ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಡಗಿನ ಬೀಡಿನಲ್ಲಿ ಭೂತ ಭೀತಿ

Last Updated 8 ಜನವರಿ 2016, 19:30 IST
ಅಕ್ಷರ ಗಾತ್ರ

ಶತ ಶತಮಾನಗಳಿಂದಲೂ ದೇವರ ಇರುವಿಕೆಯ ನಂಬಿಕೆಯಂತೆ, ಭೂತ-ಪ್ರೇತಗಳ ನಂಬಿಕೆಯು  ಜನ ಮಾನಸದಲ್ಲಿ ಬೇರೂರುತ್ತಲೇ ಬಂದಿರುವುದು. ನಾವು ಹಿಮಾಚಲದ ಸಿರಿ ಸೊಬಗಿನ ಮಡಿಲಲ್ಲಿದ್ದ ಕಿನೋರ್ ಪ್ರದೇಶದಲ್ಲಿದ್ದಾಗ, ನಾವಿದ್ದ  ಒಂಟಿ ಮನೆಯು ಎತ್ತರದ ಸ್ಥಳದಲ್ಲಿತ್ತು. ನಮ್ಮ ಮನೆಯ ಎದುರಿಗೇ  ಸಟ್ಲೆಜ್ ನದಿ ಹರಿಯುತ್ತಿತ್ತು. ಹುಣ್ಣಿಮೆಯ ರಾತ್ರಿಗಳಲ್ಲಿ ಚಂದಿರನ ಕಿರಣಗಳು ನದಿಯ ನೀರಿನಲ್ಲಿ ಪ್ರತಿಫಲಿಸಿ ಸುಂದರವಾದ  ದೃಶ್ಯ ಕಾವ್ಯ  ಸೃಷ್ಟಿಯಾಗುತ್ತಿತ್ತು. ಸುತ್ತಲೂ  ಆವರಿಸಿದ್ದ ಪರ್ವತಗಳು.

ಹಿಮಗಾಲದಲ್ಲಿ ಹಿಮಾವೃತದಿಂದ  ಹಚ್ಚಡವನ್ನು ಹೊದ್ದು ಕೊಳ್ಳುತ್ತಿದ್ದವು. ಮೌನತೆಯ, ನಿಗೂಢತೆಯ ವಾತಾವರಣವೂ ಸೃಷ್ಟಿಯಾಗುತ್ತಿತ್ತು. ರಮಣೀಯತೆಯೊಂದಿಗೆ ರೌದ್ರತೆಯು ತಳಕು ಹಾಕಿ ಕೊಂಡಿತ್ತು. ನನ್ನ ಪತಿ ಅಲ್ಲಿ ಸುಮಾರು 500 ಕಿಲೋ ಮೀಟರ್ ವ್ಯಾಪ್ತಿಯವರೆಗೂ ಆಫೀಸರ್ ಕಮಾಂಡಿಗ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಮನೆಯ ಪಕ್ಕದಲ್ಲಿಯೇ ಅವರ ಕಚೇರಿ ಇದ್ದರೂ, ಕಾರ್ಯ ನಿಮಿತ್ತವಾಗಿ ಕೆಲವು ದಿನಗಳು ಪಯಣಿಸಬೇಕಾದ ಸಂದರ್ಭಗಳು ಬರುತ್ತಲೇ ಇದ್ದವು. ಆಗೆಲ್ಲ ನಾನೂ ನಮ್ಮ ಇಬ್ಬರು ಮಕ್ಕಳು ಗ್ಲಾಸ್‌ ಹೌಸ್‌ನಂತಿದ್ದ ಮನೆಯಲ್ಲಿ  ಇರುತ್ತಿದ್ದೆವು. ಹಗಲು ಕಳೆದು, ಇರುಳು ಮೂಡಿದ ನಂತರ ಭಯ ಆವರಿಸುತ್ತಿತ್ತು. ಸರಿರಾತ್ರಿ ನಿದ್ದೆಯೂ ದೂರವಾಗುತ್ತಿತ್ತು.

ಮನೆಯ ಮೇಲೆ ಯಾರೋ ಓಡಾಡುತ್ತಿದ್ದ  ಶಬ್ದ ನನಗೆ ಕೇಳುತ್ತಿತ್ತು. ಅಲ್ಲಿ ಇಲಿ, ಹೆಗ್ಗಣಗಳು ಇರುತ್ತಿರಲಿಲ್ಲ. ನಾನು ಅವು ಇರಬಹುದೆಂದು ಭಾವಿಸಿದ್ದೆ. ನಮ್ಮ ಮನೆಯ ಪಕ್ಕದಲ್ಲಿ ಪುಟ್ಟ ಜಲಪಾತದ ಬಳಿ, ನೆಲೆಸಿದ್ದ  ಉತ್ತರ ಭಾರತದವರಾದ ಆತ್ಮೀಯ ಗೆಳತಿಯಾಗಿದ್ದ ಕುಂಕುಮ್ ಅವರಿಗೆ ವಿಷಯ ತಿಳಿಸಿದಾಗ ಅವರು ತಿಳಿಸಿದ್ದು, ನಾವಿದ್ದ ಮನೆಯು ನಿರ್ಮಾಣವಾಗುತ್ತಿದ್ದ ಸಮಯದಲ್ಲಿ ಹಾಕಿದ್ದ ತಳಪಾಯ ಕುಸಿಯುತ್ತಿದ್ದುದು, ಅಲ್ಲಿನ ಪೂಜಾವಿಧಾನಗಳನ್ನು ನೆರವೇರಿಸಿದಾಗ ಸುಸ್ಥಿತಿಗೆ ಬರುತ್ತಿತ್ತಂತೆ.

ನಮ್ಮ ಮನೆಯ ಎದುರುಗಿದ್ದ ಸಟ್ಲೆಜ್ ನದಿಯ ದಡದಲ್ಲಿ ಸ್ಥಳೀಯರು ಶವ ಸಂಸ್ಕಾರಗಳನ್ನು ಜರುಗಿಸುತ್ತಿದ್ದರು. ನಾನು ಕಿಟಕಿಯಿಂದ ವೀಕ್ಷಿಸುತ್ತಿದ್ದೆನು. ಅದು ಭೂತ-ಪ್ರೇತಗಳ ಆ ವಾಸಸ್ಥಾನವೆಂದು ತಿಳಿದು ಬಂದಿತ್ತು. ಆದರೆ ನನ್ನ ಪತಿಗೆ ಅವುಗಳಲ್ಲಿ ನಂಬಿಕೆ ಇರುತ್ತಿರಲಿಲ್ಲ. ನಾನು ಅಲ್ಲಿ ನಿತ್ಯ ಪೂಜೆ ಹಾಗು ಹಬ್ಬ-ಹರಿದಿನಗಳನ್ನು ಆಚರಿಸುತ್ತಿದ್ದುದರಿಂದ, ನನಗೆ ಅವುಗಳ ಬಾಧೆ ಅಷ್ಟಾಗಿ ಕಾಡುತ್ತಿರಲಿಲ್ಲವೆಂದು ಅಲ್ಲಿನವರು ಹೇಳುತ್ತಿದ್ದರು. ಆದರೂ ಭೀತಿ ತಪ್ಪಿರಲಿಲ್ಲ.

ನನ್ನ ಗೆಳತಿ ಕುಂಕುಮ್ ಮನೆಯ ಹೊರಗಡೆ ಶೌಚಾಲಯವಿತ್ತು. ಒಂದು ರಾತ್ರಿ ಸುಮಾರು ಒಂದು ಗಂಟೆಯ ವೇಳೆಯಲ್ಲಿ. ಹೊರಗೆ ಬಂದಾಗ, ಬಿಳಿಯ ಸಲ್ವಾರ್ ಕಮೀಜ್ ಹಾಗು ಟೋಪಿ ಧರಿಸಿದ್ದ ಮಹಿಳೆಯೊಬ್ಬಳು ಜಲಪಾತದ ನೀರಿನಲ್ಲಿ ಅಟವಾಡುತ್ತಿದ್ದುದು ಕಂಡು ಬಂದಿತಂತೆ. ಅಲ್ಲಿನ ಮಹಿಳೆಯರು ಸದಾ ಕಾಲ ಟೋಪಿ ಧರಿಸುತ್ತಾರೆ. ಧ್ಯೆರ್ಯಸ್ಥರು ಕೂಡಾ. ನನ್ನ ಗೆಳತಿ, ಪಾಪ, ಆ ಮಹಿಳೆಗೆ ರಾತ್ರಿ ನಿದ್ದೆ ಬಾರದೆ ಜಲಪಾತದ ಬಳಿಬಂದಿರ ಬಹುದೆಂದುಕೊಂಡರಂತೆ. ಟಾಯ್ಲೆಟ್‌ನಿಂದ ಹೊರಗೆ ಬಂದು ನೋಡಿದಾಗ ಆ ಮಹಿಳೆ ಕಾಣಿಸದಿದ್ದಾಗ, ಅವಳು ಮನೆಗೆ ಹೊರಟು ಹೋಗಿರಬಹುದು ಅಂದುಕೊಂಡರಂತೆ.

ಮರುದಿನ ಅವರ ಮನೆಯಲ್ಲಿ ಸಹಾಯಕನಾಗಿದ್ದ ಹುಡುಗನನ್ನು ಆ ಮಹಿಳೆ ಬಗ್ಗೆ ಪ್ರಸ್ತಾಪಿಸಿದಾಗ, ತಿಳಿದು ಬಂದದ್ದು, ಆ ಮಹಿಳೆ ಅವಳ ಪತಿಯೊಡನೆ ವೈಮನಸ್ಯದಿಂದ ಸಟ್ಲೆಜ್ ನದಿಗೆ ಹಾರಿ ಪ್ರಾಣ ಬಿಟ್ಟಿದ್ದಳಂತೆ. ನಂತರ ಆಗಾಗ್ಗೆ ಕಾಣಿಸಿಕೊಳ್ಳುತ್ತಾಳಂತೆ. ನನ್ನ ಗೆಳತಿ ಭೀತಿಯೇ ಭೂತವೆಂದು ಇತರರೊಡನೆ ವಾದಿಸುತ್ತಿದ್ದವರು, ಅಂದು ಮೊದಲ ಬಾರಿಗೆ ಭೂತ ದರ್ಶನವಾಯಿತೆಂದು ತಿಳಿಸಿದಾಗ, ಆ ಚಿಲ್ಲೆನ್ನುವ ವಾತಾವರಣದಲ್ಲಿ ಝಲ್ಲೆಂದು ನನ್ನ ಮೈ ಬೆವರಿತು. ಭೀತಿ ಪಡುತ್ತಿದ್ದ ನಾನು ಹೇಗೋ ಮೂರು ವರ್ಷಗಳು ಅಲ್ಲಿ ಕಳೆದು ನಮ್ಮ ಬೆಂಗಳೂರಿಗೆ ಮರಳಿದೆವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT