ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರಣ, ಪರಿಣಾಮ, ಪರಿಹಾರ

ಗರ್ಭಾವಸ್ಥೆಯಲ್ಲಿ ರಕ್ತದ ಏರೊತ್ತಡ
Last Updated 6 ಜೂನ್ 2014, 19:30 IST
ಅಕ್ಷರ ಗಾತ್ರ

ಗರ್ಭಾವಸ್ಥೆಯು ಪ್ರತಿಯೊಂದು ಹೆಣ್ಣು ತನ್ನ ಜೀವನದಲ್ಲಿ ದಾಟಬೇಕಾದ ಅತಿಮುಖ್ಯ ಹಾಗೂ ಕ್ಲಿಷ್ಟಕರವಾದ ಸಮಯವಾಗಿದೆ. ಗರ್ಭದಲ್ಲಿ ಮಗುವು ಬೆಳೆಯುತ್ತಾ ಹೋದಂತೆಲ್ಲ ತಾಯಿಯಲ್ಲಿ ಕಾತರ, ದುಗುಡ ಮನೆ ಮಾಡುತ್ತದೆ. ಇಂತಹ ಪರಿಸ್ಥಿತಿಯಲ್ಲೂ ಮನೆಯ ಒಳ–ಹೊರಗೆ ದುಡಿಯಲೇಬೇಕಾದ ಹೆಣ್ಣು ಅನುಭವಿಸುವ ಸಂಕಷ್ಟಗಳು ಹಲವಾರು. ಬೆಳಗಿನ ಬೇಗೆ, ರಕ್ತಹೀನತೆ, ಮಧುಮೇಹ, ಥೈರಾಯಿಡ್‌ ಸಮಸ್ಯೆ, ಬೆನ್ನು ನೋವು, ಅತಿಯಾದ ರಕ್ತದೊತ್ತಡ ಇತ್ಯಾದಿ.

ಗರ್ಭಾವಸ್ಥೆಯಲ್ಲಿ ಕಾಣಿಸಿಕೊಳ್ಳುವ ರಕ್ತ ಏರೊತ್ತಡವು ತಾಯಿ ಹಾಗೂ ಮಗುವಿನ ಮೇಲೆ ದುಷ್ಪರಿಣಾಮಗಳನ್ನು ಉಂಟು ಮಾಡುತ್ತದೆ ಇದನ್ನು ಗರ್ಭಾವಸ್ಥೆಯ ಪ್ರಾಥಮಿಕ ಹಂತದಲ್ಲೇ ಪತ್ತೆ ಹಚ್ಚಿ, ಸೂಕ್ತ ಸಲಹೆ ಔಷಧೋಪಚಾರ ನೀಡಿದರೆ ತಾಯಿ–ಮಗು ಇಬ್ಬರೂ ಸುರಕ್ಷಿತ. ಭಾರತದಂತಹ ಬೆಳೆಯುತ್ತಿರುವ ರಾಷ್ಟ್ರಗಳಲ್ಲಿ ಗರ್ಭಾವಸ್ಥೆಯನ್ನು ಲಘುವಾಗಿ ಪರಿಗಣಿಸುವ ಜನರಲ್ಲಿ ರಕ್ತದ ಏರೊತ್ತಡವು ಹೆರಿಗೆ ಸಮಯದವರೆಗೂ ಗುರುತಿಸದೆ ಉಳಿದುಬಿಡುವ ಸಾಧ್ಯತೆಗಳೇ ಹೆಚ್ಚು!!

ಏನಿದು ರಕ್ತದ ಏರೊತ್ತಡ?
ರಕ್ತದೊತ್ತಡವು ಸಾಮಾನ್ಯವಾಗಿ 120/80ರ ಆಸುಪಾಸಿನಲ್ಲಿರಬೇಕು, ಅದು 140/90 ಕ್ಕಿಂತ ಹೆಚ್ಚಾಗಿದ್ದರೆ ಅದಕ್ಕೆ ಏರೊತ್ತಡ ಎಂದು ಕರೆಯುತ್ತಾರೆ. ಗರ್ಭಾವಸ್ಥೆಯ 20 ವಾರಗಳ ನಂತರ ರಕ್ತದೊತ್ತಡವು 140/90 ಕ್ಕಿಂತ ಜಾಸ್ತಿಯಾದರೆ ಅದಕ್ಕೆ ಗರ್ಭಾವಸ್ಥೆಯ ಏರೊತ್ತಡ ಎನ್ನುವರು. ರಕ್ತದ ಏರೊತ್ತಡದ ಜೊತೆಗೆ ಗರ್ಭವತಿಯ ಮೂತ್ರದಲ್ಲಿ ಪ್ರೊಟೀನ್‌ ಅಂಶ ಕಂಡುಬಂದರೆ ಅದನ್ನು ‘ಪ್ರಿ–ಎಕ್ಲಾಮ್‌ಶಿಯಾ’ ಎಂದು ಹೆಸರಿಸುತ್ತೇವೆ. ಗರ್ಭಾವಸ್ಥೆಯಲ್ಲಿ ಕೆಲವರಿಗೆ ರಕ್ತದೊತ್ತಡ ಜಾಸ್ತಿಯಾಗಿ ಫಿಟ್‌್ಸ ಬರುವ ಸಂಭವವೂ ಅಧಿಕ.

ಯಾರಲ್ಲಿ ಈ ಸಂಭವ ಹೆಚ್ಚು?
* ಮೊದಲ ಬಾರಿಗೆ ಗರ್ಭವತಿಯಾದವರಲ್ಲಿ, ಅತಿ ಚಿಕ್ಕ ವಯಸ್ಸಿನ ಹೆಣ್ಣು ಮಕ್ಕಳಲ್ಲಿ ಮತ್ತು ಅತಿ ಹೆಚ್ಚು ವಯಸ್ಸಾದವರಲ್ಲಿ.

* ವಂಶವಾಹಿನಿ: ತಾಯಿ, ಅಕ್ಕ ಹೀಗೆ ಹತ್ತಿರದ ಸಂಬಂಧಿಕರಲ್ಲಿ ರಕ್ತದ ಏರೊತ್ತಡವಿರುವ ಹೆಣ್ಣು ಮಕ್ಕಳಲ್ಲಿ.

* ಅವಳಿ–ಜವಳಿ ಹೊತ್ತವರಲ್ಲಿ, ಮಧುಮೇಹಿಗಳಲ್ಲಿ, ಮಾಸು ತೊಂದರೆಗಳಿದ್ದಲ್ಲಿ.

* ಸ್ಥೂಲ ಕಾಯ ಇರುವವರಲ್ಲಿ ರಕ್ತನಾಳದ ಸಮಸ್ಯೆ ಇರುವವರಲ್ಲಿ.

* ಎರಡನೇ ಮದುವೆಯಾದ ಹೆಂಗಸರಲ್ಲಿ.

* ರಕ್ತ ಸಂಬಂಧೀ ಕಾಯಿಲೆ ಇರುವವರಲ್ಲಿ.

ಲಕ್ಷಣಗಳು
* ಪಾದದ ಕೀಲಿನ ಮೇಲೆ ಕಾಲು ಊದಿಕೊಳ್ಳುವುದು ಗರ್ಭಿಣಿಯರ ಅತಿಯಾದ ರಕ್ತದೊತ್ತಡದ ಅತಿಸಾಮಾನ್ಯ ಲಕ್ಷಣವಾಗಿದೆ. ಬೆಳಗಿನ ಜಾವ ಹಾಸಿಗೆಯಿಂದ ಎದ್ದ ನಂತರವೂ ಊತ ಹಾಗೆಯೇ ಉಳಿದಿರುತ್ತದೆ. ಕಾಲುಂಗರ ಬಿಗಿಯಾಗ ತೊಡಗುತ್ತದೆ. ರಕ್ತದೊತ್ತಡ ಜಾಸ್ತಿಯಾದಂತೆಲ್ಲ ಮುಖ, ಹೊಟ್ಟೆಯ ಭಾಗ, ಗುಪ್ತಾಂಗ ಅಥವಾ ಇಡಿ ದೇಹದ ಊತ ಕಾಣಿಸಿಕೊಳ್ಳಬಹುದು.

* ತಲೆಯ ಮುಂದೆ ಅಥವಾ ಹಿಂದೆ ನೋವು, ನಿದ್ರಾಹೀನತೆ, ಕಡಿಮೆ ಪ್ರಮಾಣದ ಮೂತ್ರ ಅತಿ ರಕ್ತದೊತ್ತಡದ ಲಕ್ಷಣಗಳು.

* ಮೇಲ್‌ ಹೊಟ್ಟೆ ಮತ್ತು ಎದೆಯ ಕೆಳಗಿನ ಹೊಟ್ಟೆನೋವು  ಕಂದು ಬಣ್ಣದ ವಾಂತಿ, ಕಣ್ಣು ಮಂಜಾಗುವುದು ಅಥವಾ ಕುರುಡಾಗುವುದು. ಆದರೆ ಹೆರಿಗೆಯ ದಿನ ಹತ್ತಿರವಾದಂತೆ ಹೆರಿಗೆಯಾಗಿ 4–6 ವಾರಗಳಲ್ಲಿ ಮತ್ತೆ ಮೊದಲಿನಂತಾಗುತ್ತದೆ.

* ತಿಂಗಳಿಗೆ 2–5 ಕೆ.ಜಿ.ಗಿಂತ ಅಥವಾ ವಾರಕ್ಕೆ 0.5ಕೆ.ಜಿ.ಗಿಂತ ಅಧಿಕ ತೂಕ ಪಡೆದುಕೊಳ್ಳುವುದು ರಕ್ತದ ಏರೊತ್ತಡ ಒಂದು ಲಕ್ಷಣ.
ಹೀಗೆ ರಕ್ತದೊತ್ತಡವು ಅತಿ ಹೆಚ್ಚಿನ ಪ್ರಮಾಣದಲ್ಲಿದ್ದಾಗ ಗರ್ಭಾವಸ್ಥೆಯಲ್ಲಿ ಈ ಮೇಲಿನ ಲಕ್ಷಣಗಳು ಕಂಡುಬರುತ್ತವೆ.
ಅಂಥವರು ತಕ್ಷಣ ತಜ್ಞ ವೈದ್ಯರನ್ನು ಕಂಡು ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು. ಎಷ್ಟೋ ಜನ ಹೆಣ್ಣುಮಕ್ಕಳು ಈ ಮೇಲಿನ ಲಕ್ಷಣಗಳನ್ನು ಗುರುತಿಸದೇ ಮಗುವನ್ನು ಗರ್ಭದಲ್ಲಿಯೇ ಕಳೆದುಕೊಂಡ  ನಿದರ್ಶನಗಳಿವೆ.

ಅಡ್ಡ ಪರಿಣಾಮಗಳು
ಗರ್ಭವತಿಯರಲ್ಲಿ ಅಧಿಕ ರಕ್ತದೊತ್ತಡವಿದ್ದರೆ ಈ ಕೆಳಗಿನ ಅಡ್ಡ ಪರಿಣಾಮಗಳು ಕಾಣಿಸಿಕೊಳ್ಳುತ್ತವೆ.
* ಅವಧಿಪೂರ್ವ ಪ್ರಸವ, ಫಿಟ್‌್ಸ, ನಂಜು.

* ಯಕೃತ್ತು ವೈಫಲ್ಯ, ಮೆದುಳಿನ ರಕ್ತಸ್ರಾವ, ಉಸಿರಾಟದ ಸಮಸ್ಯೆ.

*ಹೆರಿಗೆಯ ನಂತರದಲ್ಲಿ ಅಧಿಕ ರಕ್ತಸ್ರಾವ ಕಾಣಿಸಿಕೊಳ್ಳುವುದು.

*ಗರ್ಭದಲ್ಲಿ ಮಗುವಿನ ಸಾವು, ಮಗುವಿನ ಬೆಳವಣಿಗೆ ಕುಂಠಿತವಾಗುವುದು.

ತಡೆಗಟ್ಟುವುದು ಹೇಗೆ?
ಪ್ರತಿವಾರ ಅಥವಾ ಎರಡು ವಾರಕ್ಕೊಮ್ಮೆ ತಪ್ಪದೇ ವೈದ್ಯರನ್ನು ಭೇಟಿಮಾಡಿ ರಕ್ತದೊತ್ತಡದ ಪರೀಕ್ಷೆ ಮಾಡಿಸಿಕೊಳ್ಳಬೇಕು. ಇದರಿಂದ ಏರುತ್ತಿರುವ ರಕ್ತದೊತ್ತಡವನ್ನು ಪ್ರಾರಂಭದಲ್ಲಿಯೇ ಗುರುತಿಸಬಹುದು. ತೂಕವನ್ನು ಆಗಿಂದಾಗ್ಗೆ ಪರೀಕ್ಷಿಸಿಕೊಳ್ಳುತ್ತಿರಬೇಕು.

*ರಕ್ತದೊತ್ತಡ ಏರುವ ಸಂಭವವಿರುವವರಿಗೆ  ಮಾತ್ರೆಯಿಂದಲೂ ಅಡ್ಡಪರಿಣಾಮಗಳನ್ನು ತಡೆಯಬಹುದು.

*ದಿನಂಪ್ರತಿ  ಕ್ಯಾಲ್ಸಿಯಂ ಮಾತ್ರೆ ತೆಗೆದುಕೊಳ್ಳುವುದರಿಂದಲೂ ರಕ್ತದೊತ್ತಡ ಏರುವುದನ್ನು ತಡೆಗಟ್ಟಬಹುದು.

*ಕೊಬ್ಬಿನಂಶ ಇರುವ ಆಹಾರ ಕಡಿಮೆ ಸೇವಿಸಬೇಕು. ನಿಯಮಿತವಾಗಿ ಯೋಗ ಮತ್ತು ಪ್ರಾಣಯಾಮವನ್ನು ತಜ್ಞರ ಸಲಹೆಯಂತೆ ಮಾಡುವುದು.

*ದೇಹಕ್ಕೆ, ಮನಸ್ಸಿಗೆ ವಿಶ್ರಾಂತಿ ನೀಡಬೇಕು.

*ಪ್ರೋಟೀನ್‌ಯುಕ್ತ ಆಹಾರ ಸೇವನೆ, ಬೇಯಿಸಿದ ಮೊಟ್ಟೆ, ಹಾಲು, ಸೊಪ್ಪು ತರಕಾರಿ, ಮೊಳಕೆಯೊಡೆದ ಬೇಳೆಕಾಳು, ಹಣ್ಣುಗಳನ್ನು ಸಾಕಷ್ಟು ಸೇವಿಸುವುದರಿಂದ ರಕ್ತನಾಳಗಳು ಆರೋಗ್ಯಕರವಾಗುವವು. ಇದರಿಂದ ರಕ್ತದೊತ್ತಡ ಬರುವ ಸಾಧ್ಯತೆ ಕಡಿಮೆಗೊಂಡು ಸಂಭಾವ್ಯ ಅಪಾಯಗಳನ್ನು ತಪ್ಪಿಸಬಹುದು.

*ಉಪ್ಪು ಕಡಿಮೆ ಇರುವ ಆಹಾರ ಸೇವಿಸಬೇಕು.

ಕೆಲವರಿಗೆ ಗರ್ಭ ಧರಿಸುವ ಮೊದಲೇ ಏರೊತ್ತಡವಿರುತ್ತದೆ. ಅದು ಗರ್ಭಾವಸ್ಥೆಯಲ್ಲೂ ಮುಂದುವರಿಯುತ್ತಿದೆ. ಅದನ್ನು ಸೂಕ್ತ ಸಮಯದಲ್ಲಿ ಗುರುತಿಸಿಕೊಂಡು ಚಿಕಿತ್ಸೆ ಪಡೆಯುವುದರಿಂದ ಯಾವುದೇ ಗಂಭೀರ ಸಮಸ್ಯೆ ಇಲ್ಲದೆ ಮಗುವಿಗೆ ಜನ್ಮ ನೀಡಬಹುದು. ಮಗುವಿಗೂ ಯಾವುದೇ ಸಮಸ್ಯೆ ಇರುವುದಿಲ್ಲ. ಇದು ನಗರದಲ್ಲಿ 1–3 ಜನರಲ್ಲಿ ಕಂಡುಬರುವ ಸಾಮಾನ್ಯ ಲಕ್ಷಣ.

ತಜ್ಞ ವೈದ್ಯರ ಸಲಹೆಗಳನ್ನು ಚಾಚೂ ತಪ್ಪದೆ ಪಾಲಿಸಿ ಜವಾಬ್ದಾರಿಯಿಂದ ನಡೆದುಕೊಂಡರೆ ಗರ್ಭಾವಸ್ಥೆಯ 280 ದಿನಗಳನ್ನು ಹೆಣ್ಣು ತನ್ನವರೆಲ್ಲರ ಜೊತೆ ಸಂಭ್ರಮದಿಂದ ಕಳೆದು ಮನೆಯ ಕಿರಿಯ ಸದಸ್ಯರನ್ನು  ಸಂತೋಷದಿಂದ ಬರಮಾಡಿಕೊಳ್ಳಬಹುದು.

ಸಂಗೀತ ಚಿಕಿತ್ಸೆ
ಗರ್ಭಿಣಿಯರು ನಿಯಮಿತವಾಗಿ ಮಧುರ ಸಂಗೀತ ಆಲಿಸುತ್ತಿದ್ದರೆ ಮಾನಸಿಕ ಒತ್ತಡ ಕಡಿಮೆ ಆಗುತ್ತದೆ. ಹೆಚ್ಚು ಅಬ್ಬರವಿಲ್ಲದ, ಕೊಳಲು, ವೀಣೆ ಅಥವಾ ಸಿತಾರ್‌ ವಾದನವನ್ನು ಕೇಳಬಹುದು. ಯಾವುದೇ ಶಾಸ್ತ್ರೀಯ ಸಂಗೀತವನ್ನು ಆಲಿಸುವುದರಿಂದ ಮನಸು ಪ್ರಫುಲ್ಲವಾಗಿರುತ್ತದೆ. ಒತ್ತಡ ನಿರ್ವಹಣೆಯಾಗುತ್ತದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT