ಕ ಸಂಜೆಯ ಮಬ್ಬುಗತ್ತಲಲ್ಲಿ ಅಮ್ಮನಿಗೆ ಕೇಳಿ, ನನ್ನನ್ನು ಜೊತೆ ಮಾಡಿಕೊಂಡು ಕರೆದುಕೊಂಡು ಹೋಗುತ್ತಿದ್ದಳು. ಅಲ್ಲಿ ಒಂದು ಕಟ್ಟೆಯ ಮೇಲೆ ನನ್ನನ್ನು ಕೂಡಿಸಿ, ಸ್ವಲ್ಪ ದೂರದಲ್ಲಿ ಮೊದಲೇ ಬಂದು ಕಾದು ನಿಂತಿರುತ್ತಿದ್ದ ಯಾವುದೋ ಅಣ್ಣನ ಜೊತೆ ಗುಸುಗುಸು, ಪಿಸಪಿಸ ಅಂತಾ ಸ್ವಲ್ಪ ಹೊತ್ತು ಮಾತನಾಡಿ, ನಂತರ ಸುಮ್ಮನೆ ಸಂಡಾಸಿನ ಒಳಗೆ ಹೋಗಿ ಬಂದು ವಾಪಸ್ ಮನೆಯ ಕಡೆ ಕರೆದೊಯ್ಯುತ್ತಿದ್ದಳು. ಸಂಡಾಸ್ ರೂಮು ಮನೆಯಿಂದ ದೂರ ಇದ್ದ ಕಾರಣ, ಪ್ರೇಮಿಗಳ ಭೇಟಿಗೆ ಪೂರಕವಾಗಿತ್ತು.

ಇನ್ನು ಮದುವೆಯಾದ ಹೊಸದರಲ್ಲಿ ಧಾರವಾಡದಲ್ಲಿ ಔಟ್ ಹೌಸೊಂದರಲ್ಲಿ ಬಾಡಿಗೆಗೆ ಇದ್ದೆವು. ಇವರ ಸಂಬಳವೂ ಕಡಿಮೆ ಇದ್ದಿದ್ದರಿಂದ, ಇದಕ್ಕಿಂತ ಹೆಚ್ಚಿನ ಬಾಡಿಗೆ ಮನೆಯನ್ನು ನಿರೀಕ್ಷಿಸುವಂತಿರಲಿಲ್ಲ. ಪುಟ್ಟ ಕಂದಮ್ಮ ಬೇರೆ. ಅಲ್ಲೂ ಕೂಡ ಬಚ್ಚಲು, ಸಂಡಾಸು ಎರಡೂ ಹೊರಗೇ ಇರಬೇಕೇ ನನ್ನ ಕರ್ಮಕ್ಕೆ! ಇವರು ಆಫೀಸಿಗೆ ಹೋಗುವಷ್ಟರಲ್ಲಿ ನನ್ನ ಪ್ರಾತಃಕರ್ಮಗಳು ಮುಗಿದವೋ ಸರಿ! ಇಲ್ಲದಿದ್ದರೆ ಚಿಕ್ಕ ಮಗುವನ್ನು ಬಚ್ಚಲುಮನೆಯಲ್ಲಿ ಒಂದು ಕುರ್ಚಿಗೆ ಕಟ್ಟಿಹಾಕಿ, ಮಾತನಾಡಿಸುತ್ತಾ ಎಲ್ಲ ಮುಗಿಸಬೇಕಿತ್ತು. ಒಂದು ಬಟ್ಟೆ ಮರೆತರೂ ತಂದುಕೊಡುವವರಿಲ್ಲದೆ ಮತ್ತೆ ಬಿಟ್ಟಿದ್ದನ್ನೇ ಉಟ್ಟುಬಂದಿದ್ದು ಎಷ್ಟು ಸಲವೋ! ‘ನನ್ನ ಕೈಲಾಗೋಲ್ಲಾ’ ಎಂದು ಹಠ ಮಾಡಿ ಒಂದಾರು ತಿಂಗಳಿಗೆ ಮನೆ ಬದಲಾಯಿಸಿ ಎಂದು ರಚ್ಚೆ ಹಿಡಿದುಬಿಟ್ಟೆ. ‘ನನಗೆ ತಿಂಗಳಿಗೆ ನೀವು ಖರ್ಚಿಗೆ ಕೊಡದಿದ್ದರೂ ಪರವಾಗಿಲ್ಲ, ಬಾಡಿಗೆ ಮನೆಯಲ್ಲಿ ಬಚ್ಚಲು, ಸಂಡಾಸು ಎಲ್ಲಾ ಒಳಗೇ ಇದ್ದರೆ ಸಾಕು’ ಎಂದು ಯಜಮಾನರ ಮನವೊಲಿಸಿ ಬದಲಾಯಿಸಿದ್ದಾಯಿತು. ಅಂದೇ ನಿರ್ಧಾರ ಮಾಡಿಬಿಟ್ಟಿದ್ದೆ, ಮುಂದೆ ಮನೆ ಏನಾದರೂ ಕಟ್ಟಿಸಿದರೆ ಬಚ್ಚಲು, ಸಂಡಾಸುಗಳು ಮಾತ್ರ ಮನೆಮಂದಿ ಎಲ್ಲರಿಗೂ ಅನುಕೂಲವಾಗುವಂತೆ ಕಟ್ಟಿಸಬೇಕು ಎಂದು. ಹೇಳಿ ನಾನು ಆಸೆ ಪಟ್ಟಿದ್ದರಲ್ಲಿ ಏನಾದರೂ ತಪ್ಪಿದೆಯಾ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT