ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಸರವೇಕೆ ಕಂದ...?

Last Updated 28 ಮಾರ್ಚ್ 2014, 19:30 IST
ಅಕ್ಷರ ಗಾತ್ರ

24 ವರ್ಷದ ಮೇಧಿನಿ  ಸಾಫ್ಟ್ ವೇರ್‌  ಉದ್ಯೋಗಿ, 35 ವಾರಗಳ ಗರ್ಭಾವಸ್ಥೆಯಲ್ಲಿ ಒಂದು ದಿನ ಬೆಳಗಿನ ಜಾವ ಇದ್ದಕ್ಕಿದ್ದ ಹಾಗೆ ಹೆರಿಗೆ ನೋವು ಕಾಣಿಸಿಕೊಳ್ಳುತ್ತದೆ. ದಿನ ಹತ್ತಿರ ಬರುತ್ತಿರುವುದರಿಂದ ಹೀಗಾಗಿದೆಯಷ್ಟೆ ಎಂದುಕೊಂಡು ನೋವನ್ನು ಅನುಭವಿಸುತ್ತಿರುತ್ತಾಳೆ.

ಹೊತ್ತು ಕಳೆದಂತೆ ಬೆನ್ನು ನೋವು ಶುರುವಾಗಿ, ಬಟ್ಟೆಯೆಲ್ಲಾ ಒದ್ದೆಯಾದ ಅನುಭವವಾಗುತ್ತದೆ. ವಿಷಯ ತಿಳಿದ ಗಂಡ ಹಾಗೂ ಅತ್ತೆ – ಮಾವ ಗಾಬರಿಯಾಗುತ್ತಾರೆ. ಅತ್ತೆ, ಪ್ರತಿದಿನ ಬೇಡವೆಂದರೂ ಆ ಸಿಟಿ ಬಸ್ಸಿನಲ್ಲಿ ಓಡಾಡುತ್ತಾಳೆ. ಬೆಳಿಗ್ಗೆಯಿಂದ ರಾತ್ರಿಯವರೆಗೆ ಬಸುರಿ ಹೆಣ್ಣು ದುಡಿಯುತ್ತಿದ್ದರೆ ಹೀಗಾಗದೇ ಇನ್ನೇನಾಗುತ್ತದೆ ಎಂದು ನೊಂದುಕೊಳ್ಳುತ್ತಾರೆ.

ಇದು ಬರಿ ಮೇಧಿನಿಯ ಕತೆಯಲ್ಲ. ಗರ್ಭಾವಸ್ಥೆಯಲ್ಲಿರುವ 100 ಜನರಲ್ಲಿ 10 ಜನರು ಅನುಭವಿಸುವ ನೋವು. ಅವಧಿ ಪೂರ್ವ ಪ್ರಸವ. ಕೊನೆಯ ಬಾರಿ ಮುಟ್ಟಾದ ದಿನದಿಂದ ಸಂಪೂರ್ಣ 37 ವಾರಗಳಿಗಿಂತ ಅಥವಾ 259 ದಿನಗಳ ಒಳಗೆ ಹೆರಿಗೆಯಾದರೆ ಅವಧಿ ಪೂರ್ಣ ಪ್ರಸವ ಎನ್ನುತ್ತೇವೆ. ಇದರ ಕಾರಣಗಳು, ಲಕ್ಷಣಗಳು ಹಾಗೂ ತಡೆಗಟ್ಟಬಹುದಾದ ಕ್ರಮಗಳನ್ನು ತಿಳಿಯೋಣ.

ಕಾರಣಗಳು
*ನೂರರಲ್ಲಿ 50 ಜನರಿಗೆ, ಅವಧಿ ಪೂರ್ವ ಪ್ರಸವದ ಕಾರಣ ತಿಳಿದಿರುವುದಿಲ್ಲ. ಒಬ್ಬರಲ್ಲೇ ಹಲವಾರು ಕಾರಣಗಳಿಂದ ಅವಧಿಗಿಂತ ಬೇಗ ಹೆರಿಗೆಯಾಗುವುದನ್ನು ದಿನಂಪ್ರತಿ ನೋಡುತ್ತೇವೆ.

*ಗರ್ಭಪಾತ ಮಾಡಿಸಿಕೊಂಡವರಲ್ಲಿ ಅಥವಾ ಸಹಜ ಗರ್ಭಪಾತವಾದವರಲ್ಲಿ ಅಥವಾ ಹಿಂದಿನ ಹೆರಿಗೆ ಅವಧಿಗಿಂತ ಮೊದಲು ಆದವರಿಗೆ ಪ್ರಸವ 37 ವಾರದ ಒಳಗಡೆಯೇ ಹೆರಿಗೆಯಾಗುವ ಸಂಭವ ಹೆಚ್ಚು.

*ಕೃತಕ ಗರ್ಭಧಾರಣೆ

*ಮೂತ್ರನಾಳದ ಸೊಂಕು

*ಧೂಮಪಾನ

*ಬಡತನ, ಮಾನಸಿಕ ಒತ್ತಡ, ಪೌಷ್ಟಿಕಾಹಾರದ ಕೊರತೆ

*ಗರ್ಭಾವಸ್ಥೆಯಲ್ಲಿ ಅತಿಯಾದ ರಕ್ತದೊತ್ತಡ, ಅವಧಿಗಿಂತ ಮುಂಚೆ ಗರ್ಭಕೋಶದ ಪೊರೆ ಒಡೆಯುವಿಕೆ, ಗರ್ಭಚೀಲದಲ್ಲಿ ಹೆಚ್ಚಿದ ನೀರಿನಂಶ

*ಗರ್ಭಕೋಶದ ತೊಂದರೆಗಳು

*ಜ್ವರ, ಬೇದಿ, ಅಪೆನ್‌ಡಿಸೈಟಿಸ್‌, ಶಸ್ತ್ರಚಿಕಿತ್ಸೆಗಳು, ಸಕ್ಕರೆ ಖಾಯಿಲೆ, ಹೃದಯ ಸಂಬಂಧಿ ಕಾಯಿಲೆ, ರಕ್ತಹೀನತೆ, ಅವಳಿ/ ತ್ರಿವಳಿ
ಲಕ್ಷಣಗಳು: ಅತಿಯಾದ ಹೊಟ್ಟೆ ನೋವು, ಬೆನ್ನು ನೋವು, ಬಿಳಿಮುಟ್ಟು, ರಕ್ತಸ್ರಾವ.

ತಡೆಗಟ್ಟುವ ವಿಧಾನ
*ಧೂಮಪಾನ/ ಮದ್ಯಪಾನಗಳಂತಹ ದುಶ್ಚಟಗಳಿಂದ ದೂರವಿರಬೇಕು.

*ಪೌಷ್ಟಿಕಾಹಾರ: ಹಾಲು, ಸೊಪ್ಪು, ತರಕಾರಿ, ಹಣ್ಣುಗಳು, ಬೇಳೆ – ಕಾಳು, ಬೇಯಿಸಿದ ಮೊಟ್ಟೆಯನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸಬೇಕು.

*ಹಿಂದಿನ ಬಾರಿ ಪ್ರಸವ ಪೂರ್ವ ಹೆರಿಗೆಯಾದವರು, ಗರ್ಭಪಾತ ಮಾಡಿಸಿಕೊಂಡವರು ಸಮತಟ್ಟಾಗಿ ವಿಶ್ರಾಂತಿ ತೆಗೆದುಕೊಳ್ಳಬೇಕು.
*ಜ್ವರ ಬೇದಿಯಂತಹ ಸಣ್ಣ – ಪುಟ್ಟ ಭಾಧೆಗಳನ್ನು ನಿರ್ಲಕ್ಷಿಸದೇ ಸೂಕ್ತ ರೀತಿಯಲ್ಲಿ ಪರಿಹರಿಸಿಕೊಳ್ಳಬೇಕು.

*ಯೋಗ ನಿಯಮಿತ ವ್ಯಾಯಾಮ  ಮಾಡಿ ಅಧಿಕವಾಗಿರುವ ತೂಕವನ್ನು ಕಡಿಮೆ ಮಾಡಬೇಕು. ಇದು ಮಾನಸಿಕ ಒತ್ತಡವನ್ನು ನಿಯಂತ್ರಿಸುತ್ತದೆ. ಪುಸ್ತಕ ಓದುವುದು, ಸಂಗೀತ ಆಲಿಸುವುದರಿಂದ ಮನಸ್ಸಿಗೆ ನೆಮ್ಮದಿ ದೊರೆತು, ಒತ್ತಡ ಕಡಿಮೆಯಾಗುತ್ತದೆ.

ಇದೆಲ್ಲವನ್ನು ಪಾಲಿಸಿದರೂ ಕೆಲವರಿಗೆ, ಬೇರೆಯೇ ಆದ ತಿಳಿಯದ ಕಾರಣಗಳಿಂದ ಅವಧಿ ಪೂರ್ವ ಹೆರಿಗೆಯಾಗುತ್ತದೆ. ಭಯಪಡದೇ ಮಗುವಿಗೆ ಸರಿಯಾದ ಆರೈಕೆ ನೀಡಿ ತೂಕ ಪಡೆದು ಕೊಳ್ಳುವಂತೆ ಮಾಡಿದಾಗ ಅವಧಿಪೂರ್ವ ಪ್ರಸವ, ಅವಧಿ ಪೂರ್ಣ ಪ್ರಸವದಿಂದ ಭಿನ್ನವಾಗಿರುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT