ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲ್ಯದಲ್ಲೇ ಕಾಡಿದ ದೆವ್ವ

Last Updated 1 ಜನವರಿ 2016, 19:30 IST
ಅಕ್ಷರ ಗಾತ್ರ

ನನ್ನ ಬಾಲ್ಯದಲ್ಲಿ ದೆವ್ವದ ಬಗ್ಗೆ ತಿಳಿದಿದ್ದು ಅಂದರೆ ನನ್ನ ಅಜ್ಜಿ ಪಕ್ಕದ ಮನೆಗೆ ಸಾರಿಗೆ ಕಳಿಸಿದಾಗ. ಅವತ್ತು ಅಮಾವಾಸ್ಯೆ ಕಪ್ಪು ಕತ್ತಲು ನನ್ನ ಸುತ್ತ ಆವರಿಸಿತ್ತು. ದ್ರೌಪದಿ ವಸ್ತ್ರಾಪಹರಣ ಕೇಳಿಕೆ ಪದ ಗುನುಗುತ್ತ ಅವರ ಮನೆ ಬಾಗಿಲಲಿ ನಿಂತೆ. ಇನ್ನೇನು ‘ದೊಡ್ಡಮ್ಮಾ ಸಾರಂತೆ’ ಎಂದು ಕೇಳಬೇಕಿತ್ತು. ಅಷ್ಟರಲ್ಲಿ ಭಯದಿಂದ ತತ್ತರಿಸಿ ನನ್ನ ಖಾಕಿ ನಿಕ್ಕರ್ ತೇವ ಆಗಿತ್ತು. ಅಬ್ಬಾ!

ಆಕೆ ಬಾಗಿಲೆದುರಿಗೆ ಕೂತು ತನ್ನ ನೀಳವಾದ ಕೇಶರಾಶಿಯನ್ನು ನೆಲಕ್ಕೆ ಒಗೆದು, ರಂಕುಲ ರಾಟ್ನ ಸುತ್ತಿದಂತೆ ತಲೆ ತಿರುಗಿಸುತ್ತಿದ್ದಾಳೆ. ವಿಕಾರರೂಪ, ಏರುದನಿಯ ಮಾತು, ಪದೇ ಪದೇ ನಗು… ನೆನೆದರೆ ಇಂದಿಗೂ ನನ್ನ ಮೈ ರೋಮಗಳು ನಿಲ್ಲುತ್ತವೆ. ನಾನು ಒಂದು ಗಳಿಗೆ ನಿಲ್ಲದೆ ಕಾಲುಕಿತ್ತ ಅಡಾವುಡಿಯಲ್ಲಿ ಕೈ ಜಾರಿ ಬಿದ್ದ ಮಣ್ಣಿನ ಕುಡಿಕೆ ಒಡೆದು ಚೂರಾಯಿತು. ಆಕೆಗೆ ಆ ಹೊತ್ತಿಗೇ ನಾಕಾರು ದೆವ್ವಗಳು ಆವಾಹಿಸಿ ಹೋಗಿರುವ ಬಗ್ಗೆ ನನ್ನ ಅಜ್ಜಿ ಹೇಳಿದ್ದು ಕೇಳಿ ನನಗೆ ಕುತೂಹಲ ಹಾಗೂ ಭಯ ಆಗಿತ್ತು.

ಐದಾರು ತಿಂಗಳು ಕಳೆದ ಮೇಲೆ ಒಂದು ಅಮಾವಾಸ್ಯೆ ದಿನ. ಮಲಗುವ ಸಮಯ. ನನ್ನ ಅಪ್ಪ ಕೆಲಸದ ನಿಮಿತ್ತ ಪರ ಊರಿಗೆ ಹೋಗಿದ್ದರು. ನಾನು ಬುಡ್ಡಿ ದೀಪದ ಮುಂದೆ ಓದುತ್ತಾ ಇದ್ದೆ. ನನ್ನ ಅಜ್ಜಿ ಎಲೆ ಅಡಿಕೆ ಮೆಲ್ಲುತ್ತ ನನ್ನ ಅಮ್ಮನ ಕೂಡ ತೆಲುಗು ಭಾಷೆಯಲಿ ಮಾತನಾಡಲು ಶುರುಮಾಡಿದಳು, ಅಮ್ಮ ಮಾತಾಡಲಿಲ್ಲ ನಿಧಾನವಾಗಿ ಊಗುತ್ತ ಬಿಕ್ಕಿ ಬಿಕ್ಕಿ ಅಳಲು ಆರಂಭಿಸಿದಳು. ಆಗ ಅಜ್ಜಿ ಅಮ್ಮನ ಕಡೆ ನೋಡುತ್ತ ಬೈದಳು, ಥು.. ಛೀ.. ಅಂತ ಕ್ಯಾಕರಿಸಿ ಉಗಿದಳು. ನನಗೆ ಗಾಬರಿ ಏಕಾಏಕಿ ಅಜ್ಜಿ ಮಾತನಾಡಿದ್ದು ಕೇಳಿ.

ಈ ಮೊದಲು ಎಂದೂ ಇಂತಹ ಪ್ರಸಂಗ ನಾನು ಕಂಡಿದ್ದಿಲ್ಲ. ಅಜ್ಜಿನಾ ಕೇಳಿದೆ ಯಾಕ ಅಮ್ಮನಿಗೇನಾಗದೆ’ ಅಂತ. ‘ಅವಳ್ಯಾವೊಳೋ.. ಕಿತ್ತೋದೋಳು ಬಂದವಳೆ ಇರು’ ಎಂದಳು ನನಗೆ ಅರ್ಥವಾಗಲಿಲ್ಲ. ‘ಬೈತಿಯೇನೇ ಏ..ಮುಸಲಿ’ ಎಂದು ತಲೆ ಸುತ್ತಲು ಶುರು ಮಾಡಿದಳು. ತಲೆಗೂದಲಿನ ಗಂಟು ಬಿಚ್ಚಿಕೊಂಡಿತು ಮೊನ್ನೆ ನಾನು ನೋಡಿದ್ದ ದೃಶ್ಯ ನೆನಪಾಯಿತು, ಆಗ ನನಗೆ ಅನಿಸಿತು ಅಮ್ಮನ ಮೇಲೆ ದೆವ್ವ ಆವಾಹಿಸಿರಬಹುದು ಅಂತ.  ಅಳುತ್ತದೆ, ನಗುತ್ತದೆ, ಕೋಪಿಸಿಕೊಂಡು ಬಹಳ ಕಷ್ಟ ಕೊಡುತ್ತಿದೆ.

ಪಾಪ, ನನ್ನ ಅಮ್ಮ ಬಾವಿ ಕೆಲಸಕ್ಕೆ ಹೋಗಿದ್ದಳು. ಮಣ್ಣು ಹೊತ್ತು ಹೊತ್ತು ಚೆನ್ನಾಗಿ ದಣಿದಿದ್ದಳು. ಈ ಹಾಳು ದೆವ್ವ ನಿದ್ದೆ ಮಾಡಲು ಬಿಡದೇ ಬಾಧಿಸುತ್ತಿದೆ. ನನಗೆ ಭಯ ಮರೆತುಹೋಗಿ ಆ ದೆವ್ವ ನನ್ನೆದುರಿಗೆ ಬಂದರೆ ಕೊಚ್ಚಿ ಹಾಕುವಷ್ಟು ಸಿಟ್ಟು ಬಂದಿತ್ತು. ಅಜ್ಜಿ ಅಷ್ಟರಲ್ಲಿ ನನ್ನ ಅಪ್ಪನ ಸ್ನೇಹಿತನನ್ನು ಕರೆಯಲು ನನಗೂ ನನ್ನ ಗೆಳೆಯನಿಗೆ ಹೇಳಿ ಕಳುಹಿಸಿದಳು. ನಾವು ಸರಸರನೆ ಹೋಗಿ ಈ ವಿಷಯ ತಿಳಿಸಿದೆವು. ಆತ ಊಟ ಮಾಡುವುದು ಬಿಟ್ಟು ತಕ್ಷಣ ಎದ್ದು ಬಂದ. ಬರುವಾಗ ಎಕ್ಕೆ ಗಿಡದ ಬರಸಲು ಹಾಗೂ ಹುಣಸೆ ಬರಸಲು ಕಿತ್ತುಕೊಂಡು ಹಣೆ ಹಾಕಿ ಹಿಡಿದು ಬಿರಬಿರನೇ ಬಂದ.

ಅಷ್ಟರಲ್ಲಿ ನನ್ನ ಅಮ್ಮ ಮಾಮೂಲಿನಂತಾಗಿ ಕುಳಿತಿದ್ದಳು. ಅಜ್ಜಿಯನ್ನು ಏನೆಂದು ಕೇಳಿದರೆ ‘ಅಯ್ಯೋ ಅದೊಂದು ಅನಿಷ್ಟ ಬಿಡು’ ಎಂದು ಸುಮ್ಮನಾದಳು. ನನ್ನ ಅಪ್ಪ ಸುಮಾರು ದಿನಗಳು ಮನೆಗೆ ಬರಲಿಲ್ಲ. ನನ್ನ ಅಮ್ಮನಿಗೆ ಪದೆ ಪದೇ ದೆವ್ವ ಮೈ ಮೇಲೆ ಬರುತ್ತಿತ್ತು. ಆಗ ನಾನು ಓಡಿ ಹೋಗಿ ನನ್ನ ಅಪ್ಪನ ಸ್ನೇಹಿತನನ್ನು ಕರೆದು ಬರುತ್ತಿದ್ದೆ, ಆತ ಬಂದು ಗದರಿಸಿ-ಬೆದರಿಸಿ ಹೊಡೆದು-ಬಡಿದು ದೆವ್ವ ಓಡಿಸಿ ನಮಗೆ ಧೈರ್ಯ ಹೇಳುತ್ತಿದ್ದರು.

ಅಪ್ಪ ಮನೆಗೆ ಬಂದು ಒಂದು ಅಮವಾಸ್ಯೆ ದಿನ ಮಂತ್ರವಾದಿಯ ಕರೆಸಿ ಮುಗ್ಗಾಕಿ, ಇಡೀ ಇರುಳು ಓಲಿಂಗ ಪಾಡಿ ಪಾಡಿ ಅಮ್ಮನ ಮೈಮೇಲಿದ್ದ ದೆವ್ವ ಓಡಿಸಿ ಅಂತ್ರಾ (ತಾಯತ) ಮಾಡಿಸಿದರು. ಬಾಲ್ಯದಲ್ಲೇ ದೆವ್ವದ ಬಗ್ಗೆ ಅನುಭವ ಆಗಿ ಊರ ಸುತ್ತಲೂ ದೆವ್ವಗಳು ಇರುವ ಬಗ್ಗೆ ಹೇಳಿಕೊಂಡಾಗ ಒಳಗೆ ಭೀತಿ ಇದ್ದರೂ ಒಂದಷ್ಟು ಧೈರ್ಯ ಬಂದಿದ್ದು ಮಾತ್ರ ನಿಜ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT