ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಳ ಹೃದಯ ಬಲ್ಲಿರೇನು?

Last Updated 7 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಭಾರತೀಯ ಮಹಿಳೆಯರಲ್ಲಿ ಹೃದ್ರೋಗದ ಪ್ರಮಾಣವು ಹೆಚ್ಚುತ್ತಿದೆ. 2015ರ ಒಳಗಾಗಿ ಭಾರತವು ಹೃದ್ರೋಗದ ರಾಜಧಾನಿಯಾಗಲಿದೆ. ಹೃದಯ ಆಘಾತ ಕೇವಲ ಸಾವಿಗಷ್ಟೇ ಕಾರಣವಲ್ಲ, ಹೃದಯಾಘಾತ ನಂತರ ಬದುಕುಳಿದವರಲ್ಲಿ ದುಡಿಯುವ ಸಾಮರ್ಥ್ಯ ಕಡಿಮೆಯಾಗುತ್ತದೆ ಎನ್ನುವುದು ಗಮನಾರ್ಹ.

ಮಹಿಳೆಯರಲ್ಲಿ ಹೆಚ್ಚಾಗಿ ಹೃದಯ ಸಂಬಂಧಿ ಕಾಯಿಲೆಗಳು ಪತ್ತೆಯಾಗುವುದೇ ಇಲ್ಲ. ಸೂಕ್ತ ಚಿಕಿತ್ಸೆ ಸಿಗುವುದಿಲ್ಲ. ಮಹಿಳೆಯರಲ್ಲಿ ಕ್ಯಾನ್ಸರ್, ಟಿ.ಬಿ. ಎಚ್.ಐ.ವಿ. ಮಲೇರಿಯಾ ಇವೆಲ್ಲವುಗಳ ಒಟ್ಟು ಮೊತ್ತಕ್ಕಿಂತಲೂ ಸಾವಿಗೆ ಹೃದ್ರೋಗವೇ ಹೆಚ್ಚು ಕಾರಣವಾಗುತ್ತಿದೆ.
ಇಡೀ ಜಗತ್ತಿನ ಹೃದ್ರೋಗಿಗಳ ಸಂಖ್ಯೆಯಲ್ಲಿ ಶೇ 15 ರಷ್ಟು ಭಾರತೀಯ ಮಹಿಳೆಯರಿದ್ದಾರೆ. 

ಹೆಚ್ಚಿನ ಮಹಿಳೆಯರಲ್ಲಿ ಹೃದಯಾಘಾತವಾಗುವ ಐದಾರು ತಿಂಗಳು ಮುಂಚಿತವಾಗಿಯೇ ಎದೆ ನೋವು, ಎಡಭುಜದ ನೋವು, ಸುಸ್ತು, ಉಸಿರಾಟ ತೊಂದರೆಯ ಅನುಭವವಾಗಬಹುದು. ಇವುಗಳನ್ನು ನಿರ್ಲಕ್ಷಿಸದೇ ಸೂಕ್ತ ವೈದ್ಯಕೀಯ ತಪಾಸಣೆಗೆ ಒಳಗಾಗಬೇಕು. ನನ್ನ ಸಹಾಯಕಿ ಒಬ್ಬರು ಕೇವಲ ಮೂವತ್ತೊಂಬತ್ತು ವರ್ಷದವರು, ಆಗಾಗ ಎದೆ ಹಿಡಿದ ಅನುಭವ, ಎಡಭುಜ ನೋವು ಅನುಭವಿಸುತ್ತಿದ್ದು ಅದನ್ನು ಯಾರಿಗೂ ಹೇಳಲಿಲ್ಲ. ಒಂದು ದಿನ ಅತಿಯಾದ ನೋವು ಬಂದು ತೀವ್ರತರದ ಹೃದಯಾಘಾತವಾಗಿ ಆಂಜಿಯೋಪ್ಲಾಸ್ಟಿ ಮಾಡಬೇಕಾಯಿತು. ಮೊದಲೇ ಸೂಕ್ತ ಹೃದಯ ತಪಾಸಣಾ ಪರೀಕ್ಷೆಗಳನ್ನು ಮಾಡಿದ್ದರೆ ಇದನ್ನು ತಡೆಗಟ್ಟಬಹುದಿತ್ತಲ್ಲವೇ?

ಮಧ್ಯ ವಯಸ್ಸಿನ ಮಹಿಳೆಯರಲ್ಲಿ ದೊಡ್ಡ ಕಿರೀಟ ಧಮನಿ ರಕ್ತನಾಳಗಳಲ್ಲಿ ಕೊಬ್ಬು ಶೇಖರಣೆಯಾಗುವುದಕ್ಕಿಂತ ಚಿಕ್ಕ ಚಿಕ್ಕ ಕಿರೀಟ ಧಮನಿಗಳಲ್ಲಿ ರಕ್ತ ಸರಬರಾಜು ಕಡಿಮೆಯಾಗುವುದೇ ಹೆಚ್ಚಿನ ಸಂದರ್ಭದಲ್ಲಿ ಹೃದಯಾಘಾತಕ್ಕೆ ಕಾರಣಗಳಾಗುತ್ತವೆ. (ಕೊರೊನರಿ ಮೈಕ್ರೋ ವ್ಯಾಸ್ಕುಲರ್ ಸಿಂಡ್ರೋಮ್) ಮತ್ತು ಇವು ಇ.ಸಿ.ಜಿ.ಯಂತಹ ಪರೀಕ್ಷೆಗಳಲ್ಲಿ ಬದಲಾವಣೆಗಳನ್ನು ತೋರಿಸದೇ ಇರಬಹುದು. ಇಂಥವರಲ್ಲಿ ವಿಶೇಷ ಪರೀಕ್ಷೆಗಳು ಹೃದ್ರೋಗ ಪತ್ತೆ ಮಾಡಲು ಬೇಕಾಗಬಹುದು. (ಸಿ.ಟಿ. ಸ್ಕ್ಯಾನ್, ಅಲ್ಟ್ರಾ ಸೌಂಡ್ ಇತ್ಯಾದಿ).

ಸಾಮಾನ್ಯವಾಗಿ ಮಹಿಳೆಯರಲ್ಲಿ ಹೃದಯಾಘಾತದ ಸಂಭವ ಋತುಬಂಧದ ನಂತರ ಹೆಚ್ಚುತ್ತದೆ. ಕಳೆದೆರಡು ದಶಕಗಳ ಸಂಶೋಧನೆಗಳ ಪ್ರಕಾರ 35 ರಿಂದ 50 ವರ್ಷಗಳ ವಯೋಮಾನದ ಮಹಿಳೆಯರಲ್ಲಿ ಹೃದಯಾಘಾತವು ಹೆಚ್ಚುತ್ತಿದೆ.
ನಗರೀಕರಣ, ಐಷಾರಾಮಿ ಜೀವನ ಶೈಲಿ, ಬೊಜ್ಜುತನ, ಮಧುಮೇಹ, ಏರು ರಕ್ತದೊತ್ತಡ, ಮಾನಸಿಕ ಒತ್ತಡ, ಧೂಮಪಾನ, ಮುಂತಾದವು ಇದಕ್ಕೆ ಕಾರಣವಾಗಿವೆ. ಹಾರ್ಮೋನುಗಳ ಅಸಮತೋಲನದಿಂದ ಪಿ.ಸಿ.ಒ.ಡಿ. ಸಮಸ್ಯೆಯಿಂದಾಗುವ (ಪಾಲಿಸಿಸ್ಟಿಕ್ ಒವೇರಿಯನ್ ಡಿಸೀಸ್) ಬೊಜ್ಜುತನ, ಬಂಜೆತನ, ಋತುಚಕ್ರದ ತೊಂದರೆಗಳು ಇವೆಲ್ಲ ಮುಂದೆ ಹೃದ್ರೋಗ ಸಮಸ್ಯೆಗೆ ಎಡೆಮಾಡಿಕೊಡುತ್ತವೆ. ಕ್ಯಾನ್ಸರ್‌ಗೆ ತೆಗೆದುಕೊಳ್ಳುವ ವಿಕಿರಣ, ಕಿಮೋಥಿರಪಿ, ಗರ್ಭಿಣಿ ಇದ್ದಾಗ ಆಗುವ ಗರ್ಭವಿಷ ಬಾಧೆ ಇತ್ಯಾದಿಗಳು ಮುಂದೆ ಹೃದಯಕ್ಕೆ ತೊಂದರೆದಾಯಕವಾಗುತ್ತವೆ.

ಕೆಲವರಲ್ಲಿ ಅತಿಯಾದ ದುಃಖ ಭಾವನಾತ್ಮಕ ಕುಸಿತ ಉಂಟಾದಾಗ ಋತುಬಂಧದ ನಂತರ ಹೃದಯದ ಮಾಂಸ ಖಂಡಗಳ ಕಾರ್ಯಕ್ಷಮತೆ ಕಡಿಮೆಯಾಗುತ್ತದೆ. ಇದನ್ನು ಬ್ರೋಕನ್ ಹಾರ್ಟ್ ಸಿಂಡ್ರೋಮ್ ಎನ್ನುತ್ತಾರೆ. ಇದಕ್ಕೂ ಚಿಕಿತ್ಸೆ ಅಗತ್ಯ.
ಇತ್ತೀಚಿಗೆ ಮಹಿಳೆಯರಲ್ಲಿ ಹೃದಯದ ಅನಿಯಮಿತ ಬಡಿತದಿಂದ (ಅರಿತ್‌ಮಿಯಾ) ಹೆಚ್ಚು ತೊಂದರೆಗಳಾಗುತ್ತಿವೆ. ಮಹಿಳೆಯರಲ್ಲಿ ಹೆಚ್ಚಾಗಿರುವ ವಿದ್ಯುತ್ ಪಥಚಲನ ಮಾರ್ಗ ಕಾರಣವಾಗಿರಬಹುದು. ಹೆಚ್ಚುತ್ತಿರುವ ರಕ್ತಹೀನತೆ, ಹಾರ್ಮೋನುಗಳ ಏರಿಳಿತ, ಥೈರೈಡ್ ಗ್ರಂಥಿಗಳ ಸಮಸ್ಯೆಗಳು ಕಾರಣವಾಗಲೂಬಹುದು.

ಪ್ರತಿ ಮಹಿಳೆಯು ತನಗಾಗುವ ಎದೆ ನೋವು, ಭುಜನೋವು, ಉಸಿರು ಹಿಡಿತ, ಇನ್ನಿತರ ಲಕ್ಷಣಗಳನ್ನು ಸರಿಯಾದ ರೀತಿಯಲ್ಲಿ ಪರಿಗಣಿಸಿ ಸೂಕ್ತ ಪರೀಕ್ಷೆ, ಪರಿಹಾರಗಳನ್ನು ವೈದ್ಯರಿಂದ ಸಮರ್ಪಕ ವಾಗಿ ಪಡೆಯಬೇಕು. ಹೃದಯವಂತಿಕೆ ಇದ್ದರೆ ಸಾಲದು ನಿಮ್ಮ ಹೃದಯಕ್ಕಾಗುವ ಆಘಾತಗಳನ್ನು ತಡೆಗಟ್ಟಲು ಮುಂಜಾಗ್ರತೆ ವಹಿಸಿ ಹೃದಯವನ್ನು ಗಟ್ಟಿಗೊಳಿಸಿ. ಋತುಬಂಧದೊಳಗೆ ನನಗೇನೂ ಹೃದಯಾಘಾತವಾಗುವುದಿಲ್ಲ ಎನ್ನುವ ತಪ್ಪು ಕಲ್ಷನೆಯಲ್ಲಿ ತೇಲಿ ಹೋಗದೆ ನೀವು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಿ.

ಮುಂಜಾಗ್ರತಾ ಕ್ರಮಗಳು
* ಆಹಾರವೇ ನಿಮ್ಮ ಪ್ರಥಮ ಔಷಧಿಯಾಗಿರುತ್ತದೆ.


* ಹೆಚ್ಚು ಹೆಚ್ಚು ಹಣ್ಣು, ತರಕಾರಿ, ಸೊಪ್ಪುಗಳನ್ನು ಸೇವಿಸಿ. ಮಾಂಸಾಹಾರಿಗಳಾದರೆ ಸಂಸ್ಕರಿಸದೇ ಅದನ್ನು ಬಳಸಲು ಪ್ರಯತ್ನಿಸಿ. ಮೀನಿನ ಸೇವನೆ ಒಳ್ಳೆಯದು.
* ಕನಿಷ್ಠ 10–11 ಗಂಟೆಗಳ ಕಾಲ ರಾತ್ರಿ ಖಾಲಿ ಹೊಟ್ಟೆಯಲ್ಲಿರಿ. ಬೊಜ್ಜುತನ, ಮಧುಮೇಹ, ಏರು ರಕ್ತದೊತ್ತಡ, ಪಿ.ಸಿ.ಒ.ಡಿ. ಸಮಸ್ಯೆಗಳನ್ನು ಸೂಕ್ತ ಸಮತೋಲನ ಆಹಾರ ಹಾಗೂ ನಿಯಮಿತ ದೈಹಿಕ ಚಟುವಟಿಕೆಗಳಿಂದ ನಿಯಂತ್ರಣದಲ್ಲಿಡಬಹುದು.
* ಮದ್ಯಪಾನ, ಧೂಮಪಾನ ತ್ಯಜಿಸಿ. ಸಾಕಷ್ಟು ವಿಶ್ರಾಂತಿಯನ್ನು ಪಡೆಯಿರಿ. ಮಾನಸಿಕ ಒತ್ತಡಗಳನ್ನು ನಿಯಂತ್ರಿಸಿ, ಕುಟುಂಬದವರನ್ನು ಬಂಧು ಬಾಂಧವರನ್ನು ಪ್ರೀತಿಸಿ ಮತ್ತು ಸಾಕು ಪ್ರಾಣಿಗಳನ್ನು ಪ್ರೀತಿಸಿ.
* ಬಾಳಸಂಗಾತಿಯೊಡನೆ ಹಿತಕರವಾದ ಲೈಂಗಿಕ ಒಡನಾಟವಿರಲಿ. ಹೆಚ್ಚುತ್ತಿರುವ ಪ್ಲಾಸ್ಟಿಕ್ ಬಳಕೆಯಿಂದ ನಮ್ಮ ಶರೀರದಲ್ಲಿ ಸೇರುವ ಥ್ಯಾಲೇಟ್‌ಗಳು ಮತ್ತು ಇನ್ನಿತರ ರಾಸಾಯನಿಕಗಳು ಹಾರ್ಮೋನುಗಳ ಅಸಮತೋಲನ ಉಂಟುಮಾಡಿ ಹೃದಯ ತೊಂದರೆಗಳನ್ನು ಹೆಚ್ಚಿಸುವುದರಿಂದ ಪ್ಲಾಸ್ಟಿಕ್ ಬಳಕೆಯನ್ನು ಮಿತಗೊಳಿಸಿ ಗ್ಲಾಸ್ ಮತ್ತು ಸ್ಟೀಲ್ ಹೆಚ್ಚು ಬಳಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT