ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಔಷಧಗಳ ಆಗರ ದಾಳಿಂಬೆ

Last Updated 20 ಜೂನ್ 2014, 19:30 IST
ಅಕ್ಷರ ಗಾತ್ರ

ದಾಳಿಂಬೆ ಕಾಳಿನಂತ ಹಲ್ಲು ಎಂದು ಉಪಮೇಯ ಹೇಳುವಾಗ, ಹವಳದ ಕವಚದಲ್ಲಿ ಕಾಣುವ ಬಿಳಿಮುತ್ತಿನ ಈ ಕಾಳುಗಳು, ಔಷಧಿಯ ಆಗರವೂ ಹೌದು. ಸಹಜವಾಗಿ, ನೈಸರ್ಗಿಕವಾಗಿ ಬೆಳೆಯುವ ಹಣ್ಣುಗಳ ಸೇವನೆಯಿಂದ ಸಾಕಷ್ಟು ಲಾಭಗಳಿವೆ.

ಸುಮಾರು ಐದರಿಂದ ಎಂಟು ಮೀಟರ್‌ ಎತ್ತರಕ್ಕೆ ಬೆಳೆಯುವ ದಾಳಿಂಬೆ ಗಿಡ ವರ್ಷಕ್ಕೆ ಮೂರು ಬಾರಿ ಫಸಲು ನೀಡುತ್ತದೆ. ಇರಾನ್ ಇದರ ತವರೂರು. ಸಂಸ್ಕೃತದಲ್ಲಿ ದದಿಮಾ ಅಥವಾ ದಲಿಮ್ ಎಂದು ಕರೆಯಲಾಗುವ ಇದರ ವೈಜ್ಞಾನಿಕ ಹೆಸರು ‘ವ್ಯೂನಿಕಾ ಗ್ರೆನೇಟಸ್’.

ಭಾರತದಲ್ಲಿ ದಾಳಿಂಬೆಯು ಆಯುರ್ವೇದೀಯ ಔಷಧಗಳಲ್ಲಿ ಸಾವಿರಾರು ವರ್ಷಗಳಿಂದ ಬಳಕೆಯಾಗುತ್ತಿದೆ. ಇದರಲ್ಲಿ ವಿಟಮಿನ್ ಬಿ,ಸಿ,ಇ ಹಾಗೂ ಫಾಸ್ಫರಸ್ ಅಂಶ ಹೇರಳವಾಗಿವೆ. ಇದು ಶಕ್ತಿವರ್ಧಕವಾಗಿಯೂ ಕೆಲಸ ಮಾಡುತ್ತದೆ.

ಔಷಧೀಯ ಗುಣಗಳು
*ದಾಳಿಂಬೆ ಹಣ್ಣಿನ ರಸವನ್ನು ದಿನವೂ ಸೇವಿಸುವುದರಿಂದ ಪಿತ್ತ ನಿವಾರಣೆಯಾಗುತ್ತದೆ.
*ದಾಳಿಂಬೆ ಹಣ್ಣಿನ ಸಿಪ್ಪೆಯ ಕಷಾಯ ತಯಾರಿಸಿ ಕುಡಿಯುವುದರಿಂದ ಆಮ ಶಂಕೆಯು ನಿವಾರಣೆಯಾಗುತ್ತದೆ. 
*ದಾಳಿಂಬೆ ಹೂಗಳನ್ನು ಒಣಗಿಸಿ ಪುಡಿ ಮಾಡಿ ಜೇನುತುಪ್ಪ ಬೆರೆಸಿ ಸೇವಿಸುವುದರಿಂದ ಒಣಕೆಮ್ಮು ವಾಸಿಯಾಗುತ್ತದೆ
*ದಾಳಿಂಬೆ ಎಲೆಯ ರಸ ತೆಗೆದು ಸಕ್ಕರೆ ಬೆರೆಸಿ ಕುಡಿಯುವುದರಿಂದ ಬಿಕ್ಕಳಿಕೆ ಶಮನವಾಗುತ್ತದೆ
*ದಾಳಿಂಬೆ ಎಲೆಗಳನ್ನು ನುಣ್ಣಗೆ ಅರೆದು ಸುಟ್ಟ ಗಾಯಗಳಿಗೆ ಲೇಪಿಸುವುದರಿಂದ ಉರಿಶಮನವಾಗುತ್ತದೆ
*ದಾಳಿಂಬೆ ಗಿಡದ ಬೇರಿನ ಪುಡಿಯ ಕಷಾಯ ತಯಾರಿಸಿ ಸೇವಿಸುವುದರಿಂದ ಹೊಟ್ಟೆಯಲ್ಲಿರುವ ಜಂತು ಹುಳು  ನಾಶವಾಗುತ್ತವೆ
*ದಾಳಿಂಬೆಯ ಚಿಗುರೆಲೆಗಳ ರಸದೊಂದಿಗೆ ಅತ್ತಿಮರದ ಚಿಗುರೆಲೆಗಳ ರಸ ಬೆರೆಸಿ ಮೂಗಿಗೆ ಬಿಡುವು­ದರಿಂದ ಮೂಗಿ­ನಿಂದಾ­ಗುವ ರಕ್ತಸ್ರಾವ ನಿಲ್ಲುತ್ತದೆ. ವಸಡಿನ ರಕ್ತಸ್ರಾವವನ್ನು ತಡೆಯಲೂ ಇದನ್ನು ಬಳಸಲಾಗುತ್ತದೆ
*ದಾಳಿಂಬೆ ಹೂ ಹಾಗೂ ಚಿಗುರೆಲೆಗಳ ಕಷಾಯದಿಂದ ಆಗಾಗ ಬಾಯಿ ಮುಕ್ಕಳಿಸುತ್ತಿದ್ದರೆ ಬಾಯಿಹುಣ್ಣು, ಗಂಟಲು ನೋವು ಬೇಗನೇ ವಾಸಿಯಾಗುತ್ತದೆ
*ದಾಳಿಂಬೆ ಹಣ್ಣಿನ ಜ್ಯೂಸ್ ಸೇವನೆಯಿಂದ ಹೃದಯದ ಆರೋಗ್ಯ ವೃದ್ಧಿಸುತ್ತದೆ

ದೇಹಕ್ಕೆ ಬಹಳಷ್ಟು ಶಕ್ತಿ ತುಂಬಬಲ್ಲ ಅಂಶವು ದಾಳಿಂಬೆಯಲ್ಲಿದೆ. ಹೀಗೆ ಆರೋಗ್ಯಕ್ಕೆ ಅತ್ಯುಪಯುಕ್ತವೆನಿಸಿಕೊಂಡಿರುವ ದಾಳಿಂಬೆ ಹಣ್ಣನ್ನು ಯಾವುದೇ ರೂಪದಲ್ಲಿ ಸೇವಿಸಿದರೂ ಆರೋಗ್ಯವರ್ಧಕವೇ. ಅಪಾರ ಔಷಧೀಯ ಗುಣಗಳುಳ್ಳ ದಾಳಿಂಬೆಯನ್ನು ಆಂಗ್ಲ ಭಾಷೆಯಲ್ಲಿ ಪೋಮೊಗ್ರೆನೇಟ್ ಎಂದೂ, ಇಟಲಿಯಲ್ಲಿ ಮೆಲೊಗ್ರೆನೇಟ್ ಎಂದು, ಥಾಯ್ಲೆಂಡಿನಲ್ಲಿ ಟ್ಯಾಬ್ಟ್ರಿಮ್ ಎಂದೂ ಕರೆಯುತ್ತಾರೆ. ದಾಳಿಂಬೆ ಹಣ್ಣಿನ ಶೇಕಡ 52ರಷ್ಟು ತೂಕವು ಬೀಜದಲ್ಲಿರುತ್ತದೆ ಎಂದು ಅಂದಾಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT