ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಕ್ರೀದ್‌ ವಿಶೇಷ

ನಮ್ಮೂರ ಊಟ
Last Updated 18 ಸೆಪ್ಟೆಂಬರ್ 2015, 19:30 IST
ಅಕ್ಷರ ಗಾತ್ರ

ಮುಸ್ಲಿಮರು ಶ್ರದ್ಧಾ ಭಕ್ತಿಯಿಂದ ಆಚರಿಸುವ ಹಬ್ಬ ಬಕ್ರೀದ್‌. ಈ ಹಬ್ಬಕ್ಕೂ ಬಗೆಬಗೆ ಮಾಂಸಾಹಾರ ಖಾದ್ಯ ಇರಲೇಬೇಕು. ಬಕ್ರೀದ್‌ಗೆಂದೇ ಕೆಲವು ವಿಶೇಷ ಅಡುಗೆ ಮಾಡುವ ವಿಧಾನವನ್ನು ವಿವರಿಸಿದ್ದಾರೆ ನಂದಿತಾ ತಾಂಡೇಲ್.

ಮಟನ್ ಬಿರಿಯಾನಿ
ಸಾಮಗ್ರಿ:
1 ಕೆ.ಜಿ ಬಾಸ್ಮತಿ ಅಕ್ಕಿ, 1 ಕೆ.ಜಿ. ಮಟನ್, ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್-2 ಚಮಚ, ಟೊಮೆಟೊ-1, ಈರುಳ್ಳಿ-2 ದೊಡ್ಡದು, ದಾಲ್ಚಿನ್ನಿ, ಗೋಡಂಬಿ, ಎಲಕ್ಕಿ, ಲವಂಗ - ಎಲ್ಲವೂ ಸ್ವಲ್ಪ, ತುಪ್ಪ- 3 ಚಮಚ, ಗರಂ ಮಸಲಾ ಪುಡಿ- 2 ಚಮಚ, ಪುದಿನಾ-1 ಕಟ್ಟು, ಲಿಂಬೆ ಹಣ್ಣಿನ ರಸ- 2 ಚಮಚ.

ವಿಧಾನ: ಮೊದಲು ಅನ್ನ ಮಾಡಿಟ್ಟುಕೊಳ್ಳಿ. ಒಂದು ಪ್ಯಾನ್‌ನಲ್ಲಿ ಸ್ವಲ್ಪ ಎಣ್ಣೆ ಹಾಕಿ ಟೊಮೆಟೊ ಮತ್ತು ಈರುಳ್ಳಿಯನ್ನು ಚೆನ್ನಾಗಿ ಬೇಯಿಸಿಕೊಳ್ಳಿ. ಮೇಲೆ ತಿಳಿಸಿರುವ ಎಲ್ಲ ಮಸಾಲೆ ಸಾಮಗ್ರಿಗಳನ್ನು ಒಂದೊಂದಾಗಿ ಅದರಲ್ಲಿ ಹುರಿಯುತ್ತಾ ಬನ್ನಿ. ನಂತರ ಅದಕ್ಕೆ ಶುಂಠಿ- ಬೆಳ್ಳುಳ್ಳಿ ಪೇಸ್ಟ್‌ ಹಾಕಿ. ಇದಾದ ಮೇಲೆ ಗರಂ ಮಸಾಲ ಮತ್ತು ಖಾರದ ಪುಡಿಯನ್ನು ಮಿಕ್ಸ್‌ ಮಾಡಿ. ಇವೆಲ್ಲವೂ ಫ್ರೈ ಆದ ಮೇಲೆ ಸ್ವಲ್ಪ ನೀರನ್ನು ಸೇರಿಸಿ, ಕುದಿಸಿ. ಇದಕ್ಕೆ ಅನ್ನ ಸೇರಿಸಿ ಬೆಂದ ಮೇಲೆ ನಿಂಬೆ ರಸ ಹಾಕಿ.

***
ಕ್ರಿಸ್ಪಿ ಚಿಕನ್‌
ಸಾಮಾಗ್ರಿ:
ಚಿಕನ್ ಲೆಗ್ ಪೀಸ್‌- 10, ಬ್ರೆಡ್ ಚೂರು- 2 ಕಪ್, ನಿಂಬೆ ರಸ -3 ಚಮಚ, ಹಸಿ ಮೆಣಸಿನಕಾಯಿ- 5, ಕಾಳು ಮೆಣಸಿನ ಪುಡಿ- 3 ಚಮಚ, ಪುದೀನ ಸೊಪ್ಪು - ಅರ್ಧ ಕಟ್ಟು, ಕೊತ್ತಂಬರಿ ಸೊಪ್ಪು - ಅರ್ಧ ಕಟ್ಟು, ಮೈದಾ ಹಿಟ್ಟು- ಒಂದೂವರೆ ಕಪ್, ಮೊಟ್ಟೆಯ ಬಿಳಿಭಾಗ- 2, ಶುಂಠಿ-ಬೆಳ್ಳುಳ್ಳಿ ಪೇಸ್ಟ್ - 3 ಚಮಚ, ನೀರು - ಒಂದು ಲೋಟ, ಎಣ್ಣೆ - ಕರಿಯಲು,  ಉಪ್ಪು - ರುಚಿಗೆ ತಕ್ಕಷ್ಟು.

ವಿಧಾನ: ಚಿಕನ್ ಲೆಗ್ ಪೀಸ್ ಚೆನ್ನಾಗಿ ತೊಳೆದ ನಂತರ ಅದನ್ನು ಚಾಕುವಿನಿಂದ ನಡುವೆ ಸೀಳುವ ರೀತಿಯಲ್ಲಿ ಗೆರೆ ಹಾಕಿ.  ನಂತರ ಇದರ ಮೇಲೆ ಉಪ್ಪು ಸವರಿ. ಹಸಿಮೆಣಸಿನ ಕಾಯಿಯನ್ನು ಜಜ್ಜಿ ಅದಕ್ಕೆ ಹಾಕಿ. ಇದಕ್ಕೆ ನಿಂಬೆ ರಸ ಹಿಂಡಿ. ನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಕಾಳು ಮೆಣಸಿನ ಪುಡಿ, ಕೊತ್ತಂಬರಿ ಮತ್ತು ಪುದೀನ ಸೊಪ್ಪಿನ ಪೇಸ್ಟ್ ಹಾಕಿ ಮಿಕ್ಸ್ ಮಾಡಿ. ಸುಮಾರು ಒಂದು ಗಂಟೆ ಹಾಗೇ ನೆನೆಯಲು ಬಿಡಿ. ಮೈದಾ ಹಿಟ್ಟಿಗೆ ಮೊಟ್ಟೆ ಬಿಳಿ ಭಾಗ ಹಾಕಿ. ಅದಕ್ಕೆ ಜಜ್ಜಿದ ಹಸಿ ಮೆಣಸಿಕಾಯಿ, ಸ್ವಲ್ಪ ಕಾಳು ಮೆಣಸಿನ ಪುಡಿ ಮತ್ತು ಸ್ವಲ್ಪ ಬಿಸಿ ನೀರು ಹಾಕಿ ಮಿಕ್ಸ್ ಮಾಡಿ ಇಟ್ಟುಕೊಳ್ಳಿ. ಪ್ಯಾನ್‌ನಲ್ಲಿ ಎಣ್ಣೆ ಹಾಕಿ ಕಾಯಿಸಿ.  ಚಿಕನ್ ಲೆಗ್ ಪೀಸ್ ಅನ್ನು ಮೈದಾ ಹಿಟ್ಟಿನಲ್ಲಿ ಅದ್ದಿ, ಬ್ರೆಡ್ ಚೂರಿನಲ್ಲಿ ಹೊರಳಾಡಿಸಿ ಎಣ್ಣೆಗೆ ಹಾಕಿ ಫ್ರೈ ಮಾಡಿ. ಚಿಕನ್ ಕಂದು ಬಣ್ಣಕ್ಕೆ ಬರುವಾಗ ಎಣ್ಣೆಯಿಂದ ತೆಗೆದು ಸವಿಯಿರಿ.

***
ಬನಾನ ಲೀಫ್‌ ಫ್ರೈ
ಸಾಮಾಗ್ರಿ:
ಮೀನು 10, ಬಾಳೆ ಎಲೆ 4, ಹಸಿಮೆಣಸಿನ ಕಾಯಿ- 4, ಸಾಸಿವೆ ಎಣ್ಣೆ -ಒಂದು ಚಮಚ, ಸಾಸಿವೆ ­3 ಚಮಚ, ತುರಿದ ತೆಂಗಿನ ಕಾಯಿ- ಅರ್ಧ ಕಪ್‌, ಅರಿಶಿಣ ಪುಡಿ-ಒಂದು ಚಮಚ, ನಿಂಬೆ ರಸ- ಒಂದು ಚಮಚ.

ವಿಧಾನ: ಸಾಸಿವೆಯನ್ನು ಬಿಸಿ ನೀರಿನಲ್ಲಿ ನೆನೆಸಿ ತೆಗೆದು ಒಂದೆಡೆ ಇಡಿ. ಹಸಿ ಮೆಣಸಿನಕಾಯಿ, ತೆಂಗಿನ ಕಾಯಿ, ಸಾಸಿವೆ, ನೀರು, ಉಪ್ಪು ಸೇರಿಸಿ ನುಣ್ಣಗೆ ರುಬ್ಬಿ. ಈ ಮಿಶ್ರಣಕ್ಕೆ ಸಕ್ಕರೆ, ನಿಂಬೆ ರಸ ಮತ್ತು ಅರಿಶಿಣ ಪುಡಿ ಸೇರಿಸಿ ಮತ್ತೊಂದು ಸುತ್ತು ರುಬ್ಬಿ. ಈ ಎಲ್ಲ ಮಿಶ್ರಣಕ್ಕೆ ತುಂಡು ಮಾಡಿದ ಮೀನನ್ನು ಸವರಿ ಒಂದರಿಂದ ಒಂದೂವರೆ ಗಂಟೆ ಕಾಲ ಇಡಿ. ಬಾಳೆ ಎಲೆಯನ್ನು ಸ್ವಲ್ಪ ಬಿಸಿ ಮಾಡಿ ಅದನ್ನು 10ರಿಂದ12 ತುಂಡು ಕತ್ತರಿಸಿ. ಇದಕ್ಕೆ ಸ್ವಲ್ಪ ಎಣ್ಣೆ ಸವರಿ. ಮಿಶ್ರಿತ ಮೀನಿನ ತುಂಡುಗಳನ್ನು ಎಲೆ ಮೇಲೆ ಹಾಕಿ ಚೆನ್ನಾಗಿ ಮಡಚಿ ಇಡಿ.

ಒಂದು ಪಾತ್ರೆಯಲ್ಲಿ ಅರ್ಧದಷ್ಟು ನೀರು ಹಾಕಿ ಕುದಿಸಿ. ನಂತರ ಅದರ ಮೇಲೆ ಒಂದು ತಟ್ಟೆ ಇಡಬೇಕು. ತಟ್ಟೆ ನೀರಿನಲ್ಲಿ ಮುಳುಗಬಾರದು. ಆ ತಟ್ಟೆಯ ಮೇಲೆ ಬಾಳೆ ಎಲೆಯಲ್ಲಿ ಮಡಚಿದ ಮೀನಿನ ತುಂಡುಗಳನ್ನು ಇಟ್ಟು ಪಾತ್ರೆಯ ಬಾಯಿ ಮುಚ್ಚಿ. ಮೀನು ಆವಿಯಲ್ಲಿ ಬೇಯಬೇಕು. ಅಷ್ಟೊತ್ತಿಗಾಗಲೇ ‘ಘಂ’ ಎನ್ನುತ್ತ  ಮೀನು ಸವಿಯಲು ಸದ್ಧವಾಗುತ್ತದೆ.

***
ಕರಾವಳಿ ಸ್ಟೈಲ್‌ ಫಿಶ್‌ ಫ್ರೈ
ಸಾಮಾಗ್ರಿ:
ಮೀನು- 1 ಕೆ.ಜಿ, ಕರಿಯಲು ಎಣ್ಣೆ , ಕರಿಬೇವು -ಒಗ್ಗರಣೆಗೆ, ಕೊತ್ತಂಬರಿ ಬೀಜ –1 ಚಮಚ, ಗರಂ ಮಸಾಲ -ಅರ್ಧ ಚಮಚ, ಈರುಳ್ಳಿ -1 ದೊಡ್ಡದು, ಶುಂಠಿ- ಒಂದು ತುಂಡು, ಬೆಳ್ಳುಳ್ಳಿ -5 ಎಸಳು. ಒಣ ಮೆಣಸು- 6, ಮೆಂತ್ಯದ ಕಾಳು -1 ಚಮಚ, ಅರಿಶಿಣ ಪುಡಿ -ಅರ್ಧ ಚಮಚ, ಉಪ್ಪು -ರುಚಿಗೆ.

ವಿಧಾನ: ತೊಳೆದ ಮೀನಿನ ತುಂಡುಗಳ ಮೇಲೆ ಉಪ್ಪು ಸವರಿ. ಮೇಲೆ ಹೇಳಿರುವ ಎಲ್ಲ ಸಾಮಾಗ್ರಿಗಳನ್ನು ಪೇಸ್ಟ್ ಮಾಡಿ. ಈ ಪೇಸ್ಟ್‌ ಅನ್ನು ಉಪ್ಪು ಸವರಿಟ್ಟ ಮೀನಿನ ತುಂಡುಗಳಿಗೆ ಸವರಿ. 30 ರಿಂದ 40 ನಿಮಿಷ ಹಾಗೆಯೇ ಬಿಡಿ. ತವಾದಲ್ಲಿ ಎಣ್ಣೆ ಕಾದ ನಂತರ ಈ ಮೀನಿನ ತುಂಡುಗಳನ್ನು ಹಾಕಿ ಚೆನ್ನಾಗಿ  ಫ್ರೈ ಮಾಡಿ. ಘಮಘಮಿಸುವ ಕರಾವಳಿ ಸ್ಪೆಷಲ್‌ ಫಿಶ್‌ ಫ್ರೈ ಸವಿಯಲು ಸಿದ್ಧ.

***
ಚೈನೀಸ್ ಸ್ಟೈಲ್‌ ಫಿಶ್‌ ಫ್ರೈ
ಸಾಮಗ್ರಿ: ಮೀನು- ಅರ್ಧ ಕೆಜಿ, ಮೈದಾ ಹಿಟ್ಟು- 4 ಚಮಚ, ಚೈನೀಸ್ ಸ್ಪೈಸ್ ಪೌಡರ್ - ಅರ್ಧ ಚಮಚ, ಶುಂಠಿ -1 ತುಂಡು, ಮೊಟ್ಟೆ -1, ಎಣ್ಣೆ - ಕರಿಯಲು, ನೀರು- ಸ್ವಲ್ಪ, ಉಪ್ಪು -ರುಚಿಗೆ.

ವಿಧಾನ: ಮೊಟ್ಟೆಯನ್ನು ಚೆನ್ನಾಗಿ ಬೀಟ್ ಮಾಡಿ. ಅದಕ್ಕೆ ಉಪ್ಪು, ಮೈದಾ, ಚೈನೀಸ್  ಸ್ಪೈಸ್ ಪೌಡರ್, ತುಂಡರಿಸಿದ ಶುಂಠಿ ಮತ್ತು ನೀರನ್ನು ಹಾಕಿ ಚೆನ್ನಾಗಿ ಕಲೆಸಿ. ಮೀನನ್ನು ಮೊಟ್ಟೆ ಹಾಗೂ ಮೈದಾ ಹಿಟ್ಟಿನಲ್ಲಿ ಮುಳುಗಿಸಿ. ಪ್ಯಾನ್‌ನಲ್ಲಿ ಎಣ್ಣೆ ಕಾಯಿಸಿ ಮಿಕ್ಸ್‌ ಮಾಡಿಟ್ಟ ಮೀನನ್ನು ಕಂದು ಬಣ್ಣ ಬರುವವರೆಗೂ ಕರಿದರೆ ಮುಗಿಯಿತು.

***
ಮಟನ್‌ ಖೀಮಾ
ಸಾಮಾಗ್ರಿ:
ಮಟನ್ ಖೀಮಾ-1 ಕೆ.ಜಿ, ಮೊಸರು-1 ಲೋಟ, ಜೀರಿಗೆ ಪುಡಿ -2 ಚಮಚ, ಖಾರದ ಪುಡಿ-2 ಚಮಚ, ಗರಂ ಮಸಾಲ- 2 ಚಮಚ, ಅರಿಶಿಣ ಪುಡಿ- 1ಚಮಚ, ಈರುಳ್ಳಿ - 3, ಶುಂಠಿ-ಬೆಳ್ಳುಳ್ಳಿ ಪೇಸ್ಟ್ -2 ಚಮಚ, ಹಸಿ ಮೆಣಸಿನಕಾಯಿ-4, ಉಪ್ಪು - ರುಚಿಗೆ, ನೀರು -1 ಲೋಟ, ಎಣ್ಣೆ -2 ಚಮಚ.

ವಿಧಾನ: ತೊಳೆದ ಖೀಮಾಕ್ಕೆ ಮೊಸರು, ಅರಿಶಿಣ ಪುಡಿ, ಖಾರದ ಪುಡಿ ಮತ್ತು ರುಚಿಗೆ ತಕ್ಕ ಉಪ್ಪು ಹಾಕಿ ಮಿಕ್ಸ್ ಮಾಡಿ. ಈ ಮಿಶ್ರಣವನ್ನು ಸುಮಾರು ಒಂದು ಗಂಟೆ ಹಾಗೆಯೇ ನೆನೆಯಲು ಬಿಡಿ. ಪ್ಯಾನ್‌ನಲ್ಲಿ ಎಣ್ಣೆ ಹಾಕಿ ಅದರಲ್ಲಿ ಈರುಳ್ಳಿ ಫ್ರೈ ಮಾಡಿ. ಈ ಫ್ರೈಗೆ ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಹಾಕಿ ಪುನಃ 2-3 ನಿಮಿಷ ಫ್ರೈ ಮಾಡಿ. ನೆನೆಯಲು ಬಿಟ್ಟು ಇರುವ ಖೀಮಾ ಇದಕ್ಕೆ ಹಾಕಿ. ಕೊತ್ತಂಬರಿ ಪುಡಿ, ಗರಂ ಮಸಾಲ, ಜೀರಿಗೆ ಪುಡಿ ಹಾಕಿ ಸ್ವಲ್ಪ ಉಪ್ಪು ಹಾಕಿ ಸ್ವಲ್ಪ ನೀರು ಸೇರಿಸಿ ಅರ್ಧ ಗಂಟೆ ಬೇಯಿಸಿ. ಮಧ್ಯೆ ಮಧ್ಯೆ ಸೌಟಿನಿಂದ ತಿರುವುತ್ತಿರಿ. ಖೀಮಾ ಡ್ರೈ ರೀತಿ ಆದ ಮೇಲೆ ಗ್ಯಾಸ್ ಆಫ್‌ ಮಾಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT