ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೈರಿ ಬರಿ, ನಿನ್ನ ಅರಿ!

Last Updated 3 ಮೇ 2013, 19:59 IST
ಅಕ್ಷರ ಗಾತ್ರ

ಮ್ಮ ಹಿರಿಯರನ್ನು ಬಾಲ್ಯದಲ್ಲಿ ನಾವು ಗಮನಿಸಿದಾಗ ಡೈರಿ ಬರೆಯುವ ಅವರ ಹವ್ಯಾಸ ನಮ್ಮ ಮನ ಸೆಳೆದಿತ್ತಲ್ಲವೇ? ಅದೆಷ್ಟೋ ಮನೆಗಳಲ್ಲಿ ಅಪ್ಪನ ಹಳೆ ಡೈರಿ ಅಮ್ಮನ ಮನದಾಳದ ಭಾವನೆಗಳನ್ನು ವ್ಯಕ್ತಪಡಿಸಲು ಒಂದು ಸಾಧನ ಆಗಿರುತ್ತಿತ್ತು.

ಈಗ ಐದಾರು ದಶಕಗಳ ಹಿಂದೆ ನಾವು ಶಾಲೆಯಲ್ಲಿ ಓದುವಾಗ ದಿನಚರಿಗಾಗಿ ಒಂದು ಪಟ್ಟಿ ಇಡಬೇಕಾಗಿತ್ತು. ಅದರಲ್ಲಿ ದಿನವೂ ನಾವು ಮಾಡುವ ಕೆಲಸಗಳನ್ನು ನಮೂದಿಸಬೇಕಾಗಿತ್ತು. ತಂದೆ-ತಾಯಿಗೆ ಮನೆಗೆಲಸದಲ್ಲಿ ಮಾಡಿದ ಸಹಾಯ, ಇತರರಿಗೆ ಮಾಡಿದ ಸಣ್ಣಪುಟ್ಟ ದಾನ, ಒಳ್ಳೆಯ ಕೆಲಸ ಎಲ್ಲ ಬರೀಬೇಕಾಗಿತ್ತು. ದಿನವೂ ಬೆಳಿಗ್ಗೆ ಗುರುಗಳು ಅಥವಾ ತರಗತಿಯ ಹಿರೇಮಣಿ (ಲೀಡರ್) ಅದನ್ನು ಪರಿಶೀಲಿಸಿ, ಒಳ್ಳೆ ಕೆಲಸ ಜಾಸ್ತಿ ಇದ್ದರೆ ಭೇಷ್ ಎನ್ನುತ್ತಿದ್ದರು. ಇನ್ನೊಬ್ಬರನ್ನು ಮೆಚ್ಚಿಸಲು ಅಥವಾ ಗುರುಗಳ ಭಯಕ್ಕೆ ಬರೆಯುತ್ತಿದ್ದ ಡೈರಿ ಸಂಪೂರ್ಣ ಸತ್ಯವಾಗಿರುತ್ತಿತ್ತು ಅಂತ ಹೇಳಲಾಗುವುದಿಲ್ಲ.

ಅದೇ ಮನೆ ಹಿರಿಯರು ದಿನದ ನಿಶ್ಚಿತ ಸಮಯದಲ್ಲಿ, ಹೆಚ್ಚಾಗಿ ರಾತ್ರಿ ಮಲಗುವ ವೇಳೆ ಡೈರಿ ಬರೆಯುತ್ತಿದ್ದರು. ಮನೆಯ ಖರ್ಚು- ವೆಚ್ಚ, ಮಹತ್ವದ ಘಟನೆಗಳು, ಯಾರೋ ಭೇಟಿಯಾದದ್ದು, ವ್ಯವಹಾರದ ವಿಷಯ ಬರೆದಿಡುತ್ತಿದ್ದರು. ಸ್ವಲ್ಪ ಅಕ್ಷರ ಬಂದ ರೈತರು ಸಹ ಕೃಷಿ ಚಟುವಟಿಕೆಯ ಮಹತ್ವದ ವಿಷಯಗಳನ್ನು ಡೈರಿಯಲ್ಲಿ ನಮೂದಿಸುತ್ತಿದ್ದರು. ಯಾವ ದಿನ ನಾಟಿ ಮಾಡಿದ್ದು, ಗೊಬ್ಬರ ಹಾಕಿದ್ದು, ಸುಗ್ಗಿ ಯಾವತ್ತು... ಹೀಗೆ. ಮುಂದಿನ ಮಕ್ಕಳಿಗೆ ಒಕ್ಕಲುತನದಲ್ಲಿ ಈ ಡೈರಿಗಳು ಮಾರ್ಗದರ್ಶನ ಮಾಡುತ್ತಿದ್ದವು. ಹಿರಿಯರ ಡೈರಿಯನ್ನು ಕದ್ದು ಓದುವುದು ಅಪರಾಧವಾಗಿತ್ತು.

ಇನ್ನು ಕೆಲವರು ತಮ್ಮ ಆ ದಿನದ ಅನುಭವಗಳನ್ನು ಚಾಚೂ ತಪ್ಪದೆ ಬರೆಯುತ್ತಿದ್ದರು. ಇದೊಂದು ರೀತಿ ನೋವು ನಲಿವು, ಅದಕ್ಕೆ ತಮ್ಮ ಪ್ರತಿಕ್ರಿಯೆಗಳನ್ನು ಸ್ವಗತದ ಮಾದರಿಯಲ್ಲಿ ವ್ಯಕ್ತಪಡಿಸುವ ರೀತಿಯಾಗಿರುತ್ತಿತ್ತು. ಬೆಳಗ್ಗಿನಿಂದ ರಾತ್ರಿಯವರೆಗಿನ ತಮ್ಮ ಅನುಭವಗಳನ್ನು ಅಂತರಂಗದ ಬೆಳಕಿನಲ್ಲಿ ವಿಶ್ಲೇಷಿಸಿಕೊಂಡು, ಕಾಣದ ದೇವರಿಗೆ ನಿವೇದಿಸಿಕೊಳ್ಳುವ ಕ್ರಮವೂ ಆಗಿತ್ತು.

ಅಕ್ಷರ ರೂಪದಲ್ಲಿ ತಮ್ಮ ಅನುಭವಗಳನ್ನು ಒಡಮೂಡಿಸುವಾಗ ಅದು ಹೆಚ್ಚು ನಿಖರವೂ, ಸ್ಪಷ್ಟವೂ ಆಗುತ್ತಿತ್ತು. ತಪ್ಪುಗಳನ್ನು ಬರೆದುಕೊಂಡಾಗ ಮನಸ್ಸು ಹಗುರವಾಗುತ್ತಿತ್ತು. ಸಹಜವಾಗಿಯೇ ಮರುದಿನ ತಪ್ಪು ಮಾಡುವಾಗ ಒಂದು ಎಚ್ಚರ ಇರುತ್ತಿತ್ತು. ಹೆಚ್ಚಿನ ಸಾಧನೆಯನ್ನು ಮಾಡುವ ಉತ್ಸಾಹ ಮೂಡುತ್ತಿತ್ತು.

ಪ್ರವಾಸ ಕಾಲದಲ್ಲಿ ಅಥವಾ ದಿನನಿತ್ಯದ ಬದುಕಿನ ಅನುಭವಗಳನ್ನು ದಾಖಲಿಸಿದ ಡೈರಿಗಳು ಕೆಲವೊಮ್ಮೆ ಮಹತ್ವದ ದಾಖಲೆಗಳಾಗುತ್ತವೆ. ವ್ಯಕ್ತಿ ಸೃಜನಶೀಲನಾಗಿದ್ದರೆ ಡೈರಿಯ ವಿಷಯಗಳು ಕಥೆ- ಕಾದಂಬರಿಯ ರೂಪ ತಾಳುವುದೂ ಇದೆ.
ಸ್ವಾತಂತ್ರ್ಯ ಹೋರಾಟ ಕಾಲದಲ್ಲಿ ಜೈಲಿನಲ್ಲಿ ಇರುತ್ತಿದ್ದ ದೇಶಭಕ್ತರು ಡೈರಿ ಬರೆಯುತ್ತಿದ್ದರು. ಜೈಲಿನ ಏಕಾಂತವಾಸ ಆತ್ಮಾವಲೋಕನಕ್ಕೆ ಸಕಾಲ ಎಂದು ಭಾವಿಸುತ್ತಿದ್ದರು. ಪ್ರಸಿದ್ಧ ರಂಗಕರ್ಮಿ ಬಿ.ವಿ.ಕಾರಂತರ `ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ' ಎನ್ನುವ ಬದುಕಿನ ನೆನಪು ಮತ್ತು ಅನುಭವಗಳ ಕಥನದಲ್ಲಿ (ಕೃತಿರೂಪ- ವೈದೇಹಿ) ಬರುವ `ಜೈಲು ಡೈರಿಯಿಂದ' ಎಂಬ ಭಾಗ ಹಲವಾರು ದೃಷ್ಟಿಯಿಂದ ವಿಶಿಷ್ಟವಾಗಿದೆ. ಜೈಲಿನ ದಿನನಿತ್ಯದ ಬದುಕಿನ ವಿವರ, ಮನಸ್ಸಿನ ತೊಳಲಾಟಗಳು, ತಮ್ಮ ಮತ್ತು ಪತ್ನಿ ಪ್ರೇಮಾ ಅವರ ಮಧ್ಯದ ಸಂಬಂಧ, ತಪ್ಪು ಮಾಡದೇ ಅಪರಾಧಿಯಾಗಿ ಜೈಲಿನಲ್ಲಿರಬೇಕಾಗಿ ಬಂದ ಸಂಕಟಗಳನ್ನು ಪ್ರತಿದಿನ ಬರೆಯುತ್ತಿದ್ದ ಡೈರಿಯಲ್ಲಿ ಅವರು ತೋಡಿಕೊಂಡಿದ್ದಾರೆ.

ಈಚೆಗೆ ವಿಶ್ವ ಕಪ್ ಗೆದ್ದ ಯುವ ಕ್ರಿಕೆಟಿಗ ಉನ್‌ಮುಕ್ತ್ ಚಾಂದ್ ಬಗ್ಗೆ ಒಂದು ವರದಿ ಪ್ರಕಟವಾಗಿತ್ತು. ಮಗನ ಬಗ್ಗೆ ತಂದೆ ಹೀಗೆ ಹೇಳಿದ್ದಾರೆ- `ಉನ್‌ಮುಕ್ತ್ ನಿತ್ಯ ಬದುಕಿನಲ್ಲಿ ಕಾಯ್ದುಕೊಂಡು ಬಂದ ಅಂಶವೆಂದರೆ ದಿನಚರಿ ಬರೆಯುವುದು. 2001ರಿಂದ ದಿನಚರಿ ಬರೆಯುತ್ತಿದ್ದ ಚಾಂದ್ ತನ್ನ ಬ್ಯಾಗ್‌ನಲ್ಲಿ ಯಾವಾಗಲೂ ದಿನಚರಿ ಮತ್ತು ಇಂಗ್ಲಿಷ್ ಕಾದಂಬರಿಗಳನ್ನು ಒಯ್ಯುತ್ತಿದ್ದ. ಆರಂಭದ ದಿನಗಳಲ್ಲಿ ಕೇವಲ ಕ್ರಿಕೆಟ್ ಬಗ್ಗೆ ಬರೆಯುತ್ತಿದ್ದ ಅವನು  ಈಗ ಬದುಕಿನ ಇತರ ವಿವರಗಳನ್ನೂ ದಾಖಲಿಸುತ್ತಿದ್ದಾನೆ'.

ತಮ್ಮ ವೃತ್ತಿ, ಪ್ರವೃತ್ತಿ, ಗೆಳೆಯರು, ಹಿರಿಯರ ಮಾತುಗಳು, ಮಾಡಿದ ತಪ್ಪು ಎಲ್ಲವೂ ಉನ್‌ಮುಕ್ತ್ ದಿನಚರಿಯಲ್ಲಿವೆ. ಇದೂ ಒಂದು ರೀತಿ ಆತ್ಮಾವಲೋಕನವೇ! 

ಇಡೀ ದಿನ ಬಾಹ್ಯ ಚಟುವಟಿಕೆಯಲ್ಲಿ ಮಗ್ನರಾಗಿದ್ದು, ರಾತ್ರಿ ಮಲಗುವ ಮುನ್ನ ಏಕಾಂತದಲ್ಲಿ ಕುಳಿತು ಆ ದಿನದ ಎಲ್ಲ ವಿವರಗಳನ್ನೂ ನೆನಪಿಸಿಕೊಂಡು,  ಮಾಡಿದ ತಪ್ಪು-ಒಪ್ಪುಗಳನ್ನು ದಾಖಲಿಸುವುದರಿಂದ ನಮ್ಮ ವಿಚಾರಗಳು ನಮಗೇ ಹೆಚ್ಚು ಸ್ಪಷ್ಟವಾಗುತ್ತಾ ಹೋಗುತ್ತವೆ. ಬರೆಯುತ್ತಾ ಬರೆಯುತ್ತಾ ನಮ್ಮ ಆತ್ಮಗತ ವಿಚಾರಗಳನ್ನು ಪರಮಾತ್ಮನೊಡನೆ ಹಂಚಿಕೊಳ್ಳುತ್ತಿರುವ ಭಾವ ಮೂಡುತ್ತದೆ.

-ವಿಜಯಾ ಶ್ರೀಧರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT