ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಗಟ್ಟಿಗಿತ್ತಿಯರ ಕತೆ ಗೊತ್ತೆ?

Last Updated 15 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಕರ್ನಾಟಕದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಿಳೆಯರೆಂದರೆ ಸಾಮಾನ್ಯವಾಗಿ ನಮ್ಮ ಕಣ್ಣ ಮುಂದೆ ಹಾಯ್ದು ಹೋಗುವವರು ಕಿತ್ತೂರು ಚೆನ್ನಮ್ಮ, ಬೆಳವಡಿಯ ಮಲ್ಲಮ್ಮ, ರಾಣಿ ಲಕ್ಷ್ಮೀಬಾಯಿ ಮುಂತಾದವರು. ಆಗಿನ ಮೈಸೂರು ಸಂಸ್ಥಾನದಲ್ಲಿ ಸಾಮಾನ್ಯ ಮಹಿಳೆಯರೂ ಅಸಾಮಾನ್ಯವಾಗಿ ಹೋರಾಡಿದರು. ಅಂತಹವರಲ್ಲಿ ಪದ್ಮಾವತಿ ಬಾಯಿ ಬುರ್ಲಿ, ಜಯದೇವಿತಾಯಿ ಲಿಗಾಡೆ, ಶಕುಂತಳಾ ದಾಬಡೆ ಕಾಳೀಬಾಯಿ, ಶಾಂತಾಬಾಯಿ ಕರಮಕರ್‌ ಮುಂತಾದವರು.

ಬಿಂದಾ ಚಾರ್ಯ ಬುರ್ಲಿ ಎಂಬ ದೇಶಪ್ರೇಮಿಯೊಬ್ಬರ ಮಡದಿ ಪದ್ಮಾವತಿಬಾಯಿ ಬುರ್ಲಿ, ಮನೆಯಲ್ಲಿ ಕಿತ್ತು ತಿನ್ನುವ ಬಡತನ. ಆದರೆ ದೇಶಪ್ರೇಮಕ್ಕೆ ಬಡತನವಿರಲಿಲ್ಲ. ದೇಶಕ್ಕಾಗಿ ಪ್ರಾಣ ಕೊಡಲೂ ಸಿದ್ಧನಿದ್ದ ಪತಿಗೆ ಹೆಗಲಿಗೆ ಹೆಗಲು ಕೊಟ್ಟು ದುಡಿದ ಮಹಿಳೆ ಪದ್ಮಾವತಿ. ದೇಶಪ್ರೇಮಿಗಳು/ಹೋರಾಟಗಾರರು ಒಮ್ಮೊಮ್ಮೆ ಇವರ ಮನೆಯಲ್ಲಿ ಕೆಲವೊಮ್ಮೆ ನೆಲಮಾಳಿಗೆಗಳಲ್ಲಿ ತಲೆ ಮರೆಸಿಕೊಳ್ಳುತ್ತಿದ್ದರು. ಆದರೆ ಹೀಗೆ ತಲೆಮರೆಸಿಕೊಳ್ಳುತ್ತಿದ್ದವರಿಗೆ ಊಟ? ತಿಂಡಿ? ಕುಡಿಯಲು ನೀರು?... ಪದ್ಮಾವತಿ ತನ್ನ ಮಕ್ಕಳಿಗೆ ‘ಮಕ್ಕಳೇ ನೀವು ಎರಡೆರಡು ತುತ್ತು ಕಡಿಮೆ ತಿನ್ನಿ ದೇಶಕ್ಕಾಗಿ ಹೋರಾಡುತ್ತಾ ಅಡಗಿ ಕುಳಿತ ದೇಶಪ್ರೇಮಿಗಳಿಗೆ ಉಳಿದುದನ್ನು ಕೊಡೋಣ’ ಎಂದು ಹೇಳಿ ತಾವೂ ಅರೆಹೊಟ್ಟೆ ತಿಂದು ಮಕ್ಕಳಿಗೂ ಅರೆಹೊಟ್ಟೆ ಹಾಕುತ್ತಿದ್ದರಂತೆ. ಹೀಗೆ ಒಮ್ಮೆ ಕದ್ದು ಮುಚ್ಚಿ ಊಟ ತೆಗೆದುಕೊಂಡು ಹೋಗುತ್ತಿದ್ದಾಗ ಬ್ರಿಟಿಷ್‌ ಸೈನಿಕನ ಕೈಗೆ ಸಿಕ್ಕಿ ಸೆರೆಮನೆ ವಾಸವನ್ನೂ ಅನುಭವಿಸಿದ್ದರು.

ಬ್ರಿಟಿಷರನ್ನು ತನ್ನದೇ ಆದ ರೀತಿಯಲ್ಲಿ ಎದುರಿಸಿದ ಮತ್ತೊಬ್ಬ ದಿಟ್ಟ ಮಹಿಳೆ ಬಿಜಾಪುರ ಜಿಲ್ಲೆಯ ಜೈನಾಪುರದ ಆಗರ್ಭ ಶ್ರೀಮಂತ ಮನೆತನದ ಸೊಸೆ ಕಾಳೀಬಾಯಿ. ಶ್ರೀಮಂತಿಕೆಯ ಕುರುಹಾಗಿ ಆಗಿನ ಕಾಲಕ್ಕೆ ಅತ್ಯಂತ ಬೆಲೆಬಾಳುವ ರೋಲ್‌್ಸರಾಯ್‌್ಸ ಕಾರು ಇವರ ಮನೆಯಲ್ಲಿತ್ತು. ಬ್ರಿಟಿಷ್‌ ಅಧಿಕಾರಿಗೆ ಆ ಕಾರಿನ ಮೇಲೆ ಕಣ್ಣುಬಿದ್ದು ಅವರಿಗೆ ಹೇಳಿ ಕಳುಹಿಸಿ ಕಾರನ್ನು ಸ್ವಲ್ಪ ದಿನದ ಮಟ್ಟಿಗೆ ತನಗೆ ಕೊಡಬೇಕೆಂದು ಕೇಳುತ್ತಾನೆ. ಇಬ್ಬರಿಗೂ ಕಾರಿನ ಬಗ್ಗೆ ಬಿಸಿ ಬಿಸಿ ಮಾತುಕತೆಯಾಗುತ್ತದೆ. ಕಾಶೀಬಾಯಿ ಕಾರು ಕೊಡುವುದಿಲ್ಲವೆಂದು ಖಡಾಖಂಡಿತವಾಗಿ ಹೇಳಿದಾಗ ಕುಪಿತಗೊಂಡ ಅಧಿಕಾರಿ ‘ಇನ್ನೆಂದೂ ನೀನು ಕಾರನ್ನು ಓಡಿಸದಂತೆ ಅದರ ನೋಂದಣಿ (ರಿಜಿಸ್ಟ್ರೇಷನ್‌) ತೆಗೆಸಿ ಹಾಕುತ್ತೇನೆ’ ಎನ್ನುತ್ತಾನೆ.

ಆಗ ಕಾಶೀಬಾಯಿ ‘ಪರವಾಗಿಲ್ಲ. ಅದರ ಮೇಲೆ ಬೆರಣಿ ತಟ್ಟಿಸುತ್ತೇನೆ’ ಎನ್ನುತ್ತಾ ಹಿಂತಿರುಗುತ್ತಾರೆ.
ಇಬ್ಬರೂ ತಮ್ಮ ತಮ್ಮ ಮಾತಿನಂತೆ ನಡೆದುಕೊಂಡರು ಎನ್ನುತ್ತದೆ ಇತಿಹಾಸ. ಕಾರಿನ ನೋಂದಣಿ ರದ್ದಾಯಿತು (ಕ್ಯಾನ್ಸಲ್‌). ರದ್ದು ಮಾಡಿದ ನಂತರ ಕಾಶೀಬಾಯಿ ದೇಶ ಸ್ವತಂತ್ರವಾಗುವವರೆಗೂ ರೋಲ್‌್ಸರಾಯ್‌್ಸ ಕಾರಿನ ಮೇಲೆ ಸಗಣಿಯಿಂದ ಬೆರಣಿ ತಟ್ಟಿಸುತ್ತಿದ್ದರಂತೆ.

ಮತ್ತೊಬ್ಬ ಕರ್ನಾಟಕದ ಹೋರಾಟಗಾರ್ತಿ ಬೆಳಗಾಂನವರಾದ ಶಕುಂತಳಾ ಧಮನ್‌ಕರ್‌ ತನ್ನ ಇಪ್ಪತ್ತನೆಯ ವಯಸ್ಸಿನಲ್ಲಿಯೇ ಕಾಲೇಜಿನಿಂದ ಹೊರಬಂದು ಜೊತೆಗಾರ್ತಿಯರನ್ನು ಬ್ರಿಟಿಷರ ವಿರುದ್ಧ ಹೋರಾಡಲು ಉತ್ತೇಜಿಸುತ್ತಿದ್ದ ಮಹಿಳೆ, ಒಳ್ಳೆಯ ವಾಗ್ಮಿ. ಇವರು ಇದ್ದಲ್ಲಿ ಹಿಂದೆ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದವರ ಗುಂಪೇ ಇರುತ್ತಿತ್ತು.
ಹೆಚ್ಚಾಗಿ ನೆಲಮಾಳಿಗೆಯಿಂದಲೇ ಬ್ರಿಟಿಷರ ವಿರುದ್ಧ ಕೆಲಸ ಮಾಡುತ್ತಿದ್ದ ಇವರನ್ನು ಹುಡುಕಿ ಹಿಡಿಯಲು ಬ್ರಿಟಿಷರು ಹರಸಾಹಸ ಮಾಡುತ್ತಿದ್ದರು. ಇವರಂತೆಯೇ ನೆಲಮಾಳಿಗೆಯಿಂದಲೇ ಕಾರ್ಯ ನಿರ್ವಹಿಸುತ್ತಿದ್ದ ಮತ್ತೊಬ್ಬ ಹೋರಾಟಗಾರರಾದ ಶಂಕರ ಕುರ್ತಕೋಟಿಯವರೊಂದಿಗೆ ಸ್ನೇಹ ಬೆಳೆದು,  ಕುರ್ತುಕೋಟಿ ಅವರಿಗೆ ತಮ್ಮನ್ನು ಮದುವೆಯಾಗುವಂತೆ ಕೇಳುತ್ತಾರೆ.

ಆ ಸಮಯದಲ್ಲಿ ಬ್ರಿಟಿಷರು ಈ ದೇಶಪ್ರೇಮಿಗಳನ್ನು ಹಿಡಿದು ಕೊಟ್ಟವರಿಗೆ ಎರಡು ಸಾವಿರ ಇನಾಮು ಘೋಷಿಸಿರುತ್ತಾರೆ ಹಾಗಾಗಿ ಕುರ್ತುಕೋಟಿಯವರು ವಿವಾಹಕ್ಕೆ ನಕಾರ ಸೂಚಿಸುತ್ತಾ ‘ಸಿಕ್ಕಿ ಬಿದ್ದರೆ ಹದಿನೈದು ಇಪ್ಪತ್ತು ವರ್ಷ ಸೆರೆಮನೆ ಅಥವಾ ನೇಣುಗಂಬ. ಹೀಗಿರುವಾಗ ವಿವಾಹ ಹೇಗೆ ಸಾಧ್ಯ’ ಎನ್ನುತ್ತಾರೆ. ಆಗ ಶಕುಂತಳಾರಿಂದ ಬಂದ ಉತ್ತರ ‘ಸಿಕ್ಕಿ ಬಿದ್ದು ಸೆರೆಮನೆಯಾದರೆ ದೇಶಕ್ಕಾಗಿ ಹೋರಾಡುತ್ತಾ ಸೆರೆಮನೆ ಸೇರಿರುವವನ ಹೆಂಡತಿ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. ಒಂದು ವೇಳೆ ಬ್ರಿಟಿಷರು ನೇಣುಹಾಕಿದರೂ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದವನ ವಿಧವೆ ಎಂದು ಹೆಮ್ಮೆಯಿಂದ ಬೀಗುತ್ತೇನೆ’ ಎಂದರಂತೆ, 1944 ರಲ್ಲಿ ಇವರಿಬ್ಬರೂ ತಲೆ ಮರೆಸಿಕೊಂಡು ಮುಂಬೈಗೆ ಹೋಗಿ ಅಲ್ಲಿ ವಿವಾಹವಾಗುತ್ತಾರೆ. ಒಬ್ಬೊಬ್ಬರ ತಲೆಯ ಮೇಲೂ ಎರಡು ಅಥವಾ ಮೂರು ಸಾವಿರ ಬಹುಮಾನವಿದ್ದ ಸುಮಾರು ನಲವತ್ತು ಜನ ಹೋರಾಟಗಾರರು ಈ ಮದುವೆಗೆ ಹಾಜರಿದ್ದು ಹರಸಿದರು ಎನ್ನಲಾಗಿದೆ.

ಇಪ್ಪತ್ತನೆಯ ಶತಮಾನದ ಆದಿಯಲ್ಲಿ ಹೆಣ್ಣು ಅಬಲೆ, ಅಶಕ್ತೆ, ನಿಸ್ಸಹಾಯಕರು ಎಂದೆಲ್ಲಾ ಸಮಾಜದಲ್ಲಿ ಗುರುತಿಸಿಕೊಳ್ಳುತ್ತಿದ್ದ ಕಾಲದಲ್ಲಿ ಕರ್ನಾಟಕದಲ್ಲಿ ಇಂತಹ ಅನೇಕ ಧೀಮಂತ ಮಹಿಳೆಯರಿದ್ದರು.
ಅವರನ್ನು ಸ್ಮರಿಸುವುದು, ಅವರ ಮನೋಬಲ, ಮನೋಸ್ಥೈರ್ಯ ಎರಡನ್ನೂ ನಮ್ಮಲ್ಲಿಯೂ ಮತ್ತೆ ತರಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT