ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಗರಪಂಚಮಿಯಂದು ಸಿಹಿಯೂಟ ಇಲ್ಲ!

ನಾಗರಪಂಚಮಿ ಆ.7
Last Updated 5 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಅಲಗೇರಿ ಎಂಬ ಪುಟ್ಟ ಹಳ್ಳಿಯಲ್ಲಿರುವ ನನ್ನ ತವರು ಮನೆಯ, ತೆಂಗು ಅಡಿಕೆ ಮಾವು ಹಲಸಿನ ಮರಗಳಿಂದ ಆವೃತವಾದ ನಮ್ಮ ಭಾಗಾಯತದ ದಕ್ಷಿಣ ಮೂಲೆಯಲ್ಲಿ, ನಾಗದೇವತೆ ಎಂದು ಕರೆಸಿಕೊಳ್ಳುವ ಹಾವಿನ ಶಿಲ್ಪಕಲಾಕೃತಿಯುಳ್ಳ ಒಂದು ಕಪ್ಪುಕಲ್ಲಿನ ಮೂರ್ತಿಯ ಸಣ್ಣ ಗೂಡು ಇದೆ. ಆ ನಾಗರಹಾವಿನ ಕೆತ್ತನೆ ಶಿಲೆಯು, ನಮ್ಮ ತಂದೆಯ ಬಾಲ್ಯಕಾಲದಲ್ಲಿ, ತೆಂಗಿನ ಗಿಡ ನೆಡಲೆಂದು ತೆಗ್ಗು ತೆಗೆಯುವಾಗ ದೊರೆತಿತ್ತಂತೆ. ಅದರ ಜೊತೆಗೆ ಸಿಕ್ಕ ಒಂದು ಮಣ್ಣಿನ ಗಡಿಗೆಯಲ್ಲಿ ಕಲ್ಲು ಮಣ್ಣು ಮಸಿಕೆಂಡಗಳು ತುಂಬಿದ್ದವಂತೆ, ಎಂದೆಲ್ಲ ನಮ್ಮ ಹಿರಿಯರ ಬಾಯಿಂದ ಎಂದೋ ಕೇಳಿದ ಪ್ರತೀತಿ.

ತೆಗ್ಗು ತೆಗೆವ ಹತಾರಗಳಿಗೆ ಆಕಸ್ಮಿಕವಾಗಿ ಸಿಕ್ಕ ಈ ಕಲ್ಲನ್ನು, ಹೊರ ತೆಗೆದು, ಹಲವು ಪೂಜಾ ವಿಧಾನಗಳಿಂದ ಅದೇ ಸ್ಥಳದಲ್ಲಿ ಪ್ರತಿಷ್ಠಾಪಿಸಲಾಗಿತ್ತು. ಅಂದಿನಿಂದ ಇಂದಿನವರೆಗೆ ಆ ನಾಗರಮೂರ್ತಿ ಮನೆಮಕ್ಕಳಿಂದ ಮಾತ್ರವಲ್ಲದೇ ಊರವರೆಲ್ಲರಿಂದಲೂ ಶ್ರದ್ಧಾ ಭಕ್ತಿಪೂರ್ವಕ ಪೂಜಿಸಿಕೊಳ್ಳುತ್ತಲೇ ಬಂದಿದೆ. ಹಾವಿಗೆ ಸಂಬಂಧಪಟ್ಟ ಸಂಗತಿಯಾದದ್ದರಿಂದ ಸಹಜವಾಗಿಯೇ ಭಯದಿಂದಲೇ ನಡೆದುಕೊಳ್ಳಲಾಗುತ್ತದೆ. ಯಾಕೆಂದರೆ ವಿಷಜಂತುವಿನಿಂದ ತನ್ನನ್ನು ತಾನು ಕಾಯ್ದುಕೊಂಡು ಅಂತರ ಸಾಧಿಸಲು ಇದೂ ಒಂದು ಪದ್ಧತಿ ನಂಬಿಕೆಯಾಗಿ ಬೆಳೆದು ಬಂದಿರಲು ಸಾಕು.

ಅತ್ತ ಪಾಪ, ಆ ಮೂಕಜೀವಕ್ಕೂ ಕ್ಷೇಮ, ಇತ್ತ ಮನುಷ್ಯನಿಗೂ ಕ್ಷೇಮ ಎಂಬ ಕಾರಣಕ್ಕೆ.  ಹೀಗೆ ಮನೆಯ ಭಾಗಾಯತದಲ್ಲೇ ನಾಗರದ ಛಾಯೆಯಿದ್ದರೂ, ನನ್ನ ತವರಿನಲ್ಲಿ ಮಾತ್ರ ವಿಶೇಷವಾಗಿ ನಾಗರಪಂಚಮಿಯ ದಿನದಂದು ಸಿಹಿ ತಿಂಡಿಗಳನ್ನು ಅಜಬಾತ್ ತಿನ್ನುವುದಿಲ್ಲ. ಅದಕ್ಕೆ ಒಂದು ರೋಮಾಂಚನದ ಕಾರಣವನ್ನು ನಮ್ಮ ಅಜ್ಜಿ ಯಾವಾಗಲೂ ಕತೆ ಕಟ್ಟಿ ಹೇಳುತ್ತಿದ್ದುದು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಲೇಬೇಕೆನಿಸಿದೆ. ನಮಗೆಲ್ಲ ಮೈ ಝುಂ ಎನ್ನಿಸುವ ಕುತೂಹಲಕಾರಿಯೂ ಆಗಿರುವ ಒಂದು ಫ್ಯಾಂಟಸಿ ಕತೆ ಅದು.

ನನ್ನ ತವರಿನ ಅತ್ಯಂತ ಹಳೆಯ ತಲೆಮಾರೊಂದರಲ್ಲಿ ಒಬ್ಬ ತಂದೆ-ತಾಯಿಗೆ ಹುಟ್ಟಿದ ನಾಲ್ವರು ಗಂಡುಮಕ್ಕಳಲ್ಲಿ , ಕಿರಿಯ ಮಗುವೊಂದು ನಾಗರ ಹಾವಿನ ರೂಪದಲ್ಲಿ ಹುಟ್ಟಿತ್ತಂತೆ. ಕೈ ಕಾಲುಗಳು ಬೆಳೆಯದೇ ಉದ್ದಕ್ಕೆ ನೀಳವಾಗಿ, ತಲೆ ಮುಖ ಕಣ್ಣುಗಳು ಹಾವಿನಾಕಾರದಲ್ಲಿ ಮೂಡಿಬಂದ ಆ ಮಗುವನ್ನು ಆ ಕಾಲದ ನಂಬಿಕೆಯಂತೆ, ನಾಗದೇವತೆಯ ಆಶೀರ್ವಾದದಿಂದ ಹುಟ್ಟಿದ ಕೂಸೆಂದು ಭ್ರಮಿಸಿ, ನಾಗಪ್ಪ ಎಂಬ ಹೆಸರನ್ನಿಟ್ಟು, ಆ ತಂದೆ ತಾಯಿಗಳು ಅತ್ಯಂತ ಪ್ರೀತಿ ಹಾಗೂ ಮುದ್ದಿನಿಂದ ಬೆಳೆಸಿದರಂತೆ. ಐದಾರು ವರ್ಷಗಳ ಕಾಲ ಬೆಳೆದಿದ್ದ ಆ ಮಗು ಅಲ್ಪ ಸ್ವಲ್ಪ ಮಾತನಾಡುವುದನ್ನೂ ಕಲಿತಿತ್ತಂತೆ. ತಂದೆ–ತಾಯಿ ಹೇಳಿದ ಯಾವುದೇ ಕೆಲಸವನ್ನು ಚಾಚೂ ತಪ್ಪದೇ ಮಾಡುತ್ತಿತ್ತಂತೆ. ಹೇಳಿದ್ದನ್ನು ಅರ್ಥ ಮಾಡಿಕೊಳ್ಳುತ್ತಿಂತೆ. ಮುಂದೆ ಶರೀರದಲ್ಲೇ ತೆವಳುತ್ತ ತೆವಳುತ್ತ ಸಂಚರಿಸುವುದನ್ನೂ ಕಲಿಯಿತಂತೆ.

ಮೊದಲಿನ ಮೂವರೂ ಮಕ್ಕಳು ದೊಡ್ಡವರಾದ ನಂತರ ಅಂದಿನ ಜನಜೀವನದಂತೆ, ಅಕ್ಕಪಕ್ಕದ ಊರಿನಲ್ಲಿ ನೀರಿರುವ ಜಾಗೆ ಆಯ್ದು, ಬೇಸಾಯ ಮಾಡಿಕೊಂಡು, ಪ್ರತ್ಯೇಕವಾಗಿ ಸಂಸಾರ ಕಟ್ಟಿಕೊಂಡು ಜೀವಿಸುತ್ತಿದ್ದರಂತೆ. ಈ ನಮ್ಮ ನಾಗಪ್ಪ ದಿನಗಳೆದಂತೆ ತನ್ನ ಅಣ್ಣಂದಿರ ಮನೆಗೆ ಹೋಗಿ-ಬರುವುದನ್ನೂ ರೂಢಿ ಮಾಡಿಕೊಂಡಿತ್ತು.

ಒಂದೇ ದಾರಿ ಹಿಡಿದು ಹೋಗುವುದು, ತನ್ನ ತಂದೆ–ತಾಯಿ ಹೇಳಿದ ಸಂಗತಿಯನ್ನು ಅವರಿಗೆ ತಿಳಿಸುವುದು ಮತ್ತು ಹಿಂತಿರುಗಿ ಅವರು ಹೇಳಿದ ಸುದ್ದಿಯನ್ನು ವಾಪಸ್ಸು ಅಪ್ಪ–ಅಮ್ಮನಿಗೆ ಅರುಹುವುದು; ಹಾಗೆ ನಾಗಪ್ಪನಿಗೆ ಅಣ್ಣಂದಿರ ಸಂಪರ್ಕ ಬೆಳೆದು ಒಡಹುಟ್ಟಿದವರ ಕುರಿತು ಅಂತಃಕರಣವೂ ಬೆಳೆದಿತ್ತು. ಹಾಗಿರಲಾಗಿ ಒಂದು ದಿನ ನಾಗಪ್ಪ ತನ್ನ ಅಪ್ಪ ಕೊಟ್ಟ ಯಾವುದೋ ಸುದ್ದಿಯನ್ನು ಹೊತ್ತು ಒಬ್ಬ ಅಣ್ಣನ ಮನೆಗೆ ಹೋದಾಗ, ಆತ ಯಾವುದೋ ಕೋಪದಲ್ಲಿ ನಮ್ಮ ನಾಗಪ್ಪನನ್ನು ಗದರಿಬಿಟ್ಟನಂತೆ. ಎಂದೂ ಯಾರಿಂದಲೂ ಅವಮಾನಕ್ಕೊಳಗಾಗದ ನಾಗಪ್ಪನಿಗೆ ಒಮ್ಮೆಲೇ ಈ ಸಂದರ್ಭವನ್ನು ನಿಭಾಯಿಸಲು ಸಾಧ್ಯವಾಗದೇ, ತನ್ನ ತಂದೆ ಹೇಳಿ ಕಳಿಸಿದ ಸುದ್ದಿಯನ್ನು ಅಣ್ಣನಿಗೆ ಮುಟ್ಟಿಸಲು ಮರೆತೇ ಬಿಟ್ಟಿತಂತೆ. ಅಂದು ಅಣ್ಣನ ಮನೆಗೆ ಹೋಗುವ ದಾರಿಯುದ್ದಕ್ಕೂ ದಾರಿಕಟ್ಟಿ ಮಳೆ ಬೇರೆ ಸುರಿಯುತ್ತಿತ್ತು. ಆ ಮಳೆಯಲ್ಲೇ ನೆನೆಸಿಕೊಳ್ಳುತ್ತ ಅದು ಉತ್ಸಾಹದಿಂದ ಅಪ್ಪ ಕೊಟ್ಟ ಸುದ್ದಿಯನ್ನು ಹೊತ್ತು ಸಾಗಿತ್ತು. ಆದರೆ ವಿನಾಕಾರಣ ಎರಗಿದ ಅಣ್ಣನ ಸಿಟ್ಟಿನಿಂದ ಕಂಗಾಲಾಗಿ, ತುಂಬ ನೋವಿನಿಂದ ಅದೇ ಸುರಿಯುವ ಮಳೆಯಲ್ಲೇ ಮನೆಗೆ  ಹಿಂತಿರುಗಬೇಕಾಯಿತು.

ಚಳಿಯಿಂದ ಹಾಗೂ ನಿಶ್ಶಕ್ತಿಯಿಂದ ನಡುಗುತ್ತಿದ್ದ ಅದು ಅಡುಗೆ ಖೋಲಿಯ ಒಲೆಯ ಎದುರು ಶಾಖಕ್ಕೆ ಮೈಯೊಡ್ಡಿಕೊಂಡು ಹಾಗೇ ಮುದ್ದೆಯಾಗಿ ಮಲಗಿಬಿಟ್ಟಿತಂತೆ. ಇದ್ಯಾವ ಸಂಗತಿಯೂ ಗೊತ್ತಿಲ್ಲದ ಅದರ ತಾಯಿ, ಅಡುಗೆಮನೆಯ ಕತ್ತಲೆಯಲ್ಲಿ  ಒಲೆಯ ಮೇಲಿರುವ ಕುದಿಯುವ ಗಂಜಿ ಮಡಿಕೆಯನ್ನು, ಸಿಂಬಿಯೆಂದೇ ತಿಳಿದು ನಾಗಪ್ಪನ ಮೈ ಮೇಲೆ ಇಳಿಸಿಬಿಟ್ಟಳಂತೆ. ಆ ಹಿಂಸೆ ಆ ರೋದನ ಮತ್ತು ಮುಂದಿನ ಅನಾಹುತ ಮತ್ತು ಅವಾಂತರವವನ್ನೂ, ದುಃಖ-ಸಂಕಟವನ್ನೂ ಕೇವಲ ಶಬ್ದಗಳಲ್ಲಿ ಹಿಡಿದಿಡುವಹಾಗಿಲ್ಲ. ಅಂಥ ನಿಸ್ಸಹಾಯಕ ಸೋದರ ನಾಗಪ್ಪನ ನೋವು ತುಂಬಿದ ಸ್ಪಂದನಶೀಲ ನೆನಪಿಗೆ ನಾಗಪಂಚಮಿಯ ದಿನದಂದು ನನ್ನ ತವರಿನಲ್ಲಿ ಇಂದಿಗೂ ಸಿಹಿ ನಿಷೇಧ.

ಈ ಕತೆಗೆ ಪೂರಕವಾಗಿ ನನ್ನ ತಂದೆಯ ಕಾಲಕ್ಕೆ ಭೂಮಿಯಲ್ಲಿ ನಾಗರದ ಮೂರ್ತಿಯೂ ಸಿಕ್ಕಿದ್ದು, ಮನೆತನದ ಪುರಾಣವೊಂದು ಇತಿಹಾಸವಾಗಿ ಮಾರ್ಪಾಟಾಗುವ ಎಲ್ಲ ಸಾಧ್ಯತೆಗಳೂ ಬಿಚ್ಚಿಕೊಂಡಿರಲು ಸಾಕು ಅಂದುಕೊಂಡಿದ್ದೇನೆ.

ಸೃಷ್ಟಿಯಲ್ಲಿ ಹಲವು ಸಜಹ ವೈಚಿತ್ರ್ಯಗಳನ್ನು ಕಾಣುವಾಗಲೂ, ಅಂಗವೈಕಲ್ಯಕ್ಕೆ ಎರವಾಗಿದ್ದ, ಹಾವನ್ನು ಹೋಲುವ ಮಗುವೊಂದರ ಜನನವನ್ನು ಅಲ್ಲಗಳೆಯುವ ಹಾಗಿಲ್ಲ ಅಲ್ಲವೇ. ಆದರೆ ಅದರ ದುರಂತ ಅಂತ್ಯಕ್ಕೆ ಸಾಕ್ಷಿಯಾಗಿ ನಾಗಪಂಚಮಿಯ ದಿನದ ಸಿಹಿ ತ್ಯಜಿಸುವ ನನ್ನ ತವರಿನ ಭಾವನಾತ್ಮಕ ನಂಬಿಕೆಯೊಂದು, ಅವರವರ ಚಿಂತನಶೀಲತೆಗೆ ಬಿಟ್ಟದ್ದು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT