ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು ಬದುಕಿನ ಸರ್ಕಸ್

Last Updated 25 ಜನವರಿ 2013, 19:59 IST
ಅಕ್ಷರ ಗಾತ್ರ

ಸುತ್ತಲೂ ಕತ್ತಲು, ಮಧ್ಯದಲ್ಲಿ ಮಾತ್ರ ಝಗಮಗಿಸುವ ಬೆಳಕು, ಎತ್ತರೆತ್ತರದ ಕಂಬಗಳು, ಕೂತಲ್ಲೇ ಕಾಲು ಕುಣಿಸುವಂಥ ಸಂಗೀತ, ಕತ್ತಲಲ್ಲಿ ಕುಳಿತ ಸಾವಿರಾರು ಕಣ್ಣುಗಳು ಯಾರದೋ ಬರುವಿಕೆಗಾಗಿ ಕಾತರಿಸುತ್ತಿವೆ. ಛಕ್ಕನೆ ತೆರೆಯ ಹಿಂದಿನ ಪರದೆಯಲ್ಲೊಂದು ಬಟ್ಟೆಯ ಬಾಗಿಲು ತೆರೆದುಕೊಳ್ಳುತ್ತದೆ. ಅದೋ ಬಣ್ಣ ಬಣ್ಣದ ಮಿಂಚುಳ್ಳಿಗಳು ಸಾಲಾಗಿ ಬಂದಂತೆ ಅವರೆಲ್ಲ ಬಂದೇಬಿಟ್ಟರು. ಯೌವನ ಪುಟಿಯುವ ಲಲನೆಯರು. ಅರೆ, ನಾವು ಕಣ್ಣು ಪಿಳುಕಿಸುವಷ್ಟರಲ್ಲಿ ಅವರೆಲ್ಲ ಅದೇನು ಮಾಡುತ್ತಿದ್ದಾರೆ?

ಜುಯ್ಯನೆ ಒಬ್ಬಳು ಹಗ್ಗ ಹಿಡಿದು ಮೇಲಕ್ಕೆ ಜಿಗಿದೇಬಿಟ್ಟಳು, ಹನುಮಂತ ಸೀಮೋಲ್ಲಂಘನ ಮಾಡಿದಂತೆ. ಹಿಂದೆಯೇ ಉಳಿದವರೂ ನೆಗೆದರು. ಮೊದಲೇ ಮೇಲೆ ಹೋಗಿ ಹಗ್ಗದಾಸರೆಯಲ್ಲಿ ನಿಂತಿದ್ದವಳು ಹಿಂದೆ ಬಂದವಳ ಕೈಯನ್ನು ಗಕ್ಕನೆ ಹಿಡಿದು ಎಳೆದುಕೊಂಡಳು. ಹೀಗೆ ಹಿಡಿಸಿಕೊಂಡವಳು ತನ್ನ ಬೆನ್ನಿಗೇ ಬಂದ ಮತ್ತೊಬ್ಬಳಿಗೆ ಆಸರೆಯಾದಳು. ಅಂತೂ ಎಲ್ಲರೂ ಮೇಲೆ ಹೋಗಿ ಸೇರಿಕೊಂಡಿದ್ದಾಯಿತು.

ಸರಿ ಇನ್ನೇನು, ಈಗ ಶುರುವಾಯಿತು ನೋಡಿ ನಿಜವಾದ ಆಟ. ಒಬ್ಬಾಕೆ ಕಾಲಿಗೆ ಜೋಕಾಲಿ ಸಿಕ್ಕಿಸಿಕೊಂಡು ತಲೆ ಕೆಳಗೆ ಮಾಡಿ ಮತ್ತೊಬ್ಬಳ ಕೈ ಹಿಡಿದು ಗಿರಿಗಿಟ್ಲೆಯಂತೆ ತಿರುಗತೊಡಗಿದಳು. ಇನ್ನೊಬ್ಬಳು ತಲೆಕೆಳಗಾಗಿ ತೂಗುತ್ತಲೇ ಬಾಯಲ್ಲಿ ಒಂದು ಅಡಿ ಉದ್ದದ ಕಬ್ಬಿಣದ ಚೈನ್ ಕಚ್ಚಿಕೊಂಡಳು. ಅದು ತನಗೂ ಸೇರಿದ್ದು ಎಂಬಂತೆ ಇನ್ನೊಬ್ಬಳು ಕೂಡಲೇ ಬಂದು ಅದಕ್ಕೆ ಬಾಯಿ ಹಾಕಿದಳು. ಇಬ್ಬರೂ ಚೈನ್ ಕಚ್ಚಿಕೊಂಡು ಹಗ್ಗದಾಸರೆಯಲ್ಲೇ ಗಿರಗಿರನೆ ತಿರುಗಲು ಶುರುವಿಟ್ಟುಕೊಂಡರು. ನೋಡನೋಡುತ್ತಿದ್ದಂತೆಯೇ ಸಂಗೀತದ ಅಬ್ಬರ ಜೋರಾಯಿತು. ಜೊತೆಗೆ ಇವರ ಗಿರಗಿಟ್ಲೆಯ ಗತಿಯೂ.

ಕಣ್ಣುಕುಕ್ಕುವ ಈ ದೃಶ್ಯದಿಂದ ಬಲವಂತವಾಗಿ ಕಣ್ಣು ಪಕ್ಕಕ್ಕೆ ಸರಿಸಿದರೆ ಮತ್ತಿಬ್ಬರು ಬೆಡಗಿಯರು ಭುಜಕ್ಕೆ ಭುಜ ಆನಿಸಿ, ಮಕ್ಕಳು ಉದ್ಯಾನದಲ್ಲಿ ಜೋಕಾಲಿ ಜೀಕಿಕೊಂಡಷ್ಟೇ ಸರಾಗವಾಗಿ ಮನಸೋಇಚ್ಛೆ ತೂಗಿಕೊಳ್ಳುತ್ತಿದ್ದಾರೆ. ಅಯ್ಯೋ ಇದೇನಿದು ಹುಡುಗಾಟ, ಬಿದ್ದರೆ ಒಂದೇ ಬಾರಿಗೆ ಯಮಲೋಕದ ದರ್ಶನ ಮಾಡಿಸುವಷ್ಟು ಎತ್ತರದಲ್ಲಿ ಇವರೆಲ್ಲ ಹಗ್ಗದಿಂದ ಹಗ್ಗಕ್ಕೆ ಈ ಪರಿ ನೆಗೆಯುವುದೇನು, ಕೈ ಕೈ ಹಿಡಿದು ಜೋತಾಡುವುದೇನು? ಅಷ್ಟಕ್ಕೂ ಇವರದೇನು ಮೂಳೆ, ಮಾಂಸ ಇರುವ ಮನುಷ್ಯ ದೇಹವೋ ಅಥವಾ ರಬ್ಬರ್‌ನಿಂದ ಮಾಡಿದ ಗಿಲೀಟು ಮೈಯೋ ಎಂದು ನಿಬ್ಬೆರಗಾಗಿ, ಕಣ್ಣು ಬಾಯಿ ಬಿಟ್ಟುಕೊಂಡು ನೋಡುತ್ತಿರುವಂತೆಯೇ, ಮೈನವಿರೇಳಿಸುವ ಅಂತಹುದೇ ಹತ್ತಾರು ಸಾಹಸ ದೃಶ್ಯಗಳು ಒಂದರ ನಂತರ ಒಂದು ಬಂದು ಹೋಗಿರುತ್ತವೆ. ತುಸು ಕಣ್ಣು ಮಿಟುಕಿಸಿದರೂ ಸಾಕು ಅವೆಷ್ಟೋ ಅದ್ಭುತ ದೃಶ್ಯಗಳನ್ನು ಮಿಸ್ ಮಾಡಿಕೊಂಡೆವಾ, ಛೆ! ನಮಗೆ ಇನ್ನೆರಡು ಕಣ್ಣುಗಳಿರಬಾರದಿತ್ತೇ ಎಂದುಕೊಳ್ಳುವಷ್ಟರಲ್ಲೇ, ಅದ್ಯಾವ ಕ್ಷಣದಲ್ಲೋ ಆ ಮಿಂಚುಳ್ಳಿಗಳೆಲ್ಲಾ ಚಕಚಕನೆ ಕೆಳಗಿಳಿದು ಪರದೆಯ ಹಿಂದಕ್ಕೆ ಮಾಯವಾಗಿ ಬಿಟ್ಟಿರುತ್ತವೆ.

***
ಮಿರಿ ಮಿರಿ ಮಿರುಗುವ ದಿರಿಸು ತೊಟ್ಟ ಮೂವರು ಹುಡುಗಿಯರು ಬಣ್ಣ ಬಣ್ಣದ ಪಾರಿವಾಳ, ಗಿಳಿಗಳೊಂದಿಗೆ ವೇದಿಕೆ ಏರುತ್ತಿದ್ದಂತೆಯೇ ಸುತ್ತ ನೀರವ ಮೌನ ಆವರಿಸುತ್ತದೆ. ಸೂರ್ಯನನ್ನು ಕರೆತರಲು ಹೊರಟ ಸಾರಥಿಯಂತೆ ಒಂದು ಗಿಳಿ ಪುಟಾಣಿ ಸೈಕಲ್ ಹೊಡೆಯುತ್ತಾ ಗಾಲಿ ಸುತ್ತುತ್ತಿದ್ದರೆ, ಅದರ ಗೆಳೆಯ ಆ ಸೈಕಲ್‌ನ ಮೆತ್ತನೆಯ ಸೀಟಿನಲ್ಲಿ ಮಹಾರಾಜನಂತೆ ಗತ್ತಿನಿಂದ ವಿರಮಿಸಿರುತ್ತದೆ.

ನಂತರದ್ದು ಮ್ಯೂಸಿಕಲ್ ಚೇರ್‌ನಲ್ಲಿ ಪಕ್ಷಿಗಳ ಕಲರವ. ಅಬ್ಬಾ! ದೊಡ್ಡವರಿಗೇ ಮುದ್ದು ಉಕ್ಕಿಸುವಂತಿದೆ ಅವುಗಳ ಆಟ. ಇನ್ನು ಪುಟಾಣಿ ಮಕ್ಕಳು ಕೇಳಬೇಕೇ? ಗಿಳಿಯೊಂದಿಗೆ ಆಡೇ ತೀರುವ ಉಮೇದಿನಿಂದ ಅವುಗಳತ್ತ ನುಗ್ಗಿ ಬರಲು ರಚ್ಚೆ ಹಿಡಿದಿರುವ ಮಕ್ಕಳನ್ನು ಹಿಡಿದಿಡಿದು ಕೂರಿಸುತ್ತಲೇ, ದೊಡ್ಡವರೂ ಹಕ್ಕಿಗಳ ಈ ಮೋಜಿನಾಟವನ್ನು ಇಣುಕಿ ಇಣುಕಿ ನೋಡುತ್ತಲೇ ಇದ್ದಾರೆ.

ಹೀಗೆ ಜೀವದ ಹಂಗನ್ನೇ ತೊರೆದು ಪ್ರೇಕ್ಷಕರಿಗೆ ಸಾಹಸದ ರಸದೌತಣ ಉಣಬಡಿಸುವ ಇವರೆಲ್ಲ ಸರ್ಕಸ್ ಕಲಾವಿದರು. ವ್ಯಕ್ತಿಯೊಬ್ಬನ ಭುಜದ ಮೇಲೆ ನಿಲ್ಲಿಸಿದ 30 ಅಡಿ ಎತ್ತರದ ಟೇಬಲ್ ಮೇಲೆ ಸೈಕಲ್‌ನಲ್ಲಿ ಕುಳಿತು ವಿವಿಧ ಭಂಗಿ ಪ್ರದರ್ಶಿಸುವ, ದೇಹಕ್ಕೆ ಸುತ್ತಿಕೊಂಡ ಹತ್ತಿಪ್ಪತ್ತು ರಿಂಗ್‌ಗಳನ್ನು ಒಟ್ಟೊಟ್ಟಿಗೆ ತಿರುಗಿಸುತ್ತಾ ಗಿರಿಗಿರಿ ತಿರುಗುವ ಇವರ ಕಸರತ್ತು ನೋಡಿ ರೋಮಾಂಚನಗೊಳ್ಳದವರಿಲ್ಲ. ಅನಿವಾರ್ಯವೋ ಇಲ್ಲ ಹವ್ಯಾಸವೋ ಇವರೆಲ್ಲ ಬಾಲ್ಯದಿಂದಲೇ ಸರ್ಕಸ್ ಎಂಬ ಅಲೆಮಾರಿ ಬದುಕಿಗೆ ತಮ್ಮನ್ನು ಅರ್ಪಿಸಿಕೊಂಡವರು. ತೆರೆ ಮೇಲೆ ನಗು ನಗುತ್ತಾ ಪ್ರೇಕ್ಷಕರಿಗೆ ರೋಚಕ ಅನುಭವ ನೀಡುವ ಇವರ ತೆರೆಯ ಹಿಂದಿನ ಬದುಕು ಮಾತ್ರ ವಿಭಿನ್ನ. ದೇಹವನ್ನು ಬಿಲ್ಲಿನಂತೆ ಬಾಗಿಸಿ ಬಳುಕಿಸಿ ಅಚ್ಚರಿ ಹುಟ್ಟಿಸುವ ಕಲಾವಿದೆಯರ ಬದುಕಂತೂ ಅವರ ಸಾಹಸಗಾಥೆಯಷ್ಟೇ ರೋಚಕ.

ಒಂದು ಕಾಲಕ್ಕೆ ಸರ್ಕಸ್ ಬಿಡಾರ ಹೂಡುತ್ತಿದ್ದ ಊರುಗಳಲ್ಲಿ ಚಿತ್ರಮಂದಿರಗಳು ಪ್ರೇಕ್ಷಕರಿಲ್ಲದೆ ಬಣಗುಡುತ್ತಿದ್ದವು. ಆದರೆ ಆಧುನಿಕತೆ ಭರಾಟೆಯ ಈ ಕಾಲಘಟ್ಟದಲ್ಲಿ, ಪ್ರೇಕ್ಷಕರ ಕೊರತೆ ಮತ್ತು ಸರ್ಕಸ್‌ನಲ್ಲಿ ಪ್ರಾಣಿಗಳ ಬಳಕೆ ನಿಷೇಧದಿಂದಾಗಿ ಸರ್ಕಸ್ ಕಂಪೆನಿಗಳು ನೇಪಥ್ಯಕ್ಕೆ ಸರಿದಿವೆ. ನಷ್ಟದ ಹೊಡೆತಕ್ಕೆ ಸಿಕ್ಕಿ ಅದೆಷ್ಟೋ ಕಂಪೆನಿಗಳು ಮುಚ್ಚಿ ಹೋಗಿವೆ. ತಲೆತಲಾಂತರದಿಂದ ಈ ಕಂಪೆನಿಗಳನ್ನೇ ನೆಚ್ಚಿಕೊಂಡಿದ್ದವರು ಬೀದಿ ಪಾಲಾಗಿದ್ದಾರೆ. ಇಂತಹ ಪ್ರಬಲ ಹೊಡೆತದ ನಡುವೆಯೂ ಅಸ್ತಿತ್ವ ಉಳಿಸಿಕೊಂಡಿರುವ ಬೆರಳೆಣಿಕೆಯ ಕಂಪೆನಿಗಳು ಕಲಾವಿದರ ಕಸರತ್ತನ್ನೇ ನೆಚ್ಚಿಕೊಂಡಿವೆ. ಪ್ರತಿ ಸರ್ಕಸ್ ಕಂಪೆನಿಯಲ್ಲಿ 100ಕ್ಕೂ ಹೆಚ್ಚು ಕಲಾವಿದರು ಇರುತ್ತಾರೆ. ಪುರುಷರಿಗಿಂತ ಮಹಿಳಾ ಕಲಾವಿದರೇ ಹೆಚ್ಚು. ಅವರೇ ಸರ್ಕಸ್‌ನ ಪ್ರಮುಖ ಆಕರ್ಷಣೆ ಮತ್ತು ಜೀವಾಳ.

ಪ್ರೇಕ್ಷಕರಿಂದ ಸೈ ಎನಿಸಿಕೊಳ್ಳಲು ನಾನಾ ಬಗೆಯ ಕಸರತ್ತು ಪ್ರದರ್ಶಿಸುವ ಕಲಾವಿದೆಯರ ಜೀವನ ನಿರ್ವಹಣೆ ಅಷ್ಟೊಂದು ಸಲೀಸಲ್ಲ. ತೆರೆಯ ಹಿಂದಿನ ಪುಟ್ಟದಾದ ತಾತ್ಕಾಲಿಕ ಬಿಡಾರಗಳಲ್ಲೇ ಅವರ ಸಂಸಾರದ ಬಂಡಿ ಸಾಗಬೇಕು. ಪ್ರತಿನಿತ್ಯ ಬೆಳಿಗ್ಗೆ ನಾಲ್ಕು ತಾಸು ಅಭ್ಯಾಸ ಮಾಡಲೇಬೇಕು. ದೇಹ ದಂಡಿಸಿದರೆ ಮಾತ್ರ ತುತ್ತಿನಚೀಲ ತುಂಬುತ್ತದೆ. ಸರ್ಕಸ್‌ನಲ್ಲಿ ಬದುಕು ಕಂಡುಕೊಳ್ಳಲು ಹೋಗುವ ಕಲಾವಿದೆಯರಿಗೆ ಕಲೆಯೊಂದೇ ಅರ್ಹತೆಯಲ್ಲ. ಅದರ ಜತೆಗೆ ಆರೋಗ್ಯ, ಉತ್ತಮ ದೇಹದಾರ್ಢ್ಯ, ಅಲೆಮಾರಿ ಜೀವನ ಹಾಗೂ ಆಯಾಯ ಹವಾಮಾನಕ್ಕೆ ಒಗ್ಗಿಕೊಳ್ಳುವ ಗುಣ ಕೂಡ ಅನಿವಾರ್ಯ. ಒಟ್ಟಿನಲ್ಲಿ ಸರ್ಕಸ್ ಮಾತ್ರವೇ ಅವರ ಪ್ರಪಂಚ.

ದೈಹಿಕ ಕಸರತ್ತು ಮತ್ತು ನೈಜ ಕಲೆ ಸರ್ಕಸ್‌ನಲ್ಲಿ ಅನಾವರಣಗೊಳ್ಳುತ್ತದೆ. ಅಪಾಯಕಾರಿ ಸಾಹಸಗಳಲ್ಲಿ ಕೊಂಚ ಮೈ ಮರೆತರೂ ಜೀವ ಉಳಿಯುವ ಭರವಸೆ ಇಲ್ಲ. ಹೊಟ್ಟೆಪಾಡಿಗಾಗಿ ಕಲಾವಿದರು ಪಡುವ ಪಾಡು ಅಷ್ಟಿಷ್ಟಲ್ಲ. ಇಂತಿಷ್ಟೇ ಆಹಾರ ಸೇವನೆಯ ನಿಯಮವನ್ನೂ ಪಾಲಿಸಬೇಕು. ಪ್ರದರ್ಶನದ ವೇಳೆ ಪ್ರೇಕ್ಷಕರ ಸಾಲಿನಲ್ಲಿ ಕುಳಿತ ಪಡ್ಡೆ ಹುಡುಗರಿಂದ ಅವಹೇಳನಕಾರಿ ಮಾತುಗಳು ಕೇಳಿ ಬಂದರೂ, ಅದು ತಮಗೆ ಕೇಳೇ ಇಲ್ಲವೇನೋ ಎಂಬಂತೆ ಮನಸ್ಸು ಕಲ್ಲು ಮಾಡಿಕೊಳ್ಳಬೇಕಾಗುತ್ತದೆ.
ಪ್ರದರ್ಶನ ಮತ್ತು ಅಭ್ಯಾಸದ ವೇಳೆ ಗಾಯಗೊಂಡರೆ ಚಿಕಿತ್ಸೆ ಹಾಗೂ ವಿಶ್ರಾಂತಿಗೆ ಕಂಪೆನಿಯೇ ಕೈಚಾಚಬೇಕು. ಇಲ್ಲವಾದರೆ ಅವರ ಜೀವನ ನರಕ ಸದೃಶ. ಸರ್ಕಾರವಂತೂ ಅವರಿಗೆ ಸಹಾಯಧನ ನೀಡುವುದಿಲ್ಲ. ದಿನದ 24 ಗಂಟೆಗಳಲ್ಲಿ ಒಂಬತ್ತು ತಾಸು ತಾಲೀಮು, ಬೆಳಿಗ್ಗೆ 4 ಗಂಟೆಗಳ ಅಭ್ಯಾಸ ಕಾಯಂ. ಇನ್ನುಳಿದ ಸಮಯ ವಿಶ್ರಾಂತಿಗೆ.

ಪ್ರೀತಿ ಪ್ರೇಮದ ಕಸರತ್ತು
ಇನ್ನು ಮದುವೆಯ ನಂತರ ವೈವಾಹಿಕ ಜೀವನ ಮತ್ತು ವೃತ್ತಿ ಬದುಕಿನ ನಡುವೆ ಸಮತೋಲನ ಕಾಯ್ದುಕೊಳ್ಳುವುದು ಅಷ್ಟು ಸುಲಭವಲ್ಲ. ಈ ಕಾರಣಕ್ಕಾಗಿ ಹಲವರು ಸರ್ಕಸ್ ಕಂಪೆನಿಯಲ್ಲಿ ಇರುವವರನ್ನೇ ಮದುವೆಯಾಗುವ ಪರಿಪಾಠವಿದೆ. ಕೆಲವರು ಇಲ್ಲಿಯವರನ್ನೇ ಪ್ರೀತಿಸಿ, ಕಾರಣಾಂತರದಿಂದ ಮದುವೆಯಾಗದೇ ಉಳಿಯುತ್ತಾರೆ. ಹಲವರಿಗೆ ದೂರದ ಊರಿನಲ್ಲಿರುವ ತಮ್ಮವರ ಜತೆ ಹೆಚ್ಚು ಸಮಯ ಇರಲು ಆಗುತ್ತಿಲ್ಲವಲ್ಲ ಎಂಬ ನೋವು ಕಾಡುತ್ತಿರುತ್ತದೆ. ಮನದಾಳದಲ್ಲಿ ಹೆಪ್ಪುಗಟ್ಟಿದ ಒಂಟಿತನ ನೀಗಲು ಕಡೆಗೆ ಕಸರತ್ತೇ ಆಸರೆಯಾಗುತ್ತದೆ.

ದಾಂಪತ್ಯಕ್ಕೆ ಕಾಲಿಟ್ಟವರು ಮದುವೆ ಆಯಿತು, ಇನ್ನು ನಿಶ್ಚಿಂತೆಯಿಂದ ಸಂಸಾರ ಮಾಡಿಕೊಂಡು ಇರಬಹುದು ಎಂದುಕೊಳ್ಳುವಂತಿಲ್ಲ. ಮಕ್ಕಳನ್ನು ಪೋಷಕರ ಬಳಿ ಬಿಟ್ಟು ಮತ್ತೆ ಅಲೆಮಾರಿ ಬದುಕಿನತ್ತ ಮುಖ ಮಾಡಬೇಕು. ಏಕೆಂದರೆ ಬಹುತೇಕರಿಗೆ ಸರ್ಕಸ್‌ನಿಂದಲೇ ಜೀವನದ ಬಂಡಿ ಸಾಗಬೇಕಾದ ಅನಿವಾರ್ಯ ಸ್ಥಿತಿ. ಮಕ್ಕಳನ್ನು ಬಿಟ್ಟು ಬಂದ ನೋವು ಅವರನ್ನು ಕಾಡುತ್ತಲೇ ಇರುತ್ತದೆ. ಸರ್ಕಸ್ ಮೇಲಿನ ಪ್ರೀತಿಯೋ ಅಥವಾ ಅನಿವಾರ್ಯವೋ ಮಕ್ಕಳು ತಮ್ಮಂತೆಯೇ ಸರ್ಕಸ್ ಕಲಾವಿದರಾಗಲಿ ಎನ್ನುವವರೂ ಇದ್ದಾರೆ.

ಇನ್ನು ವೃತ್ತಿ ಬದುಕಿನ ಬಗ್ಗೆ ಜಿಗುಪ್ಸೆಗೊಂಡವರು ಮಕ್ಕಳನ್ನು ವಿದ್ಯಾವಂತರನ್ನಾಗಿಸಿ ಬೇರೆ ಜೀವನಕ್ಕೆ ದಾರಿ ಮಾಡಿಕೊಡುತ್ತಿದ್ದಾರೆ.

ಹೆಚ್ಚಿನ ಸರ್ಕಸ್ ಕಲಾವಿದರು ಶಾಲೆಯತ್ತ ಮುಖ ಹಾಕದವರು. ಆಟ ಆಡಿಕೊಂಡಿರಬೇಕಾದ ವಯಸ್ಸಿನಲ್ಲಿ ದುಡಿಯುವ/ ಸಂಸಾರದ ನೊಗ ಹೊತ್ತ ಬಹುತೇಕರಿಗೆ ಬಾಲ್ಯದ ನೆನಪುಗಳೆಲ್ಲ ಕಮರಿಹೋಗಿರುತ್ತವೆ. ತಮ್ಮ ಸಾಹಸ ಕಲೆಗಳಿಗೆ ಸೂಕ್ತ ಪ್ರೋತ್ಸಾಹ ಸಿಗುತ್ತಿಲ್ಲ ಎಂಬ ಬೇಸರವೂ ಅವರಲ್ಲಿದೆ. ಅವರ ಬದುಕು ಅಕ್ಷರಶಃ ಜೋಕಾಲಿ. ಹಗ್ಗದ ಮೇಲಿನ ಜೋಕಾಲಿಯಲ್ಲಿ ಜೀಕುತ್ತಲೇ ಬದುಕೆಂಬ ಜೋಕಾಲಿಯನ್ನೂ ಹೇಗೋ ತೂಗಿಸಿಕೊಂಡು ಹೋಗುವ ಇವರದು ತೆರೆಯ ಹಿಂದೆ ಸಹ ಹಗ್ಗದ ಮೇಲಿನ ನಡಿಗೆಯೇ.

`ನಾನು ಏಳನೇ ವಯಸ್ಸಿಗೆ ಸರ್ಕಸ್‌ಗೆ ಬಂದೆ. ಆಗ ದುಡಿಯುವ ಅನಿವಾರ್ಯತೆ ಇತ್ತು. ಅಕ್ಷರ ಕಲಿಕೆಗೆ ಅವಕಾಶವೇ ಸಿಗಲಿಲ್ಲ. ಸರ್ಕಸ್ ಬಿಟ್ಟರೆ ಬೇರೆ ಜೀವನವಿಲ್ಲ. ಕಂಪೆನಿ ನನಗೆ ಎಲ್ಲವನ್ನೂ ಕೊಟ್ಟಿದೆ. ಆದರೆ ಹೆತ್ತವರೊಂದಿಗೆ ಇರಲು ಆಗುತ್ತಿಲ್ಲ ಎಂಬ ನೋವು ಮಾತ್ರ ಕಾಡುತ್ತಿದೆ' ಎನ್ನುವ ಜಂಬೋ ಸರ್ಕಸ್‌ನ ನೇಪಾಳ ಮೂಲದ ಕಲಾವಿದೆ ಸುನಿತಾ ಮಾತು ಸರ್ಕಸ್ ಕಲಾವಿದರ ಬದುಕಿಗೆ ಕನ್ನಡಿ ಹಿಡಿಯುತ್ತದೆ.

ಪ್ರೋತ್ಸಾಹ ಸಿಗುತ್ತಿಲ್ಲ
 

ಮೂಲತಃ ಸರ್ಕಸ್ ಕಲಾವಿದರ ಕುಟುಂಬದವರಾದ ನಮಗೆ ಇದು ಹವ್ಯಾಸ ಅಷ್ಟೇ ಅಲ್ಲ, ವೃತ್ತಿ ಕೂಡ. ಬದುಕು ಕಟ್ಟಿಕೊಟ್ಟಿರುವ ಈ ವೃತ್ತಿಯಲ್ಲೇ ಮನೆಮಂದಿಯೆಲ್ಲಾ ಸಂತಸ ಕಂಡುಕೊಂಡಿದ್ದೇವೆ. ಈ ಕಲೆಗೆ ಎಲ್ಲೆಡೆ ಪ್ರೋತ್ಸಾಹ ಸಿಗುತ್ತಿಲ್ಲ. ಭಾರತದಲ್ಲಿದ್ದ ನೂರಾರು ಸರ್ಕಸ್ ಕಂಪೆನಿಗಳು ಪ್ರೇಕ್ಷಕರ ಕೊರತೆಯಿಂದಾಗಿ ಇಂದು ಬೆರಳೆಣಿಕೆಯಷ್ಟಾಗಿವೆ. ಈ ಬೆಳವಣಿಗೆ ಬೇಸರ ತರಿಸಿದೆ. ಅದೇನೆ ಇರಲಿ, ಭಾರತ ದೇಶದ ವಾತಾವರಣ ಇಷ್ಟವಾಯ್ತು. ಇನ್ನಷ್ಟು ದಿನ ಈ ಕಲೆಯನ್ನು ಅನಾವರಣಗೊಳಿಸುವುದು ನನ್ನ ಮನದ ಇಂಗಿತ.
-ಸುಲೇಮಾನ್, ಗ್ರೇಟ್ ಆಫ್ರಿಕಾ ತಂಡದ ನಾಯಕ, ಜಂಬೋ ಸರ್ಕಸ್

`ಬೇಕಾದ್ರೆ ಶೋ ನೋಡಿಕೊಂಡು ಹೋಗಿ. ನಮ್ಮ ಕಥೆ ಕಟ್ಟಿಕೊಂಡು ನಿಮಗೇನು ಆಗಬೇಕು. ಎಲ್ಲರೂ ಬರ‌್ತಾರೆ, ಕಷ್ಟ ಕೇಳ್ತಾರೆ, ಒಂದಷ್ಟು ಬರೀತಾರೆ. ನಾವು ಓದ್ತೀವಿ ಅಷ್ಟೆ ...' ಇದು ಜಂಬೋ ಸರ್ಕಸ್‌ನ ಪ್ರಾದೇಶಿಕ ವ್ಯವಸ್ಥಾಪಕ ಪಿ.ವಿ.ಶಶಿಧರ್ ಅವರ ನುಡಿಗಳು. ಅವರ ಮಾತಿನಲ್ಲಿ ಸರ್ಕಾರ ಸರ್ಕಸ್ ಉದ್ಯಮದ ಬಗ್ಗೆ ನಿರ್ಲಕ್ಷ್ಯ ಧೋರಣೆ ತಳೆದಿದೆ ಎಂಬ ಅಸಮಾಧಾನವಿದೆ.

`ಒಂದು ಕಾಲಕ್ಕೆ ಲಾಭದಾಯಕ ಉದ್ಯಮವಾಗಿದ್ದ ಸರ್ಕಸ್ ದಿನಗಳೆದಂತೆ ಅಸ್ತಿತ್ವ ಕಳೆದುಕೊಳ್ಳುತ್ತಿದ್ದು, ಜನಮಾನಸದಿಂದ ದೂರವಾಗುತ್ತಿದೆ. ಆದ್ದರಿಂದ ಈ ಕಲೆಯನ್ನು ಉಳಿಸಿ ಬೆಳೆಸಲು ನಮಗೆ ಎಲ್ಲರ ಪ್ರೋತ್ಸಾಹ ಬೇಕಿದೆ' ಎಂದು ಅವರು ಹೇಳುತ್ತಾರೆ.

ಅಣ್ಣನೊಂದಿಗೆ ನಾನೂ ಸರ್ಕಸ್‌ನಲ್ಲಿದ್ದೇನೆ. ಭಾರತಕ್ಕೆ ಒಂದು ವರ್ಷದ ಕಾಂಟ್ರ್ಯಾಕ್ಟ್ ಮೇಲೆ ಬಂದಿದ್ದೇವೆ. ವಿವಿಧ ದೇಶಗಳಲ್ಲಿ ಈಗಾಗಲೇ ಪ್ರದರ್ಶನ ನೀಡಿದ್ದು, ಭಾರತದಲ್ಲಿ ಮೊದಲ ಬಾರಿ ಜಂಬೋಗೆ ಸೇರಿದ್ದೇವೆ. ನನಗೂ ಕುಟುಂಬ ಸದಸ್ಯರ್ಲ್ಲೆಲರ ನೆನಪಾಗುತ್ತದೆ. ಜತೆಯಲ್ಲಿ ಅಣ್ಣ ಇರುವುದರಿಂದ ಸ್ವಲ್ಪ ಸಮಾಧಾನದಿಂದ ಇದ್ದೇನೆ. ಗುತ್ತಿಗೆ ಅವಧಿ ಮುಗಿದ ಕೂಡಲೇ ನಮ್ಮ ದೇಶಕ್ಕೆ ವಾಪಸ್ ಹೋಗುತ್ತೇವೆ.

-ರೆಹಮಾ, ಗ್ರೇಟ್ ಆಫ್ರಿಕಾ ತಂಡದ ಕಲಾವಿದೆ (ಸುಲೇಮಾನ್ ಸಹೋದರಿ)


ಪ್ರಾಣಿ ನಿಷೇಧ; ಕರಗಿದ ಅಭಿಮಾನ
ಹಿಂದೆಲ್ಲ ಸರ್ಕಸ್‌ನಲ್ಲಿ ಹುಲಿ, ಸಿಂಹ, ಕರಡಿ, ಆನೆಗಳು ಇರುತ್ತಿದ್ದವು. ಆ ಸಮಯದಲ್ಲಿ ಸರ್ಕಸ್ ವಿಶೇಷ ಪ್ರೇಕ್ಷಕ ಬಳಗ ಹೊಂದಿತ್ತು. ಕೇಂದ್ರ ಸರ್ಕಾರ ಕಾಡು ಪ್ರಾಣಿಗಳನ್ನು ಸರ್ಕಸ್‌ನಲ್ಲಿ ಬಳಸದಂತೆ ನಿಷೇಧ ಹೇರಿದ್ದರಿಂದ ಅಭಿಮಾನಿ ಬಳಗ ನಿಧಾನವಾಗಿ ಕರಗುತ್ತಾ ಬಂತು. ಪ್ರಾಣಿ ನಿಷೇಧ ಮಾಡಿದ ಸರ್ಕಾರ ಕಂಪೆನಿಗಳಿಗೆ ಪರಿಹಾರವನ್ನು ಮಾತ್ರ ಕೊಡಲಿಲ್ಲ. ಇದರಿಂದ ಕಂಪೆನಿಗಳಿಗೆ ಭಾರಿ ಹೊಡೆತ ಬಿತ್ತು. ದೇಶದಲ್ಲಿದ್ದ 500ಕ್ಕೂ ಹೆಚ್ಚು ಕಂಪೆನಿಗಳ ಸಂಖ್ಯೆ ಇಂದು 60ರ ಆಸುಪಾಸು ತಲುಪಿದೆ. ಇದು ಹೀಗೇ ಮುಂದುವರಿದರೆ ಕೆಲವೇ ದಿನಗಳಲ್ಲಿ ಈ ಸಾಹಸ ಕಲೆ ಕಣ್ಮರೆಯಾಗುವ ಅಪಾಯ ಎದುರಿಸುತ್ತಿದೆ.


ಲಾಭ- ನಷ್ಟದ ತಕ್ಕಡಿ
ಪ್ರತಿ ಸರ್ಕಸ್ ಕಂಪೆನಿ 200ರಿಂದ 250ಕ್ಕೂ ಹೆಚ್ಚು ಮಂದಿಗೆ ಉದ್ಯೋಗ ನೀಡಿದೆ. ದೇಶಿ ಕಲಾವಿದರಿಗಿಂತ ವಿದೇಶಿ ಕಲಾವಿದರು ಹೆಚ್ಚಾಗಿ ಇರುತ್ತಾರೆ. ದೇಶದ ನಂ. 1 ಸರ್ಕಸ್ ಕಂಪೆನಿಎಂದರೆ `ಜಂಬೋ ಸರ್ಕಸ್'. ರಾಜ್ಯದ ಕಂಪೆನಿ ಎಂದರೆ ತುಮಕೂರಿನ `ಗ್ರೇಟ್ ಪ್ರಭಾತ್ ಸರ್ಕಸ್'.

ಶೋ ನಡೆಸುವ ಮುನ್ನ ಆಯಾಯ ಜಿಲ್ಲಾಡಳಿತದಿಂದ ಪರವಾನಗಿ ಪಡೆಯಬೇಕು. ಕೆಲವು ಜಿಲ್ಲೆಗಳಲ್ಲಿ ಪರವಾನಗಿ ನವೀಕರಣ ಮಾಡಿಸುವುದು ಒಮ್ಮಮ್ಮೆ ಹರಸಾಹಸವೇ ಆಗುತ್ತದೆ. ಬಿಡಾರ ಹೂಡುವ ಸ್ಥಳಕ್ಕೆ ಶುಲ್ಕ ಕಟ್ಟಬೇಕು. ಕಂಪೆನಿಗೆ ಪ್ರತಿನಿತ್ಯ 60ರಿಂದ 80 ಸಾವಿರ ರೂಪಾಯಿ ಖರ್ಚು ಬರುತ್ತದೆ. ಒಂದು ಕಡೆಯಿಂದ ಮತ್ತೊಂದು ಕಡೆಗೆ ಸರ್ಕಸ್ ಸಾಮಗ್ರಿ ಸಾಗಿಸಲು 50ಕ್ಕೂ ಹೆಚ್ಚು ಟ್ರಕ್‌ಗಳು ಬೇಕಾಗುತ್ತವೆ. ವಾಟರ್ ಪ್ರೂಫ್ ಟೆಂಟ್‌ಗಳನ್ನು ಬಳಸುತ್ತಾರೆ. ಮಳೆಗಾಲದಲ್ಲಿ ಪ್ರದರ್ಶನಕ್ಕೆ ಹೆಚ್ಚು ತೊಂದರೆಯಾಗುತ್ತದೆ, ಅಲ್ಲದೆ ಆದಾಯವೂ ಕಡಿಮೆ. ಒಂದು ಊರಿನಲ್ಲಿ ಲಾಭವಾದರೆ ಮತ್ತೊಂದು ಕಡೆ ನಷ್ಟವಾಗುವುದು ಸಾಮಾನ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT