ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀನಿರದ ಹಾದಿಯಲ್ಲಿ ನಿನ್ನೊಂದಿಗೆ...

Last Updated 5 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ವಜ್ರಾದಪಿ ಕಠೋರಾಣಿ ಕುಸುಮಾದಪಿ ಮೃದು ನೀ ಈ ಉಕ್ತಿ ನನ್ನ ಜೀವನಕ್ಕೆ ಅಳವಡಿಸಿಕೊಳ್ಳಬೇಕಾದ ಅನಿವಾರ್ಯ ಬರಬಹುದು ಎಂಬ ಕಲ್ಪನೆಯೂ ನನಗಿರಲಿಲ್ಲ. 13-14ರ ಎಳವೆಯಲ್ಲಿಯೇ ಅಪ್ಪ ಅಮ್ಮನನ್ನು ಕಳೆದುಕೊಂಡಿದ್ದೆ. ಆ ನೋವು ಭಾವಜೀವಿಯಾದ ನನ್ನ ಮೃದು ಮನಸ್ಸನ್ನು ಕಷ್ಟಗಳನ್ನೆದುರಿಸಲು ವಜ್ರದಷ್ಟು ಗಟ್ಟಿಗೊಳಿಸಿತ್ತು. ನೋವಿನಲ್ಲೂ ನಾಳಿನ ಬದುಕಿನ ಸವಿಯ ನೀರಿಕ್ಷೆಯಲ್ಲಿ ಸವಿಗನಸುಗಳನ್ನು ಕಾಣುವ ಹೂ ಮನ ಉಳಿಸಿಕೊಂಡ ಪರಿ ಯೋಚಿಸಿದಾಗ ನನಗೇ ಅಚ್ಚರಿಯಾಗುತ್ತೆ.

ಪ್ರತಿಷ್ಠಿತ ಬ್ಯಾಂಕಿನಲ್ಲಿ ಅಧಿಕಾರಿಯಾಗಿದ್ದ ನನ್ನವರನ್ನು ಕೈಹಿಡಿದಿದ್ದೆ. ಜೀವನ ತೃಪ್ತಿಕರವಾಗಿ ಸಾಗುತ್ತಿತ್ತು. ಆದರೆ 37ರ ಹರೆಯದಲ್ಲಿ ಒಬ್ಬಂಟಿಯಾಗಬೇಕಾಯಿತು. 15 ವರ್ಷಗಳ ನಮ್ಮ ಅನ್ಯೋನ್ಯ ದಾಂಪತ್ಯದಲ್ಲಿ ಮಕ್ಕಳಿಲ್ಲದ ಕೊರತೆ ಎಂದೂ ನನಗೆ ಕಾಡಿರಲಿಲ್ಲ. ಆದರೆ ನನ್ನವರ ಅಗಲಿಕೆ ಬದುಕೇ ಬೇಡವೆನಿಸುವಷ್ಟು ದುರ್ಬಲವಾಯಿತು. ಅಕ್ಕತಂಗಿಯರ, ಬಂಧುಗಳ, ಸ್ನೇಹಿತೆಯರ ಸಮಾಧಾನದ, ಭರವಸೆಯ ಮಾತುಗಳೆಲ್ಲಾ ಆ ಸಮಯದಲ್ಲಿ ಅರ್ಥಹೀನವೆನಿಸಿತು. ಅಂತರ್ಮುಖಿಯಾದೆ.

ಒಂದು ವರ್ಷ ಜೀವಂತ ಶವದಂತೆ ಬದುಕಿದೆ. ಕಾಲಕ್ಕಿಂತ ಔಷಧಿಯಿಲ್ಲವೆನ್ನುತ್ತಾರೆ. ಆದರೂ ದುಃಖದ ತೀವ್ರತೆ ಕಡಿಮೆಯಾಯಿತೇ ವಿನಾ ನೋವಿನ ನೆನಪುಗಳು ಮಾಸಲೇ ಇಲ್ಲ. ನನ್ನ ಹಾಗೇ ನನ್ನ ಪತಿಗೆ ಅಪ್ಪ ಅಮ್ಮ ಇರದ ಕಾರಣ ಒಂಟಿ ಬದುಕು ಅನಿವಾರ್ಯವಾಯಿತು. ನಿಧಾನವಾಗಿ ನನ್ನ ಜೀವನವನ್ನು ನಾನೇ ಅವಲೋಕಿಸುವ ಮನಸ್ಥಿತಿ ಬಂದಿದ್ದು ಚಿಕ್ಕಂದಿನಿಂದಲೂ ಬೇರೂರಿಸಿಕೊಂಡ ಆಧ್ಯಾತ್ಮದ ಒಲವಿನಿಂದ ಸಾಹಿತ್ಯಾಸಕ್ತಿಯಿಂದ.

ಮನೋಧಾರ್ಢ್ಯಕ್ಕೆ ಪೂರಕವಾದ ಉತ್ತಮ ಪುಸ್ತಕಗಳಿಂದ, ಚಿಂತಕರ ಪ್ರವಚನಗಳಿಂದ. ಬದುಕನ್ನು ಸಾಕ್ಷೀಭಾವದಿಂದ ನೋಡುವ ಮನಸ್ಥಿತಿ ಬೆಳದಿದ್ದು ಉತ್ತಮ ಪುಸ್ತಕಗಳಿಂದ, ದಾರ್ಶನಿಕರ, ಸಾಧಕರ ಸಾಧನೆಯ ಬದುಕಿನ ಪುಟಗಳಿಂದ, ಸಹೃದಯಿ ಸ್ನೇಹಿತೆಯರ ಒಡನಾಟದಿಂದ, ಇವೆಲ್ಲವೂ ಬದುಕನ್ನು ಸಹ್ಯವಾಗಿಸಿತು.

ಇಹಪರ ಎರಡಕ್ಕೂ ಸಾಧನೆಯ ಮೆಟ್ಟಿಲಾದ ಆಧ್ಯಾತ್ಮದ ಹಾದಿಯಲ್ಲಿ ಸಾರ್ಥಕ ಬದುಕು ಕಂಡುಕೊಂಡೆ. ಆಧ್ಯಾತ್ಮವೆಂದರೆ ಕಂದಾಚಾರವಲ್ಲ, ಮೂಢನಂಬಿಕೆಗಳೂ ಅಲ್ಲ, ವಿಶ್ವಚೇತನದ ಸತ್ಯವನ್ನು ತಿಳಿಸುವ, ಎಲ್ಲರಲ್ಲೂ ದೇವರನ್ನು ಕಾಣುವ ಯಾರನ್ನೂ ನೋಯಿಸದೇ, ನಾವು ಮಾಡುವ ಕೆಲಸಗಳೆಲ್ಲಾ ಭಗವಂತನ ಪೂಜೆಯೆಂಬ ಭಾವ ಎಲ್ಲವೂ ಭಗವಂತನ ಪ್ರೀತಿಗಾಗಿಯೆಂಬ ಅನುಸಂಧಾನ, ತನ್ಮೂಲಕ ಬದುಕಲ್ಲಿ ಶ್ರದ್ಧೆ, ಶಿಸ್ತು, ಶಾಂತಿ. ಆರೋಗ್ಯಕರ ಸಮಾಜದ ನಿರ್ಮಾಣದ ಹಾರೈಕೆ ಆ ನಿಟ್ಟಿನಲ್ಲಿ ಪ್ರಯತ್ನ.

ಇದು ನಾನು ಕಂಡುಕೊಂಡ ಸಾರ್ಥಕ ದಾರಿ. ಆಧ್ಯಾತ್ಮ ಸಂಘದ ಸದಸ್ಯೆಯಾಗಿ ಸಕ್ರಿಯವಾಗಿ ಭಾಗವಹಿಸುವಿಕೆ, ಲೇಖಕಿಯರ ಸಂಘದ ಸದಸ್ಯೆಯಾಗಿ ಬರವಣಿಗೆಯಲ್ಲಿ ತೊಡಗಿಸಿಕೊಂಡು ನೋವನ್ನು ತುಳಿಯುತ್ತಾ ಬದುಕುತ್ತಿದ್ದೇನೆ. ಕಲ್ಲಾಗು ಕಷ್ಟದಲ್ಲಿ ಮನೆಗೆ ಮಲ್ಲಿಗೆಯಾಗು.. ಎಂಬ ಹಿತವಚನದಂತೆ ಇರುವಷ್ಟು ದಿನ ಇನ್ನೊಬ್ಬರನ್ನು ನೋಯಿಸದೇ, ಇನ್ನೊಬ್ಬರಿಂದ ನೋಯಿಸಿಕೊಳ್ಳದೇ ಬಾಳುವಾಸೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT