ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆನಪಿನ ಅಂಗಳದಲ್ಲಿ...

Last Updated 10 ಜುಲೈ 2015, 19:30 IST
ಅಕ್ಷರ ಗಾತ್ರ

ಸಮಯ ಪಾಲನೆ, ಶಿಸ್ತು, ಮುಂದಾಲೋಚನೆ, ಇಂತಿಷ್ಟೆ ಪರಿಧಿಯಲ್ಲಿ ಹೀಗೇ ಇರಬೇಕೆಂಬ ಕಟ್ಟುನಿಟ್ಟಿನ ಚೌಕಟ್ಟು ಈ ಎಲ್ಲವುಗಳನ್ನು ಕೂಡಿಸಿದರೆ ಬರುವ ಮೊತ್ತವೆ ನಮ್ಮಪ್ಪ.

ಒಂದು ದಿನವೂ ಪಕ್ಕ ಕುಳಿತು ತಲೆ ನೇವರಿಸಿ, ಬೆನ್ನು ತಟ್ಟಿ, ಗಲ್ಲ ಸವರಿ ಮುದ್ದು ಮಡಿದವರಲ್ಲ. ಅವರ ಜೊತೆ ಮಾತನಾಡುವುದೇನಿದ್ದರೂ ಎರಡು ಅಡಿ ಅಂತರದಲ್ಲಿ ನಿಂತುಕೊಂಡೆ. ನಮ್ಮ ಮನೆ ಪಡಸಾಲೆಯಲ್ಲಿ ದೊಡ್ಡದೊಂದು ಕಿಟಕಿ ಇತ್ತು. ಅವರು ಶಾಲೆಯಿಂದ ಬರುವ ಸಮಯದಲ್ಲಿ ಕಿಟಕಿಯಲ್ಲಿ ಅಪ್ಪನ ತಲೆ ಕಾಣುತ್ತಿತ್ತು. ನಾವೆಲ್ಲ ‘ಅಲರ್ಟ್’ ಆಗಿರುತ್ತಿದ್ದೆವು. ಮಕ್ಕಳಲ್ಲಿ ಒಬ್ಬರು ಮನೆಯಲ್ಲಿರದಿದ್ದರೂ ಅಮ್ಮನಿಗೆ ದೊಡ್ಡ ದೊಡ್ಡ ಹೆಜ್ಜೆ ಹಾಕುತ್ತಿರುವ ಸದ್ದು ಕೇಳಿಸುವಷ್ಟು ಮನೆ ನಿಶಬ್ದವಾಗಿರುತ್ತಿತ್ತು. ನಾವೆಲ್ಲ ಓದುತ್ತ, ಬರೆಯುತ್ತ ಕುಳಿತಿರುತ್ತಿದ್ದೆವು.

ಅಮ್ಮ ಅಡುಗೆ ಮನೆಯಲ್ಲಿ. ಅವರ ಉಪಸ್ಥಿತಿಯಲ್ಲಿ ಯಾರೂ ನಗುವಂತಿಲ್ಲ, ಜೋರಾಗಿ ಮಾತನಾಡುವಂತೆಯೂ ಇರಲಿಲ್ಲ. ಅವರು ತಂದ ಬಟ್ಟೆಗಳನ್ನೆ ಅವರಿಷ್ಟದಂತೆ ಹೊಲಿಸಿ ಹಾಕಿಕೊಳ್ಳಬೇಕು. ಮನೆಯ ಯಾವುದೇ ಸದಸ್ಯರಿಗೂ ಆಯ್ಕೆಯ ಆದ್ಯತೆ ಇರಲೇ ಇಲ್ಲ. ಅದು ಇರಬೇಕಿತ್ತು ಎಂದು ನಮಗನ್ನಿಸಲೂ ಇಲ್ಲ. ಆಯ್ಕೆಯ ಗೊಂದಲ ಇದ್ದುದ್ದಕ್ಕೆ ಈಗಿನ ಮಕ್ಕಳಿಗೆ ಸಂತೋಷ, ತೃಪ್ತಿಯ ಕೊರತೆ ಎದ್ದು ಕಾಣುತ್ತಿದೆ.

ಮಕ್ಕಳ ಜಾಣತನವನ್ನು ಎಂದೂ ಎದುರಿಗೆ ಹೊಗಳುತ್ತಿರಲಿಲ್ಲ, ದುಡ್ಡಿನ ಸ್ವಾತಂತ್ರ್ಯವನ್ನಂತೂ ಯಾವತ್ತೂ ಕೊಟ್ಟವರಲ್ಲ. ಅಗತ್ಯ, ಅನಿವಾರ್ಯಗಳನ್ನು ಹೊರತುಪಡಿಸಿ ಅನವಶ್ಯಕ ಖರ್ಚುಗಳಿಗೆ ಅವಕಾಶವಿರಲಿಲ್ಲ. ಮತ್ತೊಬ್ಬರ ಬಳಿ ಕೈಯೊಡ್ಡದಂತೆ ಮುಂಜಾಗೃತೆಯಿಂದ ಲೆಕ್ಕಾಚಾರದ ಬದುಕು ನಡೆಸಿದ ಅವರ ಅಚ್ಚುಕಟ್ಟುತನ ಮೆಚ್ಚುವಂಥದ್ದು, ಯೋಗ್ಯತೆ ಮೀರಿ ದೊಡ್ಡಸ್ತಿಕೆ ಪ್ರದರ್ಶನ ಮಾಡುವುದು ಅವರಿಗೆ ಇಷ್ಟವಾಗುತ್ತಿರಲಿಲ್ಲ. ಯಾವುದೇ ಕೆಲಸವಿರಲಿ, ಪೂರ್ವಸಿದ್ಧತೆ ಮಾಡಿಕೊಳ್ಳವದನ್ನು ಅವರಿಂದಲೇ ಕಲಿಯಬೇಕು.

ಸಮಾರಂಭದಲ್ಲಿ ಯಾವ ಲೋಪವೂ ಆಗದಂತೆ ಮುನ್ನೆಚರಿಕೆ ವಹಿಸುತ್ತಿದ್ದರು. ‘ಪ್ರೀತಿ ಮತ್ತು ಕೋಪ ಎರಡೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ’ ಎಂಬ ಮಾತು ನಮ್ಮ ಅಪ್ಪನಿಗೆ ಅಪ್ಯಾಯಮನವಾಗಿತ್ತು. ಅವರ ಸಿಟ್ಟು ಬೈಗುಳ ಆಗ ಬೇಸರ ತಂದರೂ ಅಂದು ಬೈದು ಹೇಳಿದ ಬುದ್ಧಿ ಭವಿಷ್ಯದ ಒಳಿತಿಗಾಗಿಯೇ ಎಂಬ ಸತ್ಯ ಅರಿವಾಗಿದೆ.

ಎಂದೂ ಮನಬಿಚ್ಚಿ ಮಾನತಾಡದ ಮಿತಭಾಷಿ ಅಪ್ಪ ತುಂಬಾ ಸ್ವಾಭಿಮಾನಿ. ಯಾರ ಮನೆಯಲ್ಲೂ ಒಂದು ದಿನ ಉಳಿಯವುದಕ್ಕೂ ತುಂಬಾ ಮುಜುಗರ ಪಡುತ್ತಿದ್ದರು. ಜೀವನದಲ್ಲಿ ಪ್ರತಿ ಹೆಜ್ಜೆ ಇಡುವಾಗಲೂ ಆರ್ಥಿಕ, ಸಾಮಾಜಿಕವಾಗಿ ನೈತಿಕವಾಗಿ ಎಚ್ಚರಿಕೆ ಯಿಂದ ಮೈತುಂಬ ಕಣ್ಣಾಗಿರುವಂತೆ ಅವರ ಸ್ವಯಂ ಜೀವನ ಕ್ರಮವೇ ನಮಗೆ ಪಾಠ ಕಲಿಸಿತು. ಈಗ ಅವರು ನಮ್ಮೊಂದಿಗಿಲ್ಲ ಆದರೆ ಅವರ ಕೆಲವು ಗುಣಗಳು ನನಗರಿಯದಂತೆ ನನ್ನಲ್ಲಿ ಮೈಗೂಡಿವೆ. ನನ್ನ ಮಕ್ಕಳನ್ನು ಬೆಳೆಸುವಲ್ಲಿ ಸಹಕಾರಿಯಾಗಿವೆ. ಅತ್ತೆ ಮನೆಯವರು ಯಾವ ವಿಷಯದಲ್ಲಾದರೂ ನನ್ನ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದಾಗ ಅಪ್ಪ ನೆನಪಾಗುತ್ತಾರೆ. ನಲಿವಿನ ಜೊತೆ ನೋವಿರುವಂತೆ ಅಪ್ಪ, ಮರೆತರೂ ಮರೆಯಲಾಗದ ಜೀವ. ನಮ್ಮ ಯಶಸ್ಸನ್ನು ಕಂಡು ಸಂತೋಷಪಡುವ ಅಪ್ಪ ಇಲ್ಲ ಎನ್ನುವ ಕೊರಗು ಕೊನೆಯವರೆಗೂ ಉಳಿಯುತ್ತದೆ..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT