ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೇಸ್‌ಬುಕ್ ಎಂಬ ಮಾಯೆ

Last Updated 18 ಮಾರ್ಚ್ 2016, 19:30 IST
ಅಕ್ಷರ ಗಾತ್ರ

ಒಂದು ವರ್ಷದ ಹಿಂದಿನ ಮಾತು. ನಮ್ಮ ಪರಿಚಯದವರೊಬ್ಬರ ಮನೆಗೆ ಹೋಗಿದ್ದೆ. ಅದೂ... ಇದೂ... ಮಾತನಾಡುತ್ತ " ಅಂದಹಾಗೆ ಹೋದ ವಾರ ನಿಮ್ಮ ಮೊಮ್ಮಗಳ ಮದುವೆ ಪೂನಾದಲ್ಲಿ ಆಯ್ತಂತೆ? ಮದುವೆ ಚೆನ್ನಾಗಿ ಆಯ್ತಾ? ಹುಡುಗ ಹೇಗಿದ್ದಾನೆ? ಏನು ಮಾಡ್ಕೋಂಡಿದ್ದಾನೆ? ಫೋಟೋಗಳಿದ್ದರೆ ತೋರಿಸಿ" ಎಂದೆ. ಅದಕ್ಕೆ ಆ ಹಿರಿಯರು " ಅಯ್ಯೋ, ಎಲ್ಲಾ ಫೋಟೋಗಳನ್ನು ಫೇಸ್‌ಬುಕ್‌ಗೆ ಹಾಕಿದ್ದಿವಲ್ಲಮ್ಮ, ನೀನು ನೋಡಿಲ್ವಾ?" ಎಂದರು. ನಾನು ಪೆಚ್ಚಾಗಿ" ಫೇಸ್‌ಬುಕ್‌ಲ್ಲಿ ನನ್ನ ಅಕೌಂಟ್ ಇಲ್ಲ" ಎಂದೆ.

ಅದಕ್ಕವರು "ಇದೇನಮ್ಮಾ, ಹೀಗಂತೀಯಾ? ಈ ಕಾಲ್ದಲ್ಲಿದ್ದು ಫೇಸ್‌ಬುಕ್‌ನಲ್ಲಿ ಅಕೌಂಟ್ ಇಲ್ಲ ಅಂದ್ರೇನು? ಮನೆಗೆ ಹೋಗಿ ಇವತ್ತೇ ಫೇಸ್‌ಬುಕ್‌ಲ್ಲಿ ಅಕೌಂಟ್ ಓಪನ್ ಮಾಡಿ ಫ್ರೆಂಡ್ ರಿಕ್ವೆಸ್ಟ್ ಕಳಿಸು. ಎಲ್ಲ ಫೋಟೋಗಳನ್ನು ನೋಡಬಹುದು. ಪಾಪ! ಸೋಶೀಯಲ್ ನೆಟ್‌ವರ್ಕ ಬಗ್ಗೆ ತಿಳ್ಕೋಂಡೇ ಇಲ್ಲಾ ಅನ್ಸುತ್ತೆ. ನಾನು ಹಿರಿಯ , ಮೊಮ್ಮಕ್ಕಳನ್ನು ಕೇಳಿ ಎಲ್ಲ ತಿಳ್ಕೋಂಡಿದ್ದಿನಿ. ಅಂಥದ್ದರಲ್ಲಿ ನೀನು....? ನಿನ್ನನ್ನು ನೋಡಿದರೆ ಅಯ್ಯೋ ಪಾಪ ಅನ್ಸತ್ತೆ." ಎಂದರು. ನಾನು ಅವಮಾನದಿಂದ ತಲೆ ತಗ್ಗಿಸಿದ್ದೆ.

ಮನೆಗೆ ಬಂದ ಮೇಲೂ ಮನಸ್ಸಿಗೆ ಏನೋ ಹತಾಶ ಭಾವ. ಮನೆ ಕೆಲಸವನ್ನು ಮಾಡಲು ಮನಸ್ಸು ಸಹಕರಿಸದಾಯಿತು.  ಯಾವುದೇ ಸಮಾರಂಭಕ್ಕೆ ಹೋದರೂ ಗೆಳತಿಯರೆಲ್ಲ ಜಾಲತಾಣದ ಬಗ್ಗೇನೇ ಚರ್ಚೆ ಮಾಡುತ್ತಿದ್ದುದನ್ನು ನೋಡಿ, ನನಗೆ ಎನೂ ಗೊತ್ತೇ ಇಲ್ಲಾ ಎನ್ನುವ ಕೀಳರಿಮೆ ಉಂಟಾಯ್ತು. 

ಖಿನ್ನತೆಯ ಭಾವ ಹುಟ್ಟಿಕೊಂಡಿತು. ಈಚೆ ಬರುವ ಪ್ರಯತ್ನ ಮಾಡಬೇಕೆಂದರೂ ಸಾಧ್ಯವಾಗಲೆ ಇಲ್ಲ. ಮನದ ಶಾಂತಿ ಕದಡಿತು.  ನನ್ನವರ ಬಳಿ ವಿಷಯವನ್ನು ತಿಳಿಸಿದೆ. ಅವರು ನಗುತ್ತಾ " ಅದಕ್ಯಾಕಷ್ಟು ಬೇಜಾರು? ನೀನೂ ಎಲ್ಲ ಕಲಿತುಕೋ, ಅದೇನು ಬ್ರಹ್ಮವಿದ್ಯೇಯೇ? ಕಲಿತ ನಂತರ ನಿನಗೇ ಸಂತೋಷವಾಗುತ್ತದೆ" ಎಂದರು.

ಅದೊಂದು ದಿನ ಕಂಪ್ಯೂಟರ್ ಮುಂದೆ ಕುಳಿತ ಮಗಳ ಬಳಿ ಹೋಗಿ" ಫೇಸ್‌ಬುಕ್‌ನಲ್ಲಿ ನನ್ನದೊಂದು ಅಕೌಂಟ್ ತೆರೆದು ಎಲ್ಲವನ್ನೂ ತಿಳಿಸಿಕೊಡು" ಎಂದೆ. ಖುಷಿಯಿಂದ ಅಕೌಂಟ್ ತೆರೆದಳು. ಫೇಸ್‌ಬುಕ್ ಬಗ್ಗೆ ಕೇಳಿದ್ದನೇ ಹೊರತು ಏನೆಂದು ತಿಳಿದಿರಲಿಲ್ಲ. ಮಗಳು ಎಲ್ಲವನ್ನೂ ಹೇಳಿಕೊಡುತ್ತಿದಂತೆ ಜಾಲತಾಣದ ಬಗ್ಗೆ ತಿಳಿಯಲಾರಂಭಿಸಿದೆ. ಆಗ ನನಗಾದ ಸಂತೋಷಕ್ಕೆ ಪಾರವೇ ಇಲ್ಲ.

ದಿನವೂ ಫೇಸ್‌ಬುಕ್ ಸೈನ್ ಇನ್ ಮಾಡಲು  ಪ್ರಾರಂಭಿಸಿದೆ. ನೂರಾರು ಜನ ಫ್ರೇಂಡ್ಸ್ ಆದರು. ಫೇಸ್‌ಬುಕ್‌ನಿಂದಾಗಿ ಹಳೆಯ ಸ್ನೇಹಿತರು ಹತ್ತಾರು ವರ್ಷಗಳ ನಂತರ ಪುನ: ಸಿಕ್ಕರು. ಎಲ್ಲರೊಡನೆ ಒಂದು ರೀತಿಯ ಭಾವನಾತ್ಮಕ ಸಂಬಂಧ ಬೆಳೆಯಿತು. ಭಾನುವಾರವಂತೂ ಎಲ್ಲರೂ ಸಿಗುತ್ತಾರೆ. ಇಡಿ ದಿನ ಚಾಟಿಂಗಲ್ಲಿ ಕಳೆದು ಬಿಡುತ್ತದೆ.

ವಿಶೇಷ ಸಂದರ್ಭಗಳಲ್ಲಿ ಫೋಟೋಗಳನ್ನು ಮೊಬೈಲ್‌ನಲ್ಲಿ  ಕ್ಲಿಕ್ಕಿಸಿ ಫೇಸ್‌ಬುಕ್‌ಗೆ ಹಾಕಿ, ಎಲ್ಲರಿಂದ ’ಲೈಕ್’ ಬಂದಾಗ ಸಂತೋಷವಾಗುತ್ತದೆ. ಈಗ ನಾನು ಆನ್‌ಲೈನ್ ಶಾಪಿಂಗ್‌ನಲ್ಲಿ ಸೀರೆ ತರಿಸಿಕೊಂಡೆ, ಮೊಬೈಲ್ ತರಿಸಿಕೊಂಡೆ, ಅದಕ್ಕೆ ಈ ಗಿಫ್ಟ್ ಬಂತು, ಇದರ ಬೆಲೆ ಅರ್ಧದಷ್ಟು ಕಡಿಮೆ....ನೀವೂ ತರಿಸಿಕೊಳ್ಳಿ’ ಎಂದು ಎಲ್ಲರಿಗೂ ಹೇಳುತ್ತೇನೆ. ಪತ್ರಿಕೆಗಳಿಗೆ ಲೇಖನಗಳನ್ನೂ, ಕಥೆಗಳನ್ನೂ.. ನುಡಿ ತಂತ್ರಾಂಶದಲ್ಲಿ ನಾನೇ ಟೈಪ್ ಮಾಡಿ ಕಳಿಸುತ್ತೇನೆ. ಈ ಸೋಶಿಯಲ್ ನೆಟ್‌ವರ್ಕ್‌ದಲ್ಲಿ ತೆರೆದಷ್ಟೂ ಬಾಗಿಲುಗಳಿವೆ.ಇನ್ನೂ ಕಲಿಯುವುದು ಸಾಕಷ್ಟಿದೆ. ಎಲ್ಲವನ್ನೂ ಕಲಿಯಬಲ್ಲೆನೆಂಬ ಅತ್ಮವಿಶ್ವಾಸ ನನ್ನಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT